ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Hamas Conflict: ಆಸ್ಪತ್ರೆಗಳ ಮೇಲೆ ಮುಂದುವರಿದ ಇಸ್ರೇಲ್ ದಾಳಿ

Published 10 ನವೆಂಬರ್ 2023, 5:57 IST
Last Updated 10 ನವೆಂಬರ್ 2023, 5:57 IST
ಅಕ್ಷರ ಗಾತ್ರ

ಗಾಜಾ ಪಟ್ಟಿ, ಪ್ಯಾಲೆಸ್ಟೀನ್ ವಲಯ: ಇಸ್ರೇಲ್ ಸೇನೆಯು ಶುಕ್ರವಾರ ಬೆಳಿಗ್ಗೆ ಗಾಜಾ ನಗರದ ಹಲವು ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ‘13 ಜನರು ಸತ್ತಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ’ ಹಮಾಸ್‌ ಆಡಳಿತ ತಿಳಿಸಿದೆ.

ಗಾಜಾದ ಹಮಾಸ್‌ ಸರ್ಕಾರದ ಪ್ರಕಾರ, ಇಲ್ಲಿನ ಅಲ್‌ ಶಿಫಾ ಆಸ್ಪತ್ರೆಯ ಮೇಲೆ ದಾಳಿ ನಡೆದಿದೆ. ನಗರದಿಂದ ಗುಳೆ ಹೊರಟಿದ್ದ ಜನರು ತಾತ್ಕಾಲಿಕವಾಗಿ ಇಲ್ಲಿ ಆಶ್ರಯ ಪಡೆದಿದ್ದರು. ಇಸ್ರೇಲ್‌ ಈ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

ಆಸ್ಪತ್ರೆಯ ಹೆರಿಗೆ ವಿಭಾಗದ ಸಮೀಪ ದಾಳಿ ನಡೆದಿದೆ, ಇಬ್ಬರು ಸತ್ತು, 10 ಜನರು ಗಾಯಗೊಂಡರು ಎಂದು ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್‌ ಅಬು ಸಾಲ್ಮಿಯ ತಿಳಿಸಿದರು. 

ಗುರುವಾರ ಆಸ್ಪತ್ರೆಯ ಬಳಿಯೇ ಇಸ್ರೇಲ್‌ ಸೇನೆಯು ಕದನ ನಡೆಸಿದ್ದು, 12ಕ್ಕೂ ಹೆಚ್ಚು ಹಮಾಸ್‌ ಪ್ರತ್ಯೇಕತಾವಾದಿಗಳ ಹತ್ಯೆ ಮಾಡಿತ್ತು. ಅವರ ಅಡಗುತಾಣವಾಗಿದ್ದ ಸುರಂಗ ಮಾರ್ಗಗಳನ್ನು ನಾಶಪಡಿಸಿತ್ತು.

ಹಮಾಸ್‌ ಪ್ರತ್ಯೇಕತಾವಾದಿಗಳು ಆಸ್ಪತ್ರೆಗಳನ್ನು ಮುಖ್ಯವಾಗಿ ಅಲ್‌ ಶಿಫಾ ಆಸ್ಪತ್ರೆಯನ್ನು ತನ್ನ ದಾಳಿಗೆ ನೆಲೆ ಹಾಗೂ ಅಡಗುತಾಣವಾಗಿ ಬಳಸಿಕೊಳ್ಳುತ್ತಿದೆ ಎಂದು ಇಸ್ರೇಲ್‌ ಸೇನೆ ಆರೋಪಿಸಿದೆ. ಈ ಆರೋಪವನ್ನು ಹಮಾಸ್‌ ತಳ್ಳಿಹಾಕಿದೆ.

ಆಸ್ಪತ್ರೆಗಳೇ ಗುರಿ: ಅಲ್‌ ಶಿಫಾ ಅಲ್ಲದೇ ಹಲವು ಆಸ್ಪತ್ರೆಗಳನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ಶುಕ್ರವಾರ ದಾಳಿ ನಡೆಸಿತು. ಇಸ್ರೇಲ್‌ನ ಸೇನೆ ಗಾಜಾ ನಗರದ ಇನ್ನಷ್ಟು ಒಳಗೆ ಪ್ರವೇಶಿಸಿದೆ. ಇನ್ನೊಂದೆಡೆ ಹಲವು ನಾಗರಿಕರು ಗುಳೆ ಹೊರಟಿದ್ದಾರೆ. 

ಶಿಫಾ ಆಸ್ಪತ್ರೆಯು ಗಾಜಾದ ಅತಿದೊಡ್ಡ ಆಸ್ಪತ್ರೆಯಾಗಿದೆ. ದಾಳಿಯಿಂದಾಗಿ ಆಸ್ಪತ್ರೆ ಸುತ್ತಲಿನ ಹಲವು ನಿವಾಸಿಗಳು ಮನೆ ತೊರೆದು ಸುರಕ್ಷಿತ ತಾಣಗಳತ್ತ ನಡೆದಿದ್ದಾರೆ. ಸದ್ಯ, ಈ ಆಸ್ಪತ್ರೆಯ 3 ಕಿ.ಮೀ ದೂರದಲ್ಲಿ ಇಸ್ರೇಲ್ ಸೇನೆ ನೆಲೆಯೂರಿದೆ.

ಹಮಾಸ್‌ ಹತ್ತಿಕ್ಕುವ ಕ್ರಮವಾಗಿ ಗಾಜಾದ ಅತಿದೊಡ್ಡ ನಗರವನ್ನು ಗುರಿಯಾಗಿಸಿ ಇಸ್ರೇಲ್‌ ಸೇನೆ ದಾಳಿ ನಡೆಸಿದ್ದು, ಆಕ್ರಮಣಕ್ಕೆ ಮುಂದಾಗುತ್ತಿದೆ.

ಅಕ್ಟೋಬರ್ 7ರಂದು ದಾಳಿ ಶುರುವಾದ ನಂತರ ಇದುವರೆಗೂ 11 ಸಾವಿರ ಪ್ಯಾಲೆಸ್ಟೀನಿಯರು ಹತರಾಗಿದ್ದಾರೆ. ಉಳಿದಂತೆ 2,650 ಜನರು ನಾಪತ್ತೆಯಾಗಿದ್ದು, ಕಟ್ಟಡದ ಅವಶೇಷಗಳ ನಡುವೆ ಸಿಲುಕಿರುವ ಅಥವಾ ಸತ್ತಿರುವ ಸಾಧ್ಯತೆಗಳಿವೆ

ಮುಖ್ಯಾಂಶಗಳು..

* ಬೈರೂತ್‌ (ಎಎಫ್‌ಪಿ):ಇಸ್ರೇಲ್‌ ಸೇನೆ ನಡೆಸಿದ ದಾಳಿಯಲ್ಲಿ ಏಳು ಜನರು ಹತರಾಗಿದ್ದಾರೆ ಎಂದು ಲೆಬನಾನ್‌ನ ಇರಾನ್ ಬೆಂಬಲಿತ ಹೆಜ್ಬುಲ್ಲಾ ತಿಳಿಸಿದೆ. ಜೆರುಸಲೇಂಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಅವರು ಹುತಾತ್ಮರಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಇರಾನ್‌ ಮತ್ತು ಇಸ್ರೇಲ್‌ ಗಡಿಯಲ್ಲಿ ನಿತ್ಯವೂ ಗುಂಡಿನ ಚಕಮಕಿ ಘಟನೆಗಳು ವರದಿಯಾಗುತ್ತಿವೆ.

* ಟೆಲ್ ಅವೀವ್‌ (ರಾಯಿಟರ್ಸ್): ಗಾಜಾದಲ್ಲಿ ನಾಗರಿಕರ ಹತ್ಯೆಗೆ ಪ್ರತಿಯಾಗಿ ಇಸ್ರೇಲ್‌ನತ್ತ ಶುಕ್ರವಾರ ಹಮಾಸ್‌ ರಾಕೆಟ್ ದಾಳಿ ನಡೆಸಿತು. ಸಾವು–ನೋವಿನ ವಿವರ ಲಭ್ಯವಾಗಿಲ್ಲ. 

* ಜೆನೀವಾ (ಎಎಫ್‌ಪಿ): ಪ್ಯಾಲೆಸ್ಟೀನ್‌ ನಿರಾಶ್ರಿತರಿಗೆ ನೆರವಾಗುತ್ತಿರುವ ವಿಶ್ವಸಂಸ್ಥೆ ಬೆಂಬಲಿತ ಸಂಸ್ಥೆಯು ಗಾಜಾ ಯುದ್ಧದಲ್ಲಿ ಇದುವರೆಗೂ ತಮ್ಮ 100 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

* ಗಾಜಾದಲ್ಲಿ ಇಸ್ರೇಲ್‌ ದಾಳಿಯಿಂದಾಗಿ ನಡೆಸುತ್ತಿರುವ ನರಮೇಧ ಕುರಿತು ತನಿಖೆ ನಡೆಸಬೇಕು ಎಂದು ಪ್ಯಾಲೆಸ್ಟೀನ್‌ನ ಮಾನವ ಹಕ್ಕುಗಳ ಸಂಘಟನೆಯು ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ)ಗೆ ಮನವಿ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT