ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮಹಿಳೆಯ ಘನತೆ ಕಾಯುವ ಸಮ ಸಮಾಜ ನಿರ್ಮಾಣಕ್ಕೆ ಬೇಕಿದೆ ಇಚ್ಛಾಶಕ್ತಿ

Last Updated 8 ಮಾರ್ಚ್ 2020, 5:58 IST
ಅಕ್ಷರ ಗಾತ್ರ

(ಮಾರ್ಚ್ 8, 2019ರಂದು ಪ್ರಕಟವಾಗಿದ್ದ ಸಂಪಾದಕೀಯ)

ಅನುಗಾಲವೂ ಸರ್ವರ ಬದುಕಿನ ಭಾಗವೇ ಆಗಿರಬೇಕಾದ ಜೀವನಮೌಲ್ಯವೊಂದು ಪೂರ್ವಗ್ರಹಪೀಡಿತವಾಗಿ ದಿಕ್ಕು ತಪ್ಪಿದರೆ ಏನಾಗುತ್ತದೆ? ಅಂತಹದ್ದೊಂದು ಬೇಡಿಕೆಗೆ ಹಕ್ಕೊತ್ತಾಯ ಮಂಡಿಸಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ. ವಿಶ್ವದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳಾ ಸಂಕುಲದ ವಿಷಯದಲ್ಲಿ ಈಗ ಆಗಿರುವುದು ಇದೇ.

ಹೆಣ್ಣೆಂಬ ಜೈವಿಕ ಭಿನ್ನತೆಯ ಕಾರಣಕ್ಕೆ, ಜನ್ಮಜಾತವಾದ ತನ್ನ ಎಷ್ಟೋ ಹಕ್ಕುಗಳನ್ನು ಕಳೆದುಕೊಂಡಿರುವ ಮಹಿಳೆ, ಸಹಜವಾಗಿಯೇ ತನಗೆ ದಕ್ಕಬೇಕಾಗಿದ್ದ ಸಮಾನತೆಯನ್ನು ಈಗ ಗಟ್ಟಿಸಿ ಕೇಳಬೇಕಾಗಿದೆ. ಅದಕ್ಕಾಗಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ (ಮಾರ್ಚ್‌ 8) ನೆಪದಲ್ಲಿ ತನ್ನಿರವನ್ನು, ತನ್ನ ಅಸ್ಮಿತೆಯನ್ನು ಅನಾವರಣಗೊಳಿಸಬೇಕಾಗಿದೆ. ಇಂತಹ ಅಸಮಾನ ಸ್ಥಿತಿಯೇನೂ ನವಯುಗದಲ್ಲಿ ದಿಢೀರ್‌ ಆವಿರ್ಭವಿಸಿದ ಸಮಸ್ಯೆಯಲ್ಲ. ಅದು ಪರಂಪರಾನುಗತವಾಗಿ ಸಾಗಿ ಬಂದ ಕೌಟುಂಬಿಕ- ಸಾಮಾಜಿಕ ಅಂಟು ಜಾಡ್ಯವೇ ಆಗಿದೆ. ಹೀಗಾಗಿ, ಆಧುನಿಕತೆಯ ಮೂಸೆಯೊಳಗೆ ಸುಲಭವಾಗಿ ಅದನ್ನು ಪಳಗಿಸಿ ವಿಮೋಚನೆಯ ಹಾದಿಯನ್ನು ಸುಲಲಿತಗೊಳಿಸಿಕೊಳ್ಳಬಹುದು ಎಂದುಕೊಳ್ಳುವುದು ಮೂರ್ಖತನವಾದೀತು.

ಹೆಣ್ಣು ಭ್ರೂಣ ಹತ್ಯೆಯ ಕಾರಣಕ್ಕೆ ಲಿಂಗಾನುಪಾತ ಆತಂಕಕಾರಿಯಾಗಿ ಕುಸಿದಿರುವ ಇತ್ತೀಚಿನ ವರದಿಯು ಸ್ತ್ರೀ ವಿಮೋಚನೆಯು ಕ್ರಮಿಸಬೇಕಾದ ಕಠಿಣತಮ ಹಾದಿಯ ದರ್ಶನವನ್ನು ಮತ್ತೊಮ್ಮೆ ನಮಗೆ ಮಾಡಿಸಿದೆ. ಇಂತಹ ಸ್ಥಿತಿಯಲ್ಲಿ, ಕಾಲಾನುಕಾಲಕ್ಕೆ ಬಲಿಷ್ಠಗೊಳ್ಳುತ್ತಲೇ ಇರುವ ಪುರುಷ ಪ್ರಧಾನ ವ್ಯವಸ್ಥೆಯ ಬೇರುಗಳು ಸರ್ವವ್ಯಾಪಿಯಾಗಿರುವಾಗ, ಮಹಿಳಾ ಹೋರಾಟದ ಫಲಶ್ರುತಿ ಮೇಲ್ನೋಟಕ್ಕೆ ಆಶಾದಾಯಕವಾಗಿ ಕಾಣದಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಹಾಗೆಂದು ಆಕೆಯೇನೂ ಸ್ಥೈರ್ಯಗುಂದಿಲ್ಲ. ಆ ಬೇರುಗಳನ್ನು ಅಲುಗಾಡಿಸುವ ಆಕೆಯ ಅವಿಚ್ಛಿನ್ನ ಪ್ರಯತ್ನಗಳು ಸಹ ಮುಕ್ಕಾಗಿಲ್ಲ. ಬದಲಾವಣೆಗೆ ತೆರೆದುಕೊಳ್ಳದ ಜಡ ಮನಸ್ಸುಗಳನ್ನು ಪಳಗಿಸಲು ಸ್ವತಃ ಬದಲಾವಣೆಗೆ ಒಡ್ಡಿಕೊಳ್ಳಲು ಆಕೆ ಸಿದ್ಧಳಿದ್ದಾಳೆ. ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಅನುಗಾಲದ ತನ್ನ ಸಂಕಷ್ಟಗಳಿಗೆ ಪ್ರತಿಭಟನೆ, ಕಾನೂನು ಹೋರಾಟದಂತಹ ರೂಢಿಗತ ಪ್ರತಿರೋಧಗಳಂತಲ್ಲದೆ, ಸಭ್ಯತೆಯ ಮುಖವಾಡಗಳನ್ನು ಕಳಚುತ್ತಾ ಸಾಗಿದ ಮೀ– ಟೂ ಅಭಿಯಾನ ಅಂತಹದ್ದೊಂದು ಸಕಾರಾತ್ಮಕ ಬದಲಾವಣೆಯ ದಿಕ್ಸೂಚಿಯೇ ಸರಿ.

ಅಷ್ಟಕ್ಕೂ ತನ್ನ ಇಂತಹ ಸ್ಥಿತಿಗೆ ಮಹಿಳೆ ದೂಷಿಸಬೇಕಾಗಿರುವುದಾದರೂ ಯಾರನ್ನು? ಮೂಲತಃ ನಮ್ಮ ಕುಟುಂಬ ವ್ಯವಸ್ಥೆಯೇ ಅಸಮಾನತೆಯ ಅಡಿಪಾಯದ ಮೇಲೆ ನಿಂತಿರುವುದರಿಂದ, ಆಕೆಯ ಹೋರಾಟದ ನೆಲೆಯೂ ಅದೇ ಆಗಿರುತ್ತದೆ. ಹೀಗಾಗಿ, ಅತ್ಯಂತ ಪ್ರಜ್ಞಾಪೂರ್ವಕವಾಗಿ ಹೆಜ್ಜೆ ಇರಿಸಬೇಕಾದ ಸೂಕ್ಷ್ಮದ ಅರಿವೂ ಆಕೆಗಿದೆ. ಇಷ್ಟರ ನಡುವೆಯೂ, ತನ್ನ ಹುಟ್ಟಿನಿಂದಲೇ ಮೊಳಕೆಯೊಡೆದು ಸಮಾಜವ್ಯಾಪಿಯಾಗಿ ಹೆಮ್ಮರವಾಗಿರುವ ಅಸಮತೆಯ ಬೀಜವನ್ನು ಎದುರಿಸಲು, ಕೌಟುಂಬಿಕ ಚೌಕಟ್ಟಿನಿಂದ ಮೇಲೆದ್ದು ಬರುವ ಆಕೆಯ ಪ್ರಯತ್ನ ನಿರಂತರವಾಗಿ ಸಾಗಿದೆ. ಸಾಂಸಾರಿಕ ನಿರ್ವಹಣೆಗೆ ಸೀಮಿತವಾಗಿಸುವ ಹುನ್ನಾರ, ಕೌಟುಂಬಿಕ ದೌರ್ಜನ್ಯಗಳ ನಡುವೆಯೂ ಹೊಸಿಲಿನಿಂದಾಚೆ ಕಾಲಿಟ್ಟು, ಅವಕಾಶಗಳತ್ತ ಕೈಚಾಚುವ ಆಕೆಯ ಪ್ರಯತ್ನಕ್ಕೆ ಈಗಾಗಲೇ ತಕ್ಕಮಟ್ಟಿಗೆ ಯಶ ಸಿಕ್ಕಿದೆ. ಹಾಗೇ ಸಾಮಾಜಿಕ ಕಟ್ಟುಪಾಡುಗಳನ್ನೂ ಮೆಟ್ಟಿ ನಿಲ್ಲಲು ಸಾಧ್ಯವಾಗಬೇಕಾದರೆ ರಾಜಕೀಯವಾಗಿ, ಆರ್ಥಿಕವಾಗಿ ಆಕೆಯನ್ನು ಸಬಲಳಾಗಿಸುವ ಪ್ರಯತ್ನಗಳು ಮತ್ತಷ್ಟು ಮಗದಷ್ಟು ತೀವ್ರಗೊಳ್ಳಬೇಕಿದೆ.

ಆಡಳಿತಾರೂಢರು ಮನಸ್ಸು ಮಾಡಿದರೆ ಅದು ಅಸಾಧ್ಯದ ಸಂಗತಿಯೇನಲ್ಲ. ಮೇಲ್ವರ್ಗದ ಬಡವರಿಗೆ ಮೀಸಲಾತಿ ನೀಡುವ ಸರ್ಕಾರದ ಇಚ್ಛೆಗೆ, ವೈಯಕ್ತಿಕ ವಿರೋಧವಿದ್ದರೂ ಬಹಿರಂಗವಾಗಿ ತೋರ್ಪಡಿಸಲಾಗದೆ ಸರ್ವ ಪಕ್ಷಗಳೂ ಮೇಜು ಕುಟ್ಟಿ ಸ್ವಾಗತಿಸಿದಂತಹ ಅನಿವಾರ್ಯ ಸ್ಥಿತಿಯನ್ನು ಈ ವಿಷಯದಲ್ಲೂ ಸೃಷ್ಟಿಸುವ ಪ್ರಬಲ ಇಚ್ಛಾಶಕ್ತಿಯನ್ನು ತೋರಬೇಕಾಗಿದೆ. ಸಮಾನ ಆಸ್ತಿ ಹಕ್ಕು ಹಾಗೂ ದೌರ್ಜನ್ಯ ವಿರೋಧಿ ಕಾನೂನುಗಳ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸುವ, ವಿಶೇಷವಾಗಿ ವ್ಯಾವಹಾರಿಕ ಸಂಗತಿಗಳಲ್ಲಿ ಆಕೆಯನ್ನು ತೊಡಗಿಸಿಕೊಳ್ಳುವ, ಉನ್ನತ ಹುದ್ದೆಗಳಿಗೆ ಪರಿಗಣಿಸುವಂತಹ ವಿಶಾಲ ನೆಲೆಗಟ್ಟಿನ ಕಾರ್ಯಗಳು ಮೊದಲು ಆಗಬೇಕಾಗಿದೆ. ಇದರ ಜೊತೆಜೊತೆಗೇ, ಇನ್ನಷ್ಟು ಪ್ರಜ್ಞಾವಂತಳಾಗುವ, ವೈಚಾರಿಕ ದೃಷ್ಟಿಕೋನ ಬೆಳೆಸಿಕೊಳ್ಳುವ, ಸಂಕುಚಿತತೆಯನ್ನು ಮೀರಿ ನಿಲ್ಲುವ, ಸಂಸ್ಕಾರದ ಮೂಸೆಯಲ್ಲಿ ಪಳಗುವ, ಸಿಕ್ಕ ಅವಕಾಶಗಳ ಸದ್ಬಳಕೆಯಿಂದ, ಅದು ತನಗೆ ಸಿಕ್ಕ ಔದಾರ್ಯದ ಫಲವಲ್ಲ– ಸಾಮರ್ಥ್ಯಕ್ಕೆ ಸಂದ ಜಯ ಎಂಬುದನ್ನು ಕೃತಿಯಲ್ಲಿ ಸಾಧಿಸಿ ತೋರುವಂತಹ ಗಟ್ಟಿತನ ಆಕೆಯಲ್ಲಿ ಮತ್ತಷ್ಟು ಹರಳುಗಟ್ಟಬೇಕಾಗಿದೆ. ಆಗ ಸಮಸಮಾಜ ತಾನೇತಾನಾಗಿ ಸೃಷ್ಟಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT