ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IPL 2022 RCB vs CSK: ಚೆನ್ನೈ ಸೂಪರ್ ಕಿಂಗ್ಸ್‌ಗೆ ಮೊದಲ ಜಯ

ನವಿ ಮುಂಬೈ: ಸಿಕ್ಸರ್-ಬೌಂಡರಿಗಳೊಂದಿಗೆ ರಂಜಿಸಿದ ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಅಬ್ಬರಿಸಿದರು. ಅವರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ 15ನೇ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದಲ್ಲಿ ರಾಬಿನ್‌–ಶಿವಂ ಬ್ಯಾಟಿನಿಂದ ಒಟ್ಟು 17 ಸಿಕ್ಸರ್ ಮತ್ತು 9 ಬೌಂಡರಿಗಳು ಸಿಡಿದವು. ಇದರ ಫಲವಾಗಿ ತಂಡ 4ಕ್ಕೆ 216 ರನ್ ಕಲೆ ಹಾಕಿತು. ಇದು, ಐಪಿಎಲ್‌ನ 15ನೇ ಆವೃತ್ತಿಯಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿದೆ. ಮೂರನೇ ವಿಕೆಟ್‌ಗೆ 165 ರನ್ ಸೇರಿಸಿದ ರಾಬಿನ್‌–ಶಿವಂ ಜೋಡಿ ಶತಕದಿಂದ ವಂಚಿತರಾದರು. ಆದರೆ ಇಬ್ಬರೂ ವೈಯಕ್ತಿಕ ಗರಿಷ್ಠ ರನ್‌ ದಾಖಲಿಸುವಲ್ಲಿ ಯಶಸ್ವಿಯಾದರು.

ಗುರಿ ಬೆನ್ನತ್ತಿದ ಬೆಂಗಳೂರು ತಂಡದ ಶಹಬಾಸ್ ಅಹಮ್ಮದ್, ದಿನೇಶ್ ಕಾರ್ತಿಕ್ ಮತ್ತು ಪದಾರ್ಪಣೆ ಪಂದ್ಯ ಆಡಿದಸುಯಜ್ ಪ್ರಭುದೇಸಾಯಿ ಅವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಮಿಂಚಲು ಆಗಲಿಲ್ಲ. ತಂಡ 9 ವಿಕೆಟ್‌ಗೆ 193 ರನ್ ಗಳಿಸಿ 23 ರನ್‌ಗಳ ಸೋಲೊಪ್ಪಿಕೊಂಡಿತು.

ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಚೆನ್ನೈ ಸೂಪರ್‌ ಕಿಂಗ್ಸ್‌ ಕೇವಲ 19 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತ್ತು. ಮೂರು ಬೌಂಡರಿ ಸಿಡಿಸಿ ಭರವಸೆ ಮೂಡಿಸಿದ್ದ ಋತುರಾಜ್ ಗಾಯಕವಾಡ್ ಈ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಿದ ಜೋಶ್ ಹ್ಯಾಜಲ್‌ವುಡ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಸುಯಶ್‌ ಪ್ರಭುದೇಸಾಯಿ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಮಿಂಚಿನ ಆಟಕ್ಕೆ ಮೋಯಿನ್ ಅಲಿ ವಿಕೆಟ್ ಕಳೆದುಕೊಂಡರು. ಗ್ಲೆನ್ ಮ್ಯಾಕ್ಸ್‌ವೆಲ್ ಹಾಕಿದ ಏಳನೇ ಓವರ್‌ನ ನಾಲ್ಕನೇ ಎಸೆತವನ್ನು ಅಲಿ ಕಟ್ ಮಾಡಿದ್ದರು. ಚೆಂಡು ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿದ್ದ ಸುಯಶ್‌ ಕಡೆಗೆ ಸಾಗಿತು. ಚುರುಕಿನ ಫೀಲ್ಡಿಂಗ್ ಮಾಡಿದ ಅವರು ನಿಖರ ಥ್ರೋ ಮಾಡಿದರು. ದಿನೇಶ್ ಕಾರ್ತಿಕ್ ಸೊಗಸಾಗಿ ಬೇಲ್ಸ್ ಎಗರಿಸಿದರು.

ನಂತರ ರಾಬಿನ್ ಮತ್ತು ಶಿವಂ ಅಟ ರಂಗೇರಿತು. ಎಂಟನೇ ಓವರ್‌ನಲ್ಲಿ ಇಬ್ಬರೂ ತಲಾ ಒಂದೊಂದು ಬೌಂಡರಿ ಗಳಿಸುವ ಮೂಲಕ ಆಕ್ರಮಣಕಾರಿ ಆಟದ ಮುನ್ಸೂಚನೆ ನೀಡಿದರು. ನಂತರ ರನ್ ಮಳೆ ಸುರಿಯಿತು. 13ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಮೂರು ಬಾರಿ ಸಿಕ್ಸರ್‌ಗೆ ಎತ್ತಿದ ರಾಬಿನ್ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು.

16ನೇ ಓವರ್‌ನಲ್ಲಿ ಹ್ಯಾಜಲ್‌ವುಡ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ರಾಬಿನ್ 100 ರನ್‌ಗಳ ಜೊತೆಯಾಟ ಪೂರೈಸಿದರು. ಸಿರಾಜ್ ಹಾಕಿದ 17ನೇ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿದರು. 18ನೇ ಓವರ್‌ನಲ್ಲಿ ಶಿವಂ ಎರಡು ಸಿಕ್ಸರ್‌ ಗಳಿಸಿದರು. ಆದರೆ ಉತ್ತಪ್ಪ ವಿಕೆಟ್ ಕಳೆದುಕೊಂಡರು. ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್‌ಗಳ ಮೂಲಕ ಶಿವಂ ಶತಕದತ್ತ ದಾಪುಗಾಲು ಹಾಕಿದರು. ಆದರೆ ಕೊನೆಯ ಎಸೆತದಲ್ಲಿ ಎಡವಿದರು. ಸಿಕ್ಸರ್‌ಗೆಂದು ಎತ್ತಿದ ಚೆಂಡು ಲಾಂಗ್‌ಆನ್‌ನಲ್ಲಿ ಫಫ್ ಡುಪ್ಲೆಸಿ ಬಳಿ ಸಾಗಿತು. ಅವರು ಕ್ಯಾಚ್ ಕೈಚೆಲ್ಲಿದರು. ಆದರೆ ದುಬೆ ಶತಕದ ಕನಸು ನನಸಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT