ಶುಕ್ರವಾರ, 25 ಜುಲೈ 2025
×
ADVERTISEMENT
ADVERTISEMENT

ಹವಾಲಾ ಎಂದರೆ ಏನು? ಹೇಗೆ ನಡೆಯುತ್ತೆ ವ್ಯವಹಾರ?

Published : 6 ಸೆಪ್ಟೆಂಬರ್ 2019, 12:22 IST
ಫಾಲೋ ಮಾಡಿ
0
ಹವಾಲಾ ಎಂದರೆ ಏನು? ಹೇಗೆ ನಡೆಯುತ್ತೆ ವ್ಯವಹಾರ?

ಬೆಂಗಳೂರು:‘ಹವಾಲಾ...’ ಇತ್ತೀಚೆಗೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಸಂಗತಿ. ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಡಿ.ಕೆ ಶಿವಕುಮಾರ್‌ ಮತ್ತು ಪಿ ಚಿದಂಬರಂ ಅವರು ಬಂಧನಕ್ಕೀಡಾಗುತ್ತಲೇ ಹವಾಲಾ ಮತ್ತು ಅಕ್ರಮ ಹಣ ವರ್ಗಾವಣೆ ಎಂಬ ವಿಚಾರಗಳು ಹೆಚ್ಚೆಚ್ಚು ಚರ್ಚೆಯಾಗುತ್ತಿವೆ.

ADVERTISEMENT
ADVERTISEMENT

ಹವಾಲಾ ಎಂದರೆ ನಿಜಕ್ಕೂ ಏನು? ಅದು ಹೇಗೆ ನಡೆಯುತ್ತದೆ? ಈ ಚಟುವಟಿಕೆ ಅಕ್ರಮವೇ? ಎಂಬುದರ ಬಗ್ಗೆ ಒಬ್ಬೊಬ್ಬರದ್ದೂ ಒಂದೊಂದು ಮಾತು. ಈ ಬಗ್ಗೆ ಇಲ್ಲಿದೆ ವಿವರಣೆ.

ಹವಾಲಾ ಅಂದರೇನು?

ADVERTISEMENT

‘ನಂಬಿಕೆ’ ಎಂಬುದು ಹವಾಲಾ ಪದದ ನಿಜವಾದ ಅರ್ಥ. ಹಣ ವರ್ಗಾವಣೆ, ಸಂದಾಯಕ್ಕೆ ಇದೊಂದು ಬಹು ಪ್ರಾಚೀನವಾದ, ಬ್ಯಾಂಕ್‌ಗಳಿಗೆಪರ್ಯಾಯ ವ್ಯವಸ್ಥೆ. ಸದ್ಯ ಜಗತ್ತಿನಾದ್ಯಂತ ವ್ಯಾಪಕವಾಗಿ ಮತ್ತು ಅಷ್ಟೇ ರಹಸ್ಯವಾಗಿ ನಡೆಯುತ್ತಿರುವ ಹವಾಲಾ ಹುಟ್ಟಿದ್ದು ದಕ್ಷಿಣ ಏಷ್ಯಾದಲ್ಲಿ ಎಂಬ ಮಾತುಗಳೂ ಇವೆ.

ಭಾರತದಲ್ಲಿ ಪಾಶ್ಚಾತ್ಯ ಹಣಕಾಸು ವ್ಯವಸ್ಥೆ, ಬ್ಯಾಂಕಿಂಗ್‌ ಕಾಲಿಡುವುದಕ್ಕೂ ಮೊದಲು ಹವಾಲಾ ಮೂಲಕವೇ ಹಣದ ವರ್ಗಾವಣೆ ನಡೆಯುತ್ತಿತ್ತು ಎನ್ನಲಾಗಿದೆ. ಆದರೆ, ತೆರಿಗೆ ವಂಚಿಸುವ, ಭೂಗತ, ಅಕ್ರಮವಾಗಿ ನಡೆಯುತ್ತಿರುವ ಈ ಹಣಕಾಸು ವ್ಯವಸ್ಥೆ ಸದ್ಯ ಭಾರತವೂ ಸೇರಿದಂತೆ ವಿಶ್ವಾದ್ಯಂತ ಅಪರಾಧ ಕೃತ್ಯ ಎಂದು ಪರಿಗಣಿತವಾಗಿದೆ. ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ.

ಹಣ ಭೌತಿಕವಾಗಿ ಕಾಣದ ಈ ವ್ಯವಸ್ಥೆ ಮಧ್ಯವರ್ತಿಗಳ ಮೂಲಕ ನಡೆಯುತ್ತದೆ. ಮಧ್ಯವರ್ತಿಗಳನ್ನು ಹವಾಲಾದಾರರು (ಏಜೆಂಟ್‌ಗಳು) ಎಂದು ಕರೆಯಲಾಗುತ್ತದೆ. ಇಲ್ಲಿ ಹಣದ ವರ್ಗಾವಣೆ ನಡೆಯುವುದು ನಂಬಿಕೆ, ವಿಶ್ವಾಸಗಳ ಮೇಲಷ್ಟೇ.

ಹವಾಲಾ ಹೇಗೆ ಕೆಲಸ ಮಾಡುತ್ತದೆ?

ಇಲ್ಲಿ ಹಣವನ್ನು ಭೌತಿಕವಾಗಿ ವರ್ಗಾವಣೆ ಮಾಡುವುದಿಲ್ಲ. ವ್ಯಕ್ತಿಯೊಬ್ಬನ ಹಣ ನೇರವಾಗಿ ಮತ್ತೊಬ್ಬನಿಗೆ ತಲುಪುವುದಿಲ್ಲ. ಸಂಪರ್ಕ ಜಾಲಗಳ ಮೂಲಕ ಹಣ ಸಂದಾಯವಾಗುತ್ತವೆ. ಇದನ್ನುಹವಾಲಾ ಆಪರೇಟರ್‌ಗಳು ನೆರವೇರಿಸುತ್ತಾರೆ. ಒಬ್ಬ ವ್ಯಕ್ತಿ ತೆರಿಗೆ ಇಲ್ಲದೇ, ದಾಖಲೆಗಳಿಲ್ಲದೇ ಒಂದು ಪ್ರದೇಶಕ್ಕೆ, ಅಥವಾ ವ್ಯಕ್ತಿಗೆ ಹಣ ಸಂದಾಯ ಮಾಡಬೇಕಿದ್ದರೆ ತನಗೆ ಗೊತ್ತಿರುವ ಹವಾಲಾ ಆಪರೇಟರ್‌ ಅನ್ನು ಸಂಪರ್ಕಿಸುತ್ತಾನೆ.

ಈ ಆಪರೇಟರ್‌ ಇನ್ನೊಂದು ಪ್ರದೇಶದಲ್ಲಿರುವ ತನ್ನ ಜಾಲದ ಮತ್ತೊಬ್ಬ ಆಪರೇಟರ್‌ಗೆ ತಿಳಿಸಿ ವ್ಯಕ್ತಿ ಅಥವಾ ಪ್ರದೇಶಕ್ಕೆ ಹಣ ತಲುಪಿಸುವ ವ್ಯವಸ್ಥೆ ಮಾಡುತ್ತಾನೆ. ಹಣ ತಲುಪಿಸುವಾಗ ಸಂಕೇತಾಕ್ಷರಗಳು, ಸಂಜ್ಞೆಗಳು, ಹರಿದ ನೋಟುಗಳನ್ನು ದೃಢೀಕರಣಕ್ಕಾಗಿ ಬಳಸಲಾಗುತ್ತದೆ. ಹೀಗೆ ಹಣ ಸಂದಾಯ ಮಾಡಲು ಹವಾಲಾ ಆಪರೇಟರ್‌ಗಳು ಕಮಿಷನ್‌ ಸಹ ಪಡೆಯುತ್ತಾರೆ. ಅದು ಶೇ 3ರಿಂದ 10ರ ವರೆಗೆ ಇದೆ ಎಂದೂ ಹಲವರು ಮಾಹಿತಿ ಹಂಚಿಕೊಂಡಿದ್ದಾರೆ.

ಹವಾಲಾ ಅಕ್ರಮವೇ?

ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಹವಾಲಾ ಮೂಲಕ ಹಣ ವರ್ಗಾವಣೆಯನ್ನುಅಕ್ರಮ ಎಂದು ಪರಿಗಣಿಸಲಾಗಿದೆ. ಈ ಚಟುವಟಿಕೆಯನ್ನುಆರ್ಥಿಕ ಅಪರಾಧ ಎಂದು ಘೋಷಿಸಲಾಗಿದೆ. ಬ್ಯಾಂಕಿಂಗ್‌ ವ್ಯವಸ್ಥೆಗೆ ಒಳಪಡದ, ಅಧಿಕೃತ ಅರ್ಥವ್ಯವಸ್ಥೆಯಲ್ಲಿ ಲೆಕ್ಕಕ್ಕಿಲ್ಲದ, ಬೇನಾಮಿಯಾಗಿರುವ ಇಲ್ಲಿ ತೆರಿಗೆಯನ್ನು ವಂಚಿಸಲಾಗುತ್ತದೆ. ಈ ಹಣದ ಮೇಲೆ ಆರ್ಥಿಕ ಸಂಸ್ಥೆಗೆ ನಿಯಂತ್ರಣವಿಲ್ಲದ ಕಾರಣ ಇದನ್ನು ಅಪರಾಧ ಎಂದು ಪರಿಗಣಿಸಲಾಗಿದೆ.

ಉಗ್ರ ಕೃತ್ಯಗಳಿಗೆ ಹಣ ಸಿಗುವುದು ಹೀಗೆಯೇ!

ಕಪ್ಪು ಹಣದ ಪ್ರಸರಣೆಗೆ ಹೆಚ್ಚಾಗಿ ಬಳಕೆಯಾಗುತ್ತಿರುವ ಈ ವ್ಯವಸ್ಥೆಯ ಮೂಲಕವೇ ಭಯೋತ್ಪಾದನೆ, ಮಾದಕ ವಸ್ತುಗಳ ಜಾಲವೂ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಹಣ ಸಂದಾಯವಾಗುತ್ತಿದೆ. ಭಾರತದಲ್ಲಿ ವಿದೇಶಿ ವಿನಿಮಯ ಕಾಯ್ದೆ–2000 ಮತ್ತು ಪಿಎಂಎಲ್‌ಎ ( ಅಕ್ರಮ ಹಣ ವರ್ಗಾವಣೆ ನಿರ್ಬಂಧಕ) ಕಾಯ್ದೆ 2002ರ ಅಡಿಯಲ್ಲಿ ಹವಾಲಾವನ್ನು ಆರ್ಥಿಕ ಅಪರಾಧವೆಂದು ಪರಿಗಣನೆಯಾಗಿದೆ. ಸದ್ಯ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಅವರ ಮೇಲೂ ಪಿಎಂಎಲ್‌ಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹವಾಲಾ ಜೀವಂತವಿರಲು ಕಾರಣವೇನು?

ಆರ್ಥಿಕ ಅಪರಾಧವೆಂದು ಗೊತ್ತಿದ್ದರೂ ಭಾರತದಲ್ಲಿ ಹವಾಲಾ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ.ಹವಾಲಾ ದಂದೆಯಲ್ಲಿ ಹಣ ಸಂದಾಯಕ್ಕೆ ತೆಗೆದುಕೊಳ್ಳುವ ಕಮಿಷನ್‌, ತೆರಿಗೆಗಿಂತಲೂ ಕಡಿಮೆ. ಹಣ ಸಂದಾಯ ಮಾಡಲು ಯಾವುದೇ ದಾಖಲೆಗಳ ಅಗತ್ಯಗಳೂ ಇಲ್ಲ.ಕಪ್ಪು ಹಣದ ವರ್ಗಾವಣೆಗೆ ಇದು ಹೇಳಿ ಮಾಡಿಸಿದ ವ್ಯವಸ್ಥೆ.

ಅಕ್ರಮಕ್ಕೂ OTP!

ಹವಾಲಾದಲ್ಲಿ ಹಣದ ವರ್ಗಾವಣೆ ನಡೆಯುವಾಗ ದೃಢೀಕರಣಕ್ಕಾಗಿ ಸಂಕೇತಾಕ್ಷರಗಳನ್ನು ಬಳಸಲಾಗುತ್ತದೆ. ವಸ್ತುಗಳನ್ನು ಗುರುತಿಗೆ ಒಟ್ಟುಕೊಳ್ಳಲಾಗುತ್ತದೆ. ಹರಿದ ನೋಟುಗಳ ತುಣುಕುಗಳನ್ನೂ ಖಾತ್ರಿಗೆ ಉಪಯೋಗಿಸಲಾಗುತ್ತದೆ. ಈಗಂತೂ ದೃಢೀಕರಣಕ್ಕಾಗಿ ಒಟಿಪಿ (ಒನ್ ಟೈಂ ಪಾಸ್‌ವರ್ಡ್‌) ವ್ಯವಸ್ಥೆಯೂ ಇದೆ ಎನ್ನಲಾಗಿದೆ. ಹವಾಲಾ ದಂಧೆ ತಂತ್ರಜ್ಞಾನವನ್ನೂ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಒಟಿಪಿ ವ್ಯವಸ್ಥೆ ಸಾಕ್ಷಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0