ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಎಡರಂಗ: ಪಾತಾಳಕ್ಕೆ ಕುಸಿದ ಸಂಸದ ಬಲ

ಚುನಾವಣೆಯಿಂದ ಚುನಾವಣೆಗೆ ಕುಸಿಯುತ್ತಲೇ ಇದೆ ಮತ ಪ್ರಮಾಣ
Published 12 ಏಪ್ರಿಲ್ 2024, 0:30 IST
Last Updated 12 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ನವದೆಹಲಿ: 2004ರಲ್ಲಿ 59 ಸಂಸದರನ್ನು ಹೊಂದುವ ಮೂಲಕ ಸರ್ಕಾರವನ್ನೇ ನಿಯಂತ್ರಿಸುವ ಸ್ಥಿತಿಯಲ್ಲಿದ್ದ ಎಡ ಪಕ್ಷಗಳು ನಂತರದ 15 ವರ್ಷಗಳಲ್ಲಿ ಕೇವಲ 5 ಸ್ಥಾನಗಳಿಗೆ ಕುಸಿದಿದ್ದವು. ಮತ್ತೊಂದು ಚುನಾವಣೆ ಸನಿಹದಲ್ಲಿರುವಾಗ ಮೈತ್ರಿಕೂಟಗಳನ್ನು ಬದಲಿಸುವ ಮೂಲಕ ಮತ್ತು ಸ್ಥಾನ ಹೊಂದಾಣಿಕೆಯ ಮೂಲಕ ಅವು ಮರುಜೀವ ಪಡೆಯಲು ಯತ್ನಿಸುತ್ತಿವೆ.

ಕೊಂಚ ಮಟ್ಟಿಗಿನ ಅಸ್ತಿತ್ವ ಇರುವ ರಾಜ್ಯಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ತಮ್ಮದೇ ‘ಇಂಡಿಯಾ’ ಮೈತ್ರಿಕೂಟದ ಮಿತ್ರಪಕ್ಷಗಳ ವಿರುದ್ಧ ಕೆಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ಎಡ ಪಕ್ಷಗಳು ಮುಖ್ಯವಾಗಿ ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳ ಮೇಲೆ ಗಮನ ನೆಟ್ಟಿವೆ. 

ಎಡ ರಂಗದ ಪ್ರಮುಖ ಕೊಂಡಿಯಾದ ಸಿಪಿಎಂ ತಮಿಳುನಾಡಿನಲ್ಲಿ ಡಿಎಂಕೆಯಿಂದ ಎರಡು ಸ್ಥಾನಗಳನ್ನು, ರಾಜಸ್ಥಾನ, ತ್ರಿಪುರಾ ಮತ್ತು ಬಿಹಾರಗಳಲ್ಲಿ ಕಾಂಗ್ರೆಸ್‌ನಿಂದ ತಲಾ ಒಂದು ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಆಂಧ್ರಪ್ರದೇಶದಲ್ಲಿಯೂ ಹೊಂದಾಣಿಕೆ ಕುದುರುವ ಭರವಸೆ ಹೊಂದಿದೆ.

ಇದೇ ರೀತಿ ಸಿಪಿಐ ಕೂಡ ತಮಿಳುನಾಡಿನಲ್ಲಿ ಎರಡು, ಬಿಹಾರದಲ್ಲಿ ಒಂದು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಕೆಲವು ರಾಜ್ಯಗಳಲ್ಲಿ ತಮ್ಮ ಮಿತ್ರಪಕ್ಷಗಳ ವಿರುದ್ಧವೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

2019ರ ಚುನಾವಣೆಯಲ್ಲಿ ಕೇರಳದ 20 ಕ್ಷೇತ್ರಗಳ ಪೈಕಿ ಒಂದನ್ನು ಮಾತ್ರ ಗೆದ್ದಿದ್ದ ಎಡ ಪಕ್ಷಗಳು, ಆ ರಾಜ್ಯದ ಬಗ್ಗೆ ಹೆಚ್ಚು ಭರವಸೆ ಹೊಂದಿದ್ದು, ತಮಿಳುನಾಡಿನ ನಾಲ್ಕು ಸ್ಥಾನಗಳನ್ನು ಉಳಿಸಿಕೊಳ್ಳುವ ಆಶಾಭಾವದಿಂದಿವೆ. ಕೇರಳದಲ್ಲಿ ಸಿಪಿಎಂ ವಿರುದ್ಧ ಸ್ಪರ್ಧಿಸಿ ಒಂದು ಸ್ಥಾನ ಗೆದಿದ್ದ ಆರ್‌ಎಸ್‌ಪಿ ಕೂಡ ರಾಷ್ಟ್ರೀಯ ಮಟ್ಟದಲ್ಲಿ ಎಡ ವರ್ಗಕ್ಕೆ ಸೇರಿಸಬಹುದಾದ ಪಕ್ಷವಾಗಿದೆ.

ರಾಜಸ್ಥಾನ ಮತ್ತು ಬಿಹಾರದಲ್ಲಿ ಪ್ರಬಲ ಮಿತ್ರಪಕ್ಷಗಳನ್ನು ಹೊಂದಿರುವ ಸಿಪಿಎಂ ಮತ್ತು ಸಿಪಿಐ ಈ ಬಾರಿ ಹೆಚ್ಚು ಕ್ಷೇತ್ರ ಗೆಲ್ಲುವ ಭರವಸೆಯಿಂದಿವೆ. ಬಿಹಾರದಲ್ಲಿ ಸಿಪಿಐ (ಎಂಎಲ್‌) ಎಲ್‌ ಮತಪ್ರಮಾಣ ಶೇ 0.33ರಿಂದ ಶೇ 0.22ಕ್ಕೆ ಕುಸಿದಿದ್ದರೂ ಮಹಾಘಟಬಂಧನ್‌ನಲ್ಲಿ ಮೂರು ಸ್ಥಾನಗಳನ್ನು ಪಡೆದಿದೆ.   

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಂಸತ್‌ನಲ್ಲಿ ಎಡ ಪಕ್ಷಗಳ ಸ್ಥಾನಗಳು ಹೆಚ್ಚಬೇಕಾದ ಅಗತ್ಯದ ಬಗ್ಗೆ ವಿವರಿಸುತ್ತಾ, ‘ಎಡ ಪಕ್ಷಗಳು, ಮುಖ್ಯವಾಗಿ ಸಿಪಿಎಂನ, ಪ್ರಬಲ ಅಸ್ತಿತ್ವವು ಪರ್ಯಾಯ ಜಾತ್ಯತೀತ ಸರ್ಕಾರದ ಜನಪರ ನೀತಿ–ನಿಯಮಗಳ ಅಳವಡಿಕೆಯ ಖಾತರಿಗೆ ಅತ್ಯಗತ್ಯವಾಗಿದೆ’ ಎಂದು ಹೇಳಿದ್ದಾರೆ.

ಸಂಸತ್‌ನಲ್ಲಿ ಎಡ ಪಕ್ಷಗಳ ಬಲ ಕಡಿಮೆ ಇದ್ದರೂ ವಿರೋಧ ಪಕ್ಷಗಳ ಕಾರ್ಯಸೂಚಿಯ ನೇತೃತ್ವ ವಹಿಸುವುದರಲ್ಲಿ ಅವುಗಳ ಪಾತ್ರ ಹಿರಿದಾಗಿರುತ್ತದೆ. ಅದು ಹಲವು ಬಾರಿ ‘ಇಂಡಿಯಾ’ ಕೂಟದಲ್ಲಿ ಮನಸ್ತಾಪಗಳಿಗೂ ಕಾರಣವಾಗಿದ್ದಿದೆ.

2004ರಲ್ಲಿ, ತನ್ನ ಅತ್ಯುತ್ತಮ ಸ್ಥಿತಿಯಲ್ಲಿ, ಸಿಪಿಎಂ 69 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 45ರಲ್ಲಿ ಗೆದ್ದು, ಶೇ 5.66 ಮತ ಪ್ರಮಾಣ ಪಡೆದಿತ್ತು. ಆದರೆ, 2019ರ ಹೊತ್ತಿಗೆ ಅದು ಮೂರು ಸ್ಥಾನಗಳಲ್ಲಿ ಮಾತ್ರ ಗೆಲ್ಲುವ ಮೂಲಕ ಶೇ 1.77 ಮತಪ್ರಮಾಣಕ್ಕೆ ಕುಸಿದಿತ್ತು.

2009ರಲ್ಲಿ ಸಿಪಿಎಂ 93 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 16ರಲ್ಲಿ ಗೆದ್ದು ಶೇ 5.33 ಮತಪ್ರಮಾಣ ತನ್ನದಾಗಿಸಿಕೊಂಡಿತ್ತು. 2014ರಲ್ಲಿ 69 ಸ್ಥಾನಗಳಲ್ಲಿ ಸ್ಪರ್ಧಿಸಿ, 9ರಲ್ಲಿ ಮಾತ್ರ ಗೆದ್ದು ಶೇ 3.28 ಮತ ಪ್ರಮಾಣ ಪಡೆದಿತ್ತು. ಹೀಗೆ ಚುನಾವಣೆಯಿಂದ ಚುನಾವಣೆಗೆ ಕುಸಿಯುತ್ತಿರುವ ಪಕ್ಷವು ಈ ಬಾರಿ 50ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿದೆ.

ಸಿಪಿಐ ಕತೆ ಇದಕ್ಕಿಂತ ಭಿನ್ನವೇನಲ್ಲ. 2004ರಲ್ಲಿ 34 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಶೇ 1.41 ಮತ ಪ್ರಮಾಣದೊಂದಿಗೆ 10 ಸ್ಥಾನ ಗೆದ್ದಿದ್ದ ಸಿಪಿಐ, 2009ರಲ್ಲಿ ಶೇ 1.43 ಮತ ಪ್ರಮಾಣದೊಂದಿಗೆ ನಾಲ್ಕು ಸ್ಥಾನಗಳನ್ನು, ಆನಂತರ 2014ರಲ್ಲಿ ಕೇವಲ ಶೇ 0.79 ಮತ ಪ್ರಮಾಣದೊಂದಿಗೆ ಒಂದು ಸ್ಥಾನ ಗೆದ್ದಿತ್ತು. 2019ರಲ್ಲಿ ಶೇ 0.59 ಮತ ಪ್ರಮಾಣದೊಂದಿಗೆ ಎರಡು ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಸೊನ್ನೆಗೆ ಇಳಿದ ಫಾರ್ವರ್ಡ್‌ ಬ್ಲಾಕ್‌

2004 ಮತ್ತು 2009ರಲ್ಲಿ ತನ್ನ ಪ್ರತಿನಿಧಿಗಳನ್ನು ಹೊಂದಿದ್ದ ಫಾರ್ವರ್ಡ್ ಬ್ಲಾಕ್, ನಂತರದ ಎರಡು ಚುನಾವಣೆಗಳಲ್ಲಿ ಶೂನ್ಯ ಸಾಧನೆ ಮಾಡಿತು. ಅದರ ಮತ ಪ್ರಮಾಣವು ಶೇ 0.35ರಿಂದ ಶೇ 0.05ಗೆ ಕುಸಿಯಿತು. ಆರ್‌ಎಸ್‌ಪಿಯ ಮತ ಪ್ರಮಾಣವು ಶೇ 0.43ರಿಂದ ಶೇ 0.12ಕ್ಕೆ ಕುಸಿದು, ಅವುಗಳ ಪ್ರತಿನಿಧಿಗಳ ಸಂಖ್ಯೆ ಮೂರರಿಂದ ಒಂದಕ್ಕೆ ಇಳಿದಿತ್ತು.

ಪಶ್ಚಿಮ ಬಂಗಾಳದಲ್ಲಿ ಎಡ ರಂಗದ ಕುಸಿತದೊಂದಿಗೆ ಆರ್‌ಎಸ್‌ಪಿ ಮತ್ತು ಫಾರ್ವರ್ಡ್ ಬ್ಲಾಕ್ ಕೂಡ ತೀವ್ರ ಕುಸಿತಕ್ಕೊಳಗಾದವು. 2004ರಲ್ಲಿ ಪಶ್ಚಿಮ ಬಂಗಾಳದಿಂದ 26 ಸಿಪಿಎಂ ಸಂಸದರು ಲೋಕಸಭೆ ಪ್ರವೇಶಿಸಿದರೆ, 2009ರಲ್ಲಿ ಅವರ ಸಂಖ್ಯೆ 16ಕ್ಕೆ ಕುಸಿದಿತ್ತು. ಕಳೆದ ಬಾರಿಯಂತೂ ಎರಡು ಸ್ಥಾನಕ್ಕೆ ಅದು ಸೀಮಿತವಾಗಿತ್ತು. 1991ರಲ್ಲಿ ಪಕ್ಷವು 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT