ಶನಿವಾರ, ಅಕ್ಟೋಬರ್ 23, 2021
20 °C
ಆಳ-ಅಗಲ

ಪಂಡೋರ ಪೇಪರ್ಸ್‌: ಜಾಗತಿಕ ನಾಯಕರ ‘ಭಂಡಾರ’ ಬಯಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್ತಿನ ಶ್ರೀಮಂತರು, ಖ್ಯಾತನಾಮರು, ರಾಜಕೀಯ ನಾಯಕರು ಮತ್ತು ಅತ್ಯಂತ ಪ್ರಭಾವಿ ನಾಯಕರ ರಹಸ್ಯ ವಹಿವಾಟುಗಳು, ಮುಚ್ಚಿಟ್ಟ ಆಸ್ತಿಗಳ ವಿವರ ಈಗ ಬಯಲಾಗಿದೆ. ದಾಖಲೆಗಳ ಸೋರಿಕೆ ಇತಿಹಾಸದಲ್ಲಿಯೇ ಇದು ಅತ್ಯಂತ ದೊಡ್ಡ ಮಟ್ಟದ ಸೋರಿಕೆ ಎನ್ನಲಾಗಿದೆ. ಪಂಡೋರ ಪೇಪರ್ಸ್‌ ಎಂಬ ಹೆಸರಿನಲ್ಲಿ 119 ಕೋಟಿ ಕಡತಗಳು ಬೆಳಕಿಗೆ ಬಂದಿವೆ.

ಪನಾಮಾ, ದುಬೈ, ಮೊನಾಕೊ, ಸ್ವಿಟ್ಜರ್‌ಲೆಂಡ್‌, ಕೇಮನ್‌ ಐಲ್ಯಾಂಡ್ಸ್‌ನಂತಹ ತೆರಿಗೆಮುಕ್ತ ಪ್ರದೇಶಗಳಲ್ಲಿ ಕಂಪನಿಗಳನ್ನು ಸ್ಥಾಪಿಸಲು ಸಲ್ಲಿಸಲಾದ ದಾಖಲೆಗಳನ್ನು ಅಂತರರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟವು ಬಹಿರಂಗಪಡಿಸಿದೆ.

ಈ ಬೃಹತ್‌ ಪಟ್ಟಿಯಲ್ಲಿ 35 ದೇಶಗಳ ನಾಯಕರಿದ್ದಾರೆ. ಅವರಲ್ಲಿ ಹಲವರು ಈಗ ಅಧ್ಯಕ್ಷ, ಪ್ರಧಾನಿಯಾಗಿ ಅಧಿಕಾರದಲ್ಲಿ ಇರುವವರು. ಹಲವರು ಈ ಹಿಂದೆ ಅಧಿಕಾರದಲ್ಲಿ ಇದ್ದವರು. ತೆರಿಗೆ ಇಲ್ಲದ ದೇಶಗಳಲ್ಲಿ ಗುಟ್ಟಾಗಿ ಕಂಪನಿಗಳನ್ನು ಸ್ಥಾಪಿಸಿದವರಲ್ಲಿ ಸಚಿವರು, ನ್ಯಾಯಮೂರ್ತಿಗಳು, ಮೇಯರ್‌ಗಳು, ಸೇನಾಧಿಕಾರಿಗಳು ಮುಂತಾದವರ ಸಂಖ್ಯೆ 300ಕ್ಕೂ ಹೆಚ್ಚು.

ಬ್ರಿಟನ್‌ನ ಕನ್ಸರ್ವೇಟಿವ್‌ ಪಕ್ಷಕ್ಕೆ ದೇಣಿಗೆ ನೀಡಿದ್ದ ಪ್ರಮುಖರ ಹೆಸರುಗಳು ಕೂಡ ಈಗ ಬಯಲಾಗಿದೆ.

ನೂರಕ್ಕೂ ಹೆಚ್ಚು ಕೋಟ್ಯಧಿಪತಿಗಳ ಹೆಸರು ಪಟ್ಟಿಯಲ್ಲಿ ಇದೆ. ತಮ್ಮ ಆಸ್ತಿ ಅಥವಾ ವಿಹಾರ ನೌಕೆಗಳಂತಹ ಐಷಾರಾಮಿ ಸಾಧನಗಳನ್ನು ಇರಿಸಲು ಕೆಲವರು ‘ಹುಸಿ’ ಕಂಪನಿಗಳನ್ನು ತೆರೆದಿದ್ದಾರೆ. ದೊಡ್ಡ ಮೊತ್ತದ ಹಣವನ್ನು ಇರಿಸುವುದಕ್ಕೆ ಕಂಪನಿ ಸ್ಥಾಪಿಸಿದವರೂ ಇದ್ದಾರೆ. ಕೆಲವು ಕಂಪನಿಗಳಲ್ಲಿ ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳೂ ಇವೆ. ಖ್ಯಾತ ಕಲಾವಿದ ಪಿಕಾಸೊನ ಕಲಾಕೃತಿ ಹೊಂದಿರುವ ಕಂಪನಿಯೂ ಇದೆ.

ಇದನ್ನೂ ಓದಿ– Explainer: ಏನಿದು ಪಂಡೋರಾ ಪೇಪರ್ಸ್‌?

ಅನಿಲ್ ಅಂಬಾನಿ, ಸಚಿನ್‌ ತೆಂಡೂಲ್ಕರ್‌ ‘ಬಂಡವಾಳ’

ವಿದೇಶಗಳಲ್ಲಿ ರಹಸ್ಯವಾಗಿ ಹೂಡಿಕೆ ಮಾಡಿದ ಭಾರತೀಯರ ಪೈಕಿ ರಿಲಯನ್ಸ್‌ ಉದ್ಯಮ ಸಮೂಹದ ಅಧ್ಯಕ್ಷ ಅನಿಲ್‌ ಅಂಬಾನಿ, ಕ್ರಿಕೆಟ್‌ ದಂತಕಥೆ ಎನಿಸಿದ ಭಾರತದ ಸಚಿನ್ ತೆಂಡೂಲ್ಕರ್‌, ವಜ್ರದ ವ್ಯಾಪಾರಿ ನೀರವ್‌ ಮೋದಿ ಅವರ ಸೋದರಿ ಪೂರ್ವಿ ಮೋದಿ, ಬಯೊಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ ಅವರ ಪತಿ ಜಾನ್ ಷಾ ಹೆಸರು ಇರುವುದು ‘ಪಂಡೋರ ಪೇಪರ್ಸ್‌’ ದಾಖಲೆಗಳಿಂದ ಬಹಿರಂಗವಾಗಿದೆ.

‘ದಿವಾಳಿ’ ಉದ್ಯಮಿಯಾಗಿ ಸಾಲದ ಸುಳಿಯಲ್ಲಿ ಸಿಕ್ಕ ಅನಿಲ್‌ ಅಂಬಾನಿ ಹಾಗೂ ಅವರ ಪ್ರತಿನಿಧಿಗಳು ವಿದೇಶಗಳಲ್ಲಿ 18 ಕಂಪನಿಗಳ ಒಡೆತನ ಹೊಂದಿದ್ದು ಹೇಗೆ ಎಂಬುದರ ವಿವರವನ್ನು ‘ಪಂಡೋರ ಪೇಪರ್ಸ್‌’ ವಿವರಿಸಿದೆ.

ಆದರೆ, ವಿದೇಶಗಳಲ್ಲಿ ಕಾನೂನುಬದ್ಧವಾಗಿಯೇ ನಿವೇಶನ ಖರೀದಿಸಿದ್ದಾಗಿ ಅಥವಾ ಹೂಡಿಕೆ ಮಾಡಿದ್ದಾಗಿ ಅಂಬಾನಿ ಮತ್ತು ಸಚಿನ್‌ ತೆಂಡೂಲ್ಕರ್‌ ಅವರ ವಕೀಲರು ಸ್ಪಷ್ಟಪಡಿಸಿದ್ದಾರೆ.

ಅನಿಲ್‌ ಅಂಬಾನಿ

ಹೂಡಿಕೆ ಎಲ್ಲಿ?: ಜೆರ್ಸಿ, ಬ್ರಿಟಿಷ್ ವರ್ಜಿನ್‌ ಐಲ್ಯಾಂಡ್ಸ್ (ಬಿವಿಐ), ಸಿಪ್ರಸ್‌

ಕಂಪನಿ: ಮೂರೂ ಕಡೆಯ 18 ಕಂಪನಿಗಳಲ್ಲಿ ಒಟ್ಟು 130 ಕೋಟಿ ಡಾಲರ್ ಹೂಡಿಕೆ (ಸುಮಾರು ₹9,620 ಕೋಟಿ)

ಜೆರ್ಸಿಯಲ್ಲಿ ಅಂಬಾನಿ ಒಡೆತನದ ಮೂರು ಕಂಪನಿಗಳಿದ್ದು ಅವು 2007 ಡಿಸೆಂಬರ್‌ನಿಂದ ಜನವರಿ 2008ರ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದಂಥವು.  2008 ಜನವರಿಯಲ್ಲಿಯೇ ಜೆರ್ಸಿಯಲ್ಲಿ ಮತ್ತೆರಡು ಕಂಪನಿಗಳು ಅಸ್ತಿತ್ವಕ್ಕೆ ಬಂದಿದ್ದು, ಅವುಗಳು ‘ಅನಿಲ್‌ ಅಂಬಾನಿ ಪ್ರತಿನಿಧಿ’ ಎನ್ನಲಾದ ಅನೂಪ್‌ ದಲಾಲ್‌ ಹೆಸರಿನಲ್ಲಿವೆ ಎಂಬುದನ್ನೂ ದಾಖಲೆಗಳು ಬಹಿರಂಗಪಡಿಸಿವೆ. ಇದರೊಂದಿಗೆ ದಲಾಲ್‌ ಹೆಸರಿನಲ್ಲಿ ಬಿವಿಐ ನಲ್ಲಿಯೂ ಬಂಡವಾಳ ನಿರ್ವಹಣೆಗಾಗಿಯೇ ಮತ್ತೊಂದು ಕಂಪನಿ ಇದೆ ಎಂಬುದು ತಿಳಿದುಬಂದಿದೆ.

ತೆರಿಗೆಮುಕ್ತ ಪ್ರದೇಶಗಳಲ್ಲಿ ಹೂಡಿಕೆ ಕಾನೂನು ಬಾಹಿರವೇ?

ವಾಣಿಜ್ಯ ವ್ಯವಹಾರ ನಡೆಸುವ ಉದ್ದೇಶದಿಂದ ಬೇರೆ ದೇಶಗಳಲ್ಲಿ ಸಂಸ್ಥೆಗಳನ್ನು ತೆರೆಯುವುದು ಕಾನೂನು ಬಾಹಿರವಲ್ಲ. ಆದರೆ ಅಂಥ ಕಂಪನಿಗಳು ತೆರಿಗೆ ಕಳ್ಳತನ ಅಥವಾ ಹಣ ಅಕ್ರಮ ವರ್ಗಾಗವಣೆಯಂತಹ ಕೆಲಸಗಳಿಗೆ ನೆರವು ನೀಡುತ್ತವೆ ಎಂದು ಐಸಿಐಜೆ ಹೇಳಿದೆ.

ಹೊರದೇಶಗಳಲ್ಲಿ ಅಥವಾ ಭಿನ್ನ ರೀತಿಯ ತೆರಿಗೆ ಪದ್ದತಿ ಇರುವ ದೇಶಗಳಲ್ಲಿ ಹಣ ಹೂಡಲು ಭಾರತದ ಕಾನೂನು ಅವಕಾಶ ಕೊಡುತ್ತದೆ. ಆದರೆ ಅದರ ಕುರಿತು ಸರ್ಕಾರಕ್ಕೆ ವರದಿ ನೀಡಬೇಕಾಗುತ್ತದೆ. ತೆರಿಗೆ ತಪ್ಪಿಸಿಕೊಳ್ಳಲು ಅಕ್ರಮವಾಗಿ ಹಣ ಹೂಡುವುದು ಕಾನೂನು ಬಾಹಿರವಾಗಿದೆ.

ಸೋರಿಕೆ ಮಾಡಿದವರು ಯಾರು?

ಜಗತ್ತಿನ ನೂರಾರು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಒಕ್ಕೂಟವಾದ ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟ (ಐಸಿಐಜೆ) ಈ ತನಿಖೆಯನ್ನು ನಡೆಸಿದೆ. ಸುಮಾರು 150 ಮಾಧ್ಯಮ ಸಂಸ್ಥೆಗಳ 600 ಪತ್ರಕರ್ತರು ಈ ತನಿಖೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 1970ರಿಂದ ಸೃಷ್ಟಿಯಾಗಿರುವ ಖಾತೆಗಳ ದಾಖಲೆಗಳನ್ನು ಕಲೆಹಾಕಲಾಗಿದೆ. ದಾಖಲೆಯ ಪ್ರಮಾಣ 3 ಟೆರಾಬೈಟ್‌ಗಳಷ್ಟು ಇದೆ ಎನ್ನಲಾಗಿದೆ. ಅಲ್ಲದೇ, ಆಯಾ ದೇಶಗಳ ಅಧಿಕೃತ ದಾಖಲೆಗಳ ಜೊತೆ ಹೋಲಿಸಿ ಮಾಹಿತಿಗಳನ್ನು ಖಚಿತಪಡಿಸಿಕೊಳ್ಳಲಾಗಿದೆ.

ಈ ಹಿಂದಿನ ಸೋರಿಕೆ...

2016ರ ಏ.3ರಂದು ಪನಾಮಾ ದಾಖಲೆ ಸೋರಿಕೆ ಆಗಿತ್ತು. ಹಲವಾರು ದೇಶಗಳ ತನಿಖಾ ಪತ್ರಕರ್ತರ ತಂಡ ಈ ಕುರಿತು ವರದಿ ಮಾಡಿತ್ತು. ಸಂಪೂರ್ಣ ವರದಿಯನ್ನು ಐಸಿಐಜೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. 

ತೆರಿಗೆ ವಂಚಿಸುವವರ ಸ್ವರ್ಗ ಎಂದೇ ಕರೆಸಿಕೊಳ್ಳುವ ಪನಾಮಾದ  ಕಾನೂನು ಮತ್ತು ಕಾರ್ಪೊರೇಟ್‌ ಸೇವಾದಾರ ಸಂಸ್ಥೆ ಮೊಸಾಕ್‌ ಫಾನ್ಸಿಕ್‌ ಈ ಖಾತೆಗಳನ್ನು ರಚಿಸಿತ್ತು. ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದ ಭಾರತ, ಪಾಕಿಸ್ತಾನ ಸೇರಿ ಹಲವು ರಾಷ್ಟ್ರಗಳ ರಾಜಕೀಯ ಮುಖಂಡರು, ನಟ, ನಟಿಯರು ಹೆಸರುಗಳು ಈ ಸಂಸ್ಥೆಯ ಮೇಲೆ ನಡೆಸಿದ್ದ ತನಿಖೆಯಿಂದ ಬಯಲಾಗಿದ್ದವು. 2.14 ಲಕ್ಷ ಸಾಗರೋತ್ತರ ಹೂಡಿಕೆದಾರರ ಹೆಸರುಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ಸುಮಾರು 2.6 ಟೆರಾಬೈಟ್‌ಗಳಷ್ಟು ಮಾಹಿತಿ ಸಂಗ್ರಹಿಸಲಾಗಿತ್ತು.

ಈ ವರದಿ ಹೊರಬಂದ ಬಳಿಕ ಹಲವಾರು ದೇಶಗಳಲ್ಲಿ ನಾಯಕತ್ವ ಬದಲಾವಣೆ ಆಗಿತ್ತು. ಐಸ್‌ಲೆಂಡ್‌ ಪ್ರಧಾನಿ ಹೆಸರೂ ಆ ಪಟ್ಟಿಯಲ್ಲಿ ಇದ್ದ ಕಾರಣ, ಐಸ್‌ಲೆಂಡ್‌ನಲ್ಲಿ ಪ್ರತಿಭಟನೆಗಳು ನಡೆದು ಪ್ರಧಾನಿ ರಾಜಿನಾಮೆ ನೀಡಿದ್ದರು. ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಕೂಡಾ ತಮ್ಮ ಪದವಿ ಕಳೆದುಕೊಳ್ಳಬೇಕಾಯಿತು. ಭಾರತದ 50ಕ್ಕೂ ಹೆಚ್ಚು ಖ್ಯಾತನಾಮರ ಹೆಸರು ಆ ಪಟ್ಟಿಯಲ್ಲಿ ಇತ್ತು. ನಟರಾದ ಅಮಿತಾಭ್‌ ಬಚ್ಚನ್‌, ಐಶ್ವರ್ಯಾ ಬಚ್ಚನ್‌ ಅವರ ಹೆಸರೂ ಇತ್ತು.

ಲಕ್ಸಂಬರ್‌ ಲೀಕ್ಸ್‌: ಲಕ್ಸ್‌ಲೀಕ್ಸ್‌ ಎಂದು ಕರೆಸಿಕೊಳ್ಳುವ ಈ ಹಗರಣವನ್ನು 2014ರಲ್ಲಿ ಐಸಿಐಜೆ ಬಯಲಿಗೆಳೆದಿತ್ತು. ಲಕ್ಸಂಬರ್ಗ್‌ನ ಸುಮಾರು 300 ಕಂಪನಿಗಳು ಸರ್ಕಾರಕ್ಕೆ ತೆರಿಗೆ ವಂಚಿಸಿದ ಮಾಹಿತಿ ಇದರಲ್ಲಿ  ಒಳಗೊಂಡಿತ್ತು.

ಪ್ಯಾರಡೈಸ್‌ ಪೇಪರ್ಸ್‌: 2017ರಲ್ಲಿ ಜರ್ಮನಿಯ ಪತ್ರಕರ್ತರು ಈ ಹಗರಣ ಬಯಲಿಗೆಳೆದಿದ್ದರು. ಸಾಗರೋತ್ತರ ಹೂಡಿಕೆಗೆ ಸಂಬಂಧಿಸಿದ 1.34 ಕೋಟಿ ದಾಖಲೆಗಳನ್ನು ಪತ್ರಕರ್ತರು ಬಿಚ್ಚಿಟ್ಟಿದ್ದರು. ಭಾರತದ ಹಲವರ ಹೆಸರುಗಳೂ ಈ ಪಟ್ಟಿಯಲ್ಲಿ ಇದ್ದವು.

ಗಾಯಕಿ ಶಕೀರಾ

ಕೊಲಂಬಿಯಾದ ಖ್ಯಾತ ಪಾಪ್ ಗಾಯಕಿ ಶಕೀರಾ ಹೆಸರನ್ನು ವರದಿ ಉಲ್ಲೇಖಿಸಿದೆ. ವಿದೇಶದಲ್ಲಿ ಶಕೀರಾ ಹೊಂದಿರುವ ಸ್ವತ್ತುಗಳ ಮಾಹಿತಿಯನ್ನು  ಬಹಿರಂಗಪಡಿಸಲಾಗಿದ್ದು, ಅವರು ಯಾವುದೇ ತೆರಿಗೆ ವಂಚನೆ ಎಸಗಿಲ್ಲ ಎಂದು ಅವರ ವಕೀಲರು ತಿಳಿಸಿದ್ದಾರೆ. 2012ರಿಂದ 2014ರ ಅವಧಿಯಲ್ಲಿ ‌ ₹108 ಕೋಟಿ ತೆರಿಗೆ ಪಾವತಿಸಲು ವಿಫಲವಾದ ಕಾರಣ ಶಕೀರಾ ವಿಚಾರಣೆಯನ್ನು ಎದುರಿಸಬೇಕು ಎಂದು ಸ್ಪೇನ್‌ನ ನ್ಯಾಯಾಧೀಶರು ಜುಲೈನಲ್ಲಿ ಶಿಫಾರಸು ಮಾಡಿದ್ದರು. ಹೀಗಾಗಿ ಶಕೀರಾ ತೆರಿಗೆ ವಂಚನೆ ಪ್ರಕರಣ ಎದುರಿಸುತ್ತಿದ್ದಾರೆ. 

ಕೀನ್ಯಾದ ಅಧ್ಯಕ್ಷ ಉಹುರು ಕೆನ್ಯಟ್ಟಾ

ಕೀನ್ಯಾದ ಅಧ್ಯಕ್ಷ ಉಹುರು ಕೆನ್ಯಟ್ಟಾ ಅವರ ಸಹೋದರರು ಸೇರಿದಂತೆ ಕುಟುಂಬದ ಆರು ಜನರು ಸೇರಿ, ವಿದೇಶದಲ್ಲಿ ₹225 ಕೋಟಿ ಮೌಲ್ಯದ 11 ಕಂಪನಿಗಳನ್ನು ಹೊಂದಿದ್ದಾರೆ ಎಂದು ಸೋರಿಕೆಯಾದ ದಾಖಲೆ ತೋರಿಸಿದೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೆಸರು ನೇರವಾಗಿ ಪ್ರಸ್ತಾಪವಾಗಿಲ್ಲವಾದರೂ, ಅವರ ಸಂಪುಟದ ಸಚಿವರು, ಕುಟುಂಬ ಸದಸ್ಯರು ಹಾಗೂ ಆಪ್ತ ವಲಯದ ಹಲವಾರು ಸದಸ್ಯರು ರಹಸ್ಯ ಮಾಲೀಕತ್ವದ ಸಂಸ್ಥೆಗಳು ಮತ್ತು ಲಕ್ಷಾಂತರ ಡಾಲರ್ ಮೌಲ್ಯದ ಟ್ರಸ್ಟ್‌ಗಳನ್ನು ಹೊಂದಿದ್ದಾರೆ. ಹಣಕಾಸು ಸಚಿವ ಶೌಕತ್ ಫಯಾಜ್ ಮತ್ತು ಕುಟುಂಬ, ಇಮ್ರಾನ್ ಖಾನ್ ಅವರ ಹಿಂದಿನ ಹಣಕಾಸು ಮತ್ತು ಕಂದಾಯ ಸಲಹೆಗಾರನ ಪುತ್ರ ವಕಾರ್ ಮಸೂದ್ ಖಾನ್ ಈ ಪೈಕಿ ಕೆಲವರು. ಪಾಕಿಸ್ತಾನದ ಒಟ್ಟು 700 ಮಂದಿಯ ಹೆಸರು ವರದಿಯಲ್ಲಿದೆ.

ಆಂಡ್ರೆಜ್ ಬಾಬಿಸ್

2009ರಲ್ಲಿ ಜೆಕ್ ಪ್ರಧಾನಿ ಆಂಡ್ರೆಜ್ ಬಾಬಿಸ್ ಅವರು ಫ್ರಾನ್ಸ್‌ನ ಕಾನ್ಸ್‌ ಬಳಿಯ ಮೌಗಿನ್ಸ್‌ ಬೆಟ್ಟದ ಮೇಲಿನ ಹಳ್ಳಿಯಲ್ಲಿ ಆಸ್ತಿ ಖರೀದಿಸಲು ನಕಲಿ ಕಂಪನಿಗಳಿಗೆ ₹1650 ಕೋಟಿ ಪಾವತಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ನಕಲಿ ಕಂಪನಿಗಳಿಗೆ ಹಣ ಪಾವತಿಸಿದ್ದನ್ನು ಮತ್ತು ಆಸ್ತಿ ಖರೀದಿಸಿದ ಬಗ್ಗೆ ಬಾಬಿಸ್ ಅವರು ತಮ್ಮ ಆಸ್ತಿ ಘೋಷಣೆ ವೇಳೆ ಬಹಿರಂಗಪಡಿಸಿಲ್ಲ. ಬಾಬಿಸ್ ಅವರ ಪರೋಕ್ಷ ಒಡೆತನದ ರಿಯಲ್ ಎಸ್ಟೇಟ್ ಸಮೂಹ ಸಂಸ್ಥೆಯು 2018ರಲ್ಲಿ ಮೊನಾಕೊ ಕಂಪನಿಯನ್ನು ಖರೀದಿಸಿತ್ತು.

ಇದೇ ಶುಕ್ರವಾರ ಮತ್ತು ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ತಮಗೆ ಸೋಲುಣಿಸಲು ಈ ಯತ್ನ ಮಾಡಲಾಗಿದೆ ಎಂದು ಬಾಬಿಸ್ ಅವರು ಟ್ವೀಟ್ ಮಾಡಿದ್ದಾರೆ. ತಾವೇನೂ ತಪ್ಪು ಮಾಡಿಲ್ಲ ಎಂದಿದ್ದಾರೆ.

ಟೋನಿ ಬ್ಲೇರ್ ದಂಪತಿ

1997ರಿಂದ 2007ರವರೆಗೆ ಬ್ರಿಟನ್‌ನ ಪ್ರಧಾನಿಯಾಗಿದ್ದ ಟೋನಿ ಬ್ಲೇರ್ ಅವರು ₹65 ಕೋಟಿ ಮೌಲ್ಯದ ವಿಕ್ಟೋರಿಯನ್ ಕಟ್ಟಡವನ್ನು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್‌ನಲ್ಲಿ 2017ರಲ್ಲಿ ಖರೀದಿಸಿದ್ದರು. ಬ್ಲೇರ್‌ ಅವರ ಪತ್ನಿ ಚೆರ್ರಿ ಬ್ಲೇರ್ ಅವರ ಕಾನೂನು ಸಂಸ್ಥೆಯ ಕಚೇರಿಯು ಈ ಕಟ್ಟಡದಲ್ಲಿ ಇದೆ. ಬಹರೇನ್‌ ಉದ್ಯಮ ಮತ್ತು ಪ್ರವಾಸೋದ್ಯಮ ಸಚಿವ ಜಾಯೆದ್ ಬಿನ್ ರಶೀದ್ ಅಲ್-ಜಯಾನಿ ಅವರ ಕುಟುಂಬದಿಂದ ಬ್ಲೇರ್ ದಂಪತಿ ಕಂಪನಿ ಖರೀದಿಸಿದ್ದರು. ಕಟ್ಟಡದ ಬದಲಾಗಿ ಕಂಪನಿಯ ಷೇರುಗಳನ್ನು ಖರೀದಿಸಿದ್ದರಿಂದ ಇವರು ಸುಮಾರು ₹3 ಕೋಟಿ ಆಸ್ತಿ ತೆರಿಗೆ ಉಳಿಸಿದ್ದಾರೆ. ಆದರೆ ಇದರಲ್ಲಿ ತಮ್ಮ ತಪ್ಪೇನೂ ಇಲ್ಲ ಎಂದು ಚೆರ್ರಿ ಬ್ಲೇರ್ ಸಮಜಾಯಿಷಿ ನೀಡಿದ್ದಾರೆ. 

ಜೋರ್ಡನ್‌ ರಾಜ 2ನೇ ಅಬ್ದುಲ್ಲಾ

ಅಬ್ದುಲ್ಲಾ ಅವರು 1995ರಿಂದ 2017ರ ಅವಧಿಯಲ್ಲಿ ಕನಿಷ್ಠ 35 ‘ಹುಸಿ’ ಕಂಪನಿಗಳನ್ನು ತೆರೆದಿದ್ದಾರೆ. ಅವರು ಅಮೆರಿಕ ಹಾಗೂ ಬ್ರಿಟನ್‌ನಲ್ಲಿ ಸುಮಾರು ₹800 ಕೋಟಿ ಮೌಲ್ಯದ 14 ಐಷಾರಾಮಿ ಮನೆಗಳನ್ನು ಖರೀದಿಸಿದ್ದಾರೆ. ಈ ಪೈಕಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್‌ನ ₹170 ಕೋಟಿ ಮೌಲ್ಯದ ಓಷನ್‌ ವ್ಯೂ ಆಸ್ತಿಯೂ ಒಂದು.

ತಮ್ಮ ದೇಶದ ಕಾನೂನಿನ ಪ್ರಕಾರ, ಅಬ್ದುಲ್ಲಾ ಅವರು ತೆರಿಗೆ ಪಾವತಿಸಬೇಕಿಲ್ಲ ಎಂದು ಅವರ ವಕೀಲರು ಹೇಳಿದ್ದಾರೆ. ಹುಸಿ ಕಂಪನಿಗಳು ಅವರಿಗೆ ಸಂಬಂಧಿಸಿದವಲ್ಲ ಹಾಗೂ ಅವರು ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಹಗರಣದಲ್ಲಿ ಮುಳುಗಿರುವ ಸರ್ಕಾರಕ್ಕೆ ಇದು ದೊಡ್ಡ ಹೊಡೆತವಾಗಿದೆ. ಅವರ ಸಹೋದರ ಹಮ್ಜಾ ಅವರು ಆಡಳಿತ ವ್ಯವಸ್ಥೆ ಅಸಮರ್ಥವಾಗಿದೆ ಎಂದು ಆರೋಪಿಸಿದ್ದರು. ಆದರೆ ತಾನು ದುರುದ್ದೇಶಪೂರಿತ ಸಂಚಿಗೆ ಬಲಿಯಾಗಿದ್ದೇನೆ ಎಂದು ಪ್ರತಿಪಾದಿಸಿದ್ದ ಅಬ್ದುಲ್ಲಾ, ಸೋದರನನ್ನು ಗೃಹಬಂಧನದಲ್ಲಿಟ್ಟರು.

ರಷ್ಯಾ ಅಧ್ಯಕ್ಷ ಪುಟಿನ್

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೊನಾಕೊದಲ್ಲಿ ಆಸ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ. ದಾಖಲೆಗಳಲ್ಲಿ ಪುಟಿನ್ ಅವರನ್ನು ನೇರವಾಗಿ ಉಲ್ಲೇಖಿಸಲಾಗಿಲ್ಲವಾದರೂ, ಬಾಲ್ಯದ ಗೆಳೆಯ ಮತ್ತು ಮಾಜಿ ಪ್ರಿಯತಮೆ ಸೇರಿದಂತೆ ಅವರ ಹಲವಾರು ಆಪ್ತ ಸ್ನೇಹಿತರ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಲಾಗಿದೆ ಎಂದು ವರದಿಯಲ್ಲಿ ಇದೆ. 

2003ರ ಸೆಪ್ಟೆಂಬರ್‌ನಲ್ಲಿ ಮೊನಾಕೊದಲ್ಲಿ ರಹಸ್ಯ ವಹಿವಾಟು ನಡೆದಿದೆ ಎಂದು ಹೇಳಲಾಗಿದೆ. ಒಂದು ಫ್ಲ್ಯಾಟ್ ಅನ್ನು ₹31 ಕೋಟಿಗೆ ಖರೀದಿಸಲಾಗಿದೆ. ಆದಾಗ್ಯೂ, ಫ್ಲ್ಯಾಟ್ ಖರೀದಿದಾರನ ಗುರುತು ರಹಸ್ಯವಾಗಿಯೇ ಇತ್ತು. ಖರೀದಿಸಿದವರು ಸ್ವೆಟ್ಲಾನಾ ಕ್ರಿವೊನೋಗಿಕ್ ಎಂದು ವರದಿ ಹೇಳಿದ್ದು, ಇವರು ಪುಟಿನ್ ಜತೆ ಸಂಬಂಧ ಹೊಂದಿದ್ದರು ಎಂದು ತಿಳಿಸಿದೆ.

ಸಚಿನ್‌ ತೆಂಡೂಲ್ಕರ್‌

ಕಂಪನಿ: ಸಾಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌

ಹೂಡಿಕೆ ಎಲ್ಲಿ?: ಬ್ರಿಟಿಷ್‌ ಒರ್ಜಿನ್‌ ಐಲ್ಯಾಂಡ್ಸ್ (ಬಿವಿಐ)

ಸೇವೆ ಒದಗಿಸಿದ ಕಂಪನಿ: ಅಲ್ಕೋಗಲ್‌

ಹೂಡಿಕೆ ಮಾಡಲು ಸೇವೆ ಒದಗಿಸಿದ ಅಲ್ಕೋಗಲ್‌ ಕಂಪನಿಯ ದಾಖಲೆಗಳಲ್ಲಿ ಸಚಿನ್‌ ತೆಂಡೂಲ್ಕರ್‌, ಅವರ ಪತ್ನಿ ಅಂಜಲಿ ತೆಂಡೂಲ್ಕರ್‌ ಹಾಗೂ ಮಾವ ಆನಂದ್‌ ಮೆಹ್ತಾ ಅವರ ಹೆಸರಿನಲ್ಲಿ ಹೂಡಿಕೆ ಇರುವ ಮಾಹಿತಿ ಬಹಿರಂಗವಾಗಿದೆ. ಸಾಸ್‌ ಕಂಪನಿಯು 2016 ಜುಲೈನಲ್ಲಿ ದಿವಾಳಿಯಾದಾಗ, ತೆಂಡೂಲ್ಕರ್‌ ಕುಟುಂಬವು ₹ 19.90 ಕೋಟಿ ಮೌಲ್ಯದ ಷೇರುಗಳನ್ನು ವಾಪಸ್‌ ಪಡೆಯುತ್ತದೆ. ಅಂಜಲಿ ತೆಂಡೂಲ್ಕರ್‌ ಅವರು ಮೊದಲಿಗೆ 60 ಷೇರುಗಳನ್ನು ಖರೀದಿಸುತ್ತಾರೆ. 30 ಷೇರುಗಳನ್ನು ಖರೀದಿಸಿದ ಎರಡನೇ ಪ್ರಮಾಣಪತ್ರವು ಅವರ ತಂದೆಯ ಹೆಸರಿನಲ್ಲಿದೆ. ಉಳಿದ ಷೇರುಗಳನ್ನು ವಾಪಸ್‌ ಪಡೆದ ಬಗೆಗಿನ ಮಾಹಿತಿ ಇಲ್ಲ. ಆದರೆ, ಒಟ್ಟು 90 ಷೇರುಗಳ ಮೌಲ್ಯ ಅಂದಾಜು ₹ 60 ಕೋಟಿ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು