ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಿ ಶಾಲೆಗಳಿಗೆ ಎಲ್‌.ಕೆ.ಜಿ. ಬೇಡ’

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನಾ ಮೆರವಣಿಗೆ
Last Updated 6 ಡಿಸೆಂಬರ್ 2019, 12:32 IST
ಅಕ್ಷರ ಗಾತ್ರ

ಕಾರವಾರ: ‘ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿರುವ ಮತ್ತು ಮುಂದೆ ಆಗಲಿರುವ ಎಲ್.ಕೆ.ಜಿ. ಮತ್ತು ಯು.ಕೆ.ಜಿ.ಯನ್ನು ಪ್ರಾರಂಭಿಸದಂತೆ ತಡೆಯೊಡ್ಡಬೇಕು. ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ₹ 21 ಸಾವಿರ ಕನಿಷ್ಠ ವೇತನ ನೀಡಬೇಕು’ ಎಂದು ಒತ್ತಾಯಿಸಿ, ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಡಿ.6ರವರೆಗೆ ಐದು ದಿನಗಳ ಕಾಲ ರಾಜ್ಯವ್ಯಾಪಿ ಜಾಥಾ ನಡೆಸಲಾಗಿದೆ. ಜಿಲ್ಲೆಯ ಎಲ್ಲಾತಾಲ್ಲೂಕುಗಳಿಂದ ಕಾರವಾರಕ್ಕೆ ಬಂದಿದ್ದ 500ಕ್ಕೂ ಹೆಚ್ಚು ಕಾರ್ಯಕರ್ತೆಯರು, ಲಂಡನ್ ಬ್ರಿಜ್ ಬಳಿಯಿಂದಮೆರವಣಿಗೆ ನಡೆಸಿದರು. ನಂತರಜಿಲ್ಲಾಧಿಕಾರಿ ಕಚೇರಿ ಎದುರು ಸೇರಿ ತಮ್ಮಬೇಡಿಕೆಗಳನ್ನು ಮುಂದಿಟ್ಟು ಮನವಿ ಸಲ್ಲಿಸಿದರು.ಶಾಲಾಪೂರ್ವ ಶಿಕ್ಷಣಕ್ಕಾಗಿ ಹಾಗೂಅಂಗನವಾಡಿ ಕೇಂದ್ರಗಳನ್ನು ಉಳಿಸಲು ಒತ್ತಾಯಿಸಿ ಪ್ರತಿಭಟಿಸಿದರು.

‘1995ರಿಂದ ಪ್ರಾರಂಭವಾಗಿರುವ ಯೋಜನೆಗಳಲ್ಲಿ ಆಯ್ಕೆಯಾಗಿರುವಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರು. ಅನೇಕರು ಪದವೀಧರರೂ ಆಗಿದ್ದಾರೆ. ಅವರಿಗೆ ತರಬೇತಿಯನ್ನು ಕೊಟ್ಟು ಮಾತೃಭಾಷೆಗೆ ಧಕ್ಕೆ ಬಾರದಂತೆ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ.–ಯು.ಕೆ.ಜಿ.ಯನ್ನು ಪ್ರಾರಂಭಿಸಬೇಕು. ಮಾತೃಪೂರ್ಣ ಯಶಸ್ವಿ ಮಾಡಲು ಹೆಚ್ಚುವರಿ ಸಹಾಯಕಿಯನ್ನು ಕೊಡಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಆರು ಉದ್ದೇಶಗಳ ಹೊರತಾದ ಯಾವುದೇ ಕೆಲಸವನ್ನು ಮಾಡಿಸಬಾರದು’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಹೊಸ ಶಿಕ್ಷಣ ನೀತಿಯ ಶಿಫಾರಸಿನಲ್ಲಿರುವ ಮೂರರಿಂದ ಎಂಟು ವರ್ಷದ ವರ್ಗೀಕರಣವನ್ನು ಕೈಬಿಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಕೊಡುವ ಎನ್.ಪಿ.ಎಸ್. ಮಾನದಂಡದಂತೆ ವೇತನ ವಂತಿಕೆ ಆಧಾರಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಈಗಾಗಲೇ ನಿವೃತ್ತಿ ಆದವರಿಗೆ ಕನಿಷ್ಠ₹ 6,000 ಮಾಸಿಕ ಪಿಂಚಣಿ ನೀಡಬೇಕು. ಕೆಲವು ರಾಜ್ಯಗಳಲ್ಲಿ ಅಂಗನವಾಡಿ ನೌಕರರಿಗೆ₹ 11 ಸಾವಿರದಿಂದ ₹19 ಸಾವಿರದವರೆಗೆ ವೇತನ ನೀಡಲಾಗುತ್ತಿದೆ. ನಮ್ಮಲ್ಲಿಯೂ ಇದು ಜಾರಿಗೆ ಬರಬೇಕು’ ಎಂದು ಒತ್ತಾಯಿಸಿದರು.

ಬೀದಿ ನಾಟಕ:ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯರು ತಮ್ಮ ಬೇಡಿಕೆಗಳ ಬಗ್ಗೆಜಾಗೃತಿ ಮೂಡಿಸಲು ಜಾನಪದ ಶೈಲಿಯ ಹಾಡುಗಳನ್ನು ಹಾಡಿದರು. ವಿವಿಧ ಘೋಷಣೆಗಳನ್ನು ಕೂಗುತ್ತಾ ಫಲಕಗಳನ್ನು ಹಿಡಿದು ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿದರು. ಈ ಸಂದರ್ಭದಲ್ಲಿಲಕ್ಷ್ಮಿ ಸಿದ್ದಿ ಹಾಗೂ ಲಲಿತಾ ಹೆಗಡೆ ಸಂಗಡಿಗರಿಂದ ಹಮ್ಮಿಕೊಂಡಿದ್ದ ಬೀದಿ ನಾಟಕ ಗಮನ ಸೆಳೆಯಿತು.

ಸಂಘದ ಅಧ್ಯಕ್ಷೆ ಯಮುನಾ ಗಾಂವ್ಕರ್, ಉಪಾಧ್ಯಕ್ಷ ಎಚ್.ಬಿ.ನಾಯಕ, ಪ್ರಧಾನ ಕಾರ್ಯದರ್ಶಿ ಜಯಶ್ರೀ ಹಿರೇಕರ್, ಸಂಘಟನಾ ಕಾರ್ಯದರ್ಶಿ ವಿದ್ಯಾ ವೈದ್ಯ, ಖಜಾಂಚಿ ಗೀತಾ ನಾಯ್ಕ, ಕಾರ್ಯಕಾರಿ ಸಮಿತಿ ಸದಸ್ಯರಾದ ತಾರಾ ನಾಯ್ಕ, ವಿಮಲಾ ಪ್ರಭು ಹಾಗೂ ನೂರಾರು ಸದಸ್ಯೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT