ADVERTISEMENT

ಕೈತುಂಬಾ ಕಾಸು ತರುವ ಸೇವಂತಿಗೆ

ಚಂದ್ರಹಾಸ ಚಾರ್ಮಾಡಿ
Published 26 ಜೂನ್ 2017, 19:30 IST
Last Updated 26 ಜೂನ್ 2017, 19:30 IST
ಕೈತುಂಬಾ ಕಾಸು ತರುವ ಸೇವಂತಿಗೆ
ಕೈತುಂಬಾ ಕಾಸು ತರುವ ಸೇವಂತಿಗೆ   

ಕಬ್ಬು, ಭತ್ತ, ತರಕಾರಿ ಬೆಳೆಗಳ ಪರಿಚಯ ಅವರಿಗಿದೆ. ಕಬ್ಬು ವಾರ್ಷಿಕ ಬೆಳೆಯಾದರೆ, ಇತ್ತೀಚಿನ ದಿನಗಳಲ್ಲಿ ಭತ್ತದ ಕೆಲಸಗಳಿಗೆ ಕೂಲಿಯಾಳುಗಳ ಕೊರತೆ. ತರಕಾರಿ ಬೆಳೆದರೆ ಅದರಿಂದಲೂ ಪಡೆದ ಲಾಭ ಅಷ್ಟಕ್ಕಷ್ಟೆ. ಆದ್ದರಿಂದಲೇ ಇರುವ ಎರಡು ಎಕರೆ ಭೂಮಿಯನ್ನು ಸಮಭಾಗವನ್ನಾಗಿಸಿ ಒಂದು ಭಾಗದಲ್ಲಿ ಅವರು ಕಬ್ಬನ್ನು ನೆಟ್ಟಿದ್ದಾರೆ. ಉಳಿದ ಒಂದು ಎಕರೆಯಲ್ಲಿ ಪುಷ್ಪಕೃಷಿ ಶುರು ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಗಂಜಿಗೆರೆಕೊಪ್ಪಲಿನ ಜ್ಯೋತಿಯವರ ಈ ಪ್ರಯತ್ನ ಇದೀಗ ಯಶಸ್ಸನ್ನು ಕಂಡಿದೆ. ಕಬ್ಬು, ಭತ್ತ, ತರಕಾರಿ ಬೆಳೆಗಳಿಗಿಂತ ಸೇವಂತಿಗೆಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯುವ ಮೂಲಕ ಬದುಕು ರೂಪಿಸಿಕೊಂಡಿದ್ದಾರೆ. ಕೆ.ಆರ್. ಪೇಟೆಯ ಮಣ್ಣಿನಲ್ಲೂ ಸೇವಂತಿಗೆ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಸೇವಂತಿಗೆ ಒಂದು ವರ್ಷದವರೆಗೆ ಹೂ ನೀಡುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜುನಾಥ ಸ್ವಸಹಾಯ ಸಂಘದ ಸದಸ್ಯರಾದ ಜ್ಯೋತಿ ಪ್ರಾಯೋಗಿಕವಾಗಿ ನೆಟ್ಟ ಸೇವಂತಿಗೆ ಇದೀಗ ಭರಪೂರ ಇಳುವರಿ ನೀಡುತ್ತಿದೆ.

ADVERTISEMENT

ನಾಟಿ: ನೀರಾವರಿ ವ್ಯವಸ್ಥೆಯಿದ್ದರೆ ಸೇವಂತಿಗೆಯನ್ನು ಯಾವಾಗ ಬೇಕಾದರೂ ನಾಟಿ ಮಾಡಬಹುದು. ನಾಟಿಗಿಂತ ಮುಂಚೆ ಭೂಮಿಯನ್ನು ಉಳುಮೆ ಮಾಡಿಕೊಳ್ಳಬೇಕು. ನಂತರ ಅರ್ಧ ಅಡಿ ಎತ್ತರ, ಒಂದೂವರೆ ಅಡಿ ಅಗಲದ ಏರಿಯನ್ನು ನಿರ್ಮಿಸಿಕೊಂಡು ಬುಡದಿಂದ ಬುಡಕ್ಕೆ ಒಂದೂವರೆ ಅಡಿ ಅಂತರ ಬಿಟ್ಟು ನಾಟಿ ಮಾಡಬೇಕು.

ಸಾವಿರ ಸಸಿಗಳಿಗೆ ₹800ರಂತೆ ನೀಡಿ, ಸಸಿಗಳನ್ನು ನರ್ಸರಿಯಿಂದ ಖರೀದಿಸಿ ತಂದಿದ್ದಾರೆ ಜ್ಯೋತಿ. ಒಂದು ಬಾರಿ ಬೆಳೆದ ನಂತರ ಬೆಳೆದ ರೆಂಬೆಗಳನ್ನು ಕತ್ತರಿಸಿ ಅವುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಟ್ಟು ಸಸಿ ತಯಾರಿಸಲು ಸಾಧ್ಯ. ಒಂದು ಎಕರೆಯಲ್ಲಿ ಸರಾಸರಿ 6,500 ಗಿಡಗಳನ್ನು ನಾಟಿ ಮಾಡಬಹುದು.

ಪುಷ್ಪಕೃಷಿಗೆ ನೀರಾವರಿ ಅಗತ್ಯ. ಆರಂಭದಲ್ಲಿ ಬುಡಗಳಿಗೆ ಪ್ರತಿನಿತ್ಯ ಅರ್ಧಗಂಟೆ ನೀರು ಕೊಡಬೇಕು. ಗಿಡ ಚಿಗುರಿದ ನಂತರ ಮೂರು ದಿನಕ್ಕೊಮ್ಮೆ ನೀರು ನೀಡಬೇಕು.

ಜ್ಯೋತಿಯವರು ತಿಂಗಳಲ್ಲಿ ಒಂದು ಬಾರಿ ರಾಸಾಯನಿಕ ಗೊಬ್ಬರ ನೀಡುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರ ಸಹ ಬೆಳೆಗೆ ಸೂಕ್ತವಾಗಿದ್ದು ಕಳೆ ಕಿತ್ತ ಬಳಿಕ ಒಂದು ಹಿಡಿಯಷ್ಟು ಗೊಬ್ಬರವನ್ನು ನೀಡಬಹುದು.

ಸೇವಂತಿಗೆಯಲ್ಲಿ ಬಿಳಿ, ನಸುಗೆಂಪು, ಹಳದಿ, ನೀಲಿ ಹೀಗೆ ಐದಾರು ಬಣ್ಣಗಳಿದ್ದು ಜ್ಯೋತಿಯವರು ಪೂರ್ಣಿಮಾ ತಳಿಯ ಹಳದಿ ಬಣ್ಣದ ಸೇವಂತಿಗೆ ಗಿಡಗಳನ್ನು ಬೆಳೆದಿದ್ದಾರೆ. ನೆಟ್ಟು ಮೂರು ತಿಂಗಳ ನಂತರ ಗಿಡ ಹೂ ನೀಡಲು ಆರಂಭಿಸುತ್ತದೆ.

ಇವರು ಹನ್ನೆರಡು ದಿನಕ್ಕೊಂದು ಬಾರಿಯಂತೆ ಹೂವು ಕಟಾವು ಮಾಡುತ್ತಾರೆ. ಒಮ್ಮೆ ಕಟಾವು ಮಾಡುವಾಗ 3 ಕುಚ್ಛಿ ಹೂವು ಸಿಗುತ್ತದೆ. ಒಂದು ಕುಚ್ಛಿ ಹೂವು ಅಂದರೆ ಹದಿನಾರು ಮಾರು ಉದ್ದವಿರುತ್ತದೆ. ಕುಚ್ಛಿಯೊಂದಕ್ಕೆ ಬೇಡಿಕೆಗೆ ಅನುಗುಣವಾಗಿ ಸರಾಸರಿ ₹ 800 ದರವಿದೆ. ಹಬ್ಬ ಹರಿದಿನಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು ಇವರು ಮಂಡ್ಯ ಮಾರುಕಟ್ಟೆಗೆ ಹೂವನ್ನು ನೀಡುತ್ತಾರೆ.

ಒಂದು ವರ್ಷದ ನಂತರ ಹೂವು ಗಾತ್ರದಲ್ಲಿ ಸಣ್ಣದಾಗುತ್ತಾ ಬರುತ್ತದೆ. ಗಿಡ ಒಣಗಲು ಆರಂಭವಾದ ನಂತರ ಗಿಡವನ್ನು ಕತ್ತರಿಸುತ್ತಾರೆ. ಬಡ್ಡುಗಳನ್ನು ತೆಗೆದು ಬೇರೆಡೆ ನಾಟಿ ಮಾಡಬಹುದು. ಗಿಡಗಳ ಮಧ್ಯೆ ಕಳೆಗಳು ಬರುವುದು ಮಾಮೂಲಿ.

ಹನ್ನೆರಡು ದಿನಕ್ಕೊಂದು ಬಾರಿ ಹೂ ಕಟಾವು ಮಾಡಿ ಕಳೆ ಕೀಳುವ ಕೆಲಸವನ್ನು ಮಾಡಬೇಕು. ನಂತರ ಗಿಡಗಳಿಗೆ ಗೊಬ್ಬರ, ನೀರು ನೀಡಬೇಕು. ಗಿಡ ಒಣಗಿದರೆ, ಬಾಡಿದಂತೆ ಕಂಡು ಬಂದರೆ ತಕ್ಷಣ ಆ ಭಾಗವನ್ನು ಕತ್ತರಿಸಿ ಔಷಧಿ ಸಿಂಪಡಿಸಬೇಕು.

ಪುಷ್ಪಕೃಷಿಯಲ್ಲಿ ಸಾಕಷ್ಟು ಕೆಲಸಗಳಿವೆ. ಆದರೆ ಇತರ ತರಕಾರಿ ಬೆಳೆಗಿಂತ ಇದು ಲಾಭದಾಯಕ. ಮತ್ತು ಮಾರುಕಟ್ಟೆ ಸಮಸ್ಯೆಯೂ ಕಡಿಮೆ ಎಂಬುದು ಜ್ಯೋತಿಯವರ ಅನುಭವದ ಮಾತು.
ಸಂಪರ್ಕಕ್ಕೆ: 91648 78939
ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.