ADVERTISEMENT

ಹುಳು ಕೊಲ್ಲಲು ಖಿಲೋನಿಸ್

ಅನಿತಾ ಈ.
Published 22 ಸೆಪ್ಟೆಂಬರ್ 2014, 19:30 IST
Last Updated 22 ಸೆಪ್ಟೆಂಬರ್ 2014, 19:30 IST
ಹುಳು ಕೊಲ್ಲಲು ಖಿಲೋನಿಸ್
ಹುಳು ಕೊಲ್ಲಲು ಖಿಲೋನಿಸ್   

ಇಳುವರಿ ಕಡಿಮೆ ಮಾಡುವ ಕೊರಕು ಹುಳುಗಳ ಬಾಧೆಯಿಂದ ರೈತರು ಅನುಭವಿಸುವ ನಷ್ಟ ಅಷ್ಟಿಷ್ಟಲ್ಲ . ಈ ಹುಳಗಳ ನಾಶಕ್ಕೆ ಇನ್ನೊಂದು ಹುಳದ ಸೃಷ್ಟಿಯಾಗಿದೆ. ಅದೇ ‘ಟ್ರೈಕೋಗ್ರಾಮಾ ಖಿಲೋನಿಸ್‌’.

ಕೊರಕಲು ಹುಳುಗಳನ್ನು ಮೊಟ್ಟೆಯ ಹಂತದಲ್ಲೇ ನಾಶಪಡಿಸಲು ಬಹು ಕೀಟನಾಶಕ ನಿರೋಧಕ ಶಕ್ತಿ ಹೊಂದಿರುವ ‘ಟ್ರೈಕೋಗ್ರಾಮಾ ಖಿಲೋನಿಸ್‌’ ಎಂಬ ಪರಾವಲಂಬಿ ಕೀಟ ಇದು. ಪತಂಗ ಜಾತಿಯ ಪೀಡೆ ಕೀಟಗಳು (ಕೊರಕು ಹುಳು) ಹಣ್ಣು, ತರಕಾರಿ, ಭತ್ತ, ಜೋಳ, ನಿಂಬೆ ಚಿಗುರು, ಹತ್ತಿ ಹಾಗೂ ಕಬ್ಬಿನ ಸುಳಿಯನ್ನು ಕೊರೆದು ತಿನ್ನುವುದರಿಂದ ಇಳುವರಿ ಕಡಿಮೆಯಾಗುತ್ತದೆ. ಇಂತಹ ಕೀಟಗಳ ವಿರುದ್ಧ ಹೋರಾಡಲು ‘ರಾಷ್ಟ್ರೀಯ ಕೃಷಿ ಪ್ರಾಮುಖ್ಯ ಕೀಟಗಳ ಸಂಸ್ಥೆ’, ‘ಟ್ರೈಕೋಗ್ರಾಮಾ ಖಿಲೋನಿಸ್‌’ ಎಂಬ ಪರಾವಲಂಬಿ ಕೀಟವನ್ನು ಅಭಿವೃದ್ಧಿಪಡಿಸಿದೆ. ಇದು 36 ಡಿಗ್ರಿ ವರೆಗೂ ಉಷ್ಣತೆಯನ್ನು ಸಹಿಸಬಲ್ಲದು.

ಎರಿ ರೇಷ್ಮೆ ಹುಳದ ಮೊಟ್ಟೆಯನ್ನು ಬಳಸಿ ‘ಟ್ರೈಕೋಗ್ರಾಮಾ ಖಿಲೋನಿಸ್‌’ ಕೀಟವನ್ನು ತಯಾರಿಸಲಾಗುತ್ತದೆ. ಕೀಟವು ಬೆಳೆದ ನಂತರ ಗಾತ್ರದಲ್ಲಿ 2 ಮಿಲಿ ಮೀ ಇರುತ್ತದೆ. ಜನಿಸಿದ ನಂತರ 10 ದಿನಗಳ ಕಾಲ ಮಾತ್ರ ಜೀವಿಸುತ್ತದೆ. ಈ ಅವಧಿಯಲ್ಲಿ ಬೆಳೆಗೆ ಹಾನಿ ಮಾಡುವ ಕೊರಕು ಕೀಟದ ಮೊಟ್ಟೆಗಳನ್ನು ನಾಶಮಾಡುತ್ತವೆ.

ರೈತ ಸ್ನೇಹಿ ಜೈವಿಕ ಕೀಟನಾಶಕ ‘ಟ್ರೈಕೋಗ್ರಾಮಾ ಖಿಲೋನಿಸ್‌’ ಕೀಟವು ಕೊರಕು ಹುಳು ಇಟ್ಟಿರುವ ಮೊಟ್ಟೆಗಳ ಮೇಲೆ ಕುಳಿತುಕೊಳ್ಳುತ್ತದೆ. ತನ್ನ ದೇಹದ ಕೆಳ ಭಾಗದಲ್ಲಿರುವ ಮುಳ್ಳಿನಿಂದ ಮೊಟ್ಟೆಯನ್ನು ಕೊರೆದು ಅದರಲ್ಲಿ ತನ್ನ ಮೊಟ್ಟೆಯನ್ನು ಇಡುತ್ತದೆ. ಇದರಿಂದಾಗಿ ಕೊರಕು ಹುಳುವಿನ ಮೊಟ್ಟೆಯಲ್ಲಿ ‘ಟ್ರೈಕೋಗ್ರಾಮಾ ಖಿಲೋನಿಸ್‌’ ನ ನೂರಾರು ಮರಿಗಳು ಹೊರ ಬರುತ್ತವೆ. ಇದರಿಂದ ಕೊರಕು ಹುಳುಗಳ ಮರಿಗಳು ಹುಟ್ಟುವ ಮೊದಲೇ ನಾಶವಾಗುತ್ತವೆ.

ಒಂದು ಟ್ರೈಕೋಗ್ರಾಮಾ ಕಾರ್ಡ್‌ನಲ್ಲಿ ಸುಮಾರು 15 ಸಾವಿರ ಮೊಟ್ಟೆಗಳು ಇರುತ್ತವೆ. ಒಂದು ಕಾರ್ಡಿಗೆ ₨ 100 ಬೆಲೆ

ನಿಗದಿ ಮಾಡಲಾಗಿದೆ. ಒಂದು ಎಕರೆಗೆ ಇಂತಹ ಮೂರು ಕಾರ್ಡ್‌ಗಳನ್ನು ಬಳಸಿದರೆ ಕೀಟ ಬಾಧೆಯಿಂದ ಮುಕ್ತರಾಗಬಹುದು. ಕೇವಲ ₨ 300 ರಲ್ಲಿ ಒಂದು ಎಕರೆಯಲ್ಲಿನ ಬೆಳೆ ಹಾನಿಯನ್ನು ತಡೆಗಟ್ಟಬಹುದು.

ಮೊಟ್ಟೆ ಇರುವ ಕಾರ್ಡನ್ನು ಕತ್ತರಿಸಿ ನೈಲಾನ್‌ ಜಾಲರಿಯಿಂದ ಮಾಡಿದ ಜೋಲಿಗಳಲ್ಲಿ ಇಟ್ಟು ಗಿಡಗಳ ಕೆಳಭಾಗ ಅಥವಾ ಎಲೆಗಳ ಕೆಳಗಡೆ ಕಟ್ಟಬೇಕು. ಒಂದು ಎಕರೆಯಲ್ಲಿ ಕಾರ್ಡಿನ 16 ಭಾಗಗಳನ್ನು ಸಮವಾಗಿ ಹಂಚಿಕೆ ಮಾಡಿ ಕಟ್ಟಬೇಕು. ಒಂದು ವೇಳೆ ಎಲ್ಲಾದರೂ ಒಂದೆರಡು ಮರಿಗಳು ಹುಟ್ಟಿದರೂ ಅದನ್ನು ತಿನ್ನಲು ‘ಕ್ರೈಸೋಪೆರ್ಲಾ’ ಎಂಬ ಪರಾವಲಂಬಿ ಜೀವಿಯನ್ನು ಅಭಿವೃದ್ಧಿಪಡಿಸ ಲಾಗಿದೆ. ಇದು ಬೆಳೆಗೆ ಹಾನಿ ಮಾಡುವ ಕೊರಕು ಹುಳುಗಳ ಮರಿಗಳು ಹಾಗೂ ಬೆಳೆಗಳಿಗೆ ಬರುವ ಸಣ್ಣ ಕೀಟಗಳನ್ನು ತಿನ್ನುತ್ತದೆ.

ರಾಷ್ಟ್ರೀಯ ಕೃಷಿ ಪ್ರಾಮುಖ್ಯ ಕೀಟಗಳ ಸಂಸ್ಥೆಯ ನಿರ್ದೇಶಕ
ಡಾ. ಅಬ್ರಾಹಂ ವರ್ಗೀಸ್‌ ಅವರ ನೇತೃತ್ವದಲ್ಲಿ ಪ್ರಧಾನ ವಿಜ್ಞಾನಿಗಳಾದ ಡಾ. ಎಸ್‌.ಕೆ. ಜಲಾಲಿ ಹಾಗೂ
ಡಾ. ಟಿ. ವೆಂಕಟೇಶನ್‌ ಅವರ ತಂಡ ಈ ರೈತ ಸ್ನೇಹಿ ಪರಾವಲಂಬಿ ಕೀಟವನ್ನು ಅಭಿವೃದ್ಧಿಪಡಿಸಿದೆ. ಸಂಸ್ಥೆ ವತಿಯಿಂದ ರೈತರಿಗೆ ಜೈವಿಕ ಕೀಟನಾಶಕ ‘ಟ್ರೈಕೋಗ್ರಾಮಾ ಖಿಲೋನಿಸ್‌’ ಅನ್ನು ಬೆಳೆಸುವ ಬಗ್ಗೆ ಉಚಿತ ತರಬೇತಿ ನೀಡಲಾಗುವುದು. ಮೊದಲ ಬಾರಿಗೆ ತಮಿಳುನಾಡಿನ ಧರ್ಮಪುರಿಯಲ್ಲಿ ‘ಟ್ರೈಕೋಗ್ರಾಮಾ ಖಿಲೋನಿಸ್‌’ ಅನ್ನು ಭತ್ತದ ಬೆಳೆಯ ಕೊರಕು ಹುಳು ನಾಶ ಮಾಡಲು ಬಳಸಲಾಯಿತು. ಕಳೆದ ಜನವರಿಯಿಂದ ಮಾರ್ಚ್‌ವರೆಗೆ ಕರ್ನಾಟಕದ ಹಲವೆಡೆ ಬಳಸಿ ಪ್ರಯೋಗ ಯಶಸ್ವಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.  

ಕೊರಕು ಹುಳುವಿನ ಕಾರ್ಯ ವೈಖರಿ: ಕೊರಕು ಹುಳುಗಳು ‘ಲೆಪಿಡೋಪ್ಟರನ್‌’ ಜಾತಿಗೆ ಸೇರಿದ ‘ಮೊತ್‌’ ಗುಂಪಿಗೆ ಸೇರಿದವು. ಚಿಟ್ಟೆಯನ್ನು ಹೋಲುತ್ತವೆ. ಪ್ರತಿ ಕೀಟವು ಹಣ್ಣು, ತರಕಾರಿ ಹಾಗೂ ಧಾನ್ಯಗಳು ಕಟಾವಿಗೆ ಬರುವ ಒಂದು ವಾರದ ಮೊದಲು ಅವುಗಳ ಮೇಲೆ ಕುಳಿತು ಮೊಟ್ಟೆಯನ್ನು ಇಡುತ್ತವೆ. ಒಂದು ಕೀಟವು ದಿನವೊಂದಕ್ಕೆ 30 ರಿಂದ 40 ಮೊಟ್ಟೆಗಳನ್ನು ಇಡುತ್ತವೆ. ಹೀಗೆಯೇ 10 ದಿನಗಳ ಕಾಲ ಸುಮಾರು 200 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆ ಇಟ್ಟು 4–5 ದಿನಗಳ ನಂತರ ತಾಯಿ ಕೀಟ ಸಾವನ್ನಪ್ಪುತ್ತದೆ.

ಕೊರಕು ಹುಳುವಿನ ಮೊಟ್ಟೆಗಳು ಮೂರ್ನಾಲ್ಕು ದಿನಗಳಲ್ಲಿ ಮರಿಗಳಾಗುತ್ತವೆ. ಮರಿಯಾಗಿ ಒಂದರಿಂದ ಎರಡು ಗಂಟೆಯೊಳಗೆ ಹಣ್ಣು, ತರಕಾರಿ ಹಾಗೂ ಧಾನ್ಯವನ್ನು ಕೊರೆದು ಒಳ ಪ್ರವೇಶಿಸುತ್ತದೆ. ಅಲ್ಲೇ ಒಂದರಿಂದ ಒಂದೂವರೆ ಇಂಚು ಬೆಳೆದ ನಂತರ ದೊಡ್ಡ ರಂಧ್ರವನ್ನು ಕೊರೆದುಕೊಂಡು ಕಾಯಿಯಿಂದ ಹೊರ ಬರುತ್ತದೆ. ಹೊರ ಬಂದು ತನ್ನ ಸುತ್ತಲೂ ಕಾಫಿ ಬಣ್ಣದ ಬಲೆಯನ್ನು ನಿರ್ಮಿಸಿಕೊಳ್ಳುತ್ತದೆ. ಇದಕ್ಕೆ ‘ಪ್ಯೂಪಾವಸ್ಥೆ’ ಎನ್ನುತ್ತಾರೆ. ಒಂದು ವಾರದ ನಂತರ ಪ್ಯೂಪದಿಂದ ಚಿಟ್ಟೆಯಾಗಿ ಹೊರ ಬಂದು ಮೊಟ್ಟೆ ಇಡಲು ಪ್ರಾರಂಭಿಸುತ್ತದೆ. ಆದರೆ ಕೊರಕು ಹುಳುವಿನ ಮೊಟ್ಟೆಯೊಡೆದು ಮರಿಯಾಗಿದ್ದಾಗ ಕೊರೆಯುವ ಕಿಂಡಿ ಬರಿಗಣ್ಣಿಗೆ ಕಾಣುವುದಿಲ್ಲ.

ಇಂತಹ ಕೀಟಗಳಿಂದ ಶೇಕಡ 60–80ರಷ್ಟು ಬೆಳೆ ಹಾನಿಯಾಗುತ್ತದೆ. ಇವುಗಳ ನಾಶಕ್ಕೆ ರೈತರು ಸಿಂಪಡಿಸುವ ರಾಸಾಯನಿಕ ಕೀಟನಾಶಕಗಳಿಂದ ಕೇವಲ 40–50ರಷ್ಟು ಕೀಟಗಳು ಮಾತ್ರ ನಾಶ ಹೊಂದುತ್ತವೆ. ಉಳಿದ ಕೀಟಗಳು ಮುಂದಿನ ಬೆಳೆ ಹೊತ್ತಿಗೆ ಅದರ ಹತ್ತುಪಟ್ಟು ಹೆಚ್ಚಾಗಿರುತ್ತವೆ. ಆದರೆ ಬೆಳೆ ಹಾನಿ ಮಾಡುವ ಕೀಟಗಳನ್ನು ಜೈವಿಕ ನಿಯಂತ್ರಣ ಪದ್ಧತಿ ಮೂಲಕ ನೂರಕ್ಕೆ ನೂರರಷ್ಟು ಕೀಟ ಬಾಧೆಯನ್ನು ನಿಯಂತ್ರಣಕ್ಕೆ ತರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.  

ಈ ಕೀಟದ ಬಗ್ಗೆ ಹೆಚ್ಚಿನ ಮಾಹಿತಿಗೆ ಬೆಂಗಳೂರಿನ ರಾಷ್ಟ್ರೀಯ ಕೃಷಿ ಪ್ರಾಮುಖ್ಯ ಕೀಟಗಳ ಸಂಸ್ಥೆಯನ್ನು  ಸಂಪರ್ಕಿಸಬಹಬಹುದು. ದೂ: (080)23511982/23511998.ವೆಬ್‌ಸೈಟ್‌: http://www.nbaii.res.in

ವಿಶ್ವದಲ್ಲೇ ಮೊದಲ ಬಾರಿಗೆ ಬಹು ಕೀಟನಾಶಕಗಳ ನಿರೋಧಕ ಶಕ್ತಿ ಹೊಂದಿರುವ ಜೀವಿ ಇದು. ಕೀಟನಾಶಕ ನಿರೋಧಕ ಶಕ್ತಿ ಹೊಂದಿರದ ಹಾಗೂ ಕೇವಲ 26 ಡಿಗ್ರಿವರೆಗೆ ಉಷ್ಣತೆಯನ್ನು ಸಹಿಸುವ ಪರಾವಲಂಬಿ ಕೀಟವನ್ನು ಈಗಾಗಲೇ ರೈತರು ಬಳಸುತ್ತಿದ್ದಾರೆ. ಆದರೆ ಇದನ್ನು ಬಳಸುವ ಒಂದು ವಾರದ ಮೊದಲು ಪಕ್ಕದ ತೋಟದ ರೈತ ಕೀಟ ನಾಶಕ ಬಳಸಿದರೂ ಇದು ಸಾವನ್ನಪ್ಪುತ್ತದೆ. ಆದರೆ ಈಗ ಅಭಿವೃದ್ಧಿ ಪಡಿಸಿರುವ ‘ಟ್ರೈಕೋಗ್ರಾಮಾ ಖಿಲೋನಿಸ್‌’ ಪರಾವಲಂಬಿ ಕೀಟವು  ಹೀಗಲ್ಲ. ಇದರಿಂದಾಗಿ ಬೆಳೆಗೆ ಕೀಟನಾಶಕ ಸಿಂಪಡಿಸಿರುವ ರೈತರು ನೇರವಾಗಿ ಈ ‘ಟ್ರೈಕೋಗ್ರಾಮಾ ಖಿಲೋನಿಸ್‌’ ಬಳಸಬಹುದು. ಅಲ್ಲದೆ ಪಕ್ಕದ ತೋಟದಲ್ಲಿ ಕೀಟನಾಶಕ ಸಿಂಪಡಿಸಿದರೂ ಯಾವುದೇ ತೊಂದರೆಯಾಗುವುದಿಲ್ಲ.

– ಡಾ. ಅಬ್ರಾಹಂ ವರ್ಗೀಸ್‌, ನಿರ್ದೇಶಕ, ರಾಷ್ಟ್ರೀಯ ಕೃಷಿ ಪ್ರಾಮುಖ್ಯ ಕೀಟಗಳ ಸಂಸ್ಥೆ

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.