ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಡೆಯಾಜ್ಞೆ ತೆರವು: ಎಂ.ಲಕ್ಷ್ಮಣ

Published : 2 ಸೆಪ್ಟೆಂಬರ್ 2024, 13:46 IST
Last Updated : 2 ಸೆಪ್ಟೆಂಬರ್ 2024, 13:46 IST
ಫಾಲೋ ಮಾಡಿ
Comments

ಮೈಸೂರು: ‘ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಅವರು ನ್ಯಾಯಾಲಯದಿಂದ ತಂದಿದ್ದ ತಡೆಯಾಜ್ಞೆ ಈಚೆಗೆ ತೆರವಾಗಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು.

‘ಈ ಹಿನ್ನೆಲೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ (ಸೆ.3) ಚಾಮುಂಡಿಬೆಟ್ಟದ ದಾಸೋಹ ಭವನದಲ್ಲಿ ಪ್ರಾಧಿಕಾರದ ಮೊದಲ ಸಭೆಯನ್ನು ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಭಾಗವಹಿಸಲಿದ್ದಾರೆ. ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು’ ಎಂದರು.

‘ಇದೇ ಜುಲೈ 1ರಂದು ಪ್ರಾಧಿಕಾರ ರಚನೆಗೆ ಸರ್ಕಾರ ಆದೇಶ ಹೊರಡಿಸಿತ್ತು. 26ರಂದು ಪ್ರಮೋದಾದೇವಿ ಒಡೆಯರ್ ತಡೆಯಾಜ್ಞೆ ತಂದಿದ್ದರು. ಚಾಮುಂಡಿ ಬೆಟ್ಟ ನಮ್ಮ ಖಾಸಗಿ ಆಸ್ತಿ ಎಂದಿದ್ದಾರೆ. ಆದರೆ, ಈ ಹಿಂದಿನಿಂದಲೂ ರಾಜ್ಯ ಸರ್ಕಾರವೇ ಚಾಮುಂಡಿ ಬೆಟ್ಟ ನಿರ್ವಹಣೆ ಮಾಡುತ್ತಿದೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಪ್ರಾಧಿಕಾರ ರಚನೆಗೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಸಂಪೂರ್ಣವಾಗಿ ಅಧಿಕಾರಿಗಳೇ ನಿರ್ವಹಣೆ ಮಾಡುವ ಪ್ರಾಧಿಕಾರ ಇದಾಗಿದೆ. ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿರುವುದರಿಂದ ಪ್ರಾಧಿಕಾರದ ಚಟುವಟಿಕೆಗಳಿಗೆ ಹಾದಿ ಸುಗಮವಾದಂತಾಗಿದೆ’ ಎಂದರು.

‘ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ದೂರು ನೀಡಿರುವ ಸ್ನೇಹಮಹಿ ಕೃಷ್ಣ ಬ್ಲಾಕ್ ಮೇಲರ್. ಅವರು ನ್ಯಾಯಾಲಯಕ್ಕೆ ನೀಡಿರುವ ದಾಖಲೆಗಳೆಲ್ಲವೂ ನಕಲಿಯಾಗಿವೆ. ಆ ವ್ಯಕ್ತಿಯ ವಿರುದ್ಧ 21 ಪ್ರಕರಣಗಳಿವೆ. ಬಹುತೇಕವು ಬ್ಲಾಕ್ ಮೇಲ್ ಪ್ರಕರಣಗಳೇ’ ಎಂದು ಆರೋಪಿಸಿದರು.

‘ಸಿದ್ಧಾರ್ಥ ಟ್ರಸ್ಟ್‌ಗೆ ಕೆಐಎಡಿಬಿ ಜಮೀನು ನೀಡಿರುವ ವಿಚಾರದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ರಾಜ್ಯಪಾಲರು ಕಾರ್ಯದರ್ಶಿಗೆ ಪತ್ರ ಬರೆದು, ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ರಾಜ್ಯಪಾಲರು ಕಾಂಗ್ರೆಸ್‌ನವರ ವಿಚಾರದಲ್ಲಿ ತುರ್ತಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದರೆ, ಬಿಜೆಪಿಯವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೌನ ವಹಿಸಿದ್ದಾರೆ’ ಎಂದು ಟೀಕಿಸಿದರು.

‘ಸಚಿವ ಪ್ರಿಯಾಂಕ್‌ ಖರ್ಗೆ ಅವರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಮಾಡಿರುವ ಆರೋಪ ನಿರಾಧಾರವಾದುದು. ಸಿದ್ಧಾರ್ಥ ಟ್ರಸ್ಟ್‌ಗೆ ಕಾನೂನು ಬದ್ಧವಾಗಿಯೇ ಜಮೀನು ಮಂಜೂರು ಮಾಡಲಾಗಿದೆ. ಬಿಜೆಪಿ ಸರ್ಕಾರವಿದ್ದಾಗ ರಾಷ್ಟ್ರೋತ್ಥಾನ ಪರಿಷತ್‌ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಮೀನು ನೀಡಿದ್ದಾರೆ. ಆಗ ಯಾವ ಮಾನದಂಡ ಅನುಸರಿಸಿ ಜಮೀನು ಕೊಡಲಾಯಿತು?’ ಎಂದು ಕೇಳಿದರು.

‘ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಆದರೆ, ರಾಜ್ಯಪಾಲರು ನನ್ನ ಬಳಿ ಯಾವುದೇ ಪತ್ರ ಬಾಕಿ ಇಲ್ಲ ಎನ್ನುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಬೆಳಿಗ್ಗೆ ಪತ್ರ ಬರೆದರೆ ಸಂಜೆಯೇ ಕ್ರಮಕ್ಕೆ ಮುಂದಾಗಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ರಾಜಭವನವು ಬಿಜೆಪಿ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿರುವುದು ಸ್ಪಷ್ಟವಾಗಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT