ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ‘ಸಗಟು ಖರೀದಿ’: ಸಿದ್ದರಾಮಯ್ಯ ಕಿಡಿ

Last Updated 23 ಜುಲೈ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕರ ಖರೀದಿಯನ್ನು ಸಗಟು, ಚಿಲ್ಲರೆ ವ್ಯಾಪಾರಕ್ಕೆ ಹೋಲಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್– ಜೆಡಿಎಸ್‌ನ 15 ಶಾಸಕರನ್ನು ಸಗಟು ವ್ಯಾಪಾರ ಮಾಡಿ ಬಿಜೆಪಿಯವರು ಕೊಂಡುಕೊಂಡಿದ್ದಾರೆ ಎಂದು ಮಂಗಳವಾರ ಟೀಕಿಸಿದರು.

ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿ, ಶಾಸಕರ ಸಗಟು ಖರೀದಿ, ಪಕ್ಷಾಂತರ, ವಿಪ್ ಉಲ್ಲಂಘನೆ ಪ್ರಜಾಪ್ರಭುತ್ವಕ್ಕೆ ಅಂಟಿರುವ ರೋಗ. ಈ ಅಂಟುರೋಗ ಇದೇ ರೀತಿ ಬೆಳೆಯಲು ಬಿಟ್ಟರೆ ಮುಂದಿನ ದಿನಗಳಲ್ಲಿ ಯಾವ ಸರ್ಕಾರವೂ ಉಳಿಯುವುದಿಲ್ಲ. ಪ್ರಜಾಪ್ರಭುತ್ವದ ಬೇರು ಅಲುಗಾಡಿಸುವ ದೊಡ್ಡ ಅಪಚಾರ ನಡೆಯುತ್ತಿದ್ದು, ಸಿದ್ಧಾಂತ, ಮೌಲ್ಯಾಧಾರಿತ ರಾಜಕಾರಣ ಮಾಡುವವರಿಗೆ ಇಲ್ಲಿ ಜಾಗ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿ.ಎಸ್.ಯಡಿಯೂರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ, ‘ಪ್ರಜಾಪ್ರಭುತ್ವ ಕೊಲೆಮಾಡಿ ಅಧಿಕಾರದಲ್ಲಿ ಇರುತ್ತೇವೆ ಎಂದುಕೊಂಡಿದ್ದರೆ ಅದೇ ನಿಮಗೆ ತಿರುಗು ಬಾಣವಾಗಲಿದೆ. ವಾಮಮಾರ್ಗದಿಂದ ಸರ್ಕಾರ ರಚಿಸಿದವರು ಅಧಿಕ ಸಮಯ ಅಧಿಕಾರದಲ್ಲಿ ಉಳಿದಿಲ್ಲ. ಈಗ ನೀವೂ ಸರ್ಕಾರ ರಚಿಸಿದರೆ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಅಧಿಕಾರ ಮಾಡುವುದು ಕಷ್ಟಕರ. ಹಿಂದೆ ಪಕ್ಷೇತರರ ಬೆಂಬಲ ಪಡೆದು ಮುಖ್ಯಮಂತ್ರಿ ಆಗಿದ್ದರೂ, ಆಪರೇಷನ್ ಕಮಲ ಮಾಡಿದ್ದೀರಿ. ಕೊನೆಗೆ ನಿಮ್ಮ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡಿಸಿದ ಸಮಯದಲ್ಲಿ ಶಾಸಕರನ್ನು ಅನರ್ಹಗೊಳಿಸಿ ಅಧಿಕಾರ ಉಳಿಸಿಕೊಂಡಿದ್ದೀರಿ. ಮುಂದಿನ ದಿನಗಳಲ್ಲಿ ನಿಮಗೂ ಇದೇ ಗತಿ ಬರಲಿದೆ’ ಎಂದು ಚುಚ್ಚಿದರು.

‘ಶಾಸಕರ ರಾಜೀನಾಮೆಗೂ, ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಯಡಿಯೂರಪ್ಪ ಅವರು ಹೇಳುತ್ತಾರೆ. ಇದನ್ನು ಬಿಜೆಪಿಯವರೇ ಮಾಡುತ್ತಿರುವುದು ಎಂಬುದುಒಬ್ಬ ಸಾಮಾನ್ಯ ವ್ಯಕ್ತಿಗೂ ಗೊತ್ತಿದೆ. ಹಿಂಬಾಗಿಲಿನಿಂದ ಬಂದು ಪಕ್ಷಾಂತರ ಮಾಡಿಸಿ
ಅಧಿಕಾರಕ್ಕೆ ಬಂದರೆ ಜನರು ಕ್ಷಮಿಸುವುದಿಲ್ಲ. ಶಾಸಕರಿಗೆ ₹25, ₹30 ಕೋಟಿ ಕೊಟ್ಟು ಖರೀದಿಸಲು ಹಣ ಎಲ್ಲಿಂದ ಬಂತು ಎಂಬ ವಿಚಾರವನ್ನು ಜನರ ಮುಂದಿಡಬೇಕು. ಶಾಸಕರ ಖರೀದಿಯಲ್ಲಿ ಬಿಜೆಪಿ ಕೈವಾಡ ಇಲ್ಲ ಎಂದು ಎಷ್ಟೇ ಬಣ್ಣದ ಮಾತು ಹೇಳಿದರೂ ಯಾರಾದರೂ ನಂಬುತ್ತಾರೆಯೆ’ ಎಂದು ಟೀಕಿಸಿದರು.

ರಾಜಕೀಯ ಸಮಾಧಿ

‘ರಾಜೀನಾಮೆ ಕೊಡಿಸಿ ಕರೆದುಕೊಂಡು ಹೋಗಿರುವ ಶಾಸಕರನ್ನು ರಾಜಕೀಯವಾಗಿ ಸಮಾಧಿ ಮಾಡಲು ಹೊರಟಿದ್ದೀರಿ. ಮುಂದೆ ಅವರು ಶಾಸಕರಾಗುವುದು, ಯಾವುದೇ ಅಧಿಕಾರ ಹೊಂದುವುದು ಕಷ್ಟಕರ’ ಎಂದು ಸಿದ್ದರಾಮಯ್ಯ ಕುಟುಕಿದರು.

2008ರಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ ಕೆಲವರು ಮಾತ್ರ ಉಪಚುನಾವಣೆಯಲ್ಲಿ ಗೆದ್ದರು. 2013ರ ಚುನಾವಣೆಯಲ್ಲಿ ಪಕ್ಷಾಂತರಿಗಳು ಗೆಲ್ಲಲು ಸಾಧ್ಯವೇ ಆಗಲಿಲ್ಲ. ಈಗ ರಾಜೀನಾಮೆ ನೀಡಿದ ಶಾಸಕರಿಗೂ ಅದೇ ಗತಿ ಬರಲಿದೆ ಎಂದು ಎಚ್ಚರಿಸಿದರು.

15 ಶಾಸಕರಿಗೆ 50 ಬೌನ್ಸರ್ ರಕ್ಷಣೆ

ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿರುವ 15 ಶಾಸಕರಿಗೆ 300 ಪೊಲೀಸರ ಭದ್ರತೆ ಒದಗಿಸಲಾಗಿದ್ದು, ಮಫ್ತಿಯಲ್ಲಿ 50 ಪೊಲೀಸರನ್ನು ನಿಯೋಜಿಸಲಾಗಿದೆ. 50 ಬೌನ್ಸರ್‌ಗಳ ರಕ್ಷಣೆ ನೀಡಲಾಗಿದೆ. ಇಷ್ಟೊಂದು ರಕ್ಷಣೆ ನೀಡಿರುವುದನ್ನು ಗಮನಿಸಿದರೆ ಇದನ್ನು ಪ್ರಜಾಪ್ರಭುತ್ವ ಎಂದು ಕರೆಯಬೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

**

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT