ಭಾನುವಾರ, ಜೂನ್ 13, 2021
28 °C

ಹಣಕಾಸಿನ ನೆರವಿಗೆ ಕಟ್ಟಡ ಕಾರ್ಮಿಕರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಮತ್ತು ಲಾಕ್‌ಡೌನ್ ಕಾರಣ ಕಟ್ಟಡ ಕಾರ್ಮಿಕರಿಗೆ ಕನಿಷ್ಠ ಮೂರು ತಿಂಗಳು ತಲಾ ₹ 10 ಸಾವಿರ ಪರಿಹಾರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯು ಸರ್ಕಾರಕ್ಕೆ ಆಗ್ರಹಿಸಿದೆ.‌

ಈ ಸಂಬಂಧ ಸಮಿತಿಯ ಸದಸ್ಯರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಶಾಮಣ್ಣ ರೆಡ್ಡಿ ನೇತೃತ್ವದಲ್ಲಿ ಬುಧವಾರ ಸಭೆ ನಡೆಸಿ, ಮನವಿ ಪತ್ರವನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಸಲ್ಲಿಸಿದ್ದಾರೆ. ಕಟ್ಟಡ ಕಾರ್ಮಿಕರ ವಿವಿಧ ಸಂಘಟನೆಗಳ ಪ್ರತಿನಿಧಗಳು ಸಭೆಯಲ್ಲಿ ಭಾಗವಹಿಸಿದ್ದರು.

‘ಲಾಕ್‌ಡೌನ್‌ನಿಂದ ಕಟ್ಟಡ ನಿರ್ಮಾಣ ಕಾಮಗಾರಿಗಳು ಮತ್ತೆ ಸ್ಥಗಿತಗೊಂಡಿವೆ. ಇದರಿಂದ ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಕುಟುಂಬ ನಿರ್ವಹಣೆ ಸವಾಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಪುನಃ ತಮ್ಮ ಊರುಗಳಿಗೆ ತೆರಳಿದ್ದಾರೆ. ಮಂಡಳಿಯಲ್ಲಿ ನೋಂದಣಿಯಾಗಿರುವ ಎಲ್ಲ ಕಾರ್ಮಿಕರಿಗೆ ಕನಿಷ್ಠ ಮೂರು ತಿಂಗಳು ಹಣಕಾಸಿನ ನೆರವನ್ನು ಒದಗಿಸಬೇಕು. ಕಳೆದ ವರ್ಷ ಘೋಷಿಸಲಾಗಿದ್ದ ₹ 5 ಸಾವಿರ ಪರಿಹಾರದ ಬಾಕಿ ಹಣವನ್ನು ಒಂದು ಲಕ್ಷ ಕಾರ್ಮಿಕರಿಗೆ ಕೂಡಲೇ ವರ್ಗಾವಣೆ ಮಾಡಬೇಕು’ ಎಂದು ಸಮಿತಿ ಆಗ್ರಹಿಸಿದೆ.

ವೈದ್ಯಕೀಯ ‌ಮೊದಲಾದ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಮೇ 30ರವರೆಗೆ ನೀಡಲಾಗಿದ್ದ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಬೇಕು. ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆ, ಮೃತಪಟ್ಟ ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಮಿತಿಯ ಸದಸ್ಯರು ಒತ್ತಾಯಿಸಿದ್ದಾರೆ. ಒಂದು ವೇಳೆ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮೇ 15ರಂದು ಕಟ್ಟಡ ಕಾರ್ಮಿಕರು ಸಚಿವರ ಮನೆಯ ಮುಂದೆ ಕುಟುಂಬದ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಆಶಾ: ‘₹ 5 ಸಾವಿರ ಕೋವಿಡ್ ಭತ್ಯೆ ಬಿಡುಗಡೆಗೊಳಿಸಿ’
ಬೆಂಗಳೂರು:
‘ಬಿಬಿಎಂಪಿ ವ್ಯಾಪ್ತಿಯ ಎಲ್ಲ ಆಶಾ ಕಾರ್ಯಕರ್ತೆಯರಿಗೆ ತಲಾ ₹ 5 ಸಾವಿರ ಕೋವಿಡ್ ಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಅಗತ್ಯ ಸುರಕ್ಷಾ ಸಾಧನಗಳನ್ನು ಒದಗಿಸಬೇಕು’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಗ್ರಹಿಸಿದೆ.

ಈ ಸಂಬಂಧ ಸಂಘವು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದೆ. ‘14–15 ತಿಂಗಳುಗಳಿಂದ ಆಶಾ ಕಾರ್ಯಕರ್ತೆಯರು ತಮ್ಮ ಜೀವ ಪಣಕಿಟ್ಟು ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ವೇಳೆ ಕೆಲ ಆಶಾ ಕಾರ್ಯಕರ್ತೆಯರು ಮೃತಪಟ್ಟಿದ್ದಾರೆ. ಹಲವಾರು ಮಂದಿ ಕೋವಿಡ್ ಪೀಡಿತರಾಗಿದ್ದು, ಚೇತರಿಸಿಕೊಂಡು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೋವಿಡ್ ಯೋಧರಾದ ಆಶಾ ಕಾರ್ಯಕರ್ತೆಯರನ್ನು ಕೋವಿಡ್ ಭತ್ಯೆಯ ಫಲಾನುಭವಿಗಳ ಪಟ್ಟಿಯಿಂದ ಕೈಬಿಟ್ಟಿರುವುದು ಬೇಸರವನ್ನುಂಟು ಮಾಡಿದೆ’ ಎಂದು ಸಂಘದ ರಮಾ ಟಿ.ಎಸ್ ತಿಳಿಸಿದ್ದಾರೆ.

‘ಸೋಂಕು ಸಂಪರ್ಕಿತರ ಪತ್ತೆ, ಗರ್ಭಿಣಿಯರನ್ನು ಪರೀಕ್ಷೆಗೆ ಕರೆತರುವುದು, ಕೋವಿಡ್ ಪರೀಕ್ಷೆ, ಲಸಿಕೆ ವಿತರಣೆ ಕಾರ್ಯಕ್ರಮ ಸೇರಿದಂತೆ ವಿವಿಧ ಕೆಲಸಗಳನ್ನು ಏಕಕಾಲದಲ್ಲಿ ಆಶಾ ಕಾರ್ಯಕರ್ತೆಯರು  ನಿರ್ವಹಿಸುತ್ತಿದ್ದಾರೆ. ಆದರೆ, ಭತ್ಯೆ ವಿಚಾರದಲ್ಲಿ ಕಡೆಗಣಿಸಲಾಗಿದೆ. ಬಹುತೇಕರಿಗೆ ಮಾರ್ಚ್‌ ಮತ್ತು ಏಪ್ರಿಲ್ ತಿಂಗಳ ವೇತನ ಕೂಡ ಕೈಸೇರಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಆಶಾ ಕಾರ್ಯಕರ್ತೆಯರಿಗೆ ತಲಾ ₹ 5 ಸಾವಿರ ಭತ್ಯೆಯನ್ನು ಒದಗಿಸಲು ಕ್ರಮಕೈಗೊಳ್ಳಬೇಕು’ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು