ಮಂಗಳವಾರ, ಫೆಬ್ರವರಿ 18, 2020
29 °C

ಕಣ್ಣೋಟದ ಗೂಗ್ಲಿಗೆ ಬೋಲ್ಡ್‌ ಆದವರು: ಇಲ್ಲಿವೆ ಕ್ರಿಕೆಟ್ ಲೋಕದ ಪ್ರೇಮಕಥೆಗಳು

ಅಭಿಲಾಷ್‌ ಎಸ್‌.ಡಿ. Updated:

ಅಕ್ಷರ ಗಾತ್ರ : | |

ಅಂದು ಭಾರತ ಮತ್ತು ಪಾಕಿಸ್ತಾನ ನಡುವಣ ಟೆಸ್ಟ್‌ ಪಂದ್ಯ ನಡೆಯುತ್ತಿತ್ತು. ಸ್ನೇಹಿತರೊಟ್ಟಿಗೆ ಪಂದ್ಯ ನೋಡಲು ಬಂದಿದ್ದ ಯುವತಿಯೊಬ್ಬಳು ‘I love you Zaheer’ ಎಂದು ಬರೆದಿದ್ದ ಫಲಕವನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಾ ಟೀಂ ಇಂಡಿಯಾದ ಸ್ಟಾರ್‌ ವೇಗಿ ಜಹೀರ್‌ ಖಾನ್‌ರತ್ತ ಗೂಗ್ಲಿ ಪ್ರಯೋಗಿಸುತ್ತಿದ್ದಳು.

ಪೆವಿಲಿಯನ್‌ನಲ್ಲಿ ಕೂತು ಹೊಡಿಬಡಿಯ ವೀರೇಂದ್ರ ಸೆಹ್ವಾಗ್‌ ಮತ್ತು ಶಾಂತಿಮೂರ್ತಿ ರಾಹುಲ್ ದ್ರಾವಿಡ್‌ರ ಬ್ಯಾಟಿಂಗ್‌ ನೋಡುತ್ತಿದ್ದ ಜಹೀರ್‌ ಖಾನ್‌, ಯುವತಿಯನ್ನು ಕಂಡು ನಾಚಿ ನೀರಾಗುತ್ತಿದ್ದರು. ಪಕ್ಕದಲ್ಲಿ ಕುಳಿತ ಯುವರಾಜ್‌ ಸಿಂಗ್‌ ಅಷ್ಟರಲ್ಲಾಗಲೇ ಕಿಚಾಯಿಸಲಾರಂಭಿಸಿದ್ದರು. ಅತ್ತ ಹುಡುಗಿಯ ಹೂ ನಗೆ, ಇತ್ತ ಯುವಿಯ ಕೀಟಲೆ. ಎರಡರ ಮಧ್ಯೆ ಸಿಲುಕಿದ ಜಹೀರ್‌ಗೆ ಎದೆಬಡಿತ ಹೆಚ್ಚಾಗಲಾರಂಭಿಸಿತ್ತು. ಕಣ್ಣು–ಕಣ್ಣು ಕಲೆತ ದೃಶ್ಯಗಳು ಚೂರೂ ಸೋರಿಹೋಗದಂತೆ ಸೆರೆಹಿಡಿದ ಕ್ಯಾಮೆರಾದವ, ಇದನ್ನೆಲ್ಲ ಕ್ರಿಕೆಟ್‌ ಜಗತ್ತಿಗೂ ಹಂಚತೊಡಗಿದ್ದ.

ನೋಡನೋಡುತ್ತಿದ್ದಂತೆ ಆ ಯುವತಿ ಅತ್ತಿಂದ ಗಾಳಿಯಲ್ಲೊಂದು ಮುತ್ತನ್ನು ಹಾರಿಸಿಯೇ ಬಿಟ್ಟಳು. ಚೂರು ತಬ್ಬಿಬ್ಬಾದ ಜಹೀರ್‌ ಕೊಂಚ ಸಾವರಿಸಿಕೊಂಡು ಅತ್ತಿಂದಲೂ ಒಂದು ಕೊಟ್ಟುಬಿಟ್ಟ. ಈ ದೃಶ್ಯ ಮೈದಾನದಲ್ಲಿದ್ದ ಪರದೆಯ ಮೇಲೆ ಭಿತ್ತರವಾದದ್ದೇ ತಡ ಇಡೀ ಕ್ರೀಡಾಂಗಣವೇ ‘ಓ..’ ಎಂದಿತು.

ಬ್ಯಾಟಿಂಗ್ ಮಾಡುತ್ತಿದ್ದ ಸೆಹ್ವಾಗ್‌ಗೋ ಗಾಬರಿ. ಏನಾಯಿತೆಂಬ ಸೋಜಿಗ. ಎರಡು ಮನಸ್ಸುಗಳು ಯೌವನದ ಕಡಲಲ್ಲಿ ತೇಲಿ–ಮುಳುಗಿದ್ದು ಹೊಡಿಬಡಿ ದಾಂಡಿಗನಿಗೆ ಅರ್ಥವಾಗುವುದರೊಳಗೆ ನೋಡುಗರ ಪಾಲಿನ ಸ್ವರ್ಗ ಬದಿಗೆ ಸರಿದಿತ್ತು.

**

ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ಈ ಕ್ರಿಕೆಟ್‌ ಅಂಗಳದಲ್ಲಿ ಇಂತಹ ಲೆಕ್ಕವಿಲ್ಲದಷ್ಟು ಪ್ರೇಮಕತೆಗಳಿವೆ. ಮಾಜಿ ನಾಯಕ ಟೈಗರ್‌ ಅಲಿಖಾನ್‌ ಪಟೌಡಿ ಅವರ ಕಾಲದಿಂದ ಮೊದಲ್ಗೊಂಡು ಈಗಿನ ವಿರಾಟ್‌ ಕೊಹ್ಲಿ ವರೆಗೆ ಚಾಚಿಕೊಂಡಿರುವ ಪ್ರೇಮದ ಬಳ್ಳಿ ಹಬ್ಬುತ್ತಲೇ ಇದೆ. ಈ ಬಳ್ಳಿಯಲ್ಲಿ ಕವಲೊಡೆದ ಒಂದಿಷ್ಟು ನವಿರು ಪ್ರೇಮಕತೆಗಳ ಪರಿಚಯ ಇಲ್ಲಿದೆ.

ಟೈಗರ್ ಪಟೌಡಿ–ಶರ್ಮಿಳಾ ಠಾಗೋರ್‌

ಬಾಲಿವುಡ್‌ನಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದ್ದ ಶರ್ಮಿಳಾ ಠಾಗೋರ್‌ ಮತ್ತು ಭಾರತದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಟೈಗರ್‌ ಅಲಿ ಖಾನ್‌ ಪಟೌಡಿ ಅವರದ್ದು, ಕ್ರಿಕೆಟ್ ಲೋಕದಲ್ಲಿ ಕಾಣಸಿಗುವ ಅತ್ಯಂತ ಸುಂದರ ಪ್ರೇಮಕತೆ.

ಬಾಲಿವುಡ್‌ನಲ್ಲಿ ಬಿಕಿನಿ ಧರಿಸಿ ನಟಿಸಿದ್ದ ಮೊದಲಿಗಳೆಂಬ ಖ್ಯಾತಿಯ ಶರ್ಮಿಳಾರನ್ನು ಪಟೌಡಿ ಮೊದಲ ಸಲ ಕಂಡದ್ದು 1965ರಲ್ಲಿ. ಹಲವು ಪಂದ್ಯಗಳನ್ನು ಗೆದ್ದು ಸಂಭ್ರಮಿಸಿದ್ದ ಪಟೌಡಿ, ಮೊದಲ ಸಲ ಸೋಲನ್ನೂ ಸಂಭ್ರಮಿಸಿದ್ದು ಶರ್ಮಿಳಾರ ಕಣ್ಣೋಟಕ್ಕೆ ಸೋತಾಗಲೇ.

ಬಂಗಾಳಿ ಸುಂದರಿಯನ್ನು ಕಂಡು ಬೆಕ್ಕಸ ಬೆರಗಾಗಿದ್ದ ಪಟೌಡಿ, ಆಕೆಯನ್ನು ಮೆಚ್ಚಿಸಲು ಮಾಡದ ಕಸರತ್ತುಗಳಿಲ್ಲ. ಆಕೆಗೆ ಮೊದಲ ಉಡುಗೊರೆಯಾಗಿ ರೆಫ್ರಿಜರೇಟರ್‌ ಕಳುಹಿಸಿದ್ದ. ಅದರಿಂದೇನೂ ಪ್ರಯೋಜನವಾಗಲಿಲ್ಲ. ಆದರೆ, ಪ್ರಯತ್ನ ನಿಲ್ಲಿಸದ ಟೀಂ ಇಂಡಿಯಾ ನಾಯಕ ಬರೋಬ್ಬರಿ ನಾಲ್ಕು ವರ್ಷ ಪತ್ರ ಹಾಗೂ ಹೂಗುಚ್ಚ ಕಳುಹಿಸಿದ್ದ. ಅದಾದ ನಂತರವೇ ಅತ್ತಿಂದ ‘ಒಕೆ’ ಎನಿಸಿಕೊಳ್ಳಲು ಸಾಧ್ಯವಾದದ್ದು.

ಬಳಿಕ ಒಂದಾದ ಈ ಜೋಡಿ ಕೇವಲ ಬಾಲಿವುಡ್‌ ಮತ್ತು ಕ್ರಿಕೆಟ್‌ ಲೋಕದ ಸಂಗಮವಾಗಿ ಗಮನ ಸೆಳೆದಿಲ್ಲ. ಬದಲಾಗಿ, ಎರಡು ಧರ್ಮಗಳ ಸಮಾಗಮವಾಗಿಯೂ ಮನಸೆಳೆಯಿತು. ಹರಿಯಾಣದ ಪಟೌಡಿ ಪ್ರಾಂತ್ಯದ ನವಾಬನೂ ಆದ ಈ ಕ್ರಿಕೆಟಿಗ ಮುಸ್ಲಿಂ ಸಮುದಾಯಕ್ಕೆ ಸೇರಿದವರಾದರೆ, ಶರ್ಮಿಳಾ ಅಪ್ಪಟ ಹಿಂದೂ. ಹಾಗಾಗಿ ಎರಡೂ ಕುಟುಂಬಗಳಲ್ಲಿ ವಿರೋಧ ಇದ್ದೇ ಇತ್ತು.

ಟೈಗರ್ ಪಟೌಡಿ–ಶರ್ಮಿಳಾ ಠಾಗೋರ್‌ 
​​​​ಚಿತ್ರ ಕೃಪೆ: ಇಂಡಿಯಾ ಟುಡೆ

ವಿರೋಧದ ನಡುವೆಯೂ 1969ರ ಡಿಸೆಂಬರ್‌ 27 ರಂದು ಮದುವೆ ನಡೆಯಿತು. ಬಳಿಕ ಶರ್ಮಿಳಾ ಮಂತಾಂತರ ಹೊಂದಿದರು. ಬೇಸರಗೊಂಡ ಹಲವರು ಈ ಮದುವೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಆದರೆ, ಎಲ್ಲರ ಊಹೆಗಳನ್ನು ಸುಳ್ಳಾಗಿಸುವಂತೆ ಬದುಕು ನಡೆಸಿದರು.

ಮೊಹಮ್ಮದ್‌ ಅಜರುದ್ದೀನ್‌–ಸಂಗೀತಾ ಬಿಜಲಾನಿ

90ರ ದಶಕದಲ್ಲಿ ಟೀಂ ಇಂಡಿಯಾದ ಸ್ಟೈಲಿಷ್‌ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡವರು ಮೊಹಮ್ಮದ್‌ ಅಜರುದ್ದೀನ್‌. 1980ರಲ್ಲಿ ಮಿಸ್‌ ಇಂಡಿಯಾ ಮುಡಿಗೇರಿಸಿಕೊಂಡು ಸೌಂದರ್ಯಲೋಕದ ಕಣ್ಣುಕುಕ್ಕಿದ್ದಾಕೆ ಸಂಗೀತಾ ಬಿಜಲಾನಿ. ಹೀಗಾಗಿ ಅಜರ್–ಸಂಗೀತಾ ಜೋಡಿ ಆ ದಶಕದಲ್ಲಿ ಎಲ್ಲರ ಗಮನ ಸೆಳೆದುಕೊಂಡಿದ್ದು ಸುಳ್ಳಲ್ಲ.

ಅದಾಗಲೇ ನೌರೀನ್‌ಳನ್ನು ಮದುವೆಯಾಗಿದ್ದ ಅಜರ್‌ಗೆ ಸಂಗೀತಾ ಮೇಲೆ ಒಂದೇ ನೋಟದಲ್ಲಿ ಲವ್ವಾಗಿತ್ತು. ಅಜರ್‌, 1985ರಲ್ಲಿ ಜಾಹೀರಾತೊಂದರ ಶೂಟಿಂಗ್‌ ವೇಳೆ ಸಂಗೀತಾ ಬಿಜಲಾನಿಯನ್ನು ಭೇಟಿ ಮಾಡಿದ್ದರು. ತನ್ನ ಪ್ರೀತಿಯ ಬಗ್ಗೆ ಅವರು, ‘ನಾನು 1985ರಲ್ಲಿ ಶೂಟಿಂಗ್ ವೇಳೆ ಸಂಗೀತಾಳನ್ನು ನೋಡಿದ್ದೆ. ಹೌದು ಮೊದಲ ನೋಟದಲ್ಲೇ ಲವ್ವಾಗಿತ್ತು. ಯಾರೂ ಇದನ್ನು ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ. ಆದರೆ, ನಾನದನ್ನು ಹೇಳಿಕೊಳ್ಳುತ್ತಿದ್ದೇನೆ’ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.

ಮೊಹಮ್ಮದ್‌ ಅಜರುದ್ದೀನ್‌–ಸಂಗೀತಾ ಬಿಜಲಾನಿ

ಮೃದು ಮಾತಿನ ಕ್ರಿಕೆಟಿಗನ ಪ್ರೇಮದ ಬಲೆಯಲ್ಲಿ ಬಿಜಲಾನಿಯೂ ಬಿದ್ದರು. ಅದಾದ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಹೀಗಾಗಿ ಅಜರ್‌, 1996ರಲ್ಲಿ ನೌರೀನ್‌ಗೆ ವಿಚ್ಛೇದನ ನೀಡಿದರು. 1996ರಲ್ಲಿ ಮದುವೆಯಾದ ನಂತರ ಸಂಗೀತ ತನ್ನ ಹೆಸರನ್ನು ಆಯೇಷಾ ಅಜರ್ ಎಂದು ಬದಲಿಸಿಕೊಂಡಳು.

ಆದರೆ, ಈ ಜೋಡಿಯ ವಿವಾಹ ಜೀವನ ಕೊನೆವರೆಗೆ ಸಾಗಲಿಲ್ಲ. 14 ವರ್ಷ ಜೊತೆಯಾಗಿದ್ದ ಇವರು 2010ರಲ್ಲಿ ದೂರಾದರು.

ಸಚಿನ್‌ ತೆಂಡೂಲ್ಕರ್‌–ಅಂಜಲಿ

ಬ್ಯಾಟಿಂಗ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ ಪ್ರೀತಿಯ ಮಡದಿ ಅಂಜಲಿಯನ್ನು ಮೊದಲ ಸಲ ನೋಡಿದ್ದು ಮುಂಬೈ ವಿಮಾನ ನಿಲ್ದಾಣದಲ್ಲಿ. 1990ರಲ್ಲಿ ವಿದೇಶ ಸರಣಿ ಮುಗಿಸಿ ವಾಪಸ್‌ ಆಗಿದ್ದ ಸಚಿನ್‌, ತನ್ನ ತಾಯಿಯನ್ನು ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಅಂಜಲಿಯನ್ನು ಮೊದಲ ಸಲ ನೋಡಿದ್ದರು.

ಈ ವೇಳೆ ಅಂಜಲಿ ಮೆಡಿಕಲ್ ಓದುತ್ತಿದ್ದರೆ, ಸಚಿನ್‌ ಆಗತಾನೇ ಕ್ರಿಕೆಟ್‌ ಜೀವನ ಆರಂಭಿಸಿದ್ದರು. ಓದಿನಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದ ಅಂಜಲಿಗೆ ಕ್ರಿಕೆಟ್‌ ಹಾಗಿರಲಿ ಯಾವ ಆಟದ ಬಗ್ಗೆಯೂ ಆಸಕ್ತಿ ಇರಲಿಲ್ಲ. ಆ ಭೇಟಿಗೂ ಮೊದಲು ಸಚಿನ್‌ ಯಾರೆಂಬುದೂ ಅಂಜಲಿಗೆ ಗೊತ್ತಿರಲಿಲ್ಲ. ಇದನ್ನು ಸ್ವತಃ ಅಂಜಲಿಯೇ ಹೇಳಿಕೊಂಡಿದ್ದಾರೆ.

ಸಚಿನ್‌ ಭೇಟಿ ಬಳಿಕವಷ್ಟೇ ಅಂಜಲಿ ಕ್ರೀಡೆಯ ಬಗ್ಗೆ ತಿಳಿದುಕೊಳ್ಳಲು ಆರಂಭಸಿದ್ದು.

ದಿನ ಕಳೆದಂತೆ ಸಚಿನ್‌ ಜನಪ್ರಿಯತೆ ಹೆಚ್ಚಾಗಿತ್ತು. ಕದ್ದು ಮುಚ್ಚಿ ಭೇಟಿ ಮಾಡುವುದಕ್ಕೂ ಕಷ್ಟವಾಗುತ್ತಿತ್ತು ಎಂದು ಅಂಜಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ‘ಕೆಲವು ಸ್ನೇಹಿತರೊಟ್ಟಿಗೆ ಇಬ್ಬರೂ ರೋಜಾ ಸಿನಿಮಾ ನೋಡಲು ಹೋಗಿದ್ದೆವು. ಸಚಿನ್‌ರನ್ನು ಯಾರಾದರೂ ಗುರುತಿಸಿದರೆ, ನಾವು ಎಂಜಾಯ್‌ ಮಾಡಲು ಆಗುವುದಿಲ್ಲ ಎಂದು ಬೇಸರವಾಗಿತ್ತು. ಹಾಗಾಗಿ ಸಚಿನ್‌ಗೆ ವೇಷ ತೊಡಿಸಲು ನಿರ್ಧರಿಸಿದ್ದೆವು. ಗಡ್ಡ ಅಂಟಿಸಿ, ಕನ್ನಡಕ ತೊಡಿಸಿ ಚಿತ್ರ ಮಂದಿರ ಪ್ರವೇಶಿಸಿದ್ದೆವು. ಮಧ್ಯಂತರದ ಹೊತ್ತಿಗೆ ಸಚಿನ್‌ ಗಡ್ಡ ಸರಿದು, ಕನ್ನಡಕ ಜಾರಿ ಬಿದ್ದಿತ್ತು. ಈ ವೇಳೆ ಕೆಲವರು ಸಚಿನ್‌ರನ್ನು ಕಂಡು ಹಿಡಿದು, ಮುತ್ತಿಕೊಂಡರು. ಹೀಗಾಗಿ ಸಿನಿಮಾದಿಂದ ಅರ್ಧಕ್ಕೇ ಎದ್ದು ಬಂದೆವು’ ಎಂದು ಗುಟ್ಟು ಬಿಚ್ಚಿಟ್ಟಿದ್ದರು.

ಸಚಿನ್‌ ತೆಂಡೂಲ್ಕರ್‌–ಅಂಜಲಿ
 

‘ನನ್ನೊಡನೆ ಮಾತನಾಡಲು ಅಂಜಲಿ ಮೊದಲ ಸಲ ನಮ್ಮ ಮನೆಗೆ ಬಂದದ್ದು ಪತ್ರಕರ್ತೆ ಎಂದು ಹೇಳಿಕೊಂಡು’ ಎಂದು ಸಚಿನ್‌ ತಮ್ಮ ಆತ್ಮ ಚರಿತ್ರೆ ಪ್ಲೇಯಿಂಗ್‌ ಇಟ್‌ ಮೈ ವೇನಲ್ಲಿ ಉಲ್ಲೇಖಿಸಿದ್ದಾರೆ.

ಐದು ವರ್ಷಗಳ ಕಾಲ ಪ್ರೇಮ ಪಕ್ಷಿಗಳಾಗಿ ವಿಹರಿಸಿದ್ದ ಅಂಜಲಿ ಮತ್ತು ಸಚಿನ್‌ 1995ರ ಮೇ 24ರಂದು ಮದುವೆಯಾಗಿದರು. ಅವರಿಗೀಗ ಸಾರಾ ಮತ್ತು ಅರ್ಜುನ್‌ ಎಂಬಿಬ್ಬರು ಮಕ್ಕಳಿದ್ದಾರೆ. ಅರ್ಜುನ್‌ ಸಹ ತಂದೆಯಂತೆ ಕ್ರಿಕೆಟರ್‌ ಆಗಲು ಸಿದ್ಧತೆ ನಡೆಸುತ್ತಿದ್ದಾರೆ. ಅಂಜಲಿ ಸಚಿನ್‌ಗಿಂತ 6 ವರ್ಷ ದೊಡ್ಡವರು ಎಂಬುದು ವಿಶೇಷ.

ಹರ್ಭಜನ್ ಸಿಂಗ್–ಗೀತಾ ಬಾಸ್ರ

ದಿ ಟ್ರೇನ್‌ ಸಿನಿಮಾದಲ್ಲಿ ಗೀತಾ ಬಾಸ್ರಳನ್ನು ನೋಡಿದ ಹರ್ಭಜನ್‌ ಸಿಂಗ್‌ಗೆ ಮೊದಲ ನೋಟದಲ್ಲೇ ಲವ್‌ ಆಗಿತ್ತು. ಆಕೆಯನ್ನು ಭೇಟಿಯಾಗಲು ಇನ್ನಿಲ್ಲದಂತೆ ಯೋಚಿಸತೊಡಗಿದ್ದ. ಸ್ನೇಹಿತರೊಬ್ಬರ ಮೂಲಕ ಬಾಸ್ರ ನಂಬರ್ ಪಡೆದುಕೊಂಡಿದ್ದ.

ಕರೆ ಮಾಡಲು ಧೈರ್ಯ ಸಾಲದೆ ಸಂದೇಶ ಹರಿಬಿಟ್ಟು, ತಮ್ಮನ್ನು ಭೇಟಿಯಾಗುವಂತೆ ಆಹ್ವಾನಿಸಿದ್ದ.

ಲಂಡನ್‌ ಮೂಲದ ಈ ನಟಿ ಆಗಷ್ಟೇ ಬಾಲಿವುಡ್‌ನಲ್ಲಿ ನೆಲೆಕಂಡುಕೊಳ್ಳುವತ್ತ ಗಮನ ಹರಿಸಿದ್ದರು. ಹಾಗಾಗಿ ಅದಾಗತಾನೆ 2007ರ ಟಿ20 ವಿಶ್ವಕಪ್‌ ಗೆದ್ದು ಬಂದಿದ್ದ ಭಜ್ಜಿಯ ಆಹ್ವಾನಕ್ಕೆ ಸೊಪ್ಪು ಹಾಕದ ಗೀತಾ, ಶುಭಾಶಯ ಹೇಳಿ ಸುಮ್ಮನಾಗಿದ್ದಳು.

ಇದರಿಂದ ನಿರಾಸೆಗೊಂಡ ಭಜ್ಜಿ 10 ತಿಂಗಳು ಸುಮ್ಮನಿದ್ದುಬಿಟ್ಟರು. ಮುಂದೊಂದು ದಿನ ಭಜ್ಜಿ ಬಗ್ಗೆ ಆಕರ್ಷಿತಳಾದ ಗೀತಾ, ಮುಂದುವರಿಯಲು ಮನಸ್ಸು ಮಾಡಿದಳು. ಆದರೆ, ಅದಕ್ಕೊಂದು ಕಾರಣ ಬೇಕಲ್ಲ. ಅದಕ್ಕಾಗಿ ಅವಳು ಆಫ್‌ ಸ್ಪಿನ್‌ ಮೋಡಿಗಾರನಿಗೆ ಮೆಸೇಜ್‌ ಮಾಡಿ ‘ಎರಡು ಐಪಿಎಲ್‌ ಟಿಕೆಟ್‌ ಬೇಕು’ ಎಂದು ಕೋರಿದಳು. ಭಜ್ಜಿ ಎದೆಯಲ್ಲಿ ಚಿಟ್ಟೆ ಹಾರಿತು.

ಗೀತಾ ಬಾಸ್ರ ಮತ್ತು ಹರ್ಭಜನ್ ಸಿಂಗ್

ಮುಂದೆ ಭೇಟಿ ಮಾಡಿ ಹರಟಿದರು. ಒಳ್ಳೆಯ ಸ್ನೇಹಿತರಾದರು. ಸ್ನೇಹ ಪ್ರೀತಿಯಾಗುವ ಹೊತ್ತಿಗೆ ಟ್ವಿಸ್ಟ್‌ ಕೊಟ್ಟ ಗೀತಾ, ‘ಸ್ನೇಗಿತರಾಗಿಯೇ ಇದ್ದು ಬಿಡೋಣ. ಮತ್ತೆಮತ್ತೆ ಭೇಟಿಯಾಗುವುದು ಬೇಡ’ ಎಂದು ಬಿಟ್ಟಳು. ಕೆಲದಿನಗಳ ಬಳಿಕ ಒಂಟಿತನ ಕಾಡಿತು. ಭಜ್ಜಿಯಿಂದ ದೂರ ಇರುವುದು ತನ್ನಿಂದ ಸಾಧ್ಯವಿಲ್ಲ ಎನಿಸಿ ಮತ್ತೆ ಬಂದಳು. ಒಂದಾದರು. ಎಂದಿನಂತೆ ಮುಂದುವರಿದರು.

ಹೀಗೇ.. ಬರೋಬ್ಬರಿ ಐದು ವರ್ಷ ಡೇಟಿಂಗ್‌ ನಡೆಸಿದರೂ ಅಷ್ಟಾಗಿ ಗಾಸಿಪ್ ಮಾಡಿಕೊಳ್ಳದೆ ಗುಟ್ಟು ಕಾಪಿಟ್ಟುಕೊಂಡ ಇವರು, 2015ರಲ್ಲಿ ಮದುವೆಯಾದರು. ಇಬ್ಬರ ನಡುವೆ 2017ರಲ್ಲಿ ಹೆಣ್ಣು ಮಗಳು ಬಂದಳು.

ಹಜಲ್ ಕೀಚ್‌–ಯುವರಾಜ್‌ ಸಿಂಗ್‌

ಯುವರಾಜ್‌ ಸಿಂಗ್‌ ಹಾಗೂ ಬಾಲಿವುಡ್‌ನ ನಂಟು ಹೊಸದೇನಲ್ಲ. ಅದು ಸ್ವರ್ಗದಲ್ಲೇ ಜೋಡಿಯಾಗಿದ್ದಿರಬೇಕು ಎಂಬಷ್ಟರ ಮಟ್ಟಿಗೆ ಸಂಬಂಧ ಬೆಸೆದುಕೊಂಡಿದೆ. ದೀಪಿಕಾ ಪಡುಕೋಣೆ, ಕಿಮ್ ಶರ್ಮಾ ಅವರೊಂದಿಗೆ ತಳುಕು ಹಾಕಿಕೊಂಡಿದ್ದ ಯುವಿ ಹೆಸರು ಕೊನೆಗೆ ಗಂಟು ಬಿದ್ದದ್ದು ಮಾತ್ರ ಹಜಲ್ ಕೀಚ್‌ ಜೊತೆಗೆ.

ಸುತ್ತಾಟದ ವೇಳೆ ಆಗಾಗ ಮಾಧ್ಯಮಗಳ ಕಣ್ಣಿಗೆ ಬಿದ್ದು ಸುದ್ದಿಯಾಗುತ್ತಿದ್ದ ಈ ಜೋಡಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಮದುವೆಗೆ ಒಟ್ಟಾಗಿ ಹೋಗುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದರು. ಆದರೂ, ದೀಪಿಕಾ, ಕಿಮ್ ಅವರಂತೆಯೇ ಕೀಚ್‌ ಹೆಸರೂ ಯುವಿ ಜೊತೆ ಹೆಚ್ಚು ದಿನ ಇರುವುದಿಲ್ಲ ಎಂಬ ಅನುಮಾನ ಗಾಸಿಪ್‌ ಪ್ರಿಯರಲ್ಲಿ ಇದ್ದೇ ಇತ್ತು.‌

ಹೆಂಡತಿ ಹಜಲ್ ಕೀಚ್ ಹಾಗೂ ತಾಯಿ ಶಬ್ನಮ್ ಸಿಂಗ್ ಅವರೊಂದಿಗೆ ಯುವಿ

ಅವೆಲ್ಲವನ್ನು ಸುಳ್ಳಾಗಿಸಿದ ಈ ಜೋಡಿ 2016ರ ನವೆಂಬರ್‌ 30ರಂದು ಸತಿ–ಪತಿಗಳಾದರು. 2011ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಎನಿಸಿದ್ದ ಯುವಿ ಬಳಿಕ ಕ್ಯಾನ್ಸರ್‌ ಅನ್ನೂ ಗೆದ್ದು ಬಂದರು. ಆದರೆ, ಅವರ ಆಟದಲ್ಲಿ ಹಳೆಯ ಲಯ ಕಾಣಲೇ ಇಲ್ಲ. ಹೀಗಾಗಿ ಕಳೆದ ವರ್ಷ ಜೂನ್‌ನಲ್ಲಿ ವಿದಾಯ ಹೇಳಿದ್ದರು.

ವಿಶೇಷವೆಂದರೆ ಕೀಚ್‌ಗೆ ಕ್ರಿಕೆಟ್‌ನ ಗಂಧಗಾಳಿ ಗೊತ್ತಿಲ್ಲ. ಈ ಕುರಿತು ಸಮಾರಂಭವೊಂದರಲ್ಲಿ ಮಾತನಾಡಿದ್ದ ಯುವಿ, ‘ಕೀಚ್‌ಗೆ ಕ್ರಿಕೆಟ್‌ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಪಂದ್ಯವೊಂದರಲ್ಲಿ ನಾನು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲದೆ ಬೇಗನೆ ವಿಕೆಟ್‌ ಒಪ್ಪಿಸಿದ್ದೆ. ಮೈದಾನದಲ್ಲಿ ಕುಳಿತು ಆಟ ನೋಡುತ್ತಿದ್ದ ಆಕೆ, ನಾನು ಬೇಗನೆ ವಾಪಸ್‌ ಆದದ್ದನ್ನು ಕಂಡು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಳು’ ಎಂದು ಚಟಾಕಿ ಹಾರಿಸಿದ್ದರು.

ಜಹೀರ್‌ ಖಾನ್‌–ಸಾಗರಿಕಾ ಘಾಟ್ಕೆ

ಛಕ್‌ ದೇ ಇಂಡಿಯಾ ಸಿನಿಮಾದ ನಟಿ ಸಾಗರಿಕ ಘಾಟ್ಕೆಗೆ ಯಾರಿಗೆ ಗೊತ್ತಿಲ್ಲ. ನೋಡಿದ ಕೂಡಲೆ ಸೆಳೆದುಕೊಳ್ಳುವಷ್ಟು ಸುಂದರಿ ಆಕೆ. ಈ ಸಿನಿಮಾ ನಂತರ ಬೇರೆ ಸಿನಿಮಾಗಳು ಆಕೆಯ ಕೈಗತ್ತಲಿಲ್ಲ. ಹಾಗಾಗಿ ಆಕೆ ಹೆಚ್ಚಾಗಿ ಸುದ್ದಿಯಲ್ಲಿ ಉಳಿಯಲಿಲ್ಲ.

ಆದರೆ, ಜಹೀರ್‌ ಖಾನ್‌ ಜೊತೆಗೆ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ವದಂತಿಗಳಿಗೆ ಆಹಾರವಾಗುತ್ತಿದ್ದರು. ಬಾಲಿವುಡ್‌ ಅಂಗಳದಲ್ಲಿ ಎಷ್ಟೇ ಗಾಸಿಪ್‌ ಹರಿದಾಡಿದರೂ ಅವುಗಳನ್ನೆಲ್ಲ ಅಲ್ಲಗಳೆಯುತ್ತಾ ಬಂದಿದ್ದ ಈ ಜೋಡಿ ಬಹುದಿನಗಳವರೆಗೆ ತಮ್ಮ ಪ್ರೇಮ ಸಂಬಂಧವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ.

ಕೊನೆಗೊಮ್ಮೆ ಗಟ್ಟಿ ಮನಸ್ಸು ಮಾಡಿ ಯುವರಾಜ್‌ ಸಿಂಗ್‌ ಮತ್ತು ಹಜಲ್ ಕೀಚ್‌ ಮದುವೆಗೆ ಒಟ್ಟಾಗಿ ಹಾಜರಾದರಾದರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲೊಪ್ಪಿರಲಿಲ್ಲ.

ಜಹೀರ್‌ ಖಾನ್‌–ಸಾಗರಿಕಾ ಘಾಟ್ಕೆ

ಹೀಗಾಗಿ ವದಂತಿಗಳು ಉಸಿರಾಡುತ್ತಲೇ ಇದ್ದವು. ಅಂತಿಮವಾಗಿ ಇವುಗಳಿಗೆಲ್ಲ ತಿಲಾಂಜಲಿ ಇಡಲು ನಿರ್ಧರಿಸಿದ ಜಹೀರ್‌ ಮತ್ತು ಘಾಟ್ಕೆ, 2017ರ ಏಪ್ರಿಲ್‌ 24 ರಂದು ‘ನಾವು ಎಂಗೇಜ್‌ ಆಗಿದ್ದೇವೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.

ಅದೇ ವರ್ಷ ನವೆಂಬರ್‌ 23 ರಂದು ರಿಜಿಸ್ಟರ್‌ ಮ್ಯಾರೇಜ್‌ ಮಾಡಿಕೊಂಡರು.

ವಿರಾಟ್ ಕೊಹ್ಲಿ–ಅನುಷ್ಕಾ‌ ಶರ್ಮಾ

ಕ್ರಿಕೆಟ್‌ ಜಗತ್ತಿನ ಅಚ್ಚರಿ ವಿರಾಟ್‌ ಕೊಹ್ಲಿ. ಬಾಲಿವುಡ್‌ನ ಪ್ರತಿಭಾವಂತೆ ಅನುಷ್ಕಾ ಶರ್ಮಾ. ಈ ಜೊಡಿ ಮೊದಲ ಸಲ ಬೇಟಿಯಾಗಿದ್ದು, 2013ರಲ್ಲಿ ಜಾಹೀರಾತುವೊಂದರ ಶೂಟಿಂಗ್‌ ವೇಳೆ. ಬಳಿಕ ಸ್ನೇಹಿತರಾದರು. ದಿನಕಳೆದಂತೆ ಮನಸುಗಳು ಬೆಸೆದುಕೊಂಡು ಸುತ್ತಾಟ ಶುರುವಾಯಿತು. ಇದರೊಂದಿಗೆ ಗಾಸಿಪ್‌ ಲೋಕಕ್ಕೆ ಒಂದೊಳ್ಳೆ ಸರಕು ಸಿಕ್ಕಾಂತಾಯಿತು.

2014ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ (ಕ್ರಿಕೆಟ್‌ ಟೂರ್ನಿ) ಮುಗಿಸಿ ಮುಂಬೈಗೆ ಬಂದಿಳಿದಿದ್ದ ವಿರಾಟ್‌ ತಂಡದೊಂದಿಗೆ ಹೊಟೇಲ್‌ಗೆ ತೆರಳದೆ ಅನುಷ್ಕಾ ಜೊತೆ ಅಪಾರ್ಟ್‌ಮೆಂಟ್‌ಗೆ ಹೋಗಿದ್ದರು. ವಿಶೇಷವೆಂದರೆ ಅನುಷ್ಕಾ ವಿರಾಟ್‌ ಅವರನ್ನು ಕರೆತರಲು ಕಾರ್‌ ಕಳುಹಿಸಿದ್ದರು. ಅವಕಾಶ ಸಿಕ್ಕಾಗಲೆಲ್ಲ ಭೇಟಿ, ಮಾತುಕತೆ ಮುಂದುವರಿಸಿದ್ದ, ಇವರ ಸಂಬಂಧ ತೆರೆದಿಟ್ಟ ಗುಟ್ಟಂತಾಯಿತು.

2014ರಲ್ಲಿ ನ್ಯೂಜಿಲೆಂಡ್‌ ಪ್ರವಾಸ ಹೋಗಿದ್ದ ವಿರಾಟ್‌ಗೆ ಅಚ್ಚರಿ ನೀಡಲು ಅನುಷ್ಕಾ ಕೂಡ ಅಲ್ಲಿಗೆ ಹೋಗಿದ್ದರು. ಕಿವೀಸ್‌ ಬೀದಿಗಳಲ್ಲಿ ಕೈಕೈ ಹಿಡಿದು ಓಡಾಡಿದ ಚಿತ್ರಗಳು ಸಾಕಷ್ಟು ಸದ್ದು ಮಾಡಿದ್ದವು. ನಂತರ ಶ್ರೀಲಂಕಾದಲ್ಲಿ ಅನುಷ್ಕಾ ಇದ್ದ ಶೂಟಿಂಗ್‌ ಸೆಟ್‌ಗೆ ದಿಢೀರ್‌ ಭೇಟಿ ನೀಡಿ ವಿರಾಟ್‌ ಕೂಡ ಸರ್‌ಪ್ರೈಸ್‌ ನೀಡಿದ್ದರು.

ವಿರಾಟ್ ಕೊಹ್ಲಿ–ಅನುಷ್ಕಾ‌ ಶರ್ಮಾ

ಅದೇ ವರ್ಷ ಶ್ರೀಲಂಕಾ ವಿರುದ್ಧದ ಕ್ರಿಕೆಟ್‌ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬಂದಿದ್ದ ಅನುಷ್ಕಾಳಿಗೆ ಶತಕದ ಉಡುಗೊರೆಯನ್ನೂ, ಗಾಳಿ ಮುತ್ತೊಂದನ್ನೂ ನೀಡಿ ಬೀಳ್ಕೊಟ್ಟಿದ್ದ. ನಂತರ ತಮ್ಮ ಪ್ರೇಮ ಸಂಬಂಧದ ಬಗ್ಗೆ ತುಟ್ಟಿ ಬಿಚ್ಚಿದ್ದ ಅನುಷ್ಕಾ, ‘ಎಲ್ಲವೂ ತೆರೆದಿಟ್ಟಂತೆಯೇ ಇದೆ. ಯಾವುದನ್ನೂ ಮುಚ್ಚಿಡುವ ಅಗತ್ಯವಿಲ್ಲ. ಎಲ್ಲ ಯುವ ಜೋಡಿಗಳಂತೆ ನಾವೂ ಇದ್ದೇವೆ’ ಎಂದು ನಗು ತುಳುಕಿಸಿದ್ದರು.

2017ರ ಡಿಸೆಂಬರ್‌ 11ರಂದು ದೂರದ ಇಟಲಿಯಲ್ಲಿ ಮದುವೆಯಾದ ಈ ಜೋಡಿ, ಬಾಲಿವುಡ್‌–ಕ್ರಿಕೆಟ್‌ ವಿವಾಹ ಸಂಬಂಧದ ಪಠ್ಯಕ್ಕೆ ಮತ್ತೊಂದು ಅಧ್ಯಾಯವಾದರು.

***

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳಿಂದ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು