ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಸ್ಥಾನದ ಸ್ಪರ್ಧಿಗಳಾದ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಅವರು ಅಕ್ಟೋಬರ್ 23ರಂದು ಸಿಎನ್‌ಎನ್ ಚರ್ಚಾ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಎರಡನೇ ಬಾರಿ ಸಿಎನ್‌ಎನ್ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಕಮಲಾ ಹ್ಯಾರಿಸ್ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಡೊನಾಲ್ಡ್ ಟ್ರಂಪ್ ಅವರು ಭಾಗವಹಿಸುವ ಕುರಿತು ಇನ್ನಷ್ಟೇ ಖಚಿತವಾಗಬೇಕಿದೆ.
ಸೆಪ್ಟೆಂಬರ್ 11ರಂದು ಪೆನ್ಸಿಲ್ವೇನಿಯಾದಲ್ಲಿ ನಡೆದ ಚರ್ಚೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊದಲ ಬಾರಿಗೆ ನೇರ ಮುಖಾಮುಖಿಯಾಗಿದ್ದರು.
ಪರಸ್ಪರ ಹಸ್ತಲಾಘವದೊಂದಿಗೆ ಶುರುವಾಗಿದ್ದ ಚರ್ಚೆ, ಒಂದೂವರೆ ಗಂಟೆ ನಡೆದಿತ್ತು. ಪರಸ್ಪರ ನಿಂದನೆ ಹಾಗೂ ತುರುಸಿನ ವಾದಗಳ ಮೂಲಕ ಅಂತ್ಯಗೊಂಡಿತ್ತು.
ದೇಶದ ಗಡಿ ರಕ್ಷಣೆ, ವಿದೇಶಾಂಗ ನೀತಿ, ಆರ್ಥಿಕತೆ, ಗರ್ಭಪಾತ ನೀತಿ ಸೇರಿ ಅಧಿಕಾರ ದೊರೆತರೆ ಜಾರಿಗೆ ತರಲು ಇಚ್ಛಿಸುವ ಕ್ರಮಗಳು ಹಾಗೂ ಪ್ರಮುಖ ವಿಷಯಗಳನ್ನು ಕುರಿತು ತಮ್ಮ ತಮ್ಮ ನಿಲುವನ್ನು ಜನರ ಮುಂದಿಟ್ಟಿದ್ದರು.
ನವೆಂಬರ್ 5ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.