ADVERTISEMENT

ಟ್ರೀ ಟೊಮೇಟೊ

ಕೆ.ಎಸ್.ಪೂರ್ಣಿಮಾ ಕಾನಹಳ್ಳಿ
Published 28 ಡಿಸೆಂಬರ್ 2011, 19:30 IST
Last Updated 28 ಡಿಸೆಂಬರ್ 2011, 19:30 IST

ಇದು ನೋಡಲು ಟೊಮೇಟೊವನ್ನು ಹೋಲದಿದ್ದರೂ, ರುಚಿ ಮಾತ್ರ ಅಪ್ಪಟ ಟೊಮೇಟೊದಂತೆಯೇ ಇದೆ. ಹೀಗಾಗಿಯೇ ಈ ಹಣ್ಣನ್ನು ಟ್ರೀ ಟೊಮೇಟೊ ಎಂದು ಕರೆಯಲಾಗುತ್ತದೆ.

ಸೋಲಾನಾಸಿಯೇ ಸಸ್ಯ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಸೋಲಾನಿಯ ಬಿಟಾಸಿಯಾ. ಪೆರು, ಚಿಲಿ, ಈಕ್ವೆಡಾರ್, ಕೊಲಂಬಿಯಾ, ಬೊಲಿವಿಯಾ ದೇಶಗಳಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಹೆಚ್ಚಾಗಿ ಬೆಳೆಯುತ್ತಾರೆ. ಈಗೀಗ ಮಲೆನಾಡಿನ ಕಾಫಿ ತೋಟಗಳಲ್ಲಿಯೂ ಕಂಡು ಬರುತ್ತದೆ.

ಏಳೆಂಟು ಅಡಿಗಳ ಪೊದೆಯಾಕಾರದ ಮರದ ತುಂಬಾ ಬಿಡುವ ಹಳದಿ, ಕೆಂಪು ಟೊಮೇಟೊಗಳು ಮೊಟ್ಟೆ ಆಕಾರದಲ್ಲಿ ಇರುತ್ತವೆ. ಎಲ್ಲಾ ಬಗೆಯ ಮಣ್ಣಿಗೂ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುತ್ತವೆ.
 
ಸಸಿ ನೆಟ್ಟ ಒಂದು ವರ್ಷದ ನಂತರ ಫಲ ನೀಡಲಾರಂಭಿಸುತ್ತದೆ. ಬಿಳಿ, ಗುಲಾಬಿ ಬಣ್ಣದ ಹೂ ಸಹ ಆಕರ್ಷಕವಾಗಿರುತ್ತವೆ. ಹೆಚ್ಚಿನ ಆರೈಕೆಯೇನೂ ಬೇಕಿಲ್ಲ. ಕೀಟ- ರೋಗದ ಬಾಧೆ ಕಡಿಮೆ.

ಹಣ್ಣುಗಳು ಹಕ್ಕಿಗಳನ್ನು ಬಹುವಾಗಿ ಸೆಳೆಯುತ್ತವೆ. ಸಹಜವಾಗಿ ಹಕ್ಕಿಗಳಿಂದಲೇ ಬೀಜ ಪ್ರಸಾರವಾಗುವುದರಿಂದ ತೋಟದ ತುಂಬೆಲ್ಲಾ ಗಿಡಗಳು ಹುಟ್ಟುತ್ತವೆ. ಗಾತ್ರದಲ್ಲಿ ಚಿಕ್ಕದಾದರೂ ಸಾಧಾರಣ ಟೊಮೇಟೊಗಿಂತ ಇದರಲ್ಲಿ ತಿರುಳು, ಬೀಜಗಳು ಹೆಚ್ಚು. ಇದು ವಿಟಮಿನ್ ಎ, ಸಿ, ಕ್ಯಾಲ್ಷಿಯಂ, ಕಬ್ಬಿಣ, ಮೆಗ್ನೇಷಿಯಂ ಸತ್ವಗಳನ್ನು ಹೊಂದಿದೆ.

ವಿದೇಶಗಳಲ್ಲಿ ಟ್ರೀ ಟೊಮೇಟೊ ಕತ್ತರಿಸಿ ಉಪ್ಪು, ಕಾಳುಮೆಣಸಿನ ಪುಡಿ ಉದುರಿಸಿ, ತಿರುಳನ್ನು ಮುಂಜಾವಿನ ಉಪಹಾರಕ್ಕೆ ಬಳಸುತ್ತಾರೆ. ಪ್ಯೂರಿ ತಯಾರಿಕೆಯಲ್ಲೂ ಬಳಕೆಯಾಗುತ್ತದೆ.

ಪಾನೀಯ, ಸಾಂಬಾರು, ಚಟ್ನಿ, ಸಲಾಡ್, ಉಪ್ಪಿನಕಾಯಿ ತಯಾರಿಸಬಹುದು. ಆಹಾರ ಪದಾರ್ಥಗಳು ಹೆಚ್ಚು ದಿನ ಕೆಡದಂತೆ ಇಡಲು ಇದರ ಅಂಶವನ್ನು ಉಪಯೋಗಿಸುತ್ತಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಸದಾ ಹಕ್ಕಿಗಳಿಂದ ಕೂಡಿರುವ ಟ್ರೀ ಟೊಮೇಟೊ ಗಿಡ ಕೈತೋಟಕ್ಕೆ ವಿಶೇಷ ಕಳೆ ನೀಡುತ್ತದೆ. ಇದರ ಬಿತ್ತನೆ ಬೀಜಗಳಿಗಾಗಿ ಸಿ. ಜಯರಾಂ ಅವರನ್ನು 94487 92731 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.