ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಗೂಡುಸಾಬ್‌ ಮನೆಗೆ ಬಂದಿತ್ತು ಕಾಂಗ್ರೆಸ್‌ ಟಿಕೆಟ್‌

ಮಜ್ದೂರ್‌ ಸಂಘದ ನಾಯಕನ ಗುರುತಿಸಿ ಟಿಕೆಟ್‌ ಕೊಟ್ಟಿದ್ದ ದೇವರಾಜ ಅರಸು
Last Updated 9 ಏಪ್ರಿಲ್ 2023, 13:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಧಾನಸಭೆಯಿರಲಿ, ಲೋಕಸಭೆ ಚುನಾವಣೆಯಿರಲಿ ಪಕ್ಷದ ಟಿಕೆಟ್‌ ಗಿಟ್ಟಿಸಲು ಜಾತಿ, ಹಣದ ಲಾಬಿ ಸರ್ವೇ ಸಾಮಾನ್ಯ. ಆದರೆ, ಇದ್ಯಾವುದರ ಬಲವಿರದ ಮಜ್ದೂರ್‌ ಸಂಘದ ನಾಯಕನೊಬ್ಬನ ಮನೆಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಬಂದಿತ್ತು. ಅನೇಕರಿಗೆ ಇದು ಅಚ್ಚರಿ ಅನಿಸಬಹುದು. ಆದರೆ, ಇದು ವಾಸ್ತವ.

ಇಂತಹದ್ದೊಂದು ಘಟನೆಗೆ ಸಾಕ್ಷಿಯಾಗಿದ್ದು ಹೊಸಪೇಟೆ ಕ್ಷೇತ್ರ. ಅದು 1978ರ ಚುನಾವಣೆ. ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಗೂಡುಸಾಬ್‌ ಅವರ ಹಿನ್ನೆಲೆ ಅರಿತು ಸ್ವತಃ ಅವರ ಮನೆಗೆ ಪಕ್ಷದ ಟಿಕೆಟ್‌ ಕಳುಹಿಸಿಕೊಟ್ಟಿದ್ದರು. ಹಣ, ಜಾತಿಯ ಬಲವಿಲ್ಲದೆ ಗೂಡುಸಾಬ್‌ ಅವರು ಆ ಚುನಾವಣೆಯಲ್ಲಿ ಶೇ 53.92ರಷ್ಟು ಮತ ಪಡೆದು ಬಹುದೊಡ್ಡ ಅಂತರದ ಗೆಲುವು ಸಾಧಿಸಿದ್ದರು. ಜಿ. ಶಂಕರಗೌಡ, ಬಿ. ರಂಗಪ್ಪನವರಂತಹ ಘಟಾನುಘಟಿಗಳಿಗೆ ಸೋಲಿನ ರುಚಿ ತೋರಿಸಿದ್ದರು.

ಚುನಾವಣೆಯಲ್ಲಿ ಗೆದ್ದ ನಂತರ ಗೂಡುಸಾಬ್‌ ಅವರು ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದರು. ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆ, ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ, ಚಪ್ಪರದಹಳ್ಳಿಯಲ್ಲಿ ಬಡವರಿಗೆ ನಿವೇಶನ ಹಂಚಿಕೆ ಹಾಗೂ ಅಂದು ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದ ದೇವಲಾಪುರ, ಮೆಟ್ರಿಯಲ್ಲಿ ನೀರಾವರಿ ಯೋಜನೆ ಜಾರಿಗೊಳಿಸಿದ್ದರು. ಯಾವುದೇ ಕಳಂಕ, ಸ್ವಜನಪಾಕ್ಷವಿಲ್ಲದೆ ಕೆಲಸ ನಿರ್ವಹಿಸಿದ್ದರು. ಯಾರು ಕೂಡ ಒಂದೇ ಒಂದು ಆರೋಪ ಅವರ ವಿರುದ್ಧ ಮಾಡಿಲ್ಲ ಎಂದು ಕ್ಷೇತ್ರದ ಜನ ಈಗಲೂ ನೆನಕೆ ಮಾಡುತ್ತಾರೆ.

ಇಂದಿನ ಬಹುತೇಕ ರಾಜಕಾರಣಿಗಳಲ್ಲಿ ಗೂಡೂಸಾಬ್‌ ಅವರ ಒಂದಂಶವೂ ಕಾಣಲು ಸಿಗದು. ಇಂದು ಒಂದು ಸಲ ಗ್ರಾಮ ಪಂಚಾಯ್ತಿ ಸದಸ್ಯರಾದರೆ ಕೋಟಿಗಟ್ಟಲೇ ಹಣ ಗಳಿಸಿ, ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ, ಗೂಡುಸಾಬ್ ಇದಕ್ಕೆ ಅಪವಾದ. ಸ್ವಂತಕ್ಕಾಗಿ ಕನಿಷ್ಠ ಒಂದು ಮನೆಯನ್ನೂ ಕಟ್ಟಿಸಿಕೊಳ್ಳಲಿಲ್ಲ. ಇಂದಿಗೂ ಅವರ ಕುಟುಂಬದವರ ಪರಿಸ್ಥಿತಿ ಬಹಳ ಶೋಚನೀಯವಾಗಿದೆ.
ಗೂಡೂಸಾಬ್‌ ಅವರಿಗೆ ಒಂಬತ್ತು ಜನ ಮಕ್ಕಳು. ಐವರು ಪುತ್ರರು, ನಾಲ್ವರು ಪುತ್ರಿಯರು. ಈ ಪೈಕಿ ಒಬ್ಬ ಮಗ ಅನೇಕ ವರ್ಷಗಳ ಹಿಂದೆಯೇ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಉಳಿದವರದು ಹೇಳಿಕೊಳ್ಳುವಂತಹ ಪರಿಸ್ಥಿತಿ ಇಲ್ಲ. ಆಟೊ, ಪೇಂಟಿಂಗ್‌ ಸೇರಿದಂತೆ ಇತರೆ ಸಣ್ಣಪುಟ್ಟ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ತಮಗಾಗಿ ಏನೂ ಮಾಡದಿದ್ದರೂ ತಂದೆ ಶುದ್ಧಹಸ್ತರಾಗಿ ಬಾಳಿದ್ದರು ಎಂಬ ಹೆಮ್ಮೆ ಅವರಿಗಿದೆ. ನಗರದ ಚಪ್ಪರದಹಳ್ಳಿಯಲ್ಲಿ ಇವರಿಗೆ ಸೇರಿದ 10X30 ಚದರ ಅಡಿ ವಿಸ್ತೀರ್ಣದ ಮನೆ ಬಿಟ್ಟರೆ ಬೇರೇನೂ ಇಲ್ಲ. ಇದೇ ಮನೆಯಲ್ಲಿ ಗೂಡುಸಾಬ್‌ ಕೊನೆಯುಸಿರೆಳೆದಿದ್ದರು.

ಗೂಡುಸಾಬ್‌ ಅವರು ಹೋರಾಟದ ಮೂಲಕ ಜನರಿಗೆ ಚಿರಪರಿಚಿತರಾಗಿದ್ದರು. ತುಂಗಭದ್ರಾ ಸ್ಟೀಲ್ಸ್‌ ಪ್ರೊಡಕ್ಟ್ಸ್‌ನಲ್ಲಿ (ಟಿ.ಎಸ್‌.ಪಿ.) ಮಜ್ದೂರ್‌ ಸಂಘದ ನಾಯಕರಾಗಿದ್ದರು. ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು. ಅರಸು ಅವರು ಗೂಡುಸಾಬ್‌ ಅವರ ವ್ಯಕ್ತಿತ್ವ ಗುರುತಿಸಿ ಟಿಕೆಟ್‌ ಕೊಟ್ಟಿದ್ದರು. ಅವರು ಕೂಡ ಶಾಸಕರಾಗಿರುವವರೆಗೆ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದರು ಎಂದು ಜನ ನೆನಪು ಮಾಡುತ್ತಾರೆ.

ಅಲ್ಪಸಂಖ್ಯಾತರ ಕೈಹಿಡಿಯದ ಮತದಾರರು
ಹೊಸಪೇಟೆ ವಿಧಾನಸಭಾ ಕ್ಷೇತ್ರದಿಂದ ಅಲ್ಪಸಂಖ್ಯಾತರು ಒಟ್ಟು 17 ಸಲ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ, ಗೆಲುವು ಸಿಕ್ಕಿದ್ದು ಒಮ್ಮೆ ಮಾತ್ರ. 1978ರ ಚುನಾವಣೆಯಲ್ಲಿ ಗೂಡುಸಾಬ್‌ ಅವರು ಜಯ ಗಳಿಸಿದ ನಂತರ ಮತ್ಯಾರಿಗೂ ಕ್ಷೇತ್ರದ ಜನ ಆಶೀರ್ವಾದ ಮಾಡಲಿಲ್ಲ.

1989ರಲ್ಲಿ ಎಚ್‌. ಅಬ್ದುಲ್‌ ವಹಾಬ್‌ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಜನತಾ ದಳದಿಂದ ಸ್ಪರ್ಧಿಸಿದ್ದ ಗುಜ್ಜಲ್‌ ಹನುಮಂತಪ್ಪ ವಿರುದ್ಧ ಸೋಲು ಅನುಭವಿಸಿದ್ದರು. ‌ಇದೇ ಚುನಾವಣೆಯಲ್ಲಿ ಕೆಆರ್‌ಆರ್‌ಎಸ್‌ ಪಕ್ಷದಿಂದ ಜಿ. ಖಾಜಾ ಹುಸೇನ್‌ ನಿಯೋಬಿ, ವಿ.ಎಸ್‌. ನೂರುಲ್ಲಾ ಖಾದ್ರಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. 1991ರ ಚುನಾವಣೆಯಲ್ಲಿ ಜಿ. ಖಾಜಾ ಹುಸೇನ್‌ ನಿಯೋಬಿ ಕೆಆರ್‌ಆರ್‌ಎಸ್‌ ಪಕ್ಷದಿಂದ ಸ್ಪರ್ಧಿಸಿ 525 ಮತ ಗಳಿಸಿದ್ದರು. ಪಕ್ಷೇತರರಾಗಿ ಮೆಹಬೂಬ್ ಸಾಹೇಬ್‌ ಸ್ಪರ್ಧಿಸಿ 173 ಮತ ಪಡೆದಿದ್ದರು. 1994ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಬ್ದುಲ್‌ ವಹಾಬ್‌ ಸ್ಪರ್ಧಿಸಿ 29,988 ಮತ ಗಳಿಸಿ ಬಿಜೆಪಿಯ ಶಂಕರಗೌಡ ವಿರುದ್ಧ ಸೋಲು ಕಂಡಿದ್ದರು. 1999ರ ಚುನಾವಣೆಯಲ್ಲಿ ಕೆ. ಅಮೀರ್‌ ಬಾಷಾ, ಬಿ. ಶೌಕತ್‌ ಅಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋಲಿನ ಕಹಿ ಅನುಭವಿಸಿದ್ದರು.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಬ್ದುಲ್‌ ವಹಾಬ್‌ ಸ್ಪರ್ಧಿಸಿ ಆನಂದ್‌ ಸಿಂಗ್‌ ವಿರುದ್ಧ ಸೋಲು ಅನುಭವಿಸಿದ್ದರು. ಮಹಮ್ಮದ್‌ ಅಬ್ದುಲ್‌ ಲತೀಫ್‌, ಎಂ. ಗೌಸಿಯಾ ಖಾನ್‌, ಅಮೀನ್‌ ಬಾಷ ಸಾಬ್ ಪಕ್ಷೇತರರಾಗಿ ಸ್ಪರ್ಧಿಸಿದ್ದರು. 2018ರ ಚುನಾವಣೆಯಲ್ಲಿ ಪಕ್ಷೇತರರಾಗಿ ಎಸ್‌. ಅಲೀಂ ಬಾಷ, ಎಲ್‌.ಎಸ್‌. ಬಶೀರ್‌ ಅಹಮ್ಮದ್‌, ಜಿ. ಶಫಿ ಸಾಬ್‌, ಶಬ್ಬೀರ್‌ ಎಚ್‌. ಸ್ಪರ್ಧಿಸಿ ಸೋಲು ಕಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT