ADVERTISEMENT

ಸಾವಯವದಲಿ ದಾಳಿಂಬೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ಸಾವಯವದಲಿ ದಾಳಿಂಬೆ
ಸಾವಯವದಲಿ ದಾಳಿಂಬೆ   

ಮೂರು ವರ್ಷಗಳಿಗಿಂತ ಕಡಿಮೆ ಇರದ, ಬಲಿತ ಸಸಿ ನಾಟಿಗೆ ಯೋಗ್ಯ. ಗೂಟಿ ಪದ್ಧತಿಯಿಂದ ಸಸ್ಯಾಭಿವೃದ್ಧಿ ಮಾಡಿದ ತಳಿಗಳು ಇನ್ನೂ ಉತ್ತಮ. ನಾಟಿಗೆ ಬಳಸುವ ಸಸಿಗಳು ಯಾವುದೇ ರೀತಿ ರೋಗಪೀಡಿತವಾಗಿರದಂತೆ ನೋಡಿಕೊಳ್ಳುವುದು ಬಹು ಮುಖ್ಯ.

ಮುಂಗಾರು ಮಳೆ ಪ್ರಾರಂಭಕ್ಕೆ ಮುಂಚೆ ನಾಟಿ ಮಾಡುವುದು ಉತ್ತಮ. ಸುಮಾರು 60 ಸೆಂ.ಮೀ. ಆಳದ ಗುಂಡಿ ತೆಗೆಯಬೇಕು. ಈ ಗುಂಡಿಗಳನ್ನು ಸ್ವಲ್ಪ ಸಮಯದವರೆಗೆ ಬಿಸಿಲಿಗೆ ಬಿಟ್ಟ ನಂತರ, ಕಳಿತ ಗೊಬ್ಬರ ಹಾಗೂ ಉತ್ತಮ ಗುಣಮಟ್ಟದ ಮೇಲ್ಮಣ್ಣನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಗುಂಡಿಗೆ ತುಂಬಿ, ನೀರು ಹಾಯಿಸಬೇಕು. ಈ ರೀತಿ ಮಾಡುವುದರಿಂದ ಗುಂಡಿ ನಾಟಿ ಮಾಡಲಿಕ್ಕೆ ಸಿದ್ಧವಾಗುವುದು.

ದಾಳಿಂಬೆ ಬೆಳೆಯನ್ನು ನಾಟಿ ಮಾಡಲು ಸೂಕ್ತವಾದ ಸಮಯವೆಂದರೆ ಜೂನ್‌–ಜುಲೈ.

ADVERTISEMENT

ದಾಳಿಂಬೆ ಅತಿಯಾದ ಬರಗಾಲವನ್ನು ತಡೆಯುವುದಿಲ್ಲ. ಆದ್ದರಿಂದ ಅವಶ್ಯಕತೆಗೆ ಅನುಗುಣವಾಗಿ ನೀರು ಹಾಯಿಸುವುದು ಅವಶ್ಯಕ. ಹೊಸದಾಗಿ ನಾಟಿ ಮಾಡಿದ ಸಸಿಗಳಿಗೆ ಸಕಾಲದಲ್ಲಿ ಮಳೆ ಬರದಿದ್ದರೆ ನಿಯಮಿತವಾಗಿ ನೀರು ಹಾಯಿಸುವುದನ್ನು ಮುಂದುವರಿಸಬೇಕು. ಇದರಿಂದ ಸಸಿಗಳು ಸಮರ್ಪಕವಾಗಿ ಬೇರು ಬಿಟ್ಟು ಹತ್ತಿಕೊಳ್ಳಲು ಸಹಕಾರಿಯಾಗುವುದು.

ದಾಳಿಂಬೆ ಕಾಯಿಗಳಿಗೆ ಚುಕ್ಕೆ ಬಂದಿದ್ದರೆ ರೋಗದ ಹಾವಳಿ ನಿವಾರಣೆಗಾಗಿ 8 ದಿನ ಹುಳಿಸಿದ (ಹುದುಗಿಸಿದ) 1 ಲೀಟರ್‌  ಮೊಸರಿಗೆ 15 ಲೀಟರ್‌ ನೀರು ಬೆರೆಸಿ ಸಿಂಪಡಿಸಿ. ಇದೇ ರೀತಿ 100 ಲೀಟರಿಗೆ 100 ಗ್ರಾಂ ‘ವಾಯ್‌ವಿಳಂಗು’ ಬೀಜಗಳನ್ನು ಮೊದಲ ದಿನದ ಸಂಜೆ ಉಗುರುಬೆಚ್ಚಗಿನ ನೀರಿನಲ್ಲಿ ತಾಮ್ರದ ಪಾತ್ರೆಯಲ್ಲಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ನುಣ್ಣಗೆ ಅರೆದು 4 ಲೀಟರ್‌  ಕಾಯಿಸಿದ (ಹಸಿ–ತಾಜಾ) ಆಕಳ ಹಾಲಿನಲ್ಲಿ ಚೆನ್ನಾಗಿ ಕಲೆಸಿ ಸಿಂಪಡಿಸಿ ಕಾಪಾಡಿಕೊಳ್ಳಬಹುದು.

ಬಾವುಲಿ ಅಥವಾ ಇನ್ನಿತರ ಪ್ರಾಣಿಗಳ ಕಾಟಕ್ಕೆ ಗಿಡಗಳನ್ನು ನೈಲಾನ್‌ ಬಲೆಗಳಿಂದ ರಕ್ಷಿಸಿಕೊಳ್ಳಿ.

ಪಾಲಿ ಇಥಿಲೀನ್ ಅಥವಾ ಪಾಲಿ ಪ್ರೊಪಿಲೀನ್ ಚೀಲಗಳಲ್ಲಿ ಕಡಿಮೆ ವಾತಾವರಣದಲ್ಲಿ ಶೇಖರಿಸುವುದರಿಂದ ದಾಳಿಂಬೆಯನ್ನು ತಾಜಾ ಆಗಿ ಬಹುಕಾಲ ಇಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.