ಉಕ್ರೇನ್ ಮೇಲೆ ದಾಳಿಯನ್ನು ಮುಂದುವರಿಸಿರುವ ರಷ್ಯಾ, ಉಕ್ರೇನ್ ಅನ್ನು ಎರಡು ಭಾಗಗಳಾಗಿ ಒಡೆಯಲು ಯತ್ನಿಸುತ್ತಿದೆ ಎಂದು ಉಕ್ರೇನ್‌ನ ಮಿಲಿಟರಿ ಗುಪ್ತಚರ ಮುಖ್ಯಸ್ಥ ಆರೋಪಿಸಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 'ಇಡೀ ದೇಶವನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ' ಎಂಬುದನ್ನು ಅರಿತುಕೊಂಡಿದ್ದಾರೆ ಮತ್ತು 'ಕೊರಿಯಾದ ರೀತಿಯಲ್ಲಿ' ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿರಿಲೋ ಬುಡಾನೋವ್ ಭಾನುವಾರ ರಕ್ಷಣಾ ಸಚಿವಾಲಯದ ಹೇಳಿಕೆಗಳಲ್ಲಿ ತಿಳಿಸಿದ್ದಾರೆ.
ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವಿನ ದಶಕಗಳ ಹಳೆಯ ವಿಭಜನೆಯನ್ನು ಉಲ್ಲೇಖಿಸಿದ್ದಾರೆ.
'ಆಕ್ರಮಿತ ಪ್ರದೇಶಗಳನ್ನು ಪ್ರತ್ಯೇಕ ಪ್ರದೇಶವಾಗಿ ಮಾಡಲು ಮತ್ತು ಅವು ಸ್ವತಂತ್ರ ಉಕ್ರೇನ್ ವಿರುದ್ಧ ಹೋರಾಡುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ' ಎಂದು ಹೇಳಿದರು.
ಆಕ್ರಮಿತ ನಗರಗಳಲ್ಲಿ ಉಕ್ರೇನ್‌ಗೆ ಸಮಾನಾಂತರವಾಗಿ ಮತ್ತೊಂದು ಸರ್ಕಾರ ರಚಿಸಲು ಮತ್ತು ಉಕ್ರೇನ್ ಕರೆನ್ಸಿಯಾದ ಹರಿವ್ನಿಯಾವನ್ನು ಬಳಸದಂತೆ ಜನರನ್ನು ನಿರ್ಬಂಧಿಸುವ ಪ್ರಯತ್ನಗಳನ್ನು ರಷ್ಯಾ ಮಾಡುತ್ತಿದೆ ಎಂದು ಆರೋಪಿಸಿದರು.
ಉಕ್ರೇನ್ ಪ್ರತಿರೋಧವು 'ಒಟ್ಟು' ಗೆರಿಲ್ಲಾ ಯುದ್ಧವಾಗಿ ಮಾರ್ಪಡುತ್ತದೆ. ಇದು ರಷ್ಯಾದ ಪ್ರಯತ್ನಗಳನ್ನು ಹಳಿತಪ್ಪುವಂತೆ ಮಾಡುತ್ತದೆ ಎಂದು ಬುಡಾನೋವ್ ಭವಿಷ್ಯ ನುಡಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.