ADVERTISEMENT

ಬರಡು ಭೂಮಿಯಲ್ಲಿ ಅರಳಿದ ಆರ್ಕಿಡ್ಸ್

ಜಿ.ಚಂದ್ರಕಾಂತ್
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಬರಡು ಭೂಮಿಯಲ್ಲಿ ಅರಳಿದ ಆರ್ಕಿಡ್ಸ್
ಬರಡು ಭೂಮಿಯಲ್ಲಿ ಅರಳಿದ ಆರ್ಕಿಡ್ಸ್   

ಕಲ್ಲಿನ ಗಣಿ ಹಾಗೂ ಬಿಸಿಲು ಪ್ರದೇಶವೆಂದೇ ಪ್ರಖ್ಯಾತಿ ಹೊಂದಿದ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾಜಾಪುರ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಆರ್ಕಿಡ್ಸ್ ಹೂ ಬೇಸಾಯ ಕೈಗೊಂಡಿದ್ದಾರೆ ಸುಧಾಕರ ಪಾಟೀಲ.

8–9 ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು ಈಗ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಯಶಕಂಡಿದ್ದಾರೆ. ತಮ್ಮ ಒಂದು ಎಕರೆ ಭೂಮಿಯಲ್ಲೇ ಪಾಲಿಹೌಸ್ ನಿರ್ಮಿಸಿಕೊಂಡು ಆರ್ಕಿಡ್ಸ್ ಹೂಗಳನ್ನು ಕೋಕೊ ಸೆಲ್ಸ್ ಮಧ್ಯದಲ್ಲಿ ಬೆಳೆದು ಸಂಭ್ರಮಿಸುತ್ತಿದ್ದಾರೆ.

ಪರಾವಲಂಬಿ ಬೆಳೆಯಾಗಿರುವ ಆರ್ಕಿಡ್ಸ್ ಬಹುವಾರ್ಷಿಕ ಸಸ್ಯ. ಸಾಮಾನ್ಯವಾಗಿ ಇದು ಇದ್ದಿಲು, ಇಟ್ಟಿಗೆ ಚೂರು, ಜಲ್ಲಿಕಲ್ಲು (1:1:1) ತುಂಬಿದ ಕುಂಡಗಳಲ್ಲಿ ಮತ್ತು ತೆಂಗಿನ ಮಧ್ಯದಲ್ಲಿ ಬಿಟ್ಟರೆ ಇನ್ಯಾವುದೇ ಮಣ್ಣಿನಲ್ಲಿ ಬೆಳೆಯುವುದು ಕಷ್ಟ. ಇದನ್ನು ಅರಿತರೂ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದರು ಸುಧಾಕರ.



ಇವರದು ಒಟ್ಟು 24 ಎಕರೆ ಫಲವತ್ತಲ್ಲದ ಗರಸು (ಗೊರಚು) ಜಮೀನು. ಇದರಲ್ಲಿ ಅಲ್ಪಸ್ವಲ್ಪ ತೊಗರಿ, ಜೋಳ, ಸೂರ್ಯಕಾಂತಿ ಮತ್ತಿತರ ಕಡಿಮೆ ಆದಾಯ ಬರುವ ಕೃಷಿ ಬೆಳೆಯನ್ನು ಬೆಳೆಯುತ್ತಿದ್ದರು. ಗೋವಾ ಮತ್ತು ಮಹಾರಾಷ್ಟ್ರ ಹೊರ ರಾಜ್ಯಗಳಲ್ಲಿರುವ ವಿವಿಧ ರೈತರ ಪಾಲಿಹೌಸ್ ಮತ್ತು ಹಸಿರು ಮನೆಗಳಿಗೆ ಭೇಟಿ ಕೊಟ್ಟು ಆರ್ಕಿಡ್ಸ್ ಹೂವು ಬೇಸಾಯದ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದರು.

ಪುಣೆಯ ಕೆ.ಎಫ್. ಬಯೋಟೆಕ್ ಸಂಸ್ಥೆಯ ಮತ್ತು ತೋಟಗಾರಿಕೆ ಇಲಾಖೆಯ ಸೂಕ್ತ ಮಾರ್ಗದರ್ಶನ ಮತ್ತು ಸಲಹೆಯಂತೆ ಇವರು ಆರ್ಕಿಡ್ಸ್ ಹೂ ಬೇಸಾಯ ಕೈಗೊಳ್ಳಲು ನಿರ್ಧರಿಸಿದರು.

ADVERTISEMENT

ಇದಕ್ಕಾಗಿ 2014–15ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ 40 ಗುಂಟೆ ಬರಡು ಭೂಮಿಯಲ್ಲಿ ಆರ್ಕಿಡ್ಸ್ ಹೂ ಬೆಳೆಯಲು ಬ್ಯಾಂಕಿನಿಂದ ₹10 ಲಕ್ಷ ಸಾಲ ಸೌಲಭ್ಯ ಪಡೆದರು. ತೋಟಗಾರಿಕೆ ಇಲಾಖೆಯಿಂದ ₹19.30 ಲಕ್ಷ ಸಹಾಯಧನ ಸಿಕ್ಕಿತು.

ಮೊದಲಿಗೆ ಪಾಲಿಹೌಸ್ ಮತ್ತು ಒಳಸುರಿಗಳನ್ನು ನಿರ್ಮಿಸಿಕೊಂಡು ನಂತರ ಒಟ್ಟು 40ಸಾವಿರ ಆರ್ಕಿಡ್ಸ್ ಸಸಿಗಳನ್ನು 2015ರ ಫೆಬ್ರುವರಿ ತಿಂಗಳಿನಲ್ಲಿ ನಾಟಿ ಮಾಡಿದರು. ತೋಟಗಾರಿಕೆ ಇಲಾಖೆ ಸಹಾಯದಿಂದ ಬೆಳೆಗೆ ಬೇಕಾದ ಅಗತ್ಯ ಪೋಷಕಾಂಶ ನೀಡಿದರು. ಬೆಳೆಯ ಸಂರಕ್ಷಣೆಗಾಗಿ ರೋಗಪೀಡೆಯನ್ನು ನಿರ್ವಹಣೆ ಮಾಡಿದರು.

ವರ್ಷದಲ್ಲಿಯೇ ಹೂಗಳ ಕೊಯ್ಲು ಮಾಡುತ್ತಿದ್ದಾರೆ. ಹೂಗಳನ್ನು ಪ್ಯಾಕ್ ಮಾಡಿ ಹೈದರಾಬಾದಿನ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಪ್ರತಿ ತಿಂಗಳು 70–80ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.

‘ಚಿತ್ತಾಪುರ ತಾಲ್ಲೂಕಿನ ಯಾವ ರೈತರೂ ಪಾಲಿಹೌಸ್ ನಿರ್ಮಿಸಿಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಆದರೆ ನಾನು ಧೃತಿಗೆಡದೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸೂಕ್ತ ತಾಂತ್ರಿಕ ಮಾರ್ಗದರ್ಶನದೊಂದಿಗೆ ಹೆಜ್ಜೆ ಇಟ್ಟೆ. ಈಗ ಸಫಲನಾಗಿರುವುದು ಮಾತ್ರವಲ್ಲದೇ ಆರ್ಥಿಕ ಸ್ಥಿತಿಯೂ ಉತ್ತಮವಾಗಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

‘ಈ ಹೂವಿಗೆ ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಸಿಗುತ್ತಿದೆ. ಮಧ್ಯವರ್ತಿಗಳ ಸಹಾಯವಿಲ್ಲದೆ ನಾನೇ ಹೂಗಳನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಹಣ ಕೈ ಸೇರುತ್ತಿದೆ’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ 9480162121.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.