ADVERTISEMENT

ಅಕಾಲಿಕ ಮಳೆ ಬೋರರ್ ಕೀಟ ನಿರ್ಲಕ್ಷ್ಯ ಬೇಡ

ಕೆ.ಎಸ್.ಪೂರ್ಣಿಮಾ ಕಾನಹಳ್ಳಿ
Published 4 ಮೇ 2011, 19:30 IST
Last Updated 4 ಮೇ 2011, 19:30 IST

ಅರೇಬಿಕಾ ಕಾಫಿಗೆ ಈಗ ಬಂಗಾರದ ಬೆಲೆ ಬಂದಿದೆ. ಆದರೆ ಕಾಂಡ ಕೊರಕ ಹುಳುಗಳ (ವೈಟ್ ಸ್ಟೆಮ್ ಬೋರರ್) ಹಾವಳಿ ಬೆಳೆಗಾರರಿಗೆ ದೊಡ್ಡ ತಲೆ ನೋವಾಗಿದೆ.ಅಕಾಲಿಕ ಮಳೆಯಿಂದಾಗಿ ತೋಟಗಳಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಕೀಟಗಳು ದ್ವಿಗುಣಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಕಾಫಿ ಬೆಳೆಗಾರರು ಸ್ವಲ್ಪ ಮುಂಜಾಗರೂಕತೆ ವಹಿಸಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕಾಂಡ ಕೊರೆಯುವ ಕೀಟಗಳು ಉತ್ತಮ ಫಸಲಿರುವ ಕಾಫಿ ಗಿಡದ ಕಾಂಡ ಕೊರೆದು ಒಳಗೆ ಮೊಟ್ಟೆ ಇಡುತ್ತವೆ. ನಂತರ ಇಡೀ ಕಾಂಡವನ್ನು ಕೊರೆದು ತಿಂದು ಟೊಳ್ಳಾಗಿಸುತ್ತವೆ.ಮೂರ್ನಾಲ್ಕು ವಾರಗಳ ನಂತರ ಪ್ರೌಢ ಅವಸ್ಥೆ ತಲುಪಿದ ಕೀಟ ಹೊರಕ್ಕೆ ಹಾರಿ ಹೋಗಿ ಇನ್ನೊಂದು ಆರೋಗ್ಯವಂತ ಗಿಡದ ಕಾಂಡ ಕೊರೆದು ಹಾನಿಮಾಡುತ್ತದೆ.

ಈ ಕೀಟದ ಜೀವಿತಾವಧಿ ಒಂದು ವರ್ಷ. ರೋಗಪೀಡಿತ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಬಾಡುತ್ತವೆ. ಇಂತಹ ಗಿಡಗಳನ್ನು ಪತ್ತೆ ಹಚ್ಚಿ ಸುಟ್ಟುಹಾಕಬೇಕು. ಸ್ವಲ್ಪ ನಿರ್ಲಕ್ಷ್ಯ ಮಾಡಿದರೆ ಸಂಪೂರ್ಣ ತೋಟವೇ ನಾಶವಾಗುವ ಅಪಾಯವಿದೆ.  ಒಂದು ಕಾಫಿ ಗಿಡ ನಾಟಿ ಮಾಡಿದ ನಾಲ್ಕು ವರ್ಷಗಳ ನಂತರ ಫಸಲು ನೀಡುತ್ತದೆ. ಆದ್ದರಿಂದ ಬೆಳೆಗಾರರು ಹೆಚ್ಚು ಮುಂಜಾಗರೂಕತೆ ವಹಿಸಬೇಕು.

ಕಾಂಡ ಕೊರೆಯುವ ಕೀಟಗಳ ನಿಯಂತ್ರಣಕ್ಕೆ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ವಿಭಾಗದ ಕೀಟಶಾಸ್ತ್ರ ವಿಜ್ಞಾನಿಗಳು  ಕೆಲವು ಸಲಹೆಗಳನ್ನು ನೀಡುತ್ತಾರೆ.
1) ತೋಟದ ಮೇಲ್ನೆರಳನ್ನು ಹದವಾಗಿಡಬೇಕು.
2) ಸ್ವಾಭಾವಿಕ ಮತ್ತು ಪ್ರಾಕೃತಿಕ ಶತ್ರುಗಳನ್ನು ಉಳಿಸಿ ಬಳಸಿಕೊಳ್ಳಬೇಕು.
3) ಕೇವಲ ಹಣ ತರುವ ಮರಗಳನ್ನು ನೆರಳಿಗಾಗಿ ಬೆಳೆಸುವುದರ ಜೊತೆಗೆ ಪಕ್ಷಿ ಸಂಕುಲವನ್ನು ಆಕರ್ಷಿಸುವ ಅತ್ತಿ, ನೇರಳೆ, ಸಂಪಿಗೆ ಇತ್ಯಾದಿ ಮರಗಳನ್ನು ಬೆಳೆಸಲು ಗಮನ ಕೊಡಬೇಕು.
4)ಜೈವಿಕ ಕೀಟನಾಶಕಗಳನ್ನು ಸಕಾಲದಲ್ಲಿ ಬಳಸಬೇಕು. ಕಾಂಡ ಮತ್ತು ದಪ್ಪ ರೆಂಬೆಗಳಿಗೆ ಬೇವಿನ ಹಿಂಡಿಯ ಸಾರ ಸಿಂಪಡಿಸಬೇಕು.
5)ಕೀಟ ಹಾರಿ ಬರುವ ಕಾಲದಲ್ಲಿ ತೆಂಗಿನ ನಾರಿನಿಂದ ಕಾಂಡವನ್ನು ಉಜ್ಜುವುದರಿಂದ ತೊಗಟೆಯ ಮೇಲಿನ ಮೊಟ್ಟೆಗಳನ್ನು ನಾಶಪಡಿಸಬಹುದು.
6)ಕ್ಲೋರೋ ಫೆರಿಫಾಸ್‌ನ್ನು ಏಪ್ರಿಲ್-ಮೇ ತಿಂಗಳಲ್ಲಿ ಎರಡು ಸಲ ಸಿಂಪಡಿಸಬೇಕು.

ಮರುನಾಟಿಗಾಗಿ ಚಂದ್ರಗಿರಿ, ಹೇಮಾವತಿಯಂತಹ ಹೊಸ ಕುಬ್ಜ ಜಾತಿಯ ಕಾಫಿ ತಳಿಗಳು ಸೂಕ್ತ. ಇವು ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುತ್ತವೆ. ಕಾಫಿ ಮಂಡಳಿಯ ಸಮೀಕ್ಷೆಯ ಪ್ರಕಾರ ಕಾಫಿಗೆ ಮುಂದಿನ ಮೂರರಿಂದ ನಾಲ್ಕು ವರ್ಷ ಉತ್ತಮ ಭವಿಷ್ಯವಿದೆ. ಹಾಗಾಗಿ ಬೋರರ್ ಕೀಟಗಳ ನಿಯಂತ್ರಣಕ್ಕೆ ರೈತರು ಹೆಚ್ಚು ಗಮನ ಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.