ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕಿಕ್ಕಿರಿದ ಜನಸಾಗರದ ನಡುವೆ ಕಂಗೊಳಿಸಿದ ‘ಯುವರತ್ನ’

ನಟ ಪುನೀತ್‌ ರಾಜ್‌ಕುಮಾರ್ ನೋಡಲು ಜಮಾಯಿಸಿದ ಸಾವಿರಾರು ಅಭಿಮಾನಿಗಳು
Last Updated 24 ಮಾರ್ಚ್ 2021, 2:31 IST
ಅಕ್ಷರ ಗಾತ್ರ

ಮೈಸೂರು: ಬೆಳಿಗ್ಗೆಯಿಂದಲೇ ಕಾದು ಕುಳಿತ ಯುವಪಡೆ, ಬೃಹತ್ ಸೇಬಿನ ಹಾರವಿಡಿದು ನಿಂತಲ್ಲೇ ನಿಂತ ಕ್ರೇನ್, ಸುಡು ಬಿಸಿಲೇರಿ ನೆತ್ತಿ ಸುಡುತ್ತಿದ್ದರೂ ಕದಲದ ಅಭಿಮಾನಿಗಳು, ಕಣ್ಣಾಯಿಸುವಷ್ಟು ದೂರ ಜನವೋ ಜನ...

ಈ ಎಲ್ಲ ದೃಶ್ಯಗಳು ಮಾನಸಗಂಗೋತ್ರಿಯ ಬಯಲು ರಂಗಮಂದಿರದ ರಸ್ತೆಯಲ್ಲಿ ಮಂಗಳವಾರ ಕಂಡು ಬಂತು. ಮಧ್ಯಾಹ್ನದ ಹೊತ್ತಿಗೆ ಕಾರಿನಿಂದ ನಟ ಪುನೀತ್‌ ರಾಜ್‌ಕುಮಾರ್ ಇಳಿಯುತ್ತಿದ್ದಂತೆ, ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.

6 ಜೆಸಿಬಿ ಯಂತ್ರಗಳ ಮೇಲೆ ನಿಂತ ಅಭಿಮಾನಿಗಳು ಹೂವಿನ ಮಳೆಗರೆದರು. ಕ್ರೇನ್‌ ಮೂಲಕ ಬೃಹತ್ ಸೇಬಿನಹಾರವನ್ನು ಹಾಕಿ ಸಂಭ್ರಮಿಸಿದರು. ಕಿವಿಗಡಚಿಕ್ಕುವ ಪಟಾಕಿಗಳ ಆರ್ಭಟದೊಂದಿಗೆ ‘ಯುವರತ್ನ’ ಸಿನಿಮಾದ ಪ್ರಚಾರಾಂದೋಲನ ಆರಂಭವಾಯಿತು. ಪುನೀತ್‌ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.

ಪುನೀತ್‌ ರಾಜ್‌ಕುಮಾರ್ ಬಯಲುರಂಗಮಂದಿರದ ವೇದಿಕೆಯನ್ನೇರುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಸುಡು ಬಿಸಿಲಿನಲ್ಲಿ ಜಮಾಯಿಸಿದರು. ಎಲ್ಲಿ ನೋಡಿದರಲ್ಲಿ ಜನರ ಕರತಾಡನ, ಕೂಗಾಟಗಳೇ ಕೇಳಿ ಬರುತ್ತಿದ್ದವು.

‘ಹೀರೊ ನಾನಲ್ಲ’: ‘ಯುವರತ್ನ’ ಸಿನಿಮಾದ ನಿಜವಾದ ಹೀರೊ ನಾನಲ್ಲ ಎನ್ನುತ್ತಲೇ ಮಾತಿಗಿಳಿದ ಪುನೀತ್‌ ರಾಜ್‌ಕುಮಾರ್, ‘ಈ ಸಿನಿಮಾ ತಂಡ ಹಾಗೂ ಇದನ್ನು ನೋಡುವ ಪ್ರೇಕ್ಷಕರೇ ನಿಜವಾದ ಹೀರೊಗಳು’ ಎಂದು ಹೇಳುವ ಮೂಲಕ ಸಭಿಕರ ಭರಪೂರ ಚಪ್ಪಾಳೆ ಪಡೆದರು.

‘ಮೈಸೂರು ಎಂದಾಕ್ಷಣ ಇಲ್ಲಿನ ಮಹಾರಾಜರು, ವಿಶ್ವೇಶ್ವರಯ್ಯ, ದಸರಾ ಹಬ್ಬ ನೆನಪಾಗುತ್ತದೆ. ಗಾಜನೂರಿನಲ್ಲಿ ಇಂದಿಗೂ ಮಹಾರಾಜರ ಚಿತ್ರ ಇದೆ. ಅಪ್ಪ, ಅಮ್ಮ ಮೈಸೂರಿನ ಕುರಿತು ಸಾಕಷ್ಟು ಬಾರಿ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು’ ಎಂದು ಮೆಲುಕು ಹಾಕಿದರು.

‘ಯುವರತ್ನ‌’ ಸಿನಿಮಾದ ‘ದೇಶಕ್ಕೆ ಯೋಧ, ನಾಡಿಗೆ ರೈತ, ಬಾಳಿಗೆ ಗುರುವೊಬ್ಬ ತಾನೆ’ ಎಂಬ ಹಾಡಿನ ಕೆಲವು ಸಾಲುಗಳನ್ನು ತಾವು ಹಾಡುವ ಮೂಲಕ ಸಭಿಕರೂ ಹಾಡುವಂತೆ ಮಾಡಿದರು.

‘ಊರಿಗೊಬ್ಬ ರಾಜ’ ಹಾಡಿಗೆ ಕೆಲ ಸೆಕೆಂಡುಗಳ ಕಾಲ ‘ಸ್ಟೆಪ್‌’ ಹಾಕುವ ಮೂಲಕ ಅಭಿಮಾನಿಗಳ ಬೇಡಿಕೆಯನ್ನು ತಣಿಸಿದರು.

ಧನಂಜಯ್ ಅವರ ಮಾತಿಗೆ ಮರುಳಾದ ಅಭಿಮಾನಿಗಳು: ನಟ ಧನಂಜಯ್ ಅವರ ‘ಡೈಲಾಗ್‌’ಗಳಿಗೆ ಅಭಿಮಾನಿ ವೃಂದ ಮರುಳಾಯಿತು. ‘ಧಮ್ ಹೊಡಿತೀರಾ’ ಎಂಬ ಅವರ ಒಂದು ಮಾತಿಗೆ ಯುವ ಸಮುದಾಯ ‘ಫಿದಾ’ ಆಯಿತು. ಅಭಿಮಾನಿಗಳ ಆರ್ಭಟ ಹೀಗೆಯೇ ಇರಬೇಕು ಎನ್ನುವ ಅವರ ಮಾತುಗಳು ಸಭಿಕರ ಭಾರಿ ಮೆಚ್ಚುಗೆಗೆ ಪಾತ್ರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT