ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಭೇಟಿಯಾದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌

Published 7 ಫೆಬ್ರುವರಿ 2024, 12:26 IST
Last Updated 7 ಫೆಬ್ರುವರಿ 2024, 12:26 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಇಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇತ್ತೀಚೆಗಷ್ಟೇ ಜೆಡಿಯು ವರಿಷ್ಠ ನಿತೀಶ್‌ ಕುಮಾರ್ ಅವರು ‘ಇಂಡಿಯಾ’ ಮೈತ್ರಿಕೂಟ ತೊರೆದು ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸರ್ಕಾರ ರಚಿಸಿದ್ದು, ಜನವರಿ 28ರಂದು 9ನೇ ಬಾರಿಗೆ ಸಿ.ಎಂ. ಆಗಿ ಪ್ರಮಾಣ ಸ್ವೀಕರಿಸಿದ್ದರು.

ಎನ್‌ಡಿಎ ತೆಕ್ಕೆಗೆ ಮರಳಿದ ಬಳಿಕ ಇದೇ ಮೊದಲ ಬಾರಿಗೆ ನಿತೀಶ್‌, ಮೋದಿ ಅವರನ್ನು ಭೇಟಿಯಾಗಿದ್ದಾರೆ.

ನಿತೀಶ್ ಕುಮಾರ್‌ ನೇತೃತ್ವದ ಬಿಹಾರದ ನೂತನ ಎನ್‌ಡಿಎ ಸರ್ಕಾರ ಫೆ. 10ರಂದು ವಿಶ್ವಾಸಮತವನ್ನು ಕೋರಲಿದೆ. ಈ ಸಂಬಂಧ ಮಂಗಳವಾರ ಅಧಿಸೂಚನೆ ಹೊರಡಿಸಲಾಗಿದೆ.

ಬಜೆಟ್‌ ಅಧಿವೇಶನದ ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ಹಿಂದೆಯೇ ಸರ್ಕಾರ ವಿಶ್ವಾಸಮತವನ್ನು ಕೋರಲಿದೆ ಎಂದು ತಿಳಿಸಲಾಗಿದೆ.

ರಾಜೀನಾಮೆ ನೀಡಲ್ಲ: ಬಿಹಾರ ವಿಧಾನಸಭೆ ಸ್ಪೀಕರ್‌

ಪಟ್ನಾ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಎನ್‌ಡಿಎ ಸರ್ಕಾರ ತಮ್ಮ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯನ್ನು ಬಿಹಾರ ವಿಧಾನಸಭೆ ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರು ಬುಧವಾರ ತಿರಸ್ಕರಿಸಿದ್ದಾರೆ.

‘ಫೆಬ್ರುವರಿ 12ರಂದು ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ನಿತೀಶ್ ಕುಮಾರ್ ಸರ್ಕಾರವು ವಿಶ್ವಾಸ ಮತ ಸಾಬೀತುಪಡಿಸಲು ನಿರ್ಧರಿಸಿರುವಾಗ ಸ್ಪೀಕರ್‌ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದಿಲ್ಲ. ವಿಧಾನಸಭೆಗೆ ಹಾಜರಾಗಿ, ನಿಯಮಾನುಸಾರ ಕಲಾಪಗಳನ್ನು ನಡೆಸುತ್ತೇನೆ’ ಎಂದು ಆರ್‌ಜೆಡಿ ಹಿರಿಯ ನಾಯಕರೂ ಆದ ಚೌಧರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಹಾಘಟಬಂಧನದಿಂದ ಅಧಿಕಾರ ಕಸಿದುಕೊಂಡಿರುವ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪ್ರಕಾರ, ಅವಿಶ್ವಾಸ ಗೊತ್ತುವಳಿ ಬಾಕಿ ಇರುವಾಗ ಸ್ಪೀಕರ್‌ ಸ್ಥಾನದಲ್ಲಿ ಮುಂದುವರಿಯುವಂತಿಲ್ಲ ಎಂದು ಚೌಧರಿ ಅವರಿಗೆ ಸೂಚಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಚೌಧರಿ ಅವರು, ‘ನಿಯಮದ ಪ್ರಕಾರ ಅವಿಶ್ವಾಸ ಗೊತ್ತುವಳಿ ಮಂಡನೆಗೆ ನೋಟಿಸ್‌ ಬಂದ 14 ದಿನದೊಳಗೆ ಸ್ಪೀಕರ್‌ ತೀರ್ಮಾನ ಕೈಗೊಳ್ಳಬೇಕು. ನನಗೆ ನೋಟಿಸ್‌ ಸಿಕ್ಕಿರುವುದು ಇವತ್ತೇ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT