ಪಹಲ್ಗಾಮ್ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಶಿಮ್ಲಾ ಒಪ್ಪಂದ ಅಮಾನತಿನಲ್ಲಿ ಇಡುವುದರ ಜತೆಗೆ, ಅದರ ವಾಯುಪ್ರದೇಶವನ್ನು ಭಾರತದ ವಿಮಾನಗಳಿಗೆ ನಿರ್ಬಂಧಿಸಿದೆ. ಭಾರತ ಕೂಡ ಪಾಕಿಸ್ತಾನದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಎರಡೂ ದೇಶಗಳ ವಿಮಾನಯಾನ ಸಂಸ್ಥೆಗಳು ಮತ್ತು ಆರ್ಥಿಕತೆಯ ಮೇಲೆ ಇದು ವ್ಯತಿರಿಕ್ತ ಪರಿಣಾಮಗಳನ್ನು ಬೀರಲಿದೆ. ಭಾರತದ ವಿಮಾನಯಾನ ಸಂಸ್ಥೆಗಳು ತಿಂಗಳಿಗೆ ₹306 ಕೋಟಿ ರೂಪಾಯಿ ನಷ್ಟ ಭರಿಸಬೇಕಿದೆ. ಇನ್ನೊಂದೆಡೆ, ಏರ್ಫ್ರಾನ್ಸ್, ಜರ್ಮನಿಯ ಲುಫ್ತಾನ್ಸಾ ಸೇರಿದಂತೆ ವಿವಿಧ ದೇಶಗಳ ವಿಮಾನಯಾನ ಕಂಪನಿಗಳು ಕೂಡ ಪಾಕಿಸ್ತಾನದ ವಾಯುಪ್ರದೇಶವನ್ನು ಬಿಟ್ಟು ಪರ್ಯಾಯ ಮಾರ್ಗವನ್ನು ಅನುಸರಿಸುತ್ತಿವೆ.

ಪಹಲ್ಗಾಮ್ ಘಟನೆಯ ನಂತರ ಭಾರತ–ಪಾಕಿಸ್ತಾನದ ನಡುವೆ ಉಂಟಾಗಿರುವ ಬಿಕ್ಕಟ್ಟಿನಲ್ಲಿ ವಾಯುಪ್ರದೇಶ ಬಳಕೆಗೆ ಸಂಬಂಧಿಸಿದ ನಿರ್ಬಂಧ ಪ್ರಮುಖವಾದುದು. ಮೊದಲು ಪಾಕಿಸ್ತಾನವು (ಏ.24) ಭಾರತದ ವಿಮಾನಗಳಿಗೆ ತನ್ನ ವಾಯು ಪ್ರದೇಶವನ್ನು ನಿರ್ಬಂಧಿಸಿತು. ಬಳಿಕ ಭಾರತವೂ (ಏ.30) ಅಂಥದ್ದೇ ಕ್ರಮ ಕೈಗೊಂಡಿತು. ಪಾಕಿಸ್ತಾನ ಗುತ್ತಿಗೆ ಪಡೆದಿರುವ, ಅಲ್ಲಿ ನೋಂದಾಯಿಸಲಾಗಿರುವ, ಅಲ್ಲಿಂದ ಕಾರ್ಯಾಚರಿಸುತ್ತಿರುವ ವಿಮಾನಗಳು ತನ್ನ ವಾಯು ಪ್ರದೇಶ ಬಳಸುವಂತಿಲ್ಲ ಎಂದು ಭಾರತವು ‘ನೋಟಮ್’ (ನೋಟಿಸ್ ಟು ಏರ್ಮನ್) ಹೊರಡಿಸಿದೆ. ಪ್ರಯಾಣಿಕ, ಸರಕು ಮತ್ತು ಸೇನಾ ವಿಮಾನಗಳಿಗೂ ಇದು ಅನ್ವಯಿಸುತ್ತಿದ್ದು, ಮೇ 23ರವರೆಗೆ ಜಾರಿಯಲ್ಲಿರಲಿದೆ.

ಈ ನಿರ್ಧಾರದಿಂದಾಗಿ ಎರಡು ದೇಶಗಳ ವಿಮಾನಯಾನ ಸಂಸ್ಥೆಗಳು ಭಾರಿ ನಷ್ಟವನ್ನು ಅನುಭವಿಸುವ ಸ್ಥಿತಿ ಎದುರಾಗಿದೆ. ಭಾರತದ ವಿಮಾನಯಾನ ಕಂಪನಿಗಳ ಮೇಲೆ ಸ್ವಲ್ಪ ಹೆಚ್ಚೇ ಹೊರೆ ಬೀಳಲಿದೆ. ಅಂದಾಜಿನ ಪ್ರಕಾರ, ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಒದಗಿಸುತ್ತಿರುವ ಭಾರತದ ವಿಮಾನಯಾನ ಸಂಸ್ಥೆಗಳಿಗೆ ತಿಂಗಳಿಗೆ ₹306 ಕೋಟಿ ನಷ್ಟವಾಗಲಿದೆ. ಒಂದು ವರ್ಷ ಇದೇ ಪರಿಸ್ಥಿತಿ ಇದ್ದರೆ ಏರ್ ಇಂಡಿಯಾಗೆ ₹5,000 ಕೋಟಿಗೂ ಹೆಚ್ಚು ನಷ್ಟವಾಗುತ್ತದೆ ಎಂದು ಸ್ವತಃ ಕಂಪನಿಯೇ ಹೇಳಿಕೊಂಡಿದೆ. ಹೊರೆ ಇಳಿಸಲು ಸರ್ಕಾರದ ನೆರವನ್ನೂ ಅದು ಕೇಳಿದೆ.

ಪಾಕಿಸ್ತಾನದ ಮೇಲೆ ಹಾರಾಡಲು ಅವಕಾಶ ಇಲ್ಲದಿರುವುದರಿಂದ ದೆಹಲಿ ಸೇರಿದಂತೆ ಉತ್ತರ ಭಾರತದ ವಿವಿಧ ವಿಮಾನ ನಿಲ್ದಾಣಗಳಿಂದ ಅಮೆರಿಕ, ಕೆನಡಾ ಸೇರಿದಂತೆ ಉತ್ತರ ಅಮೆರಿಕದ ರಾಷ್ಟ್ರಗಳು, ಯುರೋಪ್, ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಸಂಚರಿಸುವ ಭಾರತದ ವಿಮಾನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾಗಿದೆ. ಸದ್ಯ ಬಹುತೇಕ ವಿಮಾನಗಳು ದಕ್ಷಿಣಕ್ಕೆ ಬಂದು ನಂತರ ಅರಬ್ಬೀ ಸಮುದ್ರದ ಆಗಸದಲ್ಲಿ ಸಾಗಿ ಗಮ್ಯ ತಲುಪುತ್ತಿವೆ. ಅದರಿಂದ ದೂರ ಹೆಚ್ಚಾಗಿದೆ. ಪ್ರಯಾಣದ ಅವಧಿಯೂ ಜಾಸ್ತಿಯಾಗಿದೆ. ವಿಮಾನಗಳು ಹೆಚ್ಚು ಇಂಧನವನ್ನೂ ಉರಿಸಬೇಕಿದೆ. ಇಂಧನ ತುಂಬಿಸಲು ಮಾರ್ಗ ಮಧ್ಯೆ ಇಳಿಯಬೇಕಾಗಿದೆ. ಇದು ಸಂಸ್ಥೆಗಳ ವೆಚ್ಚದ ಹೊರೆ ಹೆಚ್ಚಿಸಿದೆ. ಇದರಿಂದಾಗಿ ಪ್ರಯಾಣ ದರ ಜಾಸ್ತಿಯಾಗುವ ಸಾಧ್ಯತೆ ಇದ್ದು, ಪ್ರಯಾಣಿಕರ ಮೇಲೆ ಹೊರೆ ಬೀಳಲಿದೆ.

ಭಾರತದ ಸಂಸ್ಥೆಗಳ ಪೈಕಿ ಏರ್ ಇಂಡಿಯಾದ ಹೆಚ್ಚು ವಿಮಾನಗಳು ದೆಹಲಿಯಿಂದ ಉತ್ತರ ಅಮೆರಿಕದ ರಾಷ್ಟ್ರಗಳಿಗೆ ಸಂಚರಿಸುತ್ತಿವೆ. ಹೆಚ್ಚುವರಿ ವೆಚ್ಚದ ಹೊರೆಯನ್ನು ತಗ್ಗಿಸಲು ಅದು ಪರ್ಯಾಯ ದಾರಿಯ ಹುಡುಕಾಟ ನಡೆಸುತ್ತಿದೆ. ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ. ನಿದರ್ಶನಕ್ಕೆ, ದೆಹಲಿಯಿಂದ ದಕ್ಷಿಣ ಲೇಹ್ ತಲುಪಿ, ನಂತರ ಹಿಂದೂ ಕುಷ್ ಮೂಲಕ ಕಿರ್ಗಿಸ್ತಾನ, ತಜಕಿಸ್ತಾನ ತಲುಪಿ, ಅಲ್ಲಿಂದ ಯುರೋಪ್ ಮತ್ತು ಉತ್ತರ ಅಮೆರಿಕ ತಲುಪುವ ಮಾರ್ಗಗಳ ಬಗ್ಗೆ ಅಧ್ಯಯನ ಮಾಡುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ.

ಚೀನಾ ಮಾರ್ಗ ಬಳಕೆ?: 2021ರಲ್ಲಿ ಭಾರತದ ವಿಮಾನಗಳು ‘ಪಾಪಾ 500’ ಎನ್ನುವ ಮಾರ್ಗದ ಮೂಲಕ ಅಮೆರಿಕ, ಯುರೋಪ್ಗೆ ಹೋಗುತ್ತಿದ್ದವು. ಆದರೆ, ಈ ಮಾರ್ಗದಲ್ಲಿ ಹೋಗುವಾಗ ಅಲ್ಪಕಾಲ ಪಾಕಿಸ್ತಾನದ ವಾಯು ಪ್ರದೇಶದ ಮೂಲಕ ಹಾದುಹೋಗಬೇಕಾಗುತ್ತದೆ. ಅದನ್ನು ತಪ್ಪಿಸಬೇಕು ಎಂದರೆ, ದಕ್ಷಿಣಕ್ಕೆ ಹೆಚ್ಚು ಪ್ರಯಾಣಿಸಬೇಕಾಗುತ್ತದೆ ಮತ್ತು ಚೀನಾ ವಾಯು ಪ್ರದೇಶ ಪ್ರವೇಶಿಸಬೇಕಾಗುತ್ತದೆ. ಇಂಥ ಹಲವು ಮಾರ್ಗಗಳಿದ್ದು, ಅವುಗಳ ಹುಡುಕಾಟ ನಡೆಯುತ್ತಿದೆ. ವಿಮಾನಯಾನ ಸಂಸ್ಥೆಗಳು ಇಂಥ ಮಾರ್ಗಗಳನ್ನು ಪರೀಕ್ಷಿಸಿ, ಸಮ್ಮತಿ ಸೂಚಿಸಿದರೆ, ಚೀನಾ ಮತ್ತು ಸಂಬಂಧಪಟ್ಟ ದೇಶಗಳ ಬಳಿ ಅನುಮತಿ ಕೇಳಬಹುದು ಎನ್ನುವ ಲೆಕ್ಕಾಚಾರದಲ್ಲಿ ಭಾರತ ಇದೆ. ಆದರೆ, ಅದಕ್ಕೂ ಮುನ್ನ ಹೊಸ ಮಾರ್ಗಗಳಲ್ಲಿನ ಸಂಚಾರ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಎನ್ನುವುದೂ ಸೇರಿದಂತೆ ಹಲವು ರೀತಿಯ ಅಧ್ಯಯನ, ಸಿದ್ಧತೆಗಳು ಆಗಬೇಕಿವೆ.

ಹಲವು ಸವಾಲು: ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ನಿಯಮಗಳ ಪ್ರಕಾರ, ವಿಮಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಕೆಲಸದ ಅವಧಿ 8 ಗಂಟೆ. ಆದರೆ, ವಿಮಾನಗಳ ಪ್ರಯಾಣದ ಅವಧಿ ಹೆಚ್ಚಲಿರುವುದರಿಂದ, ಸಿಬ್ಬಂದಿ ಕೂಡ ಹೆಚ್ಚು ಅವಧಿ ಕೆಲಸ ಮಾಡಬೇಕಿದೆ. ಇದರಿಂದ ಅವರ ಫ್ಲೈಯಿಂಗ್ ಡ್ಯೂಟಿ ಟೈಮ್ ಲಿಮಿಟೇಷನ್ (ಎಫ್ಡಿಟಿಎಲ್) ಉಲ್ಲಂಘನೆಯಾಗಲಿದೆ.

ವಿಮಾನಗಳ ತಾಂತ್ರಿಕ ನಿಲುಗಡೆಯ ಸ್ಥಳವನ್ನೂ ಬದಲಾವಣೆ ಮಾಡಬೇಕಿದೆ. ಭಾರತದ ವಿಮಾನಗಳು ಉತ್ತರ ಅಮೆರಿಕದ ಕಡೆ ಸಾಗುವ ಮಾರ್ಗದಲ್ಲಿ ವಿಯೆನ್ನಾ, ಕೋಪನ್ಹೇಗನ್ ಸೇರಿದಂತೆ ಹಲವೆಡೆ ತಾಂತ್ರಿಕ ನಿಲುಗಡೆ ಮಾಡುತ್ತಿದ್ದವು. ಹೀಗೆ ನಿಲುಗಡೆ ಮಾಡುವುದರ ಉದ್ದೇಶ ವಿಮಾನಕ್ಕೆ ಇಂಧನ ತುಂಬಿಸಿಕೊಳ್ಳುವುದು. ನಿಲುಗಡೆ ವೆಚ್ಚವೂ ಸೇರಿದಂತೆ ಹಲವು ರೀತಿಯ ವೆಚ್ಚಗಳನ್ನು ಭರಿಸಬೇಕಾಗುತ್ತದೆ.

ಈಗ ಭಾರತದ ವಿಮಾನಯಾನ ಸಂಸ್ಥೆಗಳು ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ತಾಂತ್ರಿಕ ನಿಲುಗಡೆಗಾಗಿ ಭಾರತದಲ್ಲಿಯೇ ನಿಲ್ದಾಣ ಹುಡುಕಿಕೊಳ್ಳಲು ಯೋಚಿಸುತ್ತಿವೆ.

ಪಾಕ್ ವಾಯು ಪ್ರದೇಶದ ನಿರ್ಬಂಧದಿಂದ ಆಗುವ ಪರಿಣಾಮಗಳ ಬಗ್ಗೆ ಏರ್ ಇಂಡಿಯಾ, ಇಂಡಿಗೊ ಮುಂತಾದ ಸಂಸ್ಥೆಗಳು ನಾಗರಿಕ ವಿಮಾಯಾನ ಸಚಿವಾಲಯಕ್ಕೆ ವರದಿ ಸಲ್ಲಿಸಿವೆ. ಒಟ್ಟಾರೆ ಬೆಳವಣಿಗೆಯು ವಿಮಾನಯಾನ ಸಂಸ್ಥೆಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟುಮಾಡಲಿದೆ, ಪ್ರಯಾಣಿಕರಿಗೆ ಎಷ್ಟು ಹೊರೆಯಾಗಲಿದೆ ಎನ್ನುವುದನ್ನು ಕೇಂದ್ರ ಸರ್ಕಾರವು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.

ಏರ್ ಇಂಡಿಯಾ, ಇಂಡಿಗೊ, ಸ್ಪೈಸ್ಜೆಟ್ ಮತ್ತು ಆಕಾಸಾ ಏರ್ ಕಂಪನಿಗಳು ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಒದಗಿಸುತ್ತಿವೆ. ಆಕಾಸಾ ಏರ್ ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಣೆ ಆರಂಭಿಸಿದೆ. ನಾಲ್ಕು ಕಂಪನಿಗಳ ಪೈಕಿ ಏರ್ ಇಂಡಿಯಾ ಮತ್ತು ಇಂಡಿಗೊ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಬೇಕಾದ ಮಾರ್ಗದಲ್ಲಿ ಹೆಚ್ಚು ಸಂಚರಿಸುತ್ತಿವೆ.

ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಬೇಕಾದ ಮಾರ್ಗ

ಏರ್ ಇಂಡಿಯಾ ಇಂಡಿಗೊ ಸ್ಪೈಸ್ಜೆಟ್ ಮತ್ತು ಆಕಾಸಾ ಏರ್ ಕಂಪನಿಗಳು ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಒದಗಿಸುತ್ತಿವೆ. ಆಕಾಸಾ ಏರ್ ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಣೆ ಆರಂಭಿಸಿದೆ. ನಾಲ್ಕು ಕಂಪನಿಗಳ ಪೈಕಿ ಏರ್ ಇಂಡಿಯಾ ಮತ್ತು ಇಂಡಿಗೊ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಬೇಕಾದ ಮಾರ್ಗದಲ್ಲಿ ಹೆಚ್ಚು ಸಂಚರಿಸುತ್ತಿವೆ.

ನಿರ್ಬಂಧ ಇದೇ ಮೊದಲಲ್ಲ!

ಪಾಕಿಸ್ತಾನವು ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸುವುದು ಇದೇ ಮೊದಲೇನಲ್ಲ. 2019ರಲ್ಲಿ ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ ಭಾರತವು ಪಾಕಿಸ್ತಾನದ ಬಾಲಾಕೋಟ್ ಮೇಲೆ ವಾಯುದಾಳಿ ನಡೆಸಿತ್ತು. ಆ ಬಳಿಕ, ಫೆ.26ರಂದು ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಎಲ್ಲಾ ವಿಮಾನಯಾನ ಕಂಪನಿಗಳ ವಿಮಾನಗಳು ಬಳಸುವುದನ್ನು ನಿರ್ಬಂಧಿಸಿತ್ತು. ಬೇರೆ ದೇಶಗಳ ವಿಮಾನಗಳ ಮೇಲಿನ ನಿರ್ಬಂಧವನ್ನು ಹಂತ ಹಂತವಾಗಿ ತೆರವುಗೊಳಿಸಿದ್ದ ಪಾಕಿಸ್ತಾನವು, ಭಾರತದ ವಿಮಾನಗಳಿಗೆ 2019ರ ಜುಲೈ 16ರವರೆಗೂ ವಾಯುಪ್ರದೇಶ ಬಳಕೆಗೆ ಅವಕಾಶ ನೀಡಿರಲಿಲ್ಲ. ಐದು ತಿಂಗಳಲ್ಲಿ ಏರ್ ಇಂಡಿಯಾ, ಇಂಡಿಗೊ ಹಾಗೂ ಇನ್ನಿತರ ಭಾರತದ ವಿಮಾನಯಾನ ಕಂಪನಿಗಳು ಅಂದಾಜು ₹540 ಕೋಟಿಯಷ್ಟು ನಷ್ಟ ಅನುಭವಿಸಿದ್ದವು.

ಪಾಕ್ ವಾಯುಪ್ರದೇಶ ಬಳಸದ ವಿದೇಶಿ ವಿಮಾನಗಳು!

ಈ ನಡುವೆ ಏರ್ಫ್ರಾನ್ಸ್, ಜರ್ಮನಿಯ ಲುಫ್ತಾನ್ಸಾ ಸೇರಿದಂತೆ ವಿದೇಶದ ವಿವಿಧ ವಿಮಾನಯಾನ ಕಂಪನಿಗಳು ಕೂಡ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸುತ್ತಿಲ್ಲ. ‘ಮುಂದಿನ ಸೂಚನೆಯವರೆಗೂ ನಮ್ಮ ಸಂಸ್ಥೆಯ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶವನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸಲಿವೆ’ ಎಂದು ಲುಫ್ತಾನ್ಸಾ ಸಮೂಹ ಹೇಳಿಕೆಯಲ್ಲಿ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಪ್ರಸ್ತಾಪಿಸಿರುವ ಏರ್ ಫ್ರಾನ್ಸ್, ‘ಮುಂದಿನ ಸೂಚನೆಯವರೆಗೂ ಪಾಕಿಸ್ತಾನದ ವಾಯುಪ್ರದೇಶದಲ್ಲಿ ಹಾರಾಟ ನಡೆಸದಿರಲು ತೀರ್ಮಾನಿಸಲಾಗಿದೆ’ ಎಂದು ಹೇಳಿದೆ. ಬ್ರಿಟಿಷ್ ಏರ್ವೇಸ್, ಸ್ವಿಸ್ ಇಂಟರ್ನ್ಯಾಷನಲ್ ಏರ್ಲೈನ್ಸ್ ಮತ್ತು ಎಮಿರೇಟ್ಸ್ ವಿಮಾನಗಳು ಕೂಡ ಸೋಮವಾರ ಪಾಕಿಸ್ತಾನದ ವಾಯುಪ್ರದೇಶವನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಹಾರಾಟ ನಡೆಸಿರುವುದನ್ನು ವಿಮಾನಗಳ ಹಾರಾಟ ಮೇಲ್ವಿಚಾರಣೆಗೆ ಸಂಬಂಧಿಸಿದ ದತ್ತಾಂಶಗಳು ತೋರಿಸಿವೆ. ದೆಹಲಿಗೆ ಬರುತ್ತಿದ್ದ ಬಹುತೇಕ ವಿಮಾನಗಳು ಅರಬ್ಬೀ ಸಮುದ್ರದ ಮೇಲೆ ಹಾರಾಟ ನಡೆಸಿ ನಂತರ ಉತ್ತರದತ್ತ ಸಾಗಿದ್ದವು.

ಪಾಕ್ ಆದಾಯಕ್ಕೂ ಕತ್ತರಿ

ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಭಾರತಕ್ಕೆ ಅಷ್ಟೇ ಅಲ್ಲ, ಪಾಕಿಸ್ತಾನಕ್ಕೂ ನಷ್ಟವಾಗಲಿದೆ. ವಿದೇಶಿ ವಿಮಾನಗಳು ಕೂಡ ವಾಯುಪ್ರದೇಶವನ್ನು ಬಳಸದಿರುವುದರಿಂದ ಅದರ ನಷ್ಟದ ಮೊತ್ತ ಇನ್ನಷ್ಟು ಹೆಚ್ಚಲಿದೆ. ಯಾವುದೇ ದೇಶದ ವಾಯುಪ್ರದೇಶವನ್ನು ಬಳಸುವುದಕ್ಕೆ ವಿಮಾನಯಾನ ಕಂಪನಿಗಳು ಆ ದೇಶಕ್ಕೆ ‘ಓವರ್ಫ್ಲೈಟ್’ (ದೇಶದ ಮೇಲೆ ಹಾರಾಟ) ಶುಲ್ಕ ಪಾವತಿಸಬೇಕಾಗುತ್ತದೆ. ಈ ಶುಲ್ಕದಿಂದ ದೇಶಗಳು ಗಮನಾರ್ಹ ಆದಾಯ ಗಳಿಸುತ್ತವೆ. ಪಾಕಿಸ್ತಾನವು ಭಾರತದ ವಿಮಾನಗಳ ಓವರ್ಫ್ಲೈಟ್ ಶುಲ್ಕದಿಂದ ಪ್ರತಿ ದಿನ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿತ್ತು. ವಿಮಾನದ ಗಾತ್ರ ಮತ್ತು ವಾಯುಪ್ರದೇಶದಲ್ಲಿ ಅದು ಸಾಗುವ ದೂರವನ್ನು ಅವಲಂಬಿಸಿ ಈ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ವಿವಿಧ ಮಾಧ್ಯಮ ವರದಿಗಳ ಪ್ರಕಾರ ಪಾಕಿಸ್ತಾನದ ಆಗಸದಲ್ಲಿ ಬೋಯಿಂಗ್ 737 ವಿಮಾನ ಹಾರಾಡಬೇಕಾದರೆ ಅಂದಾಜು ₹49 ಸಾವಿರ ಶುಲ್ಕ (580 ಡಾಲರ್) ಪಾವತಿಸಬೇಕಾಗುತ್ತದೆ. ವಿಮಾನ ಇನ್ನಷ್ಟು ದೊಡ್ಡದಾಗಿದ್ದರೆ, ಶುಲ್ಕವೂ ಹೆಚ್ಚುತ್ತದೆ. ವಾಯುಪ್ರದೇಶ ನಿರ್ಬಂಧದಿಂದಾಗಿ ಪಾಕಿಸ್ತಾನ ಪ್ರತಿ ದಿನ ₹1.95 ಕೋಟಿಯಷ್ಟು ನಷ್ಟ ಅನುಭವಿಸುತ್ತದೆ ಎಂದು ಹೇಳಲಾಗಿದೆ. ವಿಮಾನ ಇಳಿಯುವ, ನಿಲುಗಡೆ ಶುಲ್ಕಗಳನ್ನು ಸೇರಿಸಿದರೆ, ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚುತ್ತದೆ. ವಿಮಾನಯಾನ ಸಂಸ್ಥೆಗಳಿಗೂ ಹೊರೆ: ಇದಲ್ಲದೇ, ಭಾರತ ಕೂಡ ತನ್ನ ವಾಯುಪ್ರದೇಶವನ್ನು ಪಾಕಿಸ್ತಾನದ ವಿಮಾನಗಳಿಗೆ ನಿರ್ಬಂಧಿಸಿರುವುದರಿಂದ ಮಲೇಷ್ಯಾ ಸೇರಿದಂತೆ ಆಗ್ನೇಯ ಏಷ್ಯಾದ ರಾಷ್ಟ್ರಗಳನ್ನು ಸಂಪರ್ಕಿಸಲು ಅಲ್ಲಿನ ವಿಮಾನಗಳು ಸುತ್ತಿ ಬಳಸಿ ಸಂಚರಿಸಬೇಕು. ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ಅಲ್ಲಿನ ಪ್ರಮುಖ ವಿಮಾನಯಾನ ಸಂಸ್ಥೆ. ಪಿಐಎ ಅಡಿಯಲ್ಲಿ 32 ವಿಮಾನಗಳು ಕಾರ್ಯಾಚರಣೆ ಮಾಡುತ್ತಿದ್ದು, ಸಂಸ್ಥೆ ಈಗಾಗಲೇ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ. ಭಾರತದ ನಿರ್ಧಾರದಿಂದಾಗಿ ಏಷ್ಯಾದ ಆಗ್ನೇಯ ಭಾಗಕ್ಕೆ ಹೋಗುವ ವಿಮಾನಗಳ ಪಥವನ್ನು ಅದು ಚೀನಾ ಇಲ್ಲವೇ ಶ್ರೀಲಂಕಾದ ವಾಯು ಪ್ರದೇಶದ ಆಧಾರದಲ್ಲಿ ಪುನರ್ ಸಿದ್ಧಪಡಿಸಬೇಕಿದೆ. ಪ್ರಯಾಣದ ಅವಧಿ ಒಂದೆರಡು ಗಂಟೆ ದೀರ್ಘವಾಗಲಿದೆ. ಇದಕ್ಕಾಗಿ ಪಿಐಎ ಹೆಚ್ಚು ಆಡಳಿತಾತ್ಮಕ ವೆಚ್ಚ ಭರಿಸಬೇಕಿದೆ. ಇದರಿಂದ ಕೆಲವು ವಿಮಾನಗಳ ಹಾರಾಟವನ್ನೇ ರದ್ದುಗೊಳಿಸಬೇಕಾದ ಸ್ಥಿತಿ ಪಿಐಎಗೆ ಎದುರಾಗಿದೆ.

ಆಧಾರ: ಪಿಟಿಐ, ರಾಯಿಟರ್ಸ್, ಫ್ಲೈಟ್ರೇಡಾರ್24.ಕಾಮ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.