ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ರೀತಿಯಲ್ಲಿ ಬೆಂಗಳೂರನ್ನೂ ಸುತ್ತುವರಿಯಲು ರೈತರಿಗೆ ಟಿಕಾಯತ್‌ ಕರೆ

Last Updated 20 ಮಾರ್ಚ್ 2021, 16:03 IST
ಅಕ್ಷರ ಗಾತ್ರ

ಶಿವಮೊಗ್ಗ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸಲು ಎಲ್ಲರೂ ದೆಹಲಿಗೆ ಬರುವ ಅಗತ್ಯವಿಲ್ಲ. ಬೆಂಗಳೂರನ್ನೇ ದೆಹಲಿ ರೈತರ ರೀತಿ ಸುತ್ತುವರಿಯಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ರೈತರಿಗೆ ಕರೆ ನೀಡಿದರು.

ನಗರದ ಸೈನ್ಸ್ ಮೈದಾನದಲ್ಲಿ ಶನಿವಾರ ಐಕ್ಯ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ರೈತರ ಮಹಾ ಪಂಚಾಯತ್ ಉದ್ಘಾಟಿಸಿ ಅವರು ಮಾತನಾಡಿದರು.

‘ಮೂರು ಕರಾಳ ಕಾಯ್ದೆಗಳ ಮೂಲಕ ಕೇಂದ್ರ ಸರ್ಕಾರ ದೇಶದ ಬಡವರ ರೊಟ್ಟಿ, ಅನ್ನವನ್ನು ತಿಜೋರಿಗಳಲ್ಲಿ ಬಂಧಿಸಿಡುವ ಕೆಲಸ ಮಾಡುತ್ತಿದೆ. ಭೂಮಿ ಕಳೆದುಕೊಳ್ಳುವ ರೈತರು ಭವಿಷ್ಯದಲ್ಲಿ ಸಂಕಷ್ಟ ಅನುಭವಿಸಲಿದ್ದಾರೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡಿ ಮತ್ತಷ್ಟು ಸಾಲಗಾರರನ್ನಾಗಿ ಮಾಡಿದೆ. ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ಕಾಯ್ದೆಯಾಗಿಸಬೇಕು. ಅಲ್ಲಿಯವರೆಗೂ ದೆಹಲಿ ಗಡಿ ಬಿಟ್ಟು ಒಂದಿಂಚೂ ಕದಲುವುದಿಲ್ಲ’ ಎಂದು ಎಚ್ಚರಿಸಿದರು.

ಕೃಷಿ ಮಾರುಕಟ್ಟೆಯ ಹೊರಗೆ ಬೆಳೆಗಳ ಮಾರಾಟಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಕನಿಷ್ಠ ಬೆಂಬಲ ಬೆಲೆ ನೀಡಿದರೆ ಡಿಸಿ, ಎಸಿ ಕಚೇರಿ ಮುಂದೆ ಬೆಳೆ ಮಾರಾಟಕ್ಕೂ ಸಿದ್ಧ. ನೂತನ ಕೃಷಿ ಕಾಯ್ದೆಗಳಿಂದ ಲಾಭ ಪಡೆಯುವ ಕಂಪನಿಗಳ ನಾಯಕರೇ ಸರ್ಕಾರ ನಡೆಸುತ್ತಿದ್ದಾರೆ. ಹಾಗಾಗಿ, ಮಾತುಕತೆ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.

ಸರ್ಕಾರ ಪ್ರತಿ ವಿಷಯದಲ್ಲೂ ದ್ವಂದ್ವ ನೀತಿ ಅನುಸರಿಸುತ್ತಿದೆ. ಸೈನಿಕರು, ಪೊಲೀಸರೂ ಶೋಷಣೆಗೆ ಒಳಗಾಗಿದ್ದಾರೆ. ಅವರು ಒಟ್ಟಾಗಲು ಹಕ್ಕಿಲ್ಲ. ಅವರ ಪರವೂ ಧ್ವನಿ ಎತ್ತಬೇಕಿದೆ. ಯುವ ಜನರನ್ನು ಭೂಮಿಯ ಜತೆ ಬೆಸೆಯುವ ಕೆಲಸವಾಗಬೇಕು. ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಳ್ಳಬೇಕು. ಇಲ್ಲದಿದ್ದರೆ ಹೋರಾಟಕ್ಕೆ ಭವಿಷ್ಯ ಇರುವುದಿಲ್ಲ. ಜೈರಾಮ್‌, ಜೈ ಭೀಮ್‌ ಘೋಷಣೆ ಒಟ್ಟಿಗೆ ಮೊಳಗದೆ ಆಂದೋಲನ ಯಶಸ್ವಿಯಾಗುವುದಿಲ್ಲ ಎಂದರು.

ಡ್ಯಾನ್ಸ್‌ರ್ ಮಹಿಳೆ ಗಾಯಗೊಂಡರೆ ಮೋದಿ ಟ್ವೀಟ್‌!
ಯಾರೋ ಡ್ಯಾನ್ಸರ್ ಮಹಿಳೆ ಗಾಯಗೊಂಡರೆ ಟ್ವೀಟ್ ಮಾಡುವ ಪ್ರಧಾನಿ ಮೋದಿ ರೈತರು ಸತ್ತರೂ ಏಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಮುಂಖಡ ಯುದ್ಧ್‌ವೀಸಿಂಗ್‌ ಪ್ರಶ್ನಿಸಿದರು.

ರೈತರು ದೆಹಲಿ ಎತ್ತಿಕೊಂಡು ಹೋಗಲು ಬಂದಿರಲಿಲ್ಲ. ತಮ್ಮ ಹಕ್ಕನ್ನು ಕೇಳಲು ಬಂದಿದ್ದರು. ಆದರೆ, ದೆಹಲಿಯಲ್ಲಿ ಕುಳಿತ ಆ ವ್ಯಕ್ತಿಯೇ ದೇಶ ಮಾರಾಟ ಮಾಡುತ್ತಿದ್ದಾನೆ. ನೀವು ಕೂತು ಮಾರಾಟ ಮಾಡುವುದನ್ನು ನೋಡುತ್ತಿದ್ದೀರಾ. ಒಂದಲ್ಲ ಒಂದು ದಿನ ದೇಶವನ್ನು ಅದಾನಿ, ಅಂಬಾನಿ ಚಾಟಿ ಹಿಡಿದು ಚಲಾಯಿಸುವರು. ಮತ್ತೊಮ್ಮೆ ದೇಶ ಗುಲಾಮಗಿರಿಯತ್ತ ಹೋಗಲಿದೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಗಂಡಾಂತರ ಕಾದಿದೆ ಎಂದರು.

ರಾಮ ನಮ್ಮದೆ ಸ್ವತ್ತು ಎನ್ನುವ ಸರ್ಕಾರವನ್ನು ಜನರು ಹೊಗಳುತ್ತಿದ್ದಾರೆ. ರೈತನ ಭೂಮಿಯೇ ರಾಮ, ರೈತನ ಬೆಳೆಯೇ ರಾಮ, ಕೇಂದ್ರ ಸರ್ಕಾರ ಇದನ್ನು ಅರಿಯಬೇಕಿದೆ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT