ADVERTISEMENT

ಚುರುಮುರಿ: ನೋಟು ನೋಟು ಎನಬೇಡ...

ಬಿ.ಎನ್.ಮಲ್ಲೇಶ್
Published 4 ಮೇ 2024, 1:26 IST
Last Updated 4 ಮೇ 2024, 1:26 IST
   

‘ದುಬ್ಬೀರ, ಈ ಮತಾಂಧ ಅಂದ್ರೆ ಏನ್ಲೆ?’ ಹರಟೆ ಕಟ್ಟೆಯಲ್ಲಿ ಚಾ ಕುಡಿಯುತ್ತ ಗುಡ್ಡೆ ಕೇಳಿದ.

‘ಅದಾ, ಕಣ್ಣು ಮುಚ್ಕಂಡು ಯಾರ್‍ಯಾರಿಗೋ ಮತ ಹಾಕೋರಿಗೆ ಮತಾಂಧ ಅನ್ನಬೋದು’ ದುಬ್ಬೀರ ನಕ್ಕ.

‘ಆಹಾ, ಹೊಸ ಡಿಕ್ಷನರಿ ನಿಂದು. ಆಮೇಲೆ ಪೆನ್‌ಡ್ರೈವ್‌ನಲ್ಲಿ ಡ್ರೈವ್ ಅಂತ ಇದೆಯಲ್ಲ, ಅದೇ ಡ್ರೈವ್ ಮಾಡ್ಕಂಡು ಎಲ್ಲ ಕಡಿ ಹೋಗ್ತತಾ?’

ADVERTISEMENT

‘ಏನೋಪ್ಪ, ಹಾಸನದ ಕತಿ ಕೇಳಿದ್ರೆ ಹಂಗೇ ಅನುಸ್ತತಿ. ಪೆನ್‌ಡ್ರೈವ್ ಒಂದೇ ಎಲ್ಲ ಕಡಿ ಹೆಂಗ್ ಹೋತು ಅಂತ ಈಗ ತನಿಖಿ ಶುರುವಾಗೇತಂತೆ’.

‘ಅದೇನರೆ ಹಾಳಾಗಿ ಹೋಗ್ಲಿ, ಈಗ ಮೇ ಏಳಕ್ಕೆ ಎಲೆಕ್ಷನ್ನು. ಒಳ್ಳೇರ್ನ ನೋಡಿ ವೋಟ್ ಹಾಕ್ರಿ. ‘ವೋಟ್ ಹಾಕಿದ್ಯೇನೋ ಕೊಟ್ರಪ್ಪ ಅಂದ್ರೆ ಎಲ್ಲಿ ರೊಕ್ಕ ಬಿಚ್ಚಪ್ಪ ಅನಬ್ಯಾಡ್ರಿ’ ಮಂಜಮ್ಮ ಬುದ್ಧಿ ಹೇಳಿದಳು.

‘ನೋಟು ಕೊಡದಿದ್ರೆ ನಾನು ನೋಟಾಕ್ಕೇ ವೋಟ್ ಹಾಕೋದು’ ತೆಪರೇಸಿ ಒಪ್ಪಲಿಲ್ಲ.

‘ನೋಟು ನೋಟು ಎನಬ್ಯಾಡ, ನೋಟ ಬದಲಿಸಿ ನೋಡು, ನನ್ನ ನಿನ್ನ ಒಂದು ಬೆರಳು ಸಾಕು ದೇಶ ಬದಲಿಸೋಕೆ’ ಎಂದ ಕೊಕ್ಕೆ ಕೊಟ್ರ.

‘ಅಬಾಬಬ.‌.. ಯಾವ ಬೆರಳಲೆ ಅದು?’ ಗುಡ್ಡೆ ಕಿಸಕ್ಕೆಂದ.

‘ಮಸಿ ಹಾಕಿಸ್ಕಳೋ ಬೆರಳು ಕಣಲೆ’.

‘ದೇಶ ಬದಲಿಸೋಕೆ ಬೆರಳೊಂದೇ ಸಾಕಾಗಲ್ಲಲೆ ಕೊಟ್ರ, ಅದರ ತುದಿಗೆ ಒಂದು ಸುದರ್ಶನ ಚಕ್ರಾನೂ ಬೇಕು ದುಷ್ಟರ ಸಂಹಾರ ಮಾಡಾಕೆ’ ಎಂದ ಗುಡ್ಡೆ.

‘ಎಷ್ಟೇ ಸಂಹಾರ ಮಾಡಿದ್ರೂ ದುಷ್ಟರು ಮತ್ತೆ ಹುಟ್ಟಿ ಬರ್ತಾನೇ ಇರ್ತಾರೆ ಬಿಡಲೆ’ ತೆಪರೇಸಿಗೆ ಬೇಸರ.

‘ದುಷ್ಟರಷ್ಟೇ ಅಲ್ಲ, ಈ ಪೆನ್‌ಡ್ರೈವು, ಸಿ.ಡಿ.ಗಳೂ ಮತ್ತೆ ಮತ್ತೆ ಹುಟ್ಟಿ ಬರ್ತಾವಲೇ. ಪುನರಪಿ ಪೆನ್ನು, ಪುನರಪಿ ಡ್ರೈವು...’ ಎಂದ ಗುಡ್ಡೆ. ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.