ಈ ವರ್ಷ ಚೆಸ್ ಆಟವು ಭಾರತದ ಪಾಲಿಗೆ ಸಂಭ್ರಮದ ಹೊನಲು ಹರಿಸಿದೆ. ಇದನ್ನು ಹೆಚ್ಚಿಸುವಂತೆ ಗ್ರ್ಯಾಂಡ್ಮಾಸ್ಟರ್ ಕೋನೇರು ಹಂಪಿ ಅವರು ವರ್ಷದ ಕೊನೆಯಲ್ಲಿ ನ್ಯೂಯಾರ್ಕ್ನ ವಾಲ್ಸ್ಟ್ರೀಟ್ನಲ್ಲಿ ನಡೆದ ಮಹಿಳಾ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದುಕೊಂಡರು. ಜಾರ್ಜಿಯಾದಲ್ಲಿ 2019ರಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲೂ ಚಿನ್ನ ಗೆದ್ದಿದ್ದ ಹಂಪಿ, ಈ ಪ್ರಶಸ್ತಿಯನ್ನು ಎರಡನೇ ಬಾರಿ ಗೆದ್ದ ವಿಶ್ವದ ದ್ವಿತೀಯ ಆಟಗಾರ್ತಿ ಎನಿಸಿದರು.

ಈ ಬಾರಿ ಬೆಳ್ಳಿ ಗೆದ್ದ ಚೀನಾದ ಜು ವೆನ್ಜುನ್ ಮಾತ್ರ ಈ ಹಿಂದೆ ಎರಡು ಬಾರಿ ಚಾಂಪಿಯನ್ ಆಗಿದ್ದರು. ಈ ಚಾಂಪಿಯನ್ಷಿಪ್ನಲ್ಲಿ ಹಂಪಿ ಮೊದಲ ಸುತ್ತು ಸೋತ ನಂತರ ಚೇತರಿಸಿಕೊಂಡ ರೀತಿ ಗಮನಾರ್ಹ. ಅವರು 11 ಸುತ್ತುಗಳಿಂದ 8.5 ಪಾಯಿಂಟ್ಸ್ ಸಂಗ್ರಹಿಸಿದರು. 2022ರ ಬ್ಲಿಟ್ಜ್ ಚಾಂಪಿಯನ್ಷಿಪ್ನಲ್ಲಿ ಹಂಪಿ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಈ ವರ್ಷ ಆಡಿದ ಟೂರ್ನಿಗಳಲ್ಲಿ ಅವರಿಂದ ಉತ್ತಮ ಸಾಧನೆ ಕಂಡುಬಂದಿರಲಿಲ್ಲ. ಜೂನ್ನಲ್ಲಿ ನಡೆದ ನಾರ್ವೆ ಚೆಸ್ ಟೂರ್ನಿಯಲ್ಲಿ ಕೊನೆಯಿಂದ ಎರಡನೇ ಸ್ಥಾನ ಪಡೆದಿದ್ದರು. ನವೆಂಬರ್ನಲ್ಲಿ ನಡೆದ ಟಾಟಾ ಸ್ಟೀಲ್ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಅವರು ಕೊನೆಯ ಸ್ಥಾನ ಗಳಿಸಿದ್ದರು.

ಈ ವರ್ಷ ಒಲಿಂಪಿಯಾಡ್ನಲ್ಲಿ ಚಾರಿತ್ರಿಕ ಚಿನ್ನ ಗೆದ್ದ ಭಾರತ ತಂಡದಲ್ಲಿ ಅವರಿಗೆ ಸ್ಥಾನವಿರಲಿಲ್ಲ. ಹೀಗಾಗಿ, 37 ವರ್ಷ ವಯಸ್ಸಿನ ಈ ಆಟಗಾರ್ತಿಯ ಹೆಸರು ಈ ಟೂರ್ನಿ ಗೆಲ್ಲುವ ನೆಚ್ಚಿನ ಆಟಗಾರ್ತಿಯರ ಪಟ್ಟಿಯಲ್ಲಿ ಸೇರಿರಲಿಲ್ಲ. ‘ಈ ವರ್ಷ ನನ್ನ ಆಟ ಉತ್ತಮವಾಗಿರಲಿಲ್ಲ. ಕೆಲವು ಪಂದ್ಯಗಳನ್ನು ದಯನೀಯವಾಗಿ ಸೋತಿದ್ದೆ’ ಎಂದು ಸ್ವತಃ ಹಂಪಿ ಅವರೇ ಹೇಳಿದ್ದಾರೆ. ಆದರೆ ಈ ಮಾದರಿಯ ವಿಶ್ವ ಚಾಂಪಿಯನ್ಷಿಪ್ನಲ್ಲಿ ಹಿಂದೆ ತೋರಿದ ಸಾಧನೆ, ಬೆನ್ನಿಗಿದ್ದ ಕುಟುಂಬದ ಪ್ರೋತ್ಸಾಹ ಅವರನ್ನು ಮತ್ತೆ ಉತ್ಸಾಹದಿಂದ ಕಣಕ್ಕಿಳಿಯಲು ಪ್ರೇರೇಪಿಸಿತು. ಮೊದಲ ಸುತ್ತಿನಲ್ಲಿ ಸೋತರೂ ಅವರು ಧೃತಿಗೆಡಲಿಲ್ಲ. ಆರನೇ ಸುತ್ತಿನಲ್ಲಿ ಭಾರತದ ವಂತಿಕಾ ಅಗರವಾಲ್ ಮತ್ತು ಎಂಟನೇ ಸುತ್ತಿನಲ್ಲಿ ಜಾರ್ಜಿಯಾದ ನೀನೊ ಬಾಟ್ಸಿಯಾಶ್ವಿಲಿ ವಿರುದ್ಧ ಗೆಲುವು ಪಡೆದ ರೀತಿ ಅವರ ಉತ್ಸಾಹವನ್ನು ಹೆಚ್ಚಿಸಿತು. ಇಲ್ಲಿನ ಗೆಲುವು ಆಂಧ್ರ ಪ್ರದೇಶದ ಗುಡಿವಾಡದ ಆಟಗಾರ್ತಿಯ ಸಂಕಲ್ಪ, ಇಚ್ಛಾಶಕ್ತಿಗೆ ಸಂದ ಯಶಸ್ಸು. 15ನೇ ವಯಸ್ಸಿನಲ್ಲಿ ಗ್ರ್ಯಾಂಡ್ಮಾಸ್ಟರ್ ಪಟ್ಟ ಪಡೆದ ದೇಶದ ಮೊದಲ ಆಟಗಾರ್ತಿ ಎನಿಸಿದ್ದ ಹಂಪಿ, ತಮ್ಮಲ್ಲಿ ಇನ್ನೂ ಆಟದ ಕಸುವು ಉಳಿದಿದೆ ಎಂಬುದನ್ನು ಸಾಬೀತುಪಡಿಸಿದರು. ಅರ್ಧ ಪಾಯಿಂಟ್ ಅಂತರದಿಂದ ಅವರು ಅಗ್ರಸ್ಥಾನ ಪಡೆದರು. ಆರು ಮಂದಿ ಆಟಗಾರ್ತಿಯರು ತಲಾ ಎಂಟು ಪಾಯಿಂಟ್ಸ್ ಪಡೆದರು. ಇವರಲ್ಲಿ ಒಬ್ಬರಾದ ಭಾರತದ ಗ್ರ್ಯಾಂಡ್ಮಾಸ್ಟರ್ ದ್ರೋಣವಲ್ಲಿ ಹಾರಿಕಾ ಟೈಬ್ರೇಕರ್ನಲ್ಲಿ ಐದನೇ ಸ್ಥಾನ ಪಡೆದರು.

ಓಪನ್ ವಿಭಾಗದಲ್ಲಿ ಮೊದಲ ಮೂರು ಸ್ಥಾನ ರಷ್ಯಾದ ಆಟಗಾರರ ಪಾಲಾಗಿದ್ದು ಗಮನಾರ್ಹ. ವಿಶ್ವ ಚೆಸ್ನಲ್ಲಿ ರಷ್ಯಾ ಹಿಂದಿನ ಹಿಡಿತ ಕಳೆದುಕೊಳ್ಳುತ್ತಿದೆ ಎನ್ನುವ ಮಾತು ಕೇಳಿಬರುತ್ತಿರುವಾಗಲೇ ಈ ಸಾಧನೆ ದಾಖಲಾಗಿದೆ. ಎಲ್ಲರ ನಿರೀಕ್ಷೆ ಮೀರಿ ಆ ದೇಶದ 18 ವರ್ಷ ವಯಸ್ಸಿನ ವಾಲೊಡರ್ ಮುರ್ಝೀನ್ ಚಾಂಪಿಯನ್ (13 ಸುತ್ತುಗಳಿಂದ 10 ಪಾಯಿಂಟ್ಸ್) ಎನಿಸಿದರು. ವಿಶ್ವದ ಅಗ್ರಮಾನ್ಯ ಆಟಗಾರ ಕಾರ್ಲ್ಸನ್ ಅವರನ್ನು ವಸ್ತ್ರಸಂಹಿತೆ ಉಲ್ಲಂಘನೆಗಾಗಿ ಕೂಟದ ಅರ್ಧದಲ್ಲೇ ಅನರ್ಹ ಗೊಳಿಸಿದ್ದು ಚರ್ಚೆಯ ವಿಷಯವಾಯಿತು. 9 ಪಾಯಿಂಟ್ಸ್ ಗಳಿಸಿದ ಭಾರತದ ಆಟಗಾರ ಅರ್ಜುನ್ ಇರಿಗೇಶಿ ಎರಡನೇ ದಿನದವರೆಗೂ ಮುನ್ನಡೆ ಹಂಚಿಕೊಂಡಿದ್ದರು. ಆದರೆ ಅಂತಿಮವಾಗಿ ಐದನೇ ಸ್ಥಾನ ಪಡೆಯಬೇಕಾಯಿತು. ಅಪಾರ ಬುದ್ಧಿಮತ್ತೆ ಬೇಡುವ ಈ ಆಟದಲ್ಲಿ ಭಾರತ ಈ ವರ್ಷ ಅಭೂತಪೂರ್ವ ಯಶಸ್ಸು ಕಂಡಿದೆ. ಜೂನ್ನಲ್ಲಿ ಗುಜರಾತ್ನ ಗಾಂಧಿನಗರದಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ನಾಗ್ಪುರದ ದಿವ್ಯಾ ದೇಶಮುಖ್ ಚಾಂಪಿಯನ್ ಆಗಿದ್ದರು. ಸೆಪ್ಟೆಂಬರ್ನಲ್ಲಿ ಹಂಗೆರಿಯ ಬುಡಾಪೆಸ್ಟ್ನಲ್ಲಿ ನಡೆದ 45ನೇ ಒಲಿಂಪಿಯಾಡ್ನಲ್ಲಿ ಓಪನ್ ಮತ್ತು ಮಹಿಳಾ ವಿಭಾಗಗಳಲ್ಲಿ ಭಾರತ ಮೊದಲ ಬಾರಿಗೆ ಚಿನ್ನ ಗೆದ್ದುಕೊಂಡಿತು. ಇದರ ಜೊತೆಗೆ ಎರಡೂ ವಿಭಾಗಗಳಲ್ಲಿ ತಲಾ ಎರಡು ವೈಯಕ್ತಿಕ ಚಿನ್ನದ ಪದಕಗಳು ಭಾರತದ ಪ್ರಾಬಲ್ಯಕ್ಕೆ ಪುರಾವೆಯಾದವು. ನವೆಂಬರ್–ಡಿಸೆಂಬರ್ನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ಗುಕೇಶ್ ದೊಮ್ಮರಾಜು ಅವರು ಅತಿ ಕಿರಿಯ ಚಾಂಪಿಯನ್ ಗೌರವಕ್ಕೆ ಪಾತ್ರರಾದರು. ವಿಶ್ವ ಕ್ರಮಾಂಕಪಟ್ಟಿಯಲ್ಲೂ ಭಾರತದ ಆಟಗಾರರು ದಾಪುಗಾಲಿಟ್ಟರು. ಡಿಸೆಂಬರ್ ತಿಂಗಳ ಫಿಡೆ ರ್ಯಾಂಕಿಂಗ್ ಪಟ್ಟಿಯ ಅಗ್ರ 10ರಲ್ಲಿ ಭಾರತದ ಅರ್ಜುನ್ ಇರಿಗೇಶಿ, ಗುಕೇಶ್ ಮತ್ತು ವಿಶ್ವನಾಥನ್ ಆನಂದ್ ಕ್ರಮವಾಗಿ ನಾಲ್ಕು, ಐದು ಮತ್ತು ಹತ್ತನೇ ಸ್ಥಾನ ಪಡೆದಿದ್ದಾರೆ. ಇವೆಲ್ಲವೂ ಭಾರತವು ಚೆಸ್ ಜಗತ್ತಿನ ಪ್ರಬಲ ಶಕ್ತಿಯಾಗುತ್ತಿರುವುದರ ದ್ಯೋತಕ. ಯುವ ಉತ್ಸಾಹಿಗಳ ಜೊತೆ ಹಂಪಿ ಅಂಥ ಅನುಭವಿ ಆಟಗಾರ್ತಿ ಉತ್ತಮ ಪ್ರದರ್ಶನ ನೀಡಿರುವುದು ಆಶಾದಾಯಕ ಬೆಳವಣಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.