ADVERTISEMENT

ಉಪಕಾರ ಮಾಡಿದಲ್ಲಿ ಉಪದ್ರವ

ಭಾವ ಸೇತು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 19:30 IST
Last Updated 4 ಮಾರ್ಚ್ 2017, 19:30 IST
ಚಿತ್ರ:ಮದನ್‌ ಸಿ.ಪಿ
ಚಿತ್ರ:ಮದನ್‌ ಸಿ.ಪಿ   

ನಮ್ಮ ಮನೆಯ ಪಕ್ಕ ನಮ್ಮದೇ ಒಂದು ರೂಮು ಖಾಲಿ ಇತ್ತು. ಯಾರಾದರೂ ಕಲಿಯುವ ಬಡಮಕ್ಕಳಿಗೆ ಉಚಿತವಾಗಿ ಆ ರೂಮನ್ನು  ಕೊಡಬೇಕು ಎಂದು ನಾನು ಮತ್ತು ನನ್ನ ಹೆಂಡತಿ ಮಾತನಾಡಿಕೊಂಡಿದ್ದೆವು. ಒಂದು ದಿನ ಟಿಸಿಎಚ್ (ಈಗಿನ ಡಿಎಡ್) ಕಲಿಯಲು ಬಂದ ಬಡ ವಿದ್ಯಾರ್ಥಿಯ ಪರಿಚಯವಾಯಿತು. ‘ತನ್ನ ತಂದೆ–ತಾಯಿ ಅತ್ಯಂತ ಬಡವರು. ಕೂಲಿ ಮಾಡಿ ನಾನು ಶಿಕ್ಷಕನಾಗಬೇಕು ಎಂಬ ಹಂಬಲದಿಂದ ನನಗೆ ಇಲ್ಲಿಗೆ ಕಾಲೇಜಿಗೆ ಕಲಿಯಲು ಹಾಕಿದ್ದಾರೆ’ ಎಂದು ಹೇಳಿದ. ‘ನೀನು ಈ ಕೋಣೆಯಲ್ಲಿ ಉಳಿ. ಕೋಣೆ, ನೀರು, ವಿದ್ಯುತ್ತು ಯಾವುದಕ್ಕೂ ಹಣ ನೀಡುವುದು ಬೇಡ. ಚೆನ್ನಾಗಿ ಕಲಿ’ ಎಂದು ಹೇಳಿ ಆತನಿಗೆ ಆ ರೂಮನ್ನು ಕೊಟ್ಟೆವು.

ನಮ್ಮ ಮನೆಯಲ್ಲಿಯ ತಿಂಡಿ, ಅನ್ನ, ಸಾರು ಹೀಗೆ ಆಗಾಗ ಕೊಡುತ್ತಿದ್ದೆವು. ಆತ ನಮ್ಮದೇ ಮನೆಯವನಂತೆ ಅಭ್ಯಾಸ ಮಾಡಿಕೊಂಡು ಇದ್ದ.
ಒಂದು ವರ್ಷದ ನಂತರ ‘ತನಗೆ ಒಬ್ಬನೇ ಉಳಿಯಲು ಬೇಸರವಾಗುತ್ತಿದೆ, ತನ್ನ ಗೆಳೆಯನನ್ನು ರೂಮಿನಲ್ಲಿ ಇರಿಸಿಕೊಳ್ಳಬಹುದೇ?’ ಎಂದು ಕೇಳಿದ. ‘ಇಬ್ಬರೂ ಕೂಡಿ ಕಲಿಯಿರಿ’ ಎಂದು ಹೇಳಿದೆವು.

ಸ್ವಲ್ಪ ಸಮಯದ ನಂತರ ಮೊದಲಿದ್ದ ಬಡ ವಿದ್ಯಾರ್ಥಿಯ ನಡತೆ ನಮಗೇಕೋ ಸರಿಬರಲಿಲ್ಲ. ಈ ಬಡ ವಿದ್ಯಾರ್ಥಿ ಡ್ರೆಸ್ಸಿಗೆ ಇಸ್ತ್ರಿ ಇಲ್ಲದೇ ಒಂದು ದಿನವೂ ಕಾಲೇಜಿಗೆ ಹೋಗುತ್ತಿರಲಿಲ್ಲ. ಆಗಾಗ, ಕಾಲೇಜಿನ ಹುಡುಗಿಯರನ್ನು ರೂಮಿಗೆ ಕರೆದುಕೊಂಡು ಬರುವುದು, ಅವರಿಗೆ ಚಹ, ತಿಂಡಿ ಕೊಟ್ಟು ಕಳಿಸುವುದು – ಇಂತಹದೆಲ್ಲವನ್ನು ಮಾಡತೊಡಗಿದ.

ADVERTISEMENT

ಒಂದು ದಿನ ಎರಡನೇ ವಿದ್ಯಾರ್ಥಿ ಬಂದು, ‘ತಾನು ಅಭ್ಯಾಸಕ್ಕಾಗಿ ಊರಿಗೆ ತೆರಳುತ್ತಿದ್ದೇನೆ, ತಾನಿನ್ನು ಬರುವುದಿಲ್ಲ’ ಎಂದು ಹೇಳಿದ. ‘ನಿಮ್ಮಿಬ್ಬರಿಗೆ ಆ ಕೋಣೆಯಲ್ಲಿ ಅನನುಕೂಲ ಆಗಲಿಲ್ಲ ತಾನೆ?’ ಎಂದು ಔಪಚಾರಿಕವಾಗಿ ಪ್ರಶ್ನಿಸಿದೆ.

‘ಏನೂ ತೊಂದರೆ ಆಗಲಿಲ್ಲ, ಇಷ್ಟು ಕಡಿಮೆ ಬಾಡಿಗೆಯಲ್ಲಿ ಇಂತಹ ರೂಮು ಎಲ್ಲಿ ಸಿಗುತ್ತದೆ?’ ಎಂದು ಅವನು ಹೇಳಿದ. ನಮಗೆ ಆಶ್ಚರ್ಯವಾಯಿತು. ವಿಚಾರಿಸಿದ್ದಕ್ಕೆ – ‘ಈ ರೂಮಿಗೆ 300 ರೂಪಾಯಿ ಬಾಡಿಗೆ’ ಎಂದು ಹೇಳಿದ್ದ ಬಡ ವಿದ್ಯಾರ್ಥಿ, ಗೆಳೆಯನಿಂದ ಪ್ರತಿ ತಿಂಗಳು 150 ರೂಪಾಯಿ ಪಡೆಯುತ್ತಿದ್ದ. ಕೆಲವು ತಿಂಗಳ ಹಿಂದೆ ‘ಮಾಲೀಕರು ಬಾಡಿಗೆ ಏರಿಸಿದ್ದಾರೆ’ ಎಂದು ಹೇಳಿ ಪ್ರತಿ ತಿಂಗಳು 200 ರೂಪಾಯಿ ಪಡೆಯುತ್ತಿದ್ದ.

ವಿಷಯ ತಿಳಿದು ಆಘಾತವಾಯಿತು. ಆತನನ್ನು ಕರೆದು ವಿಚಾರಿಸಿದೆವು. ತಬ್ಬಿಬ್ಬಾದ ಆತ ತಡವರಿಸುತ್ತ ಏನೇನೋ ಹೇಳುತ್ತ ತನ್ನನ್ನು ಸಮರ್ಥಿಸಿಕೊಳ್ಳತೊಡಗಿದ. ವಿಳಂಬ ಮಾಡದೇ ಆತನನ್ನು ರೂಮು ಬಿಡಿಸಿದೆವು. ಅವನು, ‘ಉಪಕಾರವಿದ್ದಲ್ಲಿ ಉಪದ್ರವ ಇದೆ’ ಎಂಬ ಸಾವಿರಾರು ವರುಷಗಳ ಹಿಂದಿನ ಗಾದೆ ಮಾತನ್ನು ಪುನಾ ಸಾಬೀತು ಮಾಡಿದ್ದ.
–ದೇವಿದಾಸ ಸುವರ್ಣ, 
ಅಂಕೋಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.