ಬೆಂಗಳೂರು: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಸತತ ಮೂರನೇ ಬಾರಿ ಫೈನಲ್‌ನತ್ತ ದೃಷ್ಟಿ ನೆಟ್ಟಿರುವ ಟೀಮ್ ಇಂಡಿಯಾ, ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ತನ್ನ ಸ್ಥಾನವನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದೆ.
ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಕ್ಲೀನ್ ಸ್ವೀಪ್ ಜಯ ಸಾಧಿಸಿರುವ ಭಾರತದ ಶೇಕಡವಾರು ಪಾಯಿಂಟ್ಸ್ 74.24ಕ್ಕೆ ಏರಿಕೆಯಾಗಿದೆ.
ಆಸ್ಟ್ರೇಲಿಯಾ (ಶೇ 62.50) ಹಾಗೂ ಶ್ರೀಲಂಕಾ (ಶೇ 55.56) ಅನುಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.
ಮಳೆ ಬಾಧಿತ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಫಲಿತಾಂಶ ದಾಖಲಿಸುವುದು ಕಠಿಣವೆನಿಸಿತ್ತು. ಎರಡು ಹಾಗೂ ಮೂರನೇ ದಿನದಾಟ ಸಂಪೂರ್ಣವಾಗಿ ರದ್ದುಗೊಂಡಿತ್ತು. ಆದರೆ ಧನಾತ್ಮಕ ಮನೋಭಾವದೊಂದಿಗೆ ಆಡುವ ಮೂಲಕ ರೋಹಿತ್ ಶರ್ಮಾ ಬಳಗವು ಏಳು ವಿಕೆಟ್‌ಗಳ ಸ್ಮರಣೀಯ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಮತ್ತೊಂದೆಡೆ ಡಬ್ಲ್ಯುಟಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬಾಂಗ್ಲಾದೇಶ (ಶೇ 34.38) ಏಳನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯವು 2025ರ ಜೂನ್ 11ರಿಂದ 15ರವರೆಗೆ ಜೂನ್‌ನಲ್ಲಿ ನಡೆಯಲಿದೆ. ಡಬ್ಲ್ಯುಟಿಸಿ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದ ತಂಡಗಳು ಫೈನಲ್‌ಗೆ ಪ್ರವೇಶಿಸಲಿವೆ.
ಕಳೆದೆರಡು ಆವೃತ್ತಿಗಳಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ಭಾರತ ತಂಡವು ರನ್ನರ್-ಅಪ್ ಆಗಿತ್ತು. 2021ರಲ್ಲಿ ನ್ಯೂಜಿಲೆಂಡ್ ಹಾಗೂ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋಲು ಕಂಡಿತ್ತು.