ಪ್ರಜ್ವಲ್ ಅಭ್ಯರ್ಥಿ ಎಂಬ ಹೇಳಿಕೆಗೆ ಮಹತ್ವ ಇಲ್ಲ: ಎ.ಮಂಜು

7
'ದೇವೇಗೌಡರೇ ಸ್ಪರ್ಧಿಸಿದರೆ, ಅವರ ಪರ ಕೆಲಸ ಮಾಡುವೆ'

ಪ್ರಜ್ವಲ್ ಅಭ್ಯರ್ಥಿ ಎಂಬ ಹೇಳಿಕೆಗೆ ಮಹತ್ವ ಇಲ್ಲ: ಎ.ಮಂಜು

Published:
Updated:
Prajavani

ಹಾಸನ: ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ಸಂಸದ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರೇ ಅಭ್ಯರ್ಥಿ ಎಂಬ ಹೇಳಿಕೆಗೆ ಯಾವುದೇ ಮಹತ್ವ ಇಲ್ಲ’ ಎಂದು ಕಾಂಗ್ರೆಸ್ ಮುಖಂಡ ಎ.ಮಂಜು ಶನಿವಾರ ಪ್ರತಿಪಾದಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವ ಕ್ಷೇತ್ರ ಯಾವ ಪಕ್ಷಕ್ಕೆ ಎನ್ನುವುದು ನಿರ್ಧಾರವಾಗಿಲ್ಲ. ಮೈತ್ರಿ ಪಕ್ಷಗಳ ನಾಯಕರ ನಡುವೆ ಚರ್ಚೆ ಆಗಿಲ್ಲ. ಪ್ರಜ್ವಲ್ ಅವರೇ ಹಾಸನ ಅಭ್ಯರ್ಥಿ ಎನ್ನುವ ರೇವಣ್ಣ ಅವರಿಗೆ ತಿಳಿವಳಿಕೆ ಕಡಿಮೆ’ ಎಂದರು.

‘ಸಮನ್ವಯ ಸಮಿತಿ ಸಭೆ ನಡೆಯದೇ, ನನ್ನ ಮಗ ಅಭ್ಯರ್ಥಿ ಎನ್ನುವುದು ಅವರ ತಂದೆ ದೇವೇಗೌಡರು ಮತ್ತು ಜಿಲ್ಲೆಯ ಜನರಿಗೆ ಮಾಡಿದ ಅವಮಾನ’ ಎಂದು ವ್ಯಂಗ್ಯವಾಡಿದರು.

‘ಹಾಸನದಲ್ಲಿ ದೇವೇಗೌಡರು ಮತ್ತೆ ಸ್ಪರ್ಧಿಸಿದರೆ ನನ್ನ ಅಭ್ಯಂತರವಿಲ್ಲ. ಅವರೇ ನಿಲ್ಲಬೇಕು ಎಂಬುದು ನನ್ನ ಆಸೆ ಕೂಡ. ಆದರೆ, ಕಾಂಗ್ರೆಸ್‌ಗೆ ಮಂಡ್ಯ ಕ್ಷೇತ್ರ ಬಿಟ್ಟು ಕೊಡಬೇಕೆಂಬುದು ಈಗಲೂ ನನ್ನ ಒತ್ತಾಯ. ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟು ಹಾಸನದಿಂದ ದೇವೇಗೌಡರೇ ನಿಂತರೆ ಅವರ ಪರ ಕೆಲಸ ಮಾಡುವೆ’ ಎಂದು ಘೋಷಿಸಿದರು.

ಕಾಂಗ್ರೆಸ್ ಗಿಂತ ಬಿಜೆಪಿಯೇ ಉತ್ತಮ ಎಂಬ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆಗೆ ತಿರುಗೇಟು ನೀಡಿದ ಮಂಜು, ‘ಅವರಿಗೆ ಎಲ್ಲರ ಜತೆ ಸಂಸಾರ ಮಾಡಿ ಅಭ್ಯಾಸ ಅಗಿದೆ, ಆಕಸ್ಮಿಕವಾಗಿ ಮಂತ್ರಿಯಾಗಿರುವ ಪುಟ್ಟರಾಜು ಹೀಗೆ ಮಾತಾಡಬಾರದು. ನಾವು ಏನಾದರು ಮಾತನಾಡಿದರೆ ತಪ್ಪು, ಅವರು ಮಾತನಾಡಿದರೆ ಸರೀನಾ’ ಎಂದು ಪ್ರಶ್ನೆ ಮಾಡಿದರು.

‘ಸದ್ಯ ನಾವು ಜೆಡಿಎಸ್ ನವರು ಗಂಡ–ಹೆಂಡತಿ ಇದ್ದ ಹಾಗೆ, ಜಗಳ ಆಗೋದು ಸಾಮಾನ್ಯ. ಆದರೆ ಡೈವೋರ್ಸ್ ಆಗಲ್ಲ. ಸರ್ಕಾರಕ್ಕೆ ಧಕ್ಕೆ ಆಗಲ್ಲ. ನಮ್ಮ ಬಿಟ್ಟು ಅವರಿಗೆ ವಿಧಿಯಿಲ್ಲ, ಅವರನ್ನು ಬಿಟ್ಟು ನಮಗೆ ವಿಧಿಯಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಳೆದ 10 ವರ್ಷದಿಂದ ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎಂಬ ರೇವಣ್ಣ ಹೇಳಿಕೆಯನ್ನು ಖಂಡಿಸಿದ ಮಂಜು, ‘ನಾವು ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿಲ್ಲ, ಆದರೆ, ಅವರು ಹೊಳೆನರಸೀಪುರ ಬಿಟ್ಟು ಬೇರೆಡೆ ಯಾವುದೇ ಪ್ರದೇಶ ಅಭಿವೃದ್ಧಿ ಮಾಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಅವರು ಅವರ ಕುಟುಂಬ ಜಿಲ್ಲೆಯ ಮಟ್ಟಿಗೆ ಹೆಚ್ಚು ಅಧಿಕಾರ ಅನುಭವಿಸಿದೆ. ಆದರೆ, ಯಡಿಯೂರಪ್ಪ ಶಿವಮೊಗ್ಗವನ್ನು ಪ್ರಗತಿ ಮಾಡಿರುವಷ್ಟು, ಇವರು ಹಾಸನವನ್ನು ಅಭಿವೃದ್ಧಿ ಮಾಡಿಲ್ಲ’ ಎಂದು ಟೀಕಿಸಿದರು.

* ಕಾಂಗ್ರೆಸ್ ಹಾಗೂ ಜೆಡಿಎಸ್ ಅವಧಿಯಲ್ಲಿ ಆಗಿರುವ ಹಾಸನ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ಅದಕ್ಕೆ ನಾನು ಸಿದ್ಧ
-ಎ.ಮಂಜು, ಕಾಂಗ್ರೆಸ್‌ ಮುಖಂಡ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !