ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS polls | ದ್ವೇಷಕ್ಕಾಗಿ ಅಲ್ಲ, ಪ್ರೀತಿಗಾಗಿ ಮತ ನೀಡಿ: ಮತದಾರರಿಗೆ ಖರ್ಗೆ ಕರೆ

Published 20 ಮೇ 2024, 5:56 IST
Last Updated 20 ಮೇ 2024, 5:56 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆಯ 5ನೇ ಹಂತದಲ್ಲಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಕ್ಷೇತ್ರಗಳಲ್ಲಿ ಇಂದು (ಸೋಮವಾರ) ಮತದಾನ ನಡೆಯುತ್ತಿದ್ದು, ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಮತ ಚಲಾಯಿಸಿ, ದ್ವೇಷಕ್ಕಾಗಿ ಅಲ್ಲ, ಪ್ರೀತಿಗಾಗಿ ಮತ ಚಲಾಯಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.

‘ನಾವು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಬೇಕಾದರೆ, ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ವಿದ್ಯುನ್ಮಾನ ಮತಯಂತ್ರದಲ್ಲಿ (ಇವಿಎಂ) ಗುಂಡಿ ಒತ್ತುವ ಮೊದಲು ನಾವು ದ್ವೇಷಕ್ಕಾಗಿ ಅಲ್ಲ, ಪ್ರೀತಿ ಮತ್ತು ಸಹೋದರತ್ವಕ್ಕಾಗಿ ಮತ ಚಲಾಯಿಸಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಮತ ಚಲಾಯಿಸಿ. ಕೆಲವು ಬಂಡವಾಳಶಾಹಿಗಳನ್ನು ಶ್ರೀಮಂತರನ್ನಾಗಿ ಮಾಡುವುದಕ್ಕೆ ಮಾತ್ರವಲ್ಲ, ನಮ್ಮ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನಾವು ಮತ ​​ಚಲಾಯಿಸಬೇಕೇ ಹೊರತು ಹಕ್ಕುಗಳನ್ನು ಕಸಿದುಕೊಳ್ಳುವವರಿಗಾಗಿ ಅಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸರ್ವಾಧಿಕಾರ, ಅನ್ಯಾಯ, ದಬ್ಬಾಳಿಕೆಗಾಗಿ ಅಲ್ಲ, ನ್ಯಾಯ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಮತ ಚಲಾಯಿಸಬೇಕೆಂದು ಖರ್ಗೆ ಮನವಿ ಮಾಡಿದ್ದಾರೆ.

ನಾವು ಘೋಷಿಸಿರುವ ‘ರೈತ ನ್ಯಾಯ’, ‘ಯುವ ನ್ಯಾಯ’, ‘ನಾರಿ ನ್ಯಾಯ’, ‘ಶ್ರಮಿಕ ನ್ಯಾಯ’ ಹಾಗೂ ‘ಹಿಸ್ಸೇದಾರಿ (ಭಾಗಿದಾರರ) ನ್ಯಾಯ’ ಎಂಬ ಐದು ಗ್ಯಾರಂಟಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮತ ಚಲಾಯಿಸಿ. ಇದರಿಂದಾಗಿ ಈಗಾಗಲೇ ಅಸ್ಥಿರವಾಗಿರುವ ಸರ್ವಾಧಿಕಾರದ ಕುರ್ಚಿಗೆ ಮತ್ತೊಂದು ಹಿನ್ನಡೆಯಾಗಲಿದೆ ಮತ್ತು ಪ್ರಜಾಪ್ರಭುತ್ವವು ಬಲಗೊಳ್ಳಲಿದೆ ಎಂದಿದ್ದಾರೆ.

ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು ತಮ್ಮ ‘ಐತಿಹಾಸಿಕ ಜವಾಬ್ದಾರಿ’ಯನ್ನು ತಪ್ಪದೆ ನಿರ್ವಹಿಸುವಂತೆ ಖರ್ಗೆ ಮನವಿ ಮಾಡಿದ್ದಾರೆ.

ನಾಲ್ಕು ಹಂತಗಳ ಮತದಾನ ಗಮನಿಸಿದರೆ ಸರ್ವಾಧಿಕಾರಿ ಮೋದಿ ಅವರು ನಿರ್ಗಮಿಸುವುದು ಖಚಿತವಾಗಿದೆ. ಇಂದು ನಡೆಯುತ್ತಿರುವ ಮತದಾನ ಅವರ (ಮೋದಿ) ವಿದಾಯಕ್ಕೆ ಐದನೇ ಹೆಜ್ಜೆಯಾಗಲಿದೆ. ದೇಶದಲ್ಲಿ ಜೂನ್ 4ರಿಂದ ಹೊಸ ಶಂಕೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಪೀಯೂಷ್‌ ಗೋಯಲ್, ಸ್ಮೃತಿ ಇರಾನಿ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ಪ್ರಮುಖ ನಾಯಕರು ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT