ADVERTISEMENT

ಕೊಳಚೆ ನೀರಿನಲ್ಲಿ ಸಮೃದ್ಧ ಭತ್ತದ ಬೆಳೆ!

ಗಣಂಗೂರು ನಂಜೇಗೌಡ
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST
ಕೊಳಚೆ ನೀರಿನಲ್ಲಿ ಸಮೃದ್ಧ ಭತ್ತದ ಬೆಳೆ!
ಕೊಳಚೆ ನೀರಿನಲ್ಲಿ ಸಮೃದ್ಧ ಭತ್ತದ ಬೆಳೆ!   

ಕೆಆರ್‌ಎಸ್‌ ಜಲಾಶಯ ಭಣಗುಡುತ್ತಿದೆ. ಈ ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಲ್ಲ ನಾಲೆಗಳು ಬರಿದಾಗಿವೆ. 300 ವರ್ಷಗಳ ಹಿಂದಿನ ನದಿ ಒಡ್ಡಿನ ನಾಲೆಗಳಲ್ಲೂ ನೀರು ನಿಲ್ಲಿಸಲಾಗಿದೆ. ಮೈಸೂರು ನಗರದಿಂದ ಹಳ್ಳದ ಮೂಲಕ ಹರಿದು ಹೋಗುತ್ತಿದ್ದ ಕೊಳಚೆ ನೀರು ಈ ಭಾಗದ ರೈತರಿಗೆ ವರದಾನವಾಗಿದೆ.

ವ್ಯರ್ಥವಾಗಿ ಹರಿಯುತ್ತಿದ್ದ ಕೊಳಚೆ ನೀರನ್ನು ತಮ್ಮ ಗದ್ದೆಯ ಕಡೆಗೆ ತಿರುಗಿಸಿದ್ದಾರೆ. ಈ ನೀರಿನಿಂದಲೇ ಶ್ರೀರಂಗಪಟ್ಟಣ ಮತ್ತು ಮೈಸೂರು ತಾಲ್ಲೂಕುಗಳ ನೂರಾರು ರೈತರು ಭತ್ತದ ಬೆಳೆಯನ್ನು ಯಶಸ್ವಿಯಾಗಿ ಬೆಳೆದಿದ್ದು, ‘ಬರ’ವನ್ನು ದೂರ ಅಟ್ಟಿದ್ದಾರೆ.

ಮೈಸೂರು ನಗರ ಮತ್ತು ಕಾರ್ಖಾನೆಗಳ ತ್ಯಾಜ್ಯ ನೀರು ಬೆಳಗೊಳ ಮತ್ತು ಸುತ್ತಮುತ್ತಲಿನ ಗ್ರಾಮಗಳತ್ತ ಹರಿದು ಬರುತ್ತಿದೆ. ಅಡ್ಡಹಳ್ಳದ ಮೂಲಕ ಕಾವೇರಿ ನದಿಗೆ ಸೇರುತ್ತಿದ್ದ ಕೊಳಚೆ ನೀರನ್ನು ತಡೆದು ಬೆಳಗೊಳ, ಹೊಸ ಆನಂದೂರು, ಕಾರೇಕುರ, ಹೊಸಹಳ್ಳಿ ಮತ್ತು ಮೈಸೂರು ತಾಲ್ಲೂಕಿನ ಕುಂಬಾರಕೊಪ್ಪಲು ಗ್ರಾಮಗಳ ರೈತರು ತಮ್ಮ ಗದ್ದೆಗಳಿಗೆ ಹರಿಸಿ ಬಿರು ಬೇಸಿಗೆಯಲ್ಲೂ ಭತ್ತದ ಬೆಳೆಯನ್ನು ಸಮೃದ್ಧವಾಗಿ ಬೆಳೆಯುತ್ತಿದ್ದಾರೆ.

ಕೊಳಚೆ ನೀರಿನಿಂದಲೇ ಸುಮಾರು 200 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿದೆ. ಬೇಗ ಕೊಯ್ಲಿಗೆ ಬರುವ ಜ್ಯೋತಿ, ಹೈಬ್ರಿಡ್‌ ತಳಿಗಳಾದ ಅಮ್ಮ, ಮಹಾಲಕ್ಷ್ಮೀ, ಪಿಎ–16 ಇತರ ತಳಿಯ ಭತ್ತದ ಪೈರನ್ನು ರೈತರು ನಾಟಿ ಮಾಡಿದ್ದಾರೆ.

ಮೈಸೂರಿನ ಹೆಬ್ಬಾಳದ ಕೆರೆ ಕಡೆಗೆ ಹರಿಯುತ್ತಿದ್ದ ಮೈಸೂರು ನಗರದ ಮಲಿನ ನೀರು ಆ ಕೆರೆಗೆ ಬೀಳದಂತೆ ಕೆಳಭಾಗಕ್ಕೆ ತಿರುಗಿಸಲಾಗಿದೆ. ಮೈಸೂರಿನ ಕೈಗಾರಿಕಾ ಪ್ರದೇಶ, ವಿಕ್ರಾಂತ್‌ ಕಾರ್ಖಾನೆ, ಕಾಫಿ ಕ್ಯೂರಿಂಗ್‌ ಘಟಕ, ಸೂರ್ಯಬೇಕರಿ ಇತರ ಕಡೆಗಳ ಕೊಳಚೆ ನೀರು ಮೈಸೂರು ಗಡಿ ದಾಟಿ ಬೆಳಗೊಳದತ್ತ ಹರಿದು ಬರುತ್ತಿದೆ. ಸುಮಾರು 10ರಿಂದ 15 ಕ್ಯೂಸೆಕ್‌ನಷ್ಟು ಕೊಳಚೆ ನೀರು ಅಡ್ಡಹಳ್ಳಕ್ಕೆ ಬಂದು ಬೀಳುತ್ತಿದೆ. ಹಳ್ಳದ ಆಸುಪಾಸಿನ ಜಮೀನುಗಳ ರೈತರು ಈ ನೀರನ್ನು ತಡೆದು ತಮ್ಮ ಜಮೀನುಗಳಿಗೆ ಹಾಯಿಸಿಕೊಂಡು ಕೃಷಿ ಮಾಡುತ್ತಿದ್ದಾರೆ.

‘ಕೆಆರ್‌ಎಸ್‌ ಜಲಾಶಯ ಅಚ್ಚುಕಟ್ಟು ಪ್ರದೇಶದ ವಿಶ್ವೇಶ್ವರಯ್ಯ, ವಿರಿಜಾ, ಚಿಕ್ಕದೇವರಾಯಸಾಗರ, ಬಂಗಾರದೊಡ್ಡಿ ನಾಲೆಗಳಲ್ಲಿ 2016ರ ಡಿಸೆಂಬರ್‌ನಿಂದಲೇ ನೀರು ನಿಲ್ಲಿಸಲಾಗಿದೆ. ಹಾಗಾಗಿ ಈ ನಾಲೆಗಳ ನೀರನ್ನೇ ನೆಚ್ಚಿಕೊಂಡಿದ್ದ ರೈತರು ಕಂಗಾಲಾಗಿದ್ದರು.

ಹೆಬ್ಬಾಳ ಕೆರೆಗೆ ಬೀಳುತ್ತಿದ್ದ ಮೈಸೂರು ನಗರದ ಕೊಳಚೆ ನೀರನ್ನು ಇತ್ತ ತಿರುಗಿಸಿರುವುದು ರೈತರಿಗೆ ಅನುಕೂಲವಾಗಿದೆ. ಕೊಳಚೆ ನೀರು ಬಳಸಿ 2 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯುತ್ತಿದ್ದೇನೆ. ನನ್ನಂತೆ ನೂರಾರು ಮಂದಿ ರೈತರು ಇದೇ ನೀರಿನಿಂದ ಕೃಷಿ ಮಾಡುತ್ತಿದ್ದಾರೆ. ವಾಸನೆಯನ್ನು ತುಸು ಸಹಿಸಿಕೊಳ್ಳಬೇಕು ಅಷ್ಟೆ’ ಎಂದು ಬೆಳಗೊಳ ಗ್ರಾಮದ ರೈತ ವೆಂಕಟೇಶ್ ಹೇಳುತ್ತಾರೆ.

ಕಡಿಮೆ ಖರ್ಚು
‘ಕೊಳಚೆ ನೀರಿನಲ್ಲಿ ಕೃಷಿ ಮಾಡುವುದರಿಂದ ಖರ್ಚು ಸಾಕಷ್ಟು ಮಿಕ್ಕಿದೆ. ಬಿತ್ತನೆ ಬೀಜವನ್ನು ಒಟ್ಲು ಮಡಿಗೆ ಹಾಕುವಾಗ ಮೇಲು ಗೊಬ್ಬರವಾಗಿ ಮೂರ್ನಾಲ್ಕು ಕೆ.ಜಿಯಷ್ಟು ರಸಗೊಬ್ಬರವನ್ನು ಮಾತ್ರ ಬಳಸಲಾಗಿದೆ. ನಂತರ ಈ ಬೆಳೆಗೆ ಲವಲೇಶವೂ ರಸಗೊಬ್ಬರ ಹಾಕಿಲ್ಲ. 

ADVERTISEMENT

ಕೊಟ್ಟಿಗೆ ಗೊಬ್ಬರವನ್ನೂ ಕೊಟ್ಟಿಲ್ಲ. ಆದರೂ ಸಾಕಷ್ಟು ಗೊಬ್ಬರ ಹಾಕುತ್ತಿದ್ದ ವರ್ಷಗಳಲ್ಲಿ ಬರುತ್ತಿದ್ದ ಬೆಳೆಗಿಂತಲೂ ಈ ಬಾರಿ ಭತ್ತದ ಪೈರು ಉಲುಸಾಗಿ ಬೆಳೆದಿದೆ’ ಎನ್ನುವುದು ಮೈಸೂರು ತಾಲ್ಲೂಕು ಕುಂಬಾರಕೊಪ್ಪಲು ಗ್ರಾಮದ ರೈತ ಸತೀಶ್‌ ಅವರ ಮಾತು.

‘ಕೊಳಚೆ ನೀರಿನಲ್ಲಿ ರಾಸುಗಳಿಗೆ ಸಾಕಷ್ಟು ಮೇವು ಸಿಗುತ್ತಿದೆ. ಭತ್ತ ಬೆಳೆಯುತ್ತಿರುವ ಕೃಷಿ ಭೂಮಿಯ ಬದುಗಳ ಮೇಲೆ ಬೆಳೆಯುವ ಜೊಂಡು, ಗರಿಕೆ, ಅಣ್ಣೆಕಡ್ಡಿ, ಗಂಡುಬತ್ತ ಇತರ ಬಗೆಯ ಹುಲ್ಲು ರಾಸುಗಳಿಗೆ ಮೇವು ಒದಗಿಸುತ್ತಿದೆ. ಕಳೆದ ಒಂದು ತಿಂಗಳಿನಿಂದ ಹಸಿರು ಹುಲ್ಲು ಕೊಯ್ಯುತ್ತಿದ್ದು, ಕೊಯ್ದಷ್ಟೂ ಬೆಳೆಯುತ್ತಿದೆ.

ಭತ್ತದ ಬೆಳೆ ಕಟಾವಿನ ನಂತರವೂ ಸಾಕಷ್ಟು ಒಣಮೇವು ಸಿಗಲಿದೆ. ಹುಲ್ಲು ಖರೀದಿಸುವ ಹಣ ಕೂಡ ಉಳಿಯಲಿದೆ’ ಎಂದು ಹೊಸ ಆನಂದೂರು ಗ್ರಾಮದ ರೈತ ಪುಟ್ಟಯ್ಯ ಸಂತಸದಿಂದ ಹೇಳುತ್ತಾರೆ.

‘ಮನೆಗಳು, ಹೋಟೆಲ್‌ಗಳು ಮತ್ತು ಕಾರ್ಖಾನೆಗಳಿಂದ ಬರುವ ಕೊಳಚೆ ನೀರಿನಲ್ಲಿ ಬೆಳೆಗಳಿಗೆ ಬೇಕಾದ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ನೈಟ್ರೇಟ್‌ ರೂಪದಲ್ಲಿ ಸಾರಜನಕ, ಡಿಟರ್ಜಂಟ್‌ ರೂಪದಲ್ಲಿ ಫಾಸ್ಪರಸ್‌, ರಂಜಕ, ಪೊಟ್ಯಾಷ್‌ ಇತರ ಅಂಶಗಳು ಸೇರಿರುತ್ತವೆ.

ಇವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಸಾವಯವ ಅಂಶ ವೃದ್ಧಿಯಾಗುವಂತೆ ಮಾಡುತ್ತವೆ. ಹಾಗಾಗಿ ಕೊಳಚೆ ನೀರು ಬಳಸಿ ಬೆಳೆಯುವ ಬೆಳೆಗಳಿಗೆ ಪ್ರತ್ಯೇಕವಾಗಿ ರಸಗೊಬ್ಬರ ಕೊಡುವ ಅಗತ್ಯ ಇರುವುದಿಲ್ಲ’ ಎನ್ನುವುದು ಮಂಡ್ಯ ಕೃಷಿ ಸಂಶೋಧನಾ ಕಾಲೇಜಿನ ಮಣ್ಣು ವಿಜ್ಞಾನಿ ಡಾ.ಶ್ರೀನಿವಾಸ್‌ ಅವರ ವಿವರಣೆ.

‘ಕಾರ್ಖಾನೆಗಳ ತ್ಯಾಜ್ಯದಲ್ಲಿ ಸೀಸ, ತಾಮ್ರ, ಕ್ಯಾಡ್ಮಿಯಂ ಇತರ ಲೋಹದ ಅಂಶ ಇದ್ದರೆ, ಅದು ಕೃಷಿ ಭೂಮಿಗೆ ಸೇರಿದರೆ ಬೆಳೆ ನಷ್ಟವಾಗುವ ಸಂಭವ ಇರುತ್ತದೆ. ಹಾಗಾಗಿ ಲೋಹಗಳು ಮಣ್ಣಿಗೆ ಸೇರದಂತೆ ಎಚ್ಚರ ವಹಿಸಬೇಕು’ ಎಂಬ ಸಲಹೆಯನ್ನೂ ಅವರು ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.