ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ‘ಇಂಡಿಯಾ’ ಬಣಕ್ಕೆ 295 ಸ್ಥಾನ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

Published 1 ಜೂನ್ 2024, 12:39 IST
Last Updated 1 ಜೂನ್ 2024, 12:39 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ 295 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ‘ಇಂಡಿಯಾ’ ಮೈತ್ರಿಕೂಟದ ನಾಯಕರು ದೆಹಲಿಯಲ್ಲಿ ಸಭೆ ಸೇರಿ ಜಯಿಸಬಹುದಾದ ಸ್ಥಾನಗಳ ಕುರಿತು ಲೆಕ್ಕ ಹಾಕಿದ್ದಾರೆ.

ಸಭೆಯಲ್ಲಿ ಕಾಂಗ್ರೆಸ್‌, ಸಮಾಜವಾದಿ ಪಕ್ಷ, ಆರ್‌ಜೆಡಿ, ಎಎಪಿ, ಎನ್‌ಸಿಪಿ (ಎಸ್‌ಪಿ), ಶಿವಸೇನಾ (ಯುಬಿಟಿ), ಡಿಎಂಕೆ, ಜೆಎಂಎಂ, ನ್ಯಾಷನಲ್‌ ಕಾನ್ಫರೆನ್ಸ್‌, ಸಿಪಿಎಂ, ಸಿಪಿಐ, ಸಿಪಿಐ (ಎಂಎಲ್)ಎಲ್‌, ವಿಐಪಿ ಪಕ್ಷಗಳ 23 ನಾಯಕರು ಭಾಗವಹಿಸಿದ್ದದರು. ಟಿಎಂಸಿ, ಪಿಡಿಪಿ ಮತ್ತು ಕೆಲ ಸಣ್ಣ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ನಿರ್ದಿಷ್ಟ ರಾಜ್ಯಗಳಲ್ಲಿ ತಮ್ಮ ಪಕ್ಷಗಳು ಜಯಿಸಬಹುದಾದ ಕ್ಷೇತ್ರಗಳ ಸಂಖ್ಯೆಗಳ ಅಂಕಿ ಅಂಶಗಳನ್ನು ನೀಡಿದರು. ಇವುಗಳನ್ನೆಲ್ಲ ಒಟ್ಟುಗೂಡಿಸಿದಾಗ 295 ಕ್ಷೇತ್ರಗಳಲ್ಲಿ ಜಯಿಸುವ ಮಾಹಿತಿ ದೊರೆಯಿತು ಎಂದು ಮೂಲಗಳು ತಿಳಿಸಿವೆ.

‘ಉತ್ತರ ಪ್ರದೇಶದಲ್ಲಿ 40ರಲ್ಲಿ ಗೆಲುವು’: ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳ ಪೈಕಿ ಇಂಡಿಯಾ ಬಣವು 40ರಲ್ಲಿ ಜಯಗಳಿಸಲಿದೆ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸಭೆಯಲ್ಲಿ ತಿಳಿಸಿದರು. ಡಿಎಂಕೆ ಪಕ್ಷದ ನಾಯಕ ಬಾಲು ಅವರು, ತಮಿಳುನಾಡಿನ ಎಲ್ಲ 40 ಕ್ಷೇತ್ರಗಳು ವಿರೋಧ ಪಕ್ಷಗಳ ಪಾಲಾಗಿವೆ ಎಂದರು. 

ಕರ್ನಾಟಕದಲ್ಲಿ 15 ಮತ್ತು ತೆಲಂಗಾಣದಲ್ಲಿ 10 ಸ್ಥಾನಗಳಲ್ಲಿ ಗೆಲುವು ದೊರೆಯಲಿವೆ ಎಂದು ಕಾಂಗ್ರೆಸ್‌ ನಾಯಕರು ಹೇಳಿದರೆ, ಆರ್‌ಜೆಡಿಯ ತೇಜಸ್ವಿ ಯಾದವ್‌ ಅವರು ಬಿಹಾರದಲ್ಲಿ ಕನಿಷ್ಠ 20 ಸ್ಥಾನಗಳನ್ನು ತಮ್ಮ ಮೈತ್ರಿಕೂಟ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂಡಿಯಾ ಬಣವು ದೆಹಲಿಯಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೇಜ್ರಿವಾಲ್‌ ಹೇಳಿದರೆ, ಪಂಜಾಬ್‌ ಮತ್ತು ಚಂಡೀಗಢದಲ್ಲಿ ಎಎಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಎಲ್ಲ 14 ಸ್ಥಾನಗಳಲ್ಲಿ ಜಯಿಸಲಿವೆ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಶಿವಸೇನಾ (ಯುಬಿಟಿ) ನಾಯಕ ಅನಿಲ್‌ ದೇಸಾಯಿ ಅವರು ತಮ್ಮ ಮೈತ್ರಿಕೂಟವು 33 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದರೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಅವರು 24–26 ಸ್ಥಾನಗಳು ಬರಬಹುದು ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳದಲ್ಲಿ 30 ಸ್ಥಾನ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌ ಎಡ ಮೈತ್ರಿಕೂಟವು ಸುಮಾರು 30 ಸ್ಥಾನಗಳಲ್ಲಿ ಜಯಿಸಬಹುದು ಮತ್ತು ಬಿಜೆಪಿ 12ರಲ್ಲಿ ಜಯಿಸಬಹುದು ಎಂದು ಮೂಲಗಳು ಹೇಳಿವೆ.

‘ಜನರಿಂದ ಪಡೆದ ಪ್ರತಿಕ್ರಿಯೆಗಳನ್ನು ಆಧರಿಸಿ ನಾವು ಮೌಲ್ಯಮಾಪನ ಮಾಡಿದ್ದೇವೆ. ಆದರೆ ಆಡಳಿತಾರೂಢ ಬಿಜೆಪಿಯು ಎಕ್ಸಿಟ್‌ಪೋಲ್‌ಗಳ ಮೂಲಕ ಸರ್ಕಾರದ ನಿರೂಪಣೆಗೆ ಮುಂದಾಗಿದೆ’ ಎಂದು ಖರ್ಗೆ ಅವರು ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿಗೆ ಸುಮಾರು 220 ಮತ್ತು ಎನ್‌ಡಿಎಗೆ ಒಟ್ಟು 230 ಸ್ಥಾನಗಳು ಬರಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದರು. 

ಕೇಜ್ರಿವಾಲ್ ಅವರು ಭಾನುವಾರ ಜೈಲಿಗೆ ತೆರಳುವುದಕ್ಕೂ ಮುನ್ನ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಚುನಾವಣಾ ಆಯೋಗವನ್ನು ಭೇಟಿ ಮಾಡಿ, ಮತ ಎಣಿಕೆ ದಿನದ ಸಮಸ್ಯೆಗಳ ಕುರಿತು ಚರ್ಚಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋಟ್‌ ನಾವು 295ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಿಸುತ್ತೇವೆ. ಇದು ಜನರ ಸಮೀಕ್ಷೆಯಾಗಿದ್ದು ಜನರೇ ನಮ್ಮ ನಾಯಕರಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಸಮೀಕ್ಷೆಗಳೂ ಇವೆ ಮತ್ತು ಮಾಧ್ಯಮದವರ ಸಮೀಕ್ಷೆಗಳೂ ಇವೆ. ಆದರೆ ನಾವು ವಾಸ್ತವದ ಬಗ್ಗೆ ಹೇಳುತ್ತೇವೆ.
–ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT