ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಸರ್ವೇಕ್ಷಣ್: 3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳಲ್ಲಿ ಮೈಸೂರು ಅಗ್ರ

ಸಮಗ್ರ ವಿಭಾಗದಲ್ಲಿ ಐದನೇ ಸ್ಥಾನ
Last Updated 20 ಆಗಸ್ಟ್ 2020, 8:58 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಷ್ಟ್ರಮಟ್ಟದಲ್ಲಿ ನಡೆಸಿದ ಸ್ವಚ್ಛತಾ ಸಮೀಕ್ಷೆ 'ಸ್ವಚ್ಛ ಸರ್ವೇಕ್ಷಣ್- 2020' ರಲ್ಲಿ 3 ರಿಂದ 10 ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಮೈಸೂರಿಗೆ ಮತ್ತೆ ಅಗ್ರಸ್ಥಾನ ಲಭಿಸಿದೆ.

ಸಾಂಸ್ಕೃತಿಕ ನಗರಿಯು 2018 ರಲ್ಲೂ ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಆದರೆ ಸಮಗ್ರ ವಿಭಾಗದಲ್ಲಿ ಮೈಸೂರಿಗೆ ಈ ಬಾರಿ ಐದನೇ ಸ್ಥಾನ ಲಭಿಸಿದೆ. ಕಳೆದ ವರ್ಷ ಮೂರನೇ ಸ್ಥಾನದಲ್ಲಿತ್ತು.

ಸಮಗ್ರ ವಿಭಾಗದಲ್ಲಿ ಮಧ್ಯಪ್ರದೇಶದ ಇಂದೋರ್‌ ಸತತ ನಾಲ್ಕನೇ ಬಾರಿ ದೇಶದ ‘ಅತ್ಯಂತ ಸ್ವಚ್ಛ ನಗರ’ ಎನಿಸಿಕೊಂಡಿದೆ. ಗುಜರಾತಿನ ಸೂರತ್ 2 ನೇ ಹಾಗೂ ಮಹಾರಾಷ್ಟ್ರದ ನವಿ ಮುಂಬೈ 3 ನೇ ಸ್ಥಾನ ಪಡೆದುಕೊಂಡಿವೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಗುರುವಾರ ನಡೆದ ‘ವರ್ಚ್ಯುವಲ್‌’ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ನಗರಗಳ ಹೆಸರು ಪ್ರಕಟಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳಲಿಲ್ಲ.

2015 ಮತ್ತು 2016 ರಲ್ಲಿ ಮೈಸೂರು ನಗರ ದೇಶದ ಅತ್ಯಂತ 'ಸ್ವಚ್ಛ ನಗರಿ' ಎನಿಸಿಕೊಂಡಿತ್ತು. 2017 ರಲ್ಲಿ ಐದನೇ ಸ್ಥಾನ, 2018 ರಲ್ಲಿ ಎಂಟನೇ ಸ್ಥಾನ ಹಾಗೂ 2019 ರಲ್ಲಿ ಮೂರನೇ ಸ್ಥಾನ ಗಳಿಸಿತ್ತು.

ಪೌರಕಾರ್ಮಿಕರ ಜತೆ ಸಂವಾದ: ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಇಬ್ಬರು ಪೌರಕಾರ್ಮಿಕರಾದ ನಂಜುಂಡಸ್ವಾಮಿ ಮತ್ತು ಮಂಜುಳಾ ಅವರ ಜತೆ ಸಂವಾದ ನಡೆಸಬೇಕಿತ್ತು. ಆದರೆ ಪ್ರಧಾನಿ ಅನುಪಸ್ಥಿತಿಯಲ್ಲಿ ಹರ್ದೀಪ್ ಸಿಂಗ್ ಪುರಿ ಸಂವಾದ ನಡೆಸಿದರು.

'ಕೊರೊನಾ ಪಾಸಿಟಿವ್ ಆಗಿದ್ದ ನಾನು ಗುಣಮುಖನಾಗಿದ್ದು, ಕ್ವಾರಂಟೈನ್ ಅವಧಿ ಮುಗಿಸಿ ಮತ್ತೆ ಕೆಲಸ ಆರಂಭಿಸಿದ್ದೇನೆ' ಎಂದು ನಂಜುಂಡಸ್ವಾಮಿ ಸಂವಾದದ ವೇಳೆ ಹೇಳಿದರು. ‘ನೀವು ನಿಜಕ್ಕೂ ಅಭಿನಂದನಾರ್ಹರು’ಎಂದು ಪ್ರತಿಕ್ರಿಯಿಸಿದ ಸಚಿವರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

‘ಪ್ರಧಾನಿ ಜತೆ ಸಂವಾದ ನಡೆಸಲು ಉತ್ಸುಕನಾಗಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಅವರು ಬಂದಿಲ್ಲ. ಅವರಲ್ಲಿ ಮಾತನಾಡಿದ್ದರೆ ನನಗೆ ಇನ್ನಷ್ಟು ಹುಮ್ಮಸ್ಸು ಬರುತ್ತಿತ್ತು’ ಎಂದು ನಂಜುಂಡಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT