ಬುಧವಾರ, ಆಗಸ್ಟ್ 10, 2022
23 °C

PV Web Exclusive: ಕೊರೊನಾ ಕುಲುಮೆಯಲ್ಲಿ ಅರಳಿದ ‘ಚಿತ್ರಸಂತೆ’

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೆಲವು ತುರ್ತು ಸಂದರ್ಭಗಳನ್ನು ಹೊರತುಪಡಿಸಿದರೆ ಇಷ್ಟೊಂದು ದೀರ್ಘಕಾಲ ಮಕ್ಕಳು ಶಾಲೆಗಳಿಗೆ ಹೋಗದೆ, ಆಟವಾಡಲೂ ಸಾಧ್ಯವಾಗದೆ ಮನೆಯಲ್ಲೇ ಉಳಿದ ಉದಾಹರಣೆಗಳು ಅತ್ಯಂತ ವಿರಳ.

ಕೊರೊನಾ ವಿಶ್ವದ ಆರ್ಥಿಕತೆ, ಜನರ ನಿತ್ಯದ ಬದುಕಿಗೆ ಬರೆ ಎಳೆದಿರುವುದಷ್ಟೇ ಅಲ್ಲ ಮಕ್ಕಳ ಮನಸ್ಸಿನ ಮೇಲೂ ಗಾಢ ಪರಿಣಾಮ ಬೀರಿದೆ. ಶಾಲೆಗೆ ಹೋಗದೆ, ಆಟವಾಡಲೂ ಸಾಧ್ಯವಾಗದೇ ಗೃಹ ಬಂಧಿಯಾಗಿರುವ ಮಕ್ಕಳು ಲವಲವಿಕೆ ಕಳೆದುಕೊಂಡಿದ್ದಾರೆ. ಎಷ್ಟೋ ಮಕ್ಕಳು ಖಿನ್ನತೆಗೆ ಒಳಗಾಗಿದ್ದಾರೆ. ಇಂತಹ ಸಮಯದಲ್ಲಿ ರಾಜ್ಯ, ದೇಶದ ಗಡಿ ಮೀರಿ ಮಕ್ಕಳ ನೆರವಿಗೆ ಹುಟ್ಟಿಕೊಂಡದ್ದು ‘ಬಣ್ಣದ ಗರಿ’

ಕೊರೊನಾ ಸಂಕಷ್ಟದ ಕಾಲದಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳು ಸ್ಥಗಿತಗೊಂಡಿದ್ದಾಗ ಮಕ್ಕಳ ಚಟುವಟಿಕೆಗಳಿಗೆ ಜಾಗ ಒದಗಿಸಿದ್ದು ಆನ್‌ಲೈನ್ ಜಾಲತಾಣ. ರಾಜ್ಯ, ಹೊರರಾಜ್ಯ, ಹೊರದೇಶದಲ್ಲಿ ನೆಲೆಸಿರುವ ವಿವಿಧ ಮಕ್ಕಳನ್ನು ಈ ತಾಣವು ಒಗ್ಗೂಡಿಸಿದೆ. ಅವರ ಕಲಿಕೆಯ ಜತೆಗೆ ಆಟಪಾಟಗಳಿಗೂ ಅವಕಾಶ ನೀಡುವುದು, ಸೃಜನಾತ್ಮಕ ಕಲಿಕೆಗೆ ಅವಕಾಶ ಒದಗಿಸುವ ಪರಿಕಲ್ಪನೆಯೇ ‘ಬಣ್ಣದ ಗರಿ'. ಮೊದಲು ಇಂತಹ ಪರಿಕಲ್ಪನೆ ಹುಟ್ಟು ಹಾಕಿದವರು ಹಿರಿಯ ರಂಗಕರ್ಮಿ ಚನ್ನಕೇಶವ. ಕೈಜೋಡಿಸಿದವರು ಕಲಾವಿದರಾದ ನಾಗರಾಜ್ ಪತ್ತಾರ್, ಆಶಾ.

ಹಾಡು, ಚಿತ್ರಕಲೆ, ವಿಚಾರ ವಿನಿಮಯ, ಚರ್ಚೆ, ಸ್ಪರ್ಧೆಗಳು, ಶಾರ್ಟ್ ಹ್ಯಾಂಡ್ ಬರಹ, ಕಾನೂನು, ಕುಶಲಕಲೆ ಹೀಗೆ... ಹಲವು ವಿಷಯಗಳನ್ನು ಮಕ್ಕಳು ಕಲಿಯಲು ಆರಂಭಿಸಿದ್ದಾರೆ. ಆರು ತಿಂಗಳಿನಿಂದ ಈ ಮಕ್ಕಳು ಪ್ರತಿ ಶನಿವಾರ, ಭಾನುವಾರ ಮೂರ‍್ನಾಲ್ಕು ಅವಧಿಗಳಲ್ಲಿ ಹಾಡು ಕಲಿಯುತ್ತಿದ್ದಾರೆ. ಬಗೆ ಬಗೆಯ ಚಿತ್ರಗಳನ್ನು ಬರೆಯುತ್ತಿದ್ದಾರೆ. ಹಲವು ವಿಷಯಗಳನ್ನು ನಿರ್ಭಯವಾಗಿ ಚರ್ಚಿಸುತ್ತಾರೆ. ಖಿನ್ನತೆ ಜಯಿಸಿದ್ದಾರೆ. 

ಎಲ್ಲಾ ಮಕ್ಕಳನ್ನೂ ಆಕರ್ಷಿಸಿದ ಚಿತ್ರಕಲೆಯನ್ನು ಸುಮ್ಮನೆ ಬರೆಯಲು ತಿಳಿಸದೆ, ವಾರಕ್ಕೊಂದು ವಿಷಯವನ್ನು ನೀಡಿ ಅದನ್ನು ಚಿತ್ರವಾಗಿ ರೂಪಾಂತರಿಸಲು ಮಕ್ಕಳಿಗೆ ಉತ್ತೇಜಿಸಲಾಗಿದೆ. ಮಕ್ಕಳ ಕಲ್ಪನಾಶಕ್ತಿಯನ್ನು ಹೆಚ್ಚಿಸುವ ಜತೆಗೆ ಚಿತ್ರಕಲೆಯತ್ತ ಅವರನ್ನು ಸೆಳೆಯುವಲ್ಲಿ ಯಶ ಕಾಣಲಾಗಿದೆ. ಮಕ್ಕಳ ಆಳವಾದ ಕಲ್ಪನಾ ಸಾಮರ್ಥ್ಯ ಹೊರತೆಗೆಯಲಾಗಿದೆ. ಅವರು ಬರೆದ ಹಲವು ಚಿತ್ರಗಳು ತಲೆದೂಗುವಂತಿವೆ. ಈ ಚಟುವಟಿಕೆಯಲ್ಲಿ ಎಲ್ಲಾ ಮಕ್ಕಳು ಅತ್ಯಂತ ಸಕ್ರಿಯರಾಗಿ ಭಾಗವಹಿಸತೊಡಗಿದಾಗ ಮಕ್ಕಳೇ ರಚಿಸಿದ ಈ ಚಿತ್ರಗಳ ಪ್ರದರ್ಶನ, ಮಾರಾಟಕ್ಕೆ ‘ಬಣ್ಣದ ಗರಿ’ ಚಿತ್ರಸಂತೆ ರೂಪಿಸಲಾಗಿದೆ.

ಮೊದಲ ಸಂತೆಯನ್ನು ಇದೇ ತಿಂಗಳ 12 ಮತ್ತು 13ರಂದು ಎರಡು ದಿನಗಳು ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಇದು ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳೇ ಮಾಡಿರುವ ಒಂದು ಕ್ರಿಯಾಶೀಲ ಅಭಿವ್ಯಕ್ತಿ. ಮಕ್ಕಳೇ ರಚಿಸಿದ ಚಿತ್ರಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು. ಈ ಚಿತ್ರಗಳನ್ನು ವಿಶೇಷ ಚೌಕಟ್ಟಿನಲ್ಲಿ ಅಳವಡಿಸಲಾಗಿದೆ. ಆಸಕ್ತರು ಸ್ಥಳದಲ್ಲಿಯೇ ನಿಗದಿತ ಬೆಲೆ ನೀಡಿ ಖರೀದಿಸಬಹುದು. ಖ್ಯಾತ ಕಲಾವಿದ ಜಹಾಂಗೀರ್ ಸಂತೆಗೆ ಚಾಲನೆ ನೀಡುವರು.

ಇಂತಹ ಚಿತ್ರಸಂತೆಯನ್ನು ರಾಜ್ಯದ ಹಲವು ಸ್ಥಳಗಳಲ್ಲಿ ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಮಕ್ಕಳಿಗಾಗಿ ಆನ್‌ಲೈನ್ ಕಾರ್ಯಾಗಾರ ಮಾಡುವ ಯೋಜನೆಯನ್ನೂ ರೂಪಿಸಲಾಗಿದೆ. ಸ್ಥಳೀಯ ಗ್ರಾಮ, ಪಟ್ಟಣಗಳ ಮಕ್ಕಳನ್ನು ಒಳಗೊಳಿಸುವ ಮೂಲಕ ಅಲ್ಲಲ್ಲಿ ಚಿತ್ರಸಂತೆ ಯೋಜಿಸಲಾಗುತ್ತಿದೆ.

ಹಲವು ಬಣ್ಣಗಳ ಚಿಣ್ಣರು ಸೇರಿ ಸೃಷ್ಟಿಸಿದ ಗರಿಗಳು. ಮಕ್ಕಳ ಕ್ರಿಯಾಶಕ್ತಿಯೇ ಬಣ್ಣದ ಗರಿಗಳ ಕಾಮನಬಿಲ್ಲು. ಇಂತಹ ಕಾಮನಬಿಲ್ಲಿನ ಸಾಕಾರಕ್ಕೆ ರಂಗ ಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ, ರಂಗ ನಿರ್ದೇಶಕ ಹೊನ್ನಾಳಿ ಚಂದ್ರು, ಉಪನ್ಯಾಸಕಿ ಅನಿತಾ ಸಂಪಳ್ಳಿ, ಕಂದಾಯ ಇಲಾಖೆ ನಿರೀಕ್ಷಕ ಹೊತ್ತಾರೆ ಶಿವು ಸಾಥ್ ನೀಡಿದ್ದಾರೆ. ಕೊರಿನಾ ನಂತರದ ವೇದಿಕೆಯತ್ತ ಹೆಜ್ಜೆ ಇಡಲು ಮಕ್ಕಳು ಸಜ್ಜಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು