ಹಾವೇರಿ: ಜಿಲ್ಲಾ ಕೇಂದ್ರವಾಗಿರುವ ಹಾವೇರಿ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಶೌಚಾಲಯಗಳು ಉದ್ಘಾಟನೆಯಾಗದೇ ಬಾಗಿಲು ಬಂದ್ ಆಗಿದ್ದು, ನಿತ್ಯವೂ ನಗರದಲ್ಲಿ ಸಂಚರಿಸುವ ಸಾರ್ವಜನಿಕರು ಶೌಚಾಲಯಕ್ಕಾಗಿ ಪರದಾಡುತ್ತಿದ್ದಾರೆ.

ಅಖಂಡ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿ 28 ವರ್ಷವಾದರೂ ಹಾವೇರಿ ನಗರದಲ್ಲಿ ಸಾಕಷ್ಟು ಮೂಲ ಸೌಕರ್ಯಗಳ ಸಮಸ್ಯೆಯಿದೆ. ನಗರದ ಮಾರುಕಟ್ಟೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇಂದಿಗೂ ಸುಸಜ್ಜಿತ ಶೌಚಾಲಯಗಳ ಕೊರತೆ ಕಾಡುತ್ತಿದೆ.

ಸ್ವಚ್ಛತೆ ಹಾಗೂ ಶೌಚಾಲಯ ನಿರ್ಮಾಣ–ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ನಗರದಲ್ಲೂ ಕಾಲಕಾಲಕ್ಕೆ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಹಲವು ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಹಾಳಾಗಿದ್ದರೆ, ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಕೆಲವು ಕಡೆಗಳಲ್ಲಿ ಶೌಚಾಲಯಗಳು ಪಾಳು ಬಿದ್ದು, ನೀರಿಲ್ಲದೇ ದುರ್ನಾತ ಬೀರುತ್ತಿವೆ. ಇದರ ನಡುವೆಯೇ, ಹೊಸದಾಗಿ ನಿರ್ಮಿಸಿರುವ ಶೌಚಾಲಯಗಳ ಬಾಗಿಲು ತೆರೆಯಲು ನಗರಸಭೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ.

ಜಿಲ್ಲಾ ಕೇಂದ್ರವಾಗಿರುವುದರಿಂದ ದೂರದ ಊರುಗಳಿಂದ ನಿತ್ಯವೂ ಜನರು ನಗರಕ್ಕೆ ಬಂದು ಹೋಗುತ್ತಾರೆ. ಮಾರುಕಟ್ಟೆಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆದರೆ, ಸೂಕ್ತ ಶೌಚಾಲಯ ಇಲ್ಲದಿದ್ದರಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ.

ನಿರ್ಮಾಣಗೊಂಡರೂ ಬಾಗಿಲು ಬಂದ್: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಗರದ ಎಂ.ಜಿ.ರಸ್ತೆ, ಮುನ್ಸಿಪಲ್ ಹೈಸ್ಕೂಲ್ ರಸ್ತೆ, ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಸಾರ್ವಜನಿಕರ ಬಳಕೆಗೂ ಶೌಚಾಲಯಗಳು ಸಿದ್ಧವಾಗಿವೆ. ಆದರೆ, ನಗರಸಭೆಯ ಆಡಳಿತ ಮಂಡಳಿ ನಡುವಿನ ಗೊಂದಲದಿಂದಾಗಿ ಶೌಚಾಲಯದ ಬಾಗಿಲು ತೆರೆದಿಲ್ಲ.

ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಶೌಚಾಲಯಗಳಿದ್ದರೂ ಬಳಕೆಗೆ ಮುಕ್ತಗೊಳಿಸದ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.

‘ಬೇರೆ ಊರುಗಳಿಂದ ನಗರಕ್ಕೆ ಬಂದು ಹೋಗುವ ಜನರಿಗೆ ಸುಲಭ ಶೌಚಾಲಯವಿಲ್ಲ. ಜನರು ಯಾತನೆ ಅನುಭವಿಸುತ್ತಿದ್ದಾರೆ. ಬಯಲು ಜಾಗದಲ್ಲಿಯೇ ಮಲ ಹಾಗೂ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿಯೇ ಬಯಲು ಶೌಚಾಲಯದ ದೃಶ್ಯಗಳು ಕಂಡುಬರುತ್ತಿವೆ’ ಎಂದು ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆಯ ವ್ಯಾಪಾರಿ ರಫೀಕ್ ಹೇಳಿದರು.

‘ವ್ಯಾಪಾರಕ್ಕೆ ಬರುವ ಜನರು ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ, ಸುಸಜ್ಜಿತ ಶೌಚಾಲಯ ಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಅದಕ್ಕೆ ಸ್ಪಂದಿಸಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಶೌಚಾಲಯದ ಬಾಗಿಲು ತೆರೆದಿಲ್ಲ. ಮೂತ್ರ ಬಂದಾಗ, ಎಲ್ಲಿ ಹೋಗಬೇಕೆಂಬ ಪ್ರಶ್ನೆ ಎದುರಾಗುತ್ತದೆ. ಮೂತ್ರ ತಡೆಹಿಡಿದರೆ, ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಹೀಗಾಗಿ, ಬಯಲಿನಲ್ಲಿಯೇ ಮೂತ್ರ ಮಾಡಿದ್ದೇನೆ’ ಎಂದರು.

ಶೌಚಾಲಯವೇ ಮಾಯ: ನಗರದ ಸುಭಾಷ್ ಸರ್ಕಲ್ನಲ್ಲಿರುವ ಶೌಚಾಲಯ ಸಂಪೂರ್ಣ ಕುಸಿದು ಬಿದ್ದಿತ್ತು. ಈ ಜಾಗದಲ್ಲಿ ಈಗ ಶೌಚಾಲಯದ ಕುರುಹು ಸಹ ಇಲ್ಲ. ಇದೇ ಜಾಗದಲ್ಲಿ ಸುಲಭ ಶೌಚಾಲಯ ಹಾಗೂ ಸ್ನಾನದ ಕೊಠಡಿ ನಿರ್ಮಿಸುವ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದ್ದರೂ ಅದು ಅನುಷ್ಠಾನವಾಗಿಲ್ಲ.

‘ಪರ ಊರಿನ ಕಾರ್ಮಿಕರು, ಕೆಲಸ ಹುಡುಕಿಕೊಂಡು ನಗರಕ್ಕೆ ಬರುತ್ತಾರೆ. ಇವರೆಲ್ಲರೂ ಸುಭಾಷ್ ವೃತ್ತದಲ್ಲಿ ನಿಂತು ಕೆಲಸಕ್ಕಾಗಿ ಕಾಯುತ್ತಾರೆ. ಇಂಥ ಕಾರ್ಮಿಕರ ಅನುಕೂಲಕ್ಕೆ ಶೌಚಾಲಯದ ಅಗತ್ಯವಿದೆ. ಆದರೆ, ಹಳೇ ಶೌಚಾಲಯ ನೆಲಸಮಗೊಂಡಿದೆ. ಅದೇ ಜಾಗದಲ್ಲಿ ಹೊಸ ಶೌಚಾಲಯ ಕಟ್ಟಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ಪ್ರತಿಷ್ಠೆಗಾಗಿ ಉದ್ಘಾಟನೆ ವಿಳಂಬ’

‘ಸರ್ಕಾರದ ಅನುದಾನದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವಿನ ಪ್ರತಿಷ್ಠೆಗಾಗಿ ಶೌಚಾಲಯಗಳ ಉದ್ಘಾಟನೆ ವಿಳಂಬವಾಗುತ್ತಿದೆ’ ಎಂಬ ಆರೋಪ ವ್ಯಕ್ತವಾಗುತ್ತಿದೆ. ‘ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ಅವರು ಕಾಂಗ್ರೆಸ್ ಪಕ್ಷದವರು. ನಗರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಬಿಜೆಪಿ ಬೆಂಬಲಿತರು. ಉದ್ಘಾಟನೆಗೆ ಸಮಯ ನೀಡುವಂತೆ ಶಾಸಕರಿಗೆ ಹಲವು ಬಾರಿ ಸದಸ್ಯರು ಮನವಿ ಮಾಡಿದ್ದರು. ಆದರೆ ಸಮಯ ನೀಡಿಲ್ಲವೆಂಬ ದೂರುಗಳಿವೆ. ಶಾಸಕರನ್ನು ಬಿಟ್ಟು ಉದ್ಘಾಟನೆ ಮಾಡುವುದು ಸರಿಯಲ್ಲವೆಂದು ಸದಸ್ಯರು ಸಮಯಕ್ಕಾಗಿ ಕಾಯುತ್ತಿದ್ದರು’ ಎಂದು ಮಾಜಿ ಸದಸ್ಯರೊಬ್ಬರು ಹೇಳಿದರು. ‘ನಗರಸಭೆ ಸದಸ್ಯರ ಅಧಿಕಾರ ಅವಧಿ ಈಗಾಗಲೇ ಮುಗಿದಿದೆ. ಸದ್ಯದಲ್ಲೇ ಶೌಚಾಲಯಗಳ ಉದ್ಘಾಟನೆಗೆ ದಿನ ನಿಗದಿಪಡಿಸಲಾಗುವುದು’ ಎಂದು ನಗರಸಭೆ ಮೂಲಗಳು ತಿಳಿಸಿವೆ.

₹12 ಲಕ್ಷ ವೆಚ್ಚದ ಶೌಚಾಲಯಕ್ಕೆ ಬೀಗ

ಹಾವೇರಿ ನಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ಬಳಿ ಸ್ವಚ್ಛ ಭಾರತ ಯೋಜನೆಯಡಿ ₹ 12 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಈ ಶೌಚಾಲಯವೂ ಬಾಗಿಲು ತೆರೆದಿಲ್ಲ. ಶೌಚಾಲಯ ಎದುರೇ ಕಸ ಹಾಕಲಾಗುತ್ತಿದ್ದು ಇದೊಂದು ಕಸ ಸಂಗ್ರಹ ಸ್ಥಳವಾಗಿ ಮಾರ್ಪಟ್ಟಿದೆ.

‘ನೀರಿನ ಸಮಸ್ಯೆ; ಗಲೀಜು ಮಾಡುವ ಜನ’

‘ಶೌಚಾಲಯಕ್ಕೆ ನೀರು ಅತಿ ಮುಖ್ಯ. ಸದ್ಯ ನಿರ್ಮಿಸಿರುವ ಶೌಚಾಲಯದ ಬಳಿ ನೀರಿನ ಟ್ಯಾಂಕ್ ಇರಿಸಲಾಗಿದೆ. ಶೌಚಾಲಯ ಆರಂಭವಾದರೆ ನೀರಿನ ಸಮಸ್ಯೆ ಕಾಡಬಹುದು. ಕೆಲ ಜನರು ಸಹ ಶೌಚಾಲಯವನ್ನು ಸರಿಯಾಗಿ ಬಳಸದೇ ಗಲೀಜು ಮಾಡುತ್ತಾರೆ. ನಿರ್ವಹಣೆ ನೋಡಿಕೊಂಡು ಶೌಚಾಲಯ ತೆರೆದರೆ ಉತ್ತಮ’ ಎಂದು ಎಂ.ಜಿ.ರಸ್ತೆಯ ವ್ಯಾಪಾರಿ ಗಣೇಶ ತಿಳಿಸಿದರು. ‘ನೀರು ಇಲ್ಲದ ಕಾರಣಕ್ಕೆ ಹಲವು ಕಡೆಗಳಲ್ಲಿ ಶೌಚಾಲಯಗಳು ಪಾಳು ಬಿದ್ದಿವೆ. ಹೊಸದಾಗಿ ನಿರ್ಮಿಸಿರುವ ಶೌಚಾಲಯದಲ್ಲಾದರೂ ನೀರು ಇರುವಂತೆ ನೋಡಿಕೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ಹಾವೇರಿ ನಗರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಾಗಿ ಲಕ್ಷ ಲಕ್ಷ ಖರ್ಚು ಮಾಡಲಾಗುತ್ತಿದೆ. ಆದರೆ ಬಳಕೆಗೆ ಯೋಗ್ಯವಾದ ಶೌಚಾಲಯ ಇರದಿರುವುದು ದುರಂತ.
-ಲಕ್ಷ್ಮಣ ಎಂ. ಹಾವೇರಿ

ಕೆಲ ಕಾರಣಗಳಿಂದಾಗಿ ಹೊಸ ಶೌಚಾಲಯಗಳ ಉದ್ಘಾಟನೆಯಾಗಿಲ್ಲ. ಕೆಲವೇ ದಿನಗಳಲ್ಲಿ ಉದ್ಘಾಟನೆ ಮಾಡಿ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು.
-ಎಚ್. ಕಾಂತರಾಜು, ಹಾವೇರಿ ನಗರಸಭೆ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.