Video: ರಾಕೆಟ್ ಮೇಲೆ ಭಾರತದ ತ್ರಿವರ್ಣ ಧ್ವಜ ಉಳಿಸಿಕೊಂಡ ರಷ್ಯಾ

ಬೆಂಗಳೂರು: ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವುದನ್ನು ವಿರೋಧಿಸಿ ಹಲವು ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧ ವಿಧಿಸುತ್ತಿವೆ. ಇದರ ಬೆನ್ನಲ್ಲೇ ರಷ್ಯಾ ತನ್ನ ಬಾಹ್ಯಾಕಾಶ ರಾಕೆಟ್ ಮೇಲೆ ಚಿತ್ರಿಸಿರುವ ಭಾರತದ ತ್ರಿವರ್ಣ ಧ್ವಜವನ್ನು ಹೊರತು ಪಡಿಸಿ ಇತರೆ ರಾಷ್ಟ್ರಗಳ ಧ್ವಜವನ್ನು ತೆಗೆದು ಹಾಕುತ್ತಿದೆ. ಅದರ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಅಮೆರಿಕ, ಬ್ರಿಟನ್ ಹಾಗೂ ಜಪಾನ್ ರಾಷ್ಟ್ರಗಳು ರಷ್ಯಾ ಮೇಲೆ ಹಲವು ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಆದರೆ, ರಷ್ಯಾ ನಡೆಸುತ್ತಿರುವ ದಾಳಿಯ ಬಗ್ಗೆ ಭಾರತವು ನೇರವಾಗಿ ಟೀಕಿಸುವುದರಿಂದ ದೂರ ಉಳಿದಿದೆ.
ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಸಂಶೋಧನಾ ಸಂಸ್ಥೆಯ (Roscosmos) ಮುಖ್ಯಸ್ಥ ಡಿಮಿಟ್ರಿ ರಾಗೊಜಿನ್ ಅವರು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ರಾಕೆಟ್ ಮೇಲೆ ಚಿತ್ರಿಸಲಾಗಿರುವ ಅಮೆರಿಕ, ಬ್ರಿಟನ್ ಹಾಗೂ ಜಪಾನ್ ರಾಷ್ಟ್ರಗಳ ಧ್ವಜಗಳನ್ನು ರಷ್ಯಾದ ಸಿಬ್ಬಂದಿ ಮುಚ್ಚುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
Стартовики на Байконуре решили, что без флагов некоторых стран наша ракета будет краше выглядеть. pic.twitter.com/jG1ohimNuX
— РОГОЗИН (@Rogozin) March 2, 2022
ಕಜಕಿಸ್ತಾನದ ಬಾಹ್ಯಾಕಾಶ ಕೇಂದ್ರದಲ್ಲಿ ಸೊಯುಜ್ ರಾಕೆಟ್ ಮೇಲಿರುವ ವಿದೇಶಗಳ ಧ್ವಜಗಳನ್ನು ಕಾಣದಂತೆ ಮುಚ್ಚಲಾಗಿದೆ. ಅದೇ ರಾಕೆಟ್‌ನಲ್ಲಿರುವ ಭಾರತದ ತ್ರಿವರ್ಣ ಧ್ವಜವನ್ನು ಉಳಿಸಿಕೊಂಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ–ಉಕ್ರೇನ್–ರೊಮೇನಿಯಾ: ಪಾಕಿಸ್ತಾನ, ಟರ್ಕಿ ವಿದ್ಯಾರ್ಥಿಗಳಿಗೂ ನೆರವಾದ ಭಾರತದ ಧ್ವಜ
'ಕೆಲವು ರಾಷ್ಟ್ರಗಳ ಧ್ವಜಗಳನ್ನು ಉಳಿಸಿಕೊಳ್ಳದಿರಲು ಬೈಕೊನುರ್‌ನ ಸಿಬ್ಬಂದಿ ನಿರ್ಧರಿಸಿದ್ದು, ಅದರಿಂದ ನಮ್ಮ ರಾಕೆಟ್ ಮತ್ತಷ್ಟು ಸುಂದರವಾಗಿ ಕಾಣಲಿದೆ' ಎಂದು ರಷ್ಯಾ ಬಾಹ್ಯಾಕಾಶ ಕಾರ್ಯಕ್ರಮಗಳ ಮುಖ್ಯಸ್ಥ ಡಿಮಿಟ್ರಿ ರಾಗೊಜಿನ್ ಪ್ರಕಟಿಸಿದ್ದಾರೆ.
ವಿಮಾನಯಾನ ಮತ್ತು ಬಾಹ್ಯಾಕಾಶ ವಲಯದ ರಷ್ಯಾದ ಕಂಪನಿಗಳು ಬ್ರಿಟನ್‌ನ ವಿಮೆ ಮತ್ತು ಮರುವಿಮೆ ಸೇವೆಗಳನ್ನು ಬಳಸಿಕೊಳ್ಳುವುದರ ಮೇಲೆ ಬ್ರಿಟನ್ ಗುರುವಾರ ನಿರ್ಬಂಧ ವಿಧಿಸಿದೆ. ಐರೋಪ್ಯ ಒಕ್ಕೂಟ ಸಹ ಹಲವು ಆರ್ಥಿಕ ನಿರ್ಬಂಧಗಳನ್ನು ಹೇರಿದ್ದು, ರಷ್ಯಾದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.