ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿಚಡಿ ಹಗರಣ: ಲೋಕಸಭೆ ಟಿಕೆಟ್ ಘೋಷಣೆ ಬೆನ್ನಲ್ಲೇ ಅಮೋಲ್ ಕೀರ್ತಿಕರ್‌ಗೆ ED ಸಮನ್ಸ್

Published 27 ಮಾರ್ಚ್ 2024, 5:26 IST
Last Updated 27 ಮಾರ್ಚ್ 2024, 5:26 IST
ಅಕ್ಷರ ಗಾತ್ರ

ಮುಂಬೈ: ಬೃಹನ್ ಮುಂಬೈ ನಗರ ಪಾಲಿಕೆಯಲ್ಲಿ (ಬಿಎಂಸಿ) ನಡೆದಿದ್ದ ಖಿಚಡಿ ಹಗರಣದ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇಂದು ಶಿವಸೇನಾ (ಉದ್ಧವ್‌ ಬಣ) ನಾಯಕ, ಅಮೋಲ್ ಕೀರ್ತಿಕರ್‌ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಕೋವಿಡ್‌ ಅವಧಿಯಲ್ಲಿ ಮುಂಬೈನ ವಿವಿಧೆಡೆ ಅತಂತ್ರರಾಗಿ ಉಳಿದಿದ್ದ ವಲಸಿಗ ನೌಕರರಿಗೆ ಆಹಾರದ ಪ್ಯಾಕೆಟ್‌ ವಿತರಿಸುವ ಕೆಲಸದ ಗುತ್ತಿಗೆ ನೀಡುವಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿರುವ ಕುರಿತ ಹಗರಣ ಇದಾಗಿದೆ.

ಆದಿತ್ಯ ಠಾಕ್ರೆ ಅವರ ಆಪ್ತ, ಯುವಸೇನೆ ಪದಾಧಿಕಾರಿ ಸೂರಜ್‌ ಚವಾಣ್‌ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಬಂಧಿಸಿದೆ. ಗುತ್ತಿಗೆ ನೀಡುವಲ್ಲಿನ ಅಕ್ರಮದಲ್ಲಿ ಇವರು ₹1.35 ಕೋಟಿ ಲಾಭ ಮಾಡಿಕೊಂಡಿದ್ದಾರೆ ಎಂದು ಇ.ಡಿ ಆರೋಪಿಸಿದೆ.

ಇದೇ ಹಗರಣದ ಸಂಬಂಧ ಇ.ಡಿ ಅಧಿಕಾರಿಗಳು ಮಂಗಳವಾರ ಸಂಸದ ಸಂಜಯ್ ರಾವುತ್ ಅವರ ತಮ್ಮ ಸಂದೀಪ್‌ ರಾವುತ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

‘ನಾನು ಹಿಂದೆ ತಪ್ಪು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ’ ಎಂದು ವಿಚಾರಣೆಯ ಬಳಿಕ ಸಂದೀಪ್‌ ಪ್ರತಿಕ್ರಿಯಿಸಿದ್ದರು. ಇ.ಡಿ ಇವರನ್ನು ಸುಮಾರು ಆರು ಗಂಟೆ ವಿಚಾರಣೆಗೆ ಒಳಪಡಿಸಿತ್ತು.

ಅಮೋಲ್ ಕೀರ್ತಿಕರ್‌ ಅವರಿಗೆ ಇ.ಡಿ ಸಮನ್ಸ್ ಜಾರಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಂಸದ ಸಂಜಯ್ ರಾವುತ್, ‘ಲೋಕಸಭೆ ಚುನಾವಣಾ ಅಭ್ಯರ್ಥಿಯಾಗಿ ಕೀರ್ತಿಕರ್‌ ಹೆಸರನ್ನು ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಅವರಿಗೆ ಇ.ಡಿಯಿಂದ ಸಮನ್ಸ್ ಬಂದಿದೆ. ಇದು ಕೇವಲ ಹೆದರಿಸುವ ಪ್ರಯತ್ನವಾಗಿದೆ. ಆದರೆ, ನಾವು ಭಯಪಡುವುದಿಲ್ಲ’ ಎಂದಿದ್ದಾರೆ.

ಕೀರ್ತಿಕರ್‌ಗೆ ಟಿಕೆಟ್: ಮುಂಬರುವ ಲೋಕಸಭೆ ಚುನಾವಣೆಗೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ತನ್ನ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಬುಧವಾರ) ಬಿಡುಗಡೆ ಮಾಡಿದ್ದು, ಮುಂಬೈ ವಾಯುವ್ಯ ಕ್ಷೇತ್ರದಿಂದ ಅಮೊಲ್ ಕೀರ್ತಿಕರ್ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT