ಮಂಗಳವಾರ, ಜನವರಿ 18, 2022
23 °C

ಬೆಂಬಲಿಗರ ಜೊತೆ ಜೆಡಿಎಸ್‌ ತ್ಯಜಿಸಿ ‘ಕೈ’ ಹಿಡಿದ ಮನೋಹರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಸಿ.ಆರ್. ಮನೋಹರ್ ಅವರು ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್ ಸೇರಿದ್ದಾರೆ.

ಅವರ ಜೊತೆ, ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಮಾಲೂರು ನಾಗರಾಜ್ ಅವರು ಮಾತೃಪಕ್ಷ ಕಾಂಗ್ರೆಸ್‌ಗೆ ಮರಳಿದ್ದಾರೆ. ಅಲ್ಲದೆ, ಕಳೆದ ಚುನಾವಣೆಯಲ್ಲಿ ತರೀಕೆರೆ ಕ್ಷೇತ್ರದಿಂದ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಗೋಪಿಕೃಷ್ಣ, ಅವರ ಪತ್ನಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಸೂಯ ಕೂಡಾ ಕಾಂಗ್ರೆಸ್‌ ಸೇರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ತಮ್ಮ ಬೆಂಬಲಿಗರ ಜೊತೆ ಎಲ್ಲರೂ ಕಾಂಗ್ರೆಸ್‌ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಕಾಂಗ್ರೆಸ್ ಜಾತ್ರೆ ಆರಂಭವಾಗಿದೆ. ಪಕ್ಷದಲ್ಲಿ ಸಂಚಲನ ಉಂಟಾಗಿದೆ. ಪಕ್ಷದ ಕಡೆ ಹಲವರು ಮುಖ ಮಾಡುತ್ತಿದ್ದಾರೆ. ಮನೋಹರ್ ಅವರು ಯಾವುದೇ ಷರತ್ತು ಇಲ್ಲದೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರ ಜೊತೆ ನೂರಾರು ಬೆಂಬಲಿಗರು ಸೇರಿದ್ದಾರೆ. ಎಲ್ಲರೂ ಪಕ್ಷದ ಸಿದ್ಧಾಂತ ಒಪ್ಪಿ ಸೇರ್ಪಡೆಯಾಗಿದ್ದಾರೆ’ ಎಂದರು.

‘ಮೇಕೆದಾಟು ಯೋಜನೆಗೆ ಆಗ್ರಹಿಸಿ ಜನವರಿ ಮೊದಲ ವಾರದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ. ಕೇವಲ ಕಾವೇರಿ ಕೊಳ್ಳದವರು ಮಾತ್ರ ಈ ಹೋರಾಟದಲ್ಲಿ ಭಾಗವಹಿಸುವುದಿಲ್ಲ. ಕೋಲಾರ, ತುಮಕೂರು ಸೇರಿ ಎಲ್ಲ ಕಡೆಯಿಂದಲೂ ಭಾಗವಹಿಸಲಿದ್ದಾರೆ’ ಎಂದರು.

‘ಬಿಜೆಪಿ, ಜೆಡಿಎಸ್ ತ್ಯಜಿಸಿ ಹಲವರು ಕಾಂಗ್ರೆಸ್‌ ಕಡೆಗೆ ಬರುತ್ತಿದ್ದಾರೆ. ಜೆಡಿಎಸ್‌ನ ಕುಟುಂಬ ರಾಜಕಾರಣಕ್ಕೆ ಬೇಸತ್ತಿದ್ದಾರೆ. ಹೀಗಾಗಿ ನಮ್ಮ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ ಎನ್ನುವುದು ಇದರ ಎಂದರ್ಥ’ ಎಂದೂ ಅವರು ಹೇಳಿದರು.

ಜೆಡಿಎಸ್‌ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ: ‘ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಹೆಸರುವಾಸಿ. ಕಾರ್ಯಕರ್ತರನ್ನು ದುಡಿಸಿಕೊಳ್ಳುವುದಷ್ಟೇ ಅವರ ಕೆಲಸ. ಅವರ ( ಎಚ್‌.ಡಿ. ದೇವೇಗೌಡ ಕುಟುಂಬ) ಮನೆಯಲ್ಲಿ ಎಂಟನೆಯವರು ರಾಜಕೀಯಕ್ಕೆ ಬಂದಿದ್ದಾರೆ. ಎಲ್ಲಿ ಗೆಲ್ಲಲು ಅವಕಾಶ ಇದೆ ಅವರು ನಿಲ್ಲುತ್ತಾರೆ. ಎಲ್ಲಿ ಸೋಲುತ್ತಾರೆ ಅಲ್ಲಿ ಬೇರೆಯವರನ್ನು ಕಣಕ್ಕೆ ಇಳಿಸುತ್ತಾರೆ’ ಎಂದು ಜೆಡಿಎಸ್‌ ವಿರುದ್ಧ  ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಜೆಡಿಎಸ್ ಬಿಜೆಪಿಯ ಬಿ ಟೀಂ. ಪ್ರಧಾನಿ ಬಳಿ ಭಾಯಿ ಭಾಯಿ ಎಂದು ದೇವೇಗೌಡರು ಹೋಗಿದ್ದಾರೆ. ಅವರದ್ದು ಅನುಕೂಲ ರಾಜಕಾರಣ. ಎಲ್ಲಿ ಲಾಭ ಇರುತ್ತೋ ಅಲ್ಲಿಗೆ ಹೋಗುತ್ತಾರೆ. ಆದರೆ, ನಾವು ಅಧಿಕಾರದಲ್ಲಿ ಇಲ್ಲದಿರಬಹುದು. ಆದರೆ, ನಮ್ಮ ಸಿದ್ಧಾಂತವನ್ನು ಬಿಟ್ಟು ಕೊಟ್ಟಿಲ್ಲ’ ಎಂದರು.

‘ಅಧಿಕಾರ ಶಾಶ್ವತವಲ್ಲ, ಬರುತ್ತದೆ, ಹೋಗುತ್ತದೆ. ಆಪರೇಷನ್ ಕಮಲ ಮಾಡಿದವರು ಯಾರು? 2008ರಲ್ಲಿ ಯಡಿಯೂರಪ್ಪ ಮಾಡಿದ್ದು. ಎಲ್ಲರನ್ನು ಕೊಂಡುಕೊಳ್ಳುತ್ತೇವೆ ಎಂದು ಅವರು ಹೇಳುತ್ತಾರೆ. ದುಡ್ಡು ಎಲ್ಲಿ ಬರುತ್ತಪ್ಪ ಅವರಿಗೆ’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘ಟೆಂಡರ್‌ಗಳಲ್ಲಿ ಶೇ 40 ಕಮಿಷನ್‌ ಪಡೆಯುವ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಿಗೆ ದೂರು ಕೊಟ್ಟಿದ್ದಾರೆ. ಲಂಚಕ್ಕೆ ಇನ್ನೊಂದು ಹೆಸರೇ ಬಿಜೆಪಿ. ಬಿಜೆಪಿ ಅಂದರೆ ಭ್ರಷ್ಟ ಜನತಾ ಪಾರ್ಟಿ‘ ಎಂದು ಟೀಕಿಸಿದರು.

‘ಬಿಜೆಪಿ ಒಂದು ಕೋಮುವಾದಿ ಪಕ್ಷ. ಧರ್ಮಾಧಾರಿತವಾಗಿ ರಾಜಕಾರಣ ಮಾಡುವ ಪಕ್ಷ. ನಮ್ಮ ಪಕ್ಷ ಎಲ್ಲರನ್ನು ಸಮಾನವಾಗಿ ಕಾಣುತ್ತದೆ. ಬಿಜೆಪಿಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶವಿಲ್ಲ. ಕ್ರಿಶ್ಚಿಯನ್, ಮುಸ್ಲಿಂ, ಬುದ್ಧ, ಸಿಖ್ ಯಾರೂ ಇಲ್ಲ. ಹಿಂದುತ್ವದ ಹೆಸರಿನಲ್ಲಿ ಜನರನ್ನು ಬಿಜೆಪಿ ಒಡೆಯುತ್ತಿದೆ. ತಳ ಸಮುದಾಯಗಳ ಪರವಾದ ನಿಲುವಿಲ್ಲ’ ಎಂದೂ ದೂರಿದರು.

‘ಕೃಷಿ ಕಾಯ್ದೆ ರದ್ದುಪಡಿಸುವಂತೆ ಆಗ್ರಹಿಸಿ ಒಂದು ವರ್ಷದಿಂದ ರೈತರ ಹೋರಾಟ ನಡೆದಿದೆ. ಹೋರಾಟದಲ್ಲಿ 700 ರೈತರು ಸಾವನ್ನಪ್ಪಿದ್ದಾರೆ. ಲಖಿಂಪುರದಲ್ಲಿ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಮಗ ಹತ್ತಿಸಿದ್ದಾನೆ. ಇವರು ಇನ್ನೆಂಥ ರಾಕ್ಷಸರಿರಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಹಲವು ಯೋಜನೆಗಳನ್ನು ತಂದಿದ್ದೆವು. ಆದರೆ ಇವರು (ಬಿಜೆಪಿಯವರು) ಎಲ್ಲ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಅದಾನಿ ವಿಶ್ವದಲ್ಲೇ ನಂಬರ್ ವನ್ ಶ್ರೀಮಂತ. ಅಂಬಾನಿಗಿಂತ ದೊಡ್ಡ ಶ್ರೀಮಂತನಾಗಿದ್ದಾನೆ. ಇದಕ್ಕೆ ಪ್ರಧಾನಿ ಮೋದಿಯವರ ಕುಮ್ಮಕ್ಕಿದೆ. ಬಿ.ಕಾಂ ಓದಲು ಅದಾನಿಗೆ ಆಗಲಿಲ್ಲ. ಅಂಥವನು ಇಂದು ಏಷ್ಯಾದಲ್ಲೇ ದೊಡ್ಡ ಶ್ರೀಮಂತ’ ಎಂದೂ ವ್ಯಂಗ್ಯವಾಡಿದರು.

ಇದನ್ನೂ ಓದಿ... ಸುಳ್ಳು ಪ್ರಚಾರ ಮಾಡುವುದರಲ್ಲಿ ಆರ್‌ಎಸ್‌ಎಸ್‌ ಬಿಜೆಪಿಯ ದೊಡ್ಡಪ್ಪ: ಹರಿಪ್ರಸಾದ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು