ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಮೂರನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಐತಿಹಾಸಿಕ ಲಾರ್ಡ್ಸ್ ಮೈದಾನ ಆತಿಥ್ಯ ವಹಿಸಲಿದೆ.
ಈ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಘೋಷಣೆ ಮಾಡಿದ್ದು, ಫೈನಲ್ ಪಂದ್ಯವು 2025ರ ಜೂನ್ 11ರಿಂದ 15ರವರೆಗೆ ನಡೆಯಲಿದೆ. ಜೂನ್ 16 ಮೀಸಲು ದಿನವಾಗಿರಲಿದೆ.
2021ರಲ್ಲಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕೆ ಸೌಥಾಂಪ್ಟನ್ ಮತ್ತು 2023ರಲ್ಲಿ ಎರಡನೇ ಆವೃತ್ತಿಗೆ ಓವಲ್ ಮೈದಾನ ಆತಿಥ್ಯ ವಹಿಸಿತ್ತು.
2021ರಲ್ಲಿ ನ್ಯೂಜಿಲೆಂಡ್ ಮತ್ತು 2023ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಆಲಂಕರಿಸಿತ್ತು. ಎರಡೂ ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ ರನ್ನರ್-ಅಪ್ ಎನಿಸಿಕೊಂಡಿತ್ತು.
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಫೈನಲ್‌ನಲ್ಲಿ ಟ್ರೋಫಿಗಾಗಿ ಸೆಣಸಲಿವೆ. 2023ರಿಂದ 2025ರವರೆಗಿನ ಮೂರನೇ ಆವೃತ್ತಿಯಲ್ಲಿ ಸದ್ಯ ಭಾರತ ಅಗ್ರಸ್ಥಾನದಲ್ಲಿದ್ದು, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.
ಇದರೊಂದಿಗೆ ಸತತ ಮೂರನೇ ಸಲ ಫೈನಲ್‌ಗೆ ಪ್ರವೇಶಿಸಿ ಟ್ರೋಫಿ ಗೆಲ್ಲುವ ಉತ್ತಮ ಅವಕಾಶ ರೋಹಿತ್ ಶರ್ಮಾ ಬಳಗದ ಮುಂದಿದೆ.
WTC ಅಂಕಪಟ್ಟಿ ಇಂತಿದೆ: