ADVERTISEMENT

ಹಸಿರುಬಳ್ಳಿ ಹಾವಿನ ಹೊಂಚು

ಕೆ.ಎಸ್‌.ರಾಜರಾಮ್‌
Published 25 ನವೆಂಬರ್ 2018, 19:45 IST
Last Updated 25 ನವೆಂಬರ್ 2018, 19:45 IST
ಹಸಿರುಬಳ್ಳಿಯ ಹಾವು
ಹಸಿರುಬಳ್ಳಿಯ ಹಾವು   

ಹಸಿರು ಹಾವು, ಹಸಿರು ಬಳ್ಳಿ ಹಾವು ಎನ್ನುವ ಸಾಮಾನ್ಯ ಹೆಸರಿನಿಂದ ಪರಿಚಿತವಾಗಿರುವ ‘ಗ್ರೀನ್ ವೈನ್ ಸ್ನೇಕ್’ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್,ಕಾಂಬೋಡಿಯಾ, ವಿಯೆಟ್ನಾಂ ಮುಂತಾದ ಹಸಿರು ಪ್ರದೇಶಗಳಲ್ಲಿ ಜೀವಿಸುತ್ತದೆ.

ಕಪ್ಪೆ, ಹಲ್ಲಿ, ಹುಳ-ಹಪ್ಪಟೆಯನ್ನು ಗಿಡ- ಬಳ್ಳಿಗಳ ಕಾಂಡಕ್ಕೆ ಸುತ್ತಿ ತನ್ನ ಇರುವನ್ನು ಮರೆ ಮಾಚಿ ಉದ್ದನೆಯ ಮೈಯನ್ನು ಬಳುಕಿಸಿ ಕತ್ತು ಚಾಚಿ, ದುರ್ಬೀನಿನಂತಹ ಎರಡೂ ಬಿಚ್ಚುಕಣ್ಣಲ್ಲಿ ದೃಷ್ಟಿಯನ್ನು ಬೇಟೆಯೆಡೆಗೆ ನಾಟಿ, ಕೆಲವೊಮ್ಮೆ ಬೇಟೆಯೆಡೆಗೆ ತನ್ನ ಬಾಯನ್ನು ದೊಡ್ಡದಾಗಿ ಅಗಲಿಸಿ ಭಯ ಹುಟ್ಟಿಸಿ, ಥಟ್ಟನೆ ಅದರೆಡೆ ಗುರಿ ಹಿಡಿದು ನೆಗೆದು ಆಹಾರವನ್ನು ಗುಳುಂ ಆಗಿಸುವ ಪರಿ ಅದರ ವಿಶೇಷ ಪಾಂಡಿತ್ಯ.

ಆಗುಂಬೆ ಇತ್ಯಾದಿ ಪಶ್ಚಿಮ ಘಟ್ಟಗಳಲ್ಲಿ ಮಲೆನಾಡಿನ ಎಲ್ಲೆಡೆ ಈ ಹಸಿರು ಹಾವುಗಳು ಹೇರಳವಾಗಿವೆ. ಇದರ ವಿಷ ಪ್ರಾಣಾಪಾಯ ತರುವಂತಹುದ್ದಲ್ಲ. ಬೆಂಗಳೂರಿನ ಸುತ್ತಲ ಹಸಿರು ಕಾಡು-ಮೇಡುಗಳಲ್ಲಿ ಇವನ್ನು ಕಾಣಬಹುದು. ಬನ್ನೇರುಘಟ್ಟಕ್ಕೆ ಹೋಗುವಾಗ ಕಾರ್ ನಿಲ್ಲಿಸಿ ರಸ್ತೆಬದಿಯ ಡಾಬಾದಲ್ಲಿ ಚಹಾ ಸೇವಿಸಿ ಅಲ್ಲೇ ಹಿಂಬದಿಯ ಗಿಡಗಂಟಿಗಳ ಪರಿಸರದ ಮಧ್ಯೆ ಕ್ಯಾಮೆರಾಕ್ಕೆ ಏನಾದರೂ ಸಿಕ್ಕೀತೇ ಎಂದು ಸುತ್ತಾಡಿದಾಗ ಇತ್ತೀಚೆಗೊಂದು ಮಧ್ಯಾಹ್ನ ಈ ದೃಶ್ಯ ಕಂಡಿದ್ದು, ನಗರದ ಗಣಪತಿ ಹೆಗಡೆ ಅವರಿಗೆ.

ADVERTISEMENT

ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಗಣಪತಿ ಅವರಿಗೆ ಆರು ವರ್ಷಗಳಿಂದ ಪ್ರಕೃತಿ- ವನ್ಯಜೀವಿ ಛಾಯಾಗ್ರಹಣದಲ್ಲಿ ಆಸಕ್ತಿ. ಅವರು ಬಳಸಿದ ಕ್ಯಾಮೆರಾ, ನಿಕಾನ್ ಡಿ 5000, ಜೊತೆಗೆ 55 –300 ಎಂ.ಎಂ. ಜೂಂ ಲೆನ್ಸ್. ಎಕ್ಸ್‌ಪೋಷರ್ ವಿವರ ಇಂತಿದೆ: ಲೆನ್ಸ್ ಫೋಕಲ್ ಲೆಂಗ್ತ್ 150 ಎಂ.ಎಂ.ನಲ್ಲಿ ಅಪರ್ಚರ್ ಜಿ 5.3 ಶಟರ್ ವೇಗ 1/ 1000 ಸೆಕೆಂಡ್, ಐ.ಎಸ್.ಒ 400, ಟ್ರೈಪಾಡ್ ಬಳಸಲಾಗಿದೆ, ಫ್ಲಾಶ್ ಇಲ್ಲ.

ಈ ಚಿತ್ರದ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಅಂಶಗಳು ಇಂತಿವೆ

* ಪ್ರವಾಸ ಹೊರಟಾಗ ದಾರಿಯುದ್ದಕ್ಕೂ ಏನಾದರೊಂದು ವಿಶೇಷ ದೃಶ್ಯ ಪೂರ್ವಯೋಜನೆಯಿಲ್ಲದೆಯೂ ಕ್ಯಾಮೆರಾಕ್ಕೆ ದಕ್ಕಬಹುದೆಂದು ಈ ಚಿತ್ರ ಸಾಬೀತುಪಡಿಸಿದೆ. ಅಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು, ಛಾಯಾಗ್ರಾಹಕ ಸದಾ ಎಚ್ಚರವಿದ್ದು, ತುರ್ತಾಗಿ ಬೇಕಾಗಬಹುದಾದ ಕ್ಯಾಮೆರಾದ ಸಾಂಗತ್ಯ ಹೊಂದಿ, ಅದನ್ನೂ ಯುದ್ಧಕ್ಕೆ ಹೊರಟ ಸೈನಿಕನಂತೆ ಸನ್ನದ್ಧಗೊಳಿಸಿಟ್ಟುಕೊಳ್ಳುವುದು ಹಾಗೂ ಅದರ ಸಮರ್ಪಕ ಉಪಯೋಗಕ್ಕೆ ಬೇಕಾದ ಪರಿಣಿತಿ ಹೊಂದಿರುವುದೂ ಅತಿ ಅವಶ್ಯಕವೇ.

* ‘ಛೇ.. ಎಂಥಾ ಸೀನು .. ಕೈತಪ್ಪಿ ಹೋಯಿತಲ್ಲಾ’ ಎಂದು ಪರಿತಪಿಸುವ ಬದಲು ಇಲ್ಲಿ ಛಾಯಾಗ್ರಾಹಕನ ಸಾಧನೆ ಮತ್ತು ಕೌಶಲ ಮೆಚ್ಚತಕ್ಕದ್ದೇ. ತಾಂತ್ರಿಕವಾದ ಕ್ಯಾಮೆರಾ ಅಳವಡಿಕೆಗಳೆಲ್ಲವೂ ಸರಿಯಾಗಿವೆ.

* ಗಿಡದಂಟಿಗೆ ಸುತ್ತಿ ಬಳಸಿ ಅಡಗಿಸಿದ ಮೈಯ್ಯ ಮಾಟ ಮತ್ತು ಬಣ್ಣದ ಎಲೆಯೊಂದರ ಮಧ್ಯೆ ತಲೆ ತೂರಿಸಿರುವ ಹಸಿರು ಹಾವಿನ ಭಂಗಿ, ಬೈನಾಕ್ಯುಲರ್ ಕಣ್ಣಿನ ತೀಕ್ಷ್ಣತೆ, ಇವೆಲ್ಲವನ್ನೂ ಸ್ಪುಟವಾಗಿ ಫೋಕಸ್ ಮಾಡಿರುವುದು ಮತ್ತು ಹಿನ್ನೆಲೆಯ ಇತರ ಗಿಡಗಂಟಿಗಳನ್ನು ಮಂದಗೊಳಿಸಿರುವುದು (ಔಟ್ ಆಫ್ ಫೋಕಸ್) , ದೊಡ್ಡಳತೆಯ ಜೂಂ ಫೋಕಲ್ ಲೆಂಗ್ತ್ ಮತ್ತು ಹಿರಿದಾದ ಅಪರ್ಚರ್ ರಂಧ್ರದ ಅಳವಡಿಕೆಯಿಂದ ಸಾಧ್ಯವಾಗಿದೆ. ಅಂತೆಯೇ ಪರಿಣಾಮಕಾರಿಯಾದ ವಸ್ತು ನಿರೂಪಣೆಗೆ ಕಿರಿದಾದ ಸಂಗಮ ವಲಯವು (ನ್ಯಾರೋ ಡೆಪ್ತ್ ಆಫ್ ಫೀಲ್ಡ್) ಇಲ್ಲಿ ಉಪಯುಕ್ತವಾಗಿರುವ ಅಂಶ.

* ಕಲಾತ್ಮಕವಾಗಿ, ಇದೊಂದು ಕಣ್ಸೆಳೆಯುವ ಕಲಾಕೃತಿಗೆ ಸಮವೆಂದೆನಿಸದಿರದು. ಗಿಡದ ರೆಂಬೆಗಂಟಿ ಕೊಂಡ ಹಾವು, ತನ್ನ ಮೈ ಭಾರಕ್ಕೆ ಚೌಕಟ್ಟಿನ ಎಡಭಾಗಕ್ಕೆ ತುಸು ವಾಲಿರುವುದು, ಚಿತ್ರದ ಜೀವಂತಿಕೆಯನ್ನು (ವೈಟ್ಯಾಲಿಟಿ) ಹೆಚ್ಚಿಸಿದೆ.

* ಚಿತ್ರಣದ ಬಲಭಾಗದ ಕೆಳಮೂಲೆಯಿಂದ ಮೇಲಕ್ಕೆದ್ದ ವಸ್ತು (ಗಿಡದ ಕಾಂಡ ಹಾಗೂ ಹಾವು) ಚೌಕಟ್ಟಿನ ಎಡ ಭಾಗದ ಮೇಲಿನ ಮೂಲೆಯೆಡೆಗೆ ಸಾಗುತ್ತಿರುವುದು, ‘ಓರೆಯಾದ ವಸ್ತು-ಚಲನೆ’ಯನ್ನು (ಡಯಾಗೊನಾಲ್ ಮೂವ್‌ಮೆಂಟ್) ರೂಪಿಸಿದೆ.

* ಬೇಟೆಗಾಗಿ ಹವಣಿಸುತ್ತಿರುವ ಹಾವಿನ ಸೂಕ್ಷ್ಮತೆಯನ್ನು ಅದು ಸುಲಭವಾಗಿ ನೋಡುಗನ ಕಣ್ಣಿಗೂ, ಮನಸ್ಸಿಗೂ ನಾಟಿಬಲ್ಲದಾಗಿದೆ. ಅಂತೆಯೇ ಇದೊಂದು ಡಯಾಗೊನಾಲ್ ಕಂಪೋಸಿಷನ್‌ಗೆ ಉತ್ತಮ ಮಾದರಿಯೂ ಹೌದು.

* ಇಲ್ಲಿ ಕಲಾ ನಿರೂಪಣೆಯ ‘ಗೋಲ್ಡನ್ ಕ್ರಾಸ್ ರೂಲ್’ ಕೂಡಾ ರೂ‍ಪುಗೊಂಡಿದೆ ಎಂಬುದು ವಿಶೇಷ. ಹಾವಿನ ಮುಖಭಾಗ ಮತ್ತು ಕೆಂಪು ಚಿತ್ತಾರದ ಎಲೆಯ ಭಾಗ ಚಿತ್ರಣದ ಮೇಲಿನ ಒಂದು ಮೂರಾಂಶದಲ್ಲಿರುವುದು ಮತ್ತು ಅದರ ಮುಖದೆದುರಿಗೆ ಸಾಕಷ್ಟು ಜಾಗ (ಸ್ಪೇಸ್) ಇರುವುದು ಗಮನಾರ್ಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.