ರಾಜಸ್ಥಾನದ ಜೈಸಲ್ಮೇರ್ನಲ್ಲಿ ಈಚೆಗೆ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಮಂಡಳಿಯ ಸಭೆಯು ಹಲವು ಪ್ರಮುಖ ಸಂಗತಿಗಳ ಬಗ್ಗೆ ತೀರ್ಮಾನ ಕೈಗೊಳ್ಳುವುದನ್ನು ಮುಂದೂಡಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಸಭೆಯು ಬಹಳ ಸಣ್ಣ ಸಂಗತಿಗಳ ಬಗ್ಗೆ ತೀರಾ ಸೂಕ್ಷ್ಮವಾಗಿ ಗಮನಹರಿಸಿದೆ ಎಂಬುದು ಕೂಡ ಟೀಕೆಗಳಲ್ಲಿ ಒಂದಾಗಿದೆ. ಪಾಪ್ಕಾರ್ನ್ ಮೇಲೆ ಬೇರೆ ಬೇರೆ ಹಂತಗಳ ತೆರಿಗೆಯನ್ನು ಜಾರಿಗೆ ತರಲು ತೀರ್ಮಾನಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯದ ವಸ್ತುವಾಗಿದೆ.

ಉಪ್ಪುಸಹಿತ ಪಾಪ್ಕಾರ್ನ್ಗೆ ಶೇಕಡ 5ರಷ್ಟು ತೆರಿಗೆ, ಪ್ಯಾಕ್ ಆಗಿರುವ ಹಾಗೂ ಲೇಬಲ್ ಇರುವ ಪಾಪ್ಕಾರ್ನ್ಗೆ ಶೇ 12ರಷ್ಟು ಹಾಗೂ ಸಕ್ಕರೆಲೇಪಿತ ಪಾಪ್ಕಾರ್ನ್ಗೆ ಶೇ 18ರಷ್ಟು ತೆರಿಗೆ ವಿಧಿಸಲು ಮಂಡಳಿಯು ತೀರ್ಮಾನಿಸಿದೆ. ಈ ತೀರ್ಮಾನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿದ ಸಮರ್ಥನೆಯು ಜಿಎಸ್ಟಿ ವ್ಯವಸ್ಥೆಯಲ್ಲಿ ಇರುವ ಅಸಮತೋಲನವನ್ನು ತೋರಿಸಿಕೊಡುವ ಕೆಲಸ ಮಾಡಿತು. ಕೆಲವು ಸಣ್ಣ ಉತ್ಪನ್ನಗಳಿಗೆ ಅವುಗಳಲ್ಲಿ ಏನೇನು ಇರುತ್ತವೆ ಎಂಬುದರ ಆಧಾರದಲ್ಲಿ ಹಾಗೂ ಅವುಗಳ ಪ್ಯಾಕೇಜಿಂಗ್ ಯಾವ ರೀತಿಯದ್ದು ಎಂಬುದರ ಆಧಾರದಲ್ಲಿ ತೆರಿಗೆ ದರ ತೀರ್ಮಾನ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಆದರೆ ಈ ರೀತಿಯ ತೀರ್ಮಾನಗಳು, ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಬೇಕಿದ್ದ ವ್ಯವಸ್ಥೆಯೊಂದು ತೆರಿಗೆ ವ್ಯವಸ್ಥೆಯನ್ನು ಹೇಗೆ ಸಂಕೀರ್ಣಗೊಳಿಸಿದೆ ಎಂಬುದನ್ನು ತೋರಿಸುವ ಕೆಲಸ ಮಾಡುತ್ತಿವೆ. ಸಣ್ಣ ಸಂಗತಿಗಳ ಬಗ್ಗೆ ತೀರಾ ಹೆಚ್ಚು ಗಮನ ಕೊಡುತ್ತಿದ್ದರೆ, ದೊಡ್ಡ ಸಮಸ್ಯೆಗಳ ಬಗ್ಗೆ ಸೂಕ್ತವಾದ ನಿರ್ಧಾರಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಲು ಆಗುವುದಿಲ್ಲ.

ಪಾಪ್ಕಾರ್ನ್ ಮೇಲಿನ ತೆರಿಗೆ ದರಗಳನ್ನು ನಿಗದಿ ಮಾಡುವುದಷ್ಟೇ ಅಲ್ಲದೆ, ಜಿಎಸ್ಟಿ ಮಂಡಳಿಯು ಇತರ ಕೆಲವು ತೀರ್ಮಾನಗಳನ್ನು ಕೂಡ ತೆಗೆದುಕೊಂಡಿದೆ. ಸಾಲದ ನಿಯಮಗಳನ್ನು ಪಾಲಿಸದೇ ಇರುವವರಿಗೆ ವಿಧಿಸುವ ದಂಡದ ಮೇಲೆ ಜಿಎಸ್ಟಿ ಇರಬಾರದು ಎಂದು ಮಂಡಳಿ ತೀರ್ಮಾನ ತೆಗೆದುಕೊಂಡಿದೆ. ತೆರಿಗೆಗಳು ಜೀವನದ ವಾಸ್ತವ. ವಿನಾಯಿತಿ ಇರುವುವನ್ನು ಹೊರತುಪಡಿಸಿ, ಇತರ ಎಲ್ಲ ಸೇವೆಗಳು ಹಾಗೂ ಸರಕುಗಳು ತೆರಿಗೆ ವ್ಯಾಪ್ತಿಗೆ ಬರಬೇಕು. ಆದರೆ ತೆರಿಗೆ ವ್ಯವಸ್ಥೆಯು ಬಹಳ ಮುಖ್ಯವಾದ ಸಂಗತಿಗಳನ್ನು ಕಡೆಗಣಿಸ ಬಾರದು. ಆರೋಗ್ಯ ವಿಮಾ ಪಾಲಿಸಿ ಸೇರಿದಂತೆ ವಿಮಾ ಪಾಲಿಸಿಗಳ ಪ್ರೀಮಿಯಂ ಮೇಲಿನ ತೆರಿಗೆ ಪ್ರಮಾಣ ಕಡಿಮೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದನ್ನು ಜಿಎಸ್ಟಿ ಮಂಡಳಿಯು ಮತ್ತೆ ಮುಂದಕ್ಕೆ ಹಾಕಿದೆ. ತೆರಿಗೆ ಪ್ರಮಾಣ ಕಡಿಮೆ ಮಾಡುವ ವಿಚಾರವಾಗಿ ಸಚಿವರ ಸಮಿತಿಯೊಂದು ಕೆಲವು ಶಿಫಾರಸುಗಳನ್ನು ನೀಡಿದೆ, ಶಿಫಾರಸುಗಳನ್ನು ಪರಿಗಣಿಸಲಾಗುತ್ತಿದೆ ಎಂಬ ಮಾತನ್ನು ಕೇಂದ್ರ ಸರ್ಕಾರ ಆಡಿತ್ತು. ವಿಮಾ ಪ್ರೀಮಿಯಂ ವಿಚಾರವಾಗಿ ತೀರ್ಮಾನವೊಂದು ಹೊರಬೀಳುತ್ತದೆ ಎಂಬ ನಿರೀಕ್ಷೆಯಲ್ಲಿ ಹಲವರು ಇದ್ದರು. ತೆರಿಗೆ ಪ್ರಮಾಣ ಸರಳೀಕರಣಕ್ಕೆ ಸಂಬಂಧಿಸಿದ ಸಚಿವರ ಗುಂಪು ಹೆಚ್ಚುವರಿ ಕಾಲಾವಕಾಶ ಕೇಳಿದೆ. ಪರಿಹಾರ ಸೆಸ್ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಸಚಿವರ ಇನ್ನೊಂದು ಗುಂಪಿಗೆ ನೀಡಿದ್ದ ಕಾಲಾವಕಾಶ ವಿಸ್ತರಿಸಲಾಗಿದೆ. ಈ ಮಹತ್ವದ ವಿಷಯಗಳ ಬಗೆಗಿನ ತೀರ್ಮಾನವನ್ನು ಬಹುಕಾಲ ತಡೆಹಿಡಿಯುವುದು ಸರಿಯಲ್ಲ.
.ಸಂಪಾದಕೀಯ Podcast |ಜಿಎಸ್ಟಿ ಮಂಡಳಿಯ ತೀರ್ಮಾನ: ವ್ಯವಸ್ಥೆಯ ಅಸಮತೋಲನದ ಪ್ರದರ್ಶನ.
ಜಿಎಸ್ಟಿ ವ್ಯವಸ್ಥೆ ಇನ್ನಷ್ಟು ಸರಳವಾಗುವ ಅಗತ್ಯ ಬಹಳ ಇದೆ. ಭಾರತದಲ್ಲಿ ಇರುವಂತಹ ಬಹು ಹಂತಗಳ ತೆರಿಗೆ ವ್ಯವಸ್ಥೆಯು ಬಹುತೇಕ ದೇಶಗಳಲ್ಲಿ ಇಲ್ಲ. ತೆರಿಗೆ ವಿಧಿಸುವಲ್ಲಿ ಹಲವು ಹಂತಗಳನ್ನು ಇರಿಸುವುದರಿಂದ ವ್ಯವಸ್ಥೆಯು ಅಸಮರ್ಥವಾಗುತ್ತದೆ, ಅಕ್ರಮಗಳು ನುಸುಳುತ್ತವೆ. ದೇಶದಲ್ಲಿ ಏಕರೂಪದ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬ ಉದ್ದೇಶದಿಂದ ರಾಜ್ಯಗಳು ತೆರಿಗೆ ವಿಧಿಸುವ ತಮ್ಮ ಅಧಿಕಾರವನ್ನು ಬಿಟ್ಟುಕೊಟ್ಟವು. ಜಿಎಸ್ಟಿ ಮಂಡಳಿ ತೆಗೆದುಕೊಳ್ಳುವ ತೀರ್ಮಾನಗಳ ಮೇಲೆ ತಮಗೆ ಯಾವ ನಿಯಂತ್ರಣವೂ ಉಳಿದಿಲ್ಲ ಎಂಬ ಅಸಮಾಧಾನವು ಹಲವು ರಾಜ್ಯಗಳಲ್ಲಿ ಇದೆ. ತೆರಿಗೆ ಸಂಗ್ರಹದಲ್ಲಿ ತಮಗೆ ಸಿಗಬೇಕಿರುವ ನ್ಯಾಯಯುತವಾದ ಪಾಲು ಸಿಗುತ್ತಿಲ್ಲ ಎಂಬ ಅಸಮಾಧಾನವು ಹಲವು ರಾಜ್ಯಗಳಲ್ಲಿ ಇದೆ. ಅದರಲ್ಲೂ ಮುಖ್ಯವಾಗಿ, ಕೇಂದ್ರವು ವಿಧಿಸುವ ಕೆಲವು ವಿಶೇಷ ತೆರಿಗೆಗಳಲ್ಲಿ ರಾಜ್ಯಗಳಿಗೆ ಪಾಲು ಸಿಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಜಿಎಸ್ಟಿಯ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸುವ ಅಥವಾ ತೆರಿಗೆ ದರವನ್ನು ಇನ್ನಷ್ಟು ಹೆಚ್ಚಿಸುವ ಪ್ರಸ್ತಾವಕ್ಕೆ ಹಲವು ರಾಜ್ಯಗಳು ಬೆಂಬಲ ಸೂಚಿಸಬಹುದು. ಹೀಗೆ ಮಾಡುವುದರಿಂದ ಜಿಎಸ್ಟಿ ವ್ಯವಸ್ಥೆಯು ಇನ್ನಷ್ಟು ಸಂಕೀರ್ಣವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.