ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿ ಆತ್ಮಹತ್ಯೆ | ದ್ವಿಮುಖ ನಿಲುವು ಯಾಕೆ: CM, DCM ವಿರುದ್ಧ ಈಶ್ವರಪ್ಪ ಟೀಕೆ

Published 28 ಮೇ 2024, 11:09 IST
Last Updated 28 ಮೇ 2024, 11:09 IST
ಅಕ್ಷರ ಗಾತ್ರ

ಮಂಗಳೂರು: ‘ಹಿಂದೆ ನನ್ನ ವಿರುದ್ಧ ಆರೋಪ ಬಂದಾಗ ರಾಜೀನಾಮೆ ನೀಡುವಂತೆ ಹೋರಾಟ ನಡೆಸಿದ್ರಲ್ಲ, ನಿಮಗೆ ನೈತಿಕತೆ ಇದ್ದರೆ, ನಿಮ್ಮ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆದು ಪ್ರಕರಣದ ತನಿಖೆ ನಡೆಸಿ, ದ್ವಿಮುಖ ನಿಲುವು ಯಾಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಗುಡುಗಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಉಲ್ಲೇಖಿಸಿ ಮಾತನಾಡಿದ ಅವರು, ‘ಸಿವಿಲ್ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ ನನ್ನ ಮೇಲೆ ಆರೋಪ ಬಂದ ಸಂದರ್ಭದಲ್ಲಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಆಗ ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನನ್ನ ರಾಜೀನಾಮೆಗೆ ಆಗ್ರಹಿಸಿದ್ದರು. ಈಗ ನಿಮ್ಮ ಸರ್ಕಾರದ ಸಚಿವ ಬಿ. ನಾಗೇಂದ್ರ ಮೇಲೆ ಆರೋಪ ಕೇಳಿಬಂದಿದೆ. ಯಾರು ಬೇಕಾದರೂ ಸಾಯಲಿ ಎಂದು ಅಂದುಕೊಂಡಿದ್ದೀರಾ? ಯಾವ ನಿರ್ಧಾರ ತಳೆಯುವಿರಿ? ಮೊದಲು ರಾಜೀನಾಮೆ ಪಡೆದು, ತನಿಖೆ ನಡೆಸಿ’ ಎಂದು ಆಗ್ರಹಿಸಿದರು.

‘ಮಂಗಳೂರಿನ ಕಂಕನಾಡಿಯಲ್ಲಿ ಕೆಲವರು ರಸ್ತೆಯ ಮೇಲೆ ನಮಾಜ್ ಮಾಡಿದ ಸುದ್ದಿಯನ್ನು ಪತ್ರಿಕೆಗಳಲ್ಲಿ ಗಮನಿಸಿದೆ. ರಾಷ್ಟ್ರದ್ರೋಹಿ ಕೃತ್ಯ ಮಾಡಿದವರನ್ನು ಒದ್ದು ಒಳಗೆ ಹಾಕಿ. ಕೆಲವು ದುಷ್ಟರ ಕಾರಣಕ್ಕೆ ಇಡೀ ಮುಸ್ಲಿಂ ಸಮುದಾಯದ ಮೇಲೆ ಕೆಟ್ಟ ಹೆಸರು ಬರುತ್ತಿದೆ. ಇಂತಹ ಪ್ರಕರಣಗಳನ್ನು ಹಗುರವಾಗಿ ಪರಿಗಣಿಸಿದರೆ ಹಿಂದೂಗಳು ಜಾಗೃತರಾಗುತ್ತಾರೆ. ಕೋಮು ಗಲಭೆಗಳಿಗೆ ನೀವೇ ಕಾರಣರಾಗುತ್ತೀರಿ. ಈ ರೀತಿಯ ತುಷ್ಟೀಕರಣ ನೀತಿಯೇ ನಿಮ್ಮನ್ನು ಭಸ್ಮ ಮಾಡುತ್ತದೆ’ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.

ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್ ಅವರನ್ನು ಬಿಜೆಪಿ ಕಾರ್ಯಕರ್ತರು ಬೆಂಬಲಿಸಬೇಕು. ಆ ಮೂಲಕ ಕರ್ನಾಟಕದಲ್ಲಿ ತಂದೆ– ಮಕ್ಕಳ ಹಿಡಿತದಲ್ಲಿರುವ ಬಿಜೆಪಿಯನ್ನು ಶುದ್ಧೀಕರಣಗೊಳಿಸಬೇಕು ಮತ್ತು ಪಕ್ಷದ ಹಿಂದುತ್ವ ಸಿದ್ಧಾಂತವನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT