ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ದೇಶದ ಅಂತಃಸಾಕ್ಷಿ ಕಲಕಿದ ಕುಸ್ತಿಪಟು ಸಾಕ್ಷಿ ವಿದಾಯ

Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಒಲಿಂಪಿಕ್ ಕೂಟದ ಕುಸ್ತಿ ಕ್ರೀಡೆಯಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳೆ ಸಾಕ್ಷಿ ಮಲಿಕ್. ಹರಿಯಾಣದ ಈ ಕುಸ್ತಿಪಟು ಏಳು ವರ್ಷಗಳ ಹಿಂದೆ ಬ್ರೆಜಿಲ್‌ ದೇಶದ ರಿಯೊ ಡಿ ಜನೈರೊದಲ್ಲಿ ಜರುಗಿದ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಾಗ ಇಡೀ ದೇಶವೇ ಸಂಭ್ರಮಿಸಿತ್ತು. ಈಗ ಆ ಸಾಕ್ಷಿ ಅವರೇ ರಾಷ್ಟ್ರದ ಆತ್ಮಸಾಕ್ಷಿಯನ್ನು ಕಲಕಿದ್ದಾರೆ.

ಅಧಿಕಾರಸ್ಥರೂ ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೇ ಎಂದು ತಮ್ಮ ನಡೆಯ ಮೂಲಕವೇ ಪ್ರಶ್ನಿಸಿದ್ದಾರೆ. ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷರಾಗಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿ ಸಾಕ್ಷಿ ಸೇರಿದಂತೆ ಖ್ಯಾತನಾಮ ಕುಸ್ತಿಪಟುಗಳು ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಧರಣಿ ನಡೆಸಿದ್ದರು. ಅಧ್ಯಕ್ಷ ಸ್ಥಾನದಿಂದ ಬ್ರಿಜ್‌ ಭೂಷಣ್‌ ಕೆಳಗಿಳಿಯುವಂತೆಯೂ ಮಾಡಿದ್ದರು. ಈಗ, ಪ್ರತಿಭಟನಕಾರರಿಗೆ ಸಡ್ಡು ಹೊಡೆದಿರುವ ಬ್ರಿಜ್‌ ಭೂಷಣ್‌ ತಮ್ಮ ಆಪ್ತ ಸಂಜಯ್‌ ಕುಮಾರ್‌ ಸಿಂಗ್‌ ಅವರನ್ನು ಡಬ್ಲ್ಯುಎಫ್‌ಐ ಅಧ್ಯಕ್ಷರನ್ನಾಗಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಇದರಿಂದ ಸಾಕ್ಷಿ ಎಷ್ಟೊಂದು ಹತಾಶೆಗೊಂಡಿದ್ದಾರೆಂದರೆ, ಕಣ್ಣೀರು ಸುರಿಸುತ್ತಾ ಕುಸ್ತಿಯಿಂದಲೇ ನಿವೃತ್ತಿ ಘೋಷಿಸಿದ್ದಾರೆ. ಕ್ರೀಡೆಯ ಇತಿಹಾಸದಲ್ಲಿಯೇ ಈ ರೀತಿಯ ನಿವೃತ್ತಿಯನ್ನು ಯಾವ ಕ್ರೀಡಾಪಟುವೂ ಪ್ರಕಟಿಸಿರಲಿಲ್ಲ. ಇಂತಹದ್ದೊಂದು ಸನ್ನಿವೇಶ ಸೃಷ್ಟಿಯಾಗಿದ್ದು ವಿಷಾದದ ಸಂಗತಿ.

ಬ್ರಿಜ್‌ ಭೂಷಣ್ ವಿರುದ್ಧ ನಡೆದ ಹೋರಾಟವನ್ನು ಪ್ರತೀ ಹಂತದಲ್ಲಿ ಹತ್ತಿಕ್ಕುವ ಪ್ರಯತ್ನ ನಡೆದದ್ದನ್ನು ಇಡೀ ದೇಶ ಗಮನಿಸಿದೆ. ಆಗ, ಕುಸ್ತಿಪಟುಗಳು ಪಟ್ಟು ಸಡಿಲಿಸದ ಕಾರಣ ಬ್ರಿಜ್ ಭೂಷಣ್ ವಿರುದ್ಧ ಕೊನೆಗೂ ಎರಡು ಎಫ್‌ಐಆರ್ ದಾಖಲಾದವು. ಹೊಸ ಆಡಳಿತ ಸಮಿತಿಗೆ ಚುನಾವಣೆಯನ್ನೂ ಘೋಷಿಸಲಾಯಿತು. ಆದರೆ, ಚುನಾವಣೆಯನ್ನು ಹಲವು ಬಾರಿ ಮುಂದೂಡುವಂತಹ ಹುನ್ನಾರಗಳು ನಡೆದವು. ಚುನಾಯಿತ ಸಮಿತಿ ಇಲ್ಲದ ಕಾರಣ ವಿಶ್ವ ಕುಸ್ತಿ ಫೆಡರೇಷನ್, ಭಾರತ ಕುಸ್ತಿ ಸಂಸ್ಥೆಯ ಮಾನ್ಯತೆಯನ್ನೂ ರದ್ದುಗೊಳಿಸಿತು. ಅಂತೂ ಇಂತೂ ಈಗ ನಡೆದ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ 13 ಸ್ಥಾನಗಳು ಬ್ರಿಜ್‌ ಭೂಷಣ್ ಬೆಂಬಲಿಗರ ಪಾಲಾಗಿವೆ. ಧರಣಿನಿರತರಾಗಿದ್ದ ಕುಸ್ತಿಪಟುಗಳ ಬೆಂಬಲಿತ ಬಣಕ್ಕೆ ದಕ್ಕಿದ್ದು ಎರಡು ಸ್ಥಾನಗಳು ಮಾತ್ರ. ಪ್ರಜಾಪ್ರಭುತ್ವದಲ್ಲಿ

ಸಂಖ್ಯಾಬಲಕ್ಕೇ ಮನ್ನಣೆ. ಅಂತಹ ಸಂಖ್ಯಾಬಲ ಈಗ ಆರೋಪಿ ಸ್ಥಾನದಲ್ಲಿರುವವರ ಪರವೇ ಇದೆ. ಹೊಸ ಅಧ್ಯಕ್ಷರ ಪರವಾಗಿ ಬ್ರಿಜ್‌ ಭೂಷಣ್ ಅವರೇ ಅಧಿಕಾರ ಚಲಾಯಿಸುವ ಕುರಿತು ಕುಸ್ತಿಪಟುಗಳಿಗೆ ಯಾವುದೇ ಅನುಮಾನ ಉಳಿದಂತಿಲ್ಲ.

ಒಟ್ಟಾರೆ, ಪ್ರಕರಣದಲ್ಲಿ ನಿಜಕ್ಕೂ ಸೋತಿದ್ದು ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಭಾರತ ಒಲಿಂಪಿಕ್ ಸಂಸ್ಥೆ (ಐಒಎ). ಈ ಪ್ರಕರಣವನ್ನು ನಿರ್ವಹಿಸುವಲ್ಲಿ ಈ ಎರಡೂ ಅಧಿಕಾರ ಕೇಂದ್ರಗಳು ವಿಫಲವಾಗಿರುವುದು ಮೇಲ್ನೋಟಕ್ಕೇ ಎದ್ದುಕಾಣುವ ಸತ್ಯ. ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳ ಹಿತ ರಕ್ಷಿಸುವ ಕೆಲಸ ಪ್ರಾಮಾಣಿಕವಾಗಿ ನಡೆಯಲಿಲ್ಲ. ಇದರಿಂದಾಗಿ ಈ ವರ್ಷದ ಜನವರಿಯಿಂದ ಇಲ್ಲಿಯವರೆಗೂ ಈ ಪ್ರಕರಣ ಇನ್ನೂ ಸದ್ದು ಮಾಡುತ್ತಲೇ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ದೇಶದ ಮಾನ ಮುಕ್ಕಾಗಿದೆ. ತಮ್ಮ ಪಕ್ಷದ ಪ್ರಭಾವಿ ಸಂಸದನನ್ನು ರಕ್ಷಿಸಲು ಆಡಳಿತಾರೂಢರು ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನ ನಡೆಸಿದ್ದು ಸುಳ್ಳಲ್ಲ. ಧರಣಿನಿರತ ಕುಸ್ತಿಪಟುಗಳಲ್ಲಿ ಕೂಡ ಬಹುತೇಕರು ಬ್ರಿಜ್‌ ಭೂಷಣ್‌ ಪ್ರತಿನಿಧಿಸುವ ಪಕ್ಷದೊಟ್ಟಿಗೆ ಗುರುತಿಸಿಕೊಂಡವರು ಎಂಬುದು ವಿಪರ್ಯಾಸದ ಸಂಗತಿ. ಬ್ರಿಜ್‌ಭೂಷಣ್ ಮತ್ತು ತರಬೇತುದಾರರು ತಮ್ಮ ಮೇಲೆ  ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕೇಂದ್ರ ಗೃಹ ಸಚಿವರಿಗೆ ದೂರು ನೀಡಲು ಹೋದ ನಿಯೋಗದಲ್ಲಿ 15–20 ಕುಸ್ತಿಪಟುಗಳು ಇದ್ದರು. ಹೀಗೆ ಪ್ರತಿರೋಧ ತೋರಿದ್ದವರ ಸಂಖ್ಯೆ ಈಗ ಏಳಕ್ಕೆ ಇಳಿದಿದೆ. ಹಿಂಬಾಗಿಲ ರಾಜಕೀಯದ ಮೂಲಕ ಸಂತ್ರಸ್ತೆಯರ ಧ್ವನಿ ಅಡಗಿಸುವ ಹುನ್ನಾರ ನಡೆದಿದೆ ಎಂದು ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪೂನಿಯಾ ಆರೋಪಿಸಿದ್ದಾರೆ. ಬಜರಂಗ್ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂತಿರುಗಿಸಿ, ಪ್ರತಿಭಟನೆ ದಾಖಲಿಸಿದ್ದಾರೆ. ಕುಸ್ತಿ ಕ್ರೀಡೆಯಲ್ಲಿ ನಡೆದಿರುವ ಅಹಿತಕರ ಘಟನೆಗಳು ದೇಶದ ಕ್ರೀಡಾ ಬೆಳವಣಿಗೆಗೆ ಮಾರಕವಾಗುವಂಥವು. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಭಾರತಕ್ಕೆ ಅಂತರರಾಷ್ಟ್ರೀಯಕ್ರೀಡಾಕೂಟಗಳಲ್ಲಿ ಪದಕಗಳನ್ನು ಗಳಿಸಿಕೊಡುತ್ತಿದ್ದಾರೆ. ದೇಶದ ಗೌರವವನ್ನು ಹೆಚ್ಚಿಸುತ್ತಿದ್ದಾರೆ. ಆದರೆ, ಅವರ ಆತ್ಮಗೌರವಕ್ಕೆ ಸೂಕ್ತ ಮನ್ನಣೆ ಸಿಗದಿದ್ದರೆ ಕ್ರೀಡಾಕ್ಷೇತ್ರದ ಭವಿಷ್ಯ ಮಂಕಾಗಬಹುದು. ಸದ್ಯ ಬಲಾಢ್ಯರು ಗೆದ್ದಿದ್ದಾರೆ. ಆದರೆ, ದೌರ್ಜನ್ಯ ಪ್ರಕರಣವು ನ್ಯಾಯಾಲಯದಲ್ಲಿದೆ. ಈಗ ಸಂತ್ರಸ್ತರ ಪಾಲಿಗೆ ಉಳಿದಿರುವ ಅಂತಿಮ ಆಶಾಕಿರಣ ನ್ಯಾಯಾಲಯವೊಂದೇ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT