ADVERTISEMENT

ಕಲಿಸುವುದೇ ಪರಮಾನಂದ

ಸುಭಾಸ ಯಾದವಾಡ
Published 30 ಡಿಸೆಂಬರ್ 2017, 19:30 IST
Last Updated 30 ಡಿಸೆಂಬರ್ 2017, 19:30 IST
ಚಿತ್ರ: ಮದನ್‌ ಸಿ.ಪಿ.
ಚಿತ್ರ: ಮದನ್‌ ಸಿ.ಪಿ.   

ಅವರೊಬ್ಬ ನಿವೃತ್ತ ಶಾಲಾ ಶಿಕ್ಷಕ. ಕಲಿಯುತ್ತ-ಕಲಿಸುತ್ತ ಇಡೀ ಜೀವನವನ್ನು ಸಂತೃಪ್ತಿಯಿಂದ ಕಳೆದವರು. ನಿವೃತ್ತಿಯ ನಂತರವೂ ಅವರ ಕಲಿಸುವ ಬಯಕೆ ತೀರಿಲ್ಲ. ಬಹುಶಃ ಅದು ತೀರುವುದೂ ಇಲ್ಲ. ಅವರು ನಿವೃತ್ತರಾಗಿ ಹತ್ತು ವರುಷ ಕಳೆದು ಹೋಗಿವೆ. ಈಗಲೂ ಅವರು ನಿತ್ಯ ಹಲವು ಶಾಲೆಗಳಿಗೆ ಹೋಗುತ್ತಲೇ ಇರುತ್ತಾರೆ. ಅವರು ಭೇಟಿ ಕೊಡುವ ಶಾಲೆಗಳಲ್ಲಿ; ಅವರೇ ಶಿಕ್ಷಕರಾಗಿ ಕಲಿಸದ ಶಾಲೆಗಳೂ ಇವೆ, ಬೇರೆ ಸರಕಾರಿ ಹಾಗೂ ಖಾಸಗಿ ಶಾಲೆಗಳೂ ಇವೆ. ಈಗ ಅವರು ಒಂದು ಶಾಲೆಯ ಹಾಗು ಒಂದು ವರ್ಗದ ಮಾಸ್ತರರಲ್ಲ. ಎಲ್ಲ ವರ್ಗದ ಎಲ್ಲ ಶಾಲೆಗಳ ಮಾಸ್ತರರೂ! ಮನ ಬಂದ ಕಡೆಗೆ ಹೋಗುತ್ತಾರೆ. ಒಂದಿಷ್ಟು ಕಾಲ ಮಕ್ಕಳೊಂದಿಗೆ ಬೆರೆಯುತ್ತಾರೆ. ಪಾಠ ಮಾಡುತ್ತಾರೆ. ರಾಗವಾಗಿ ಮಕ್ಕಳ ಹಾಡುಗಳನ್ನು ಹಾಡುತ್ತಾ, ಮಕ್ಕಳೊಂದಿಗೆ ಮಕ್ಕಳಾಗಿ ಕುಣಿಯುತ್ತಾರೆ. ತಾವೂ ಖುಷಿ ಪಡುತ್ತಾರೆ. ಮಕ್ಕಳನ್ನೂ ಖುಷಿಗೊಳಿಸುತ್ತಾರೆ. ಭಾಷೆ, ವಿಜ್ಞಾನ, ಗಣಿತ ಅವರ ಅತ್ಯಂತ ಪ್ರೀತಿಯ ವಿಷಯಗಳು.

ಇಷ್ಟಕ್ಕೇ ಅವರ ಕಲಿಸುವ ಉತ್ಸಾಹ ತಣಿಯುವುದಿಲ್ಲ. ರಸ್ತೆಯಲ್ಲಿ ಹೋಗುವಾಗ ಮಕ್ಕಳು ಕಂಡರೆ, ಅವರನ್ನು ನಿಲ್ಲಿಸಿ ಮಾತನಾಡಿಸುತ್ತಾರೆ. ಏನು ಓದುತ್ತಿ, ಯಾವ ಶಾಲೆ, ನಿನ್ನ ಇಷ್ಟದ ವಿಷಯ ಯಾವುದು, ಯಾವುದು ಕಷ್ಟಕರ ಎಂದೆಲ್ಲ ವಿಚಾರಿಸುತ್ತಾರೆ. ಅವರ ಆಸಕ್ತಿಗಳನ್ನು ಪ್ರೋತ್ಸಾಹಿಸುತ್ತಾರೆ. ಅವರ ಕಷ್ಟಗಳನ್ನು ಪರಿಹರಿಸಲು ಮುಂದಾಗುತ್ತಾರೆ. ಕೆಲವೊಮ್ಮೆ ಅಲ್ಲೇ ಪಾಠವನ್ನು ಶುರು ಮಾಡಿಬಿಡುತ್ತಾರೆ. ಕೆಲವರು ಇವರ ಕಲಿಸುವ ಹುಚ್ಚು ಕಂಡು ನಗುತ್ತಾರೆ. ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಂಡವರೇ ಅಲ್ಲ. ಬೀದಿ ಪಾಠ ಅವರಿಗೆ ತೃಪ್ತಿ ಕೊಡಲಿಲ್ಲವೆಂದಾದರೆ ಮಕ್ಕಳನ್ನು ತಮ್ಮ ಮನೆಗೆ ಬರಲು ಹೇಳುತ್ತಾರೆ. ಕೆಲವೊಮ್ಮ ಮಗುವಿನ ಮನೆ ಎಲ್ಲಿದೆ ಎಂದು ಕೇಳಿ ತಿಳಿದುಕೊಂಡು ಅವರ ಮನೆಗೇ ಹೋಗುತ್ತಾರೆ. ಕಲಿಸುವುದು, ಪಾಠ ಮಾಡುವುದು ಎಂದರೆ ಅವರಿಗೆ ಅಷ್ಟೊಂದು ಪ್ರೀತಿ. ಅದು ಅವರಿಗೆ ಪರಮಾನಂದವನ್ನು ಕೊಡುತ್ತದೆ. ಅವರ ಹೆಸರೂ ಪರಮಾನಂದ. ಜನ ಅವರನ್ನು ಕಾಯಂ ಮಾಸ್ತರ ಪರಮಾನಂದ ಎಂದೇ ಗುರುತಿಸುತ್ತಾರೆ.

ಒಂದು ಬಾರಿ ಬೇರೊಂದು ಕೆಲಸಕ್ಕಾಗಿ ಹಳ್ಳಿಯೊಂದಕ್ಕೆ ಅವರು ಹೋಗಿದ್ದರು. ಅವರು ಹೋದ ಕೆಲಸ ಬೇಗನೇ ಮುಗಿಯಿತು. ಮರಳಿ ತಮ್ಮ ಊರಿಗೆ ಹೋಗುವ ಬಸ್ ಬರಲು ಇನ್ನೂ ಕೆಲವು ಗಂಟೆಗಳ ಸಮಯವಿದೆ. ಆಗ ಏನು ಮಾಡುವುದು? ಅವರು ಆ ಊರಿನ ಶಾಲೆಗೆ ಹೋದರು. ಶಾಲೆಯ ಬಾಗಿಲು ಇನ್ನೂ ತೆರೆದಿರಲಿಲ್ಲ. ಆ ಶಾಲೆಯ ಸುತ್ತ ಒಂದು ಸುತ್ತು ಹಾಕುತ್ತಾರೆ. ಶಾಲೆಯ ಕಿಟಕಿಯ ಗಾಜುಗಳೆಲ್ಲ ಒಡೆದಿವೆ. ಅದನ್ನು ನೋಡಿ ಅವರಿಗೆ ತುಂಬ ನೋವಾಗುತ್ತದೆ. ಶಾಲೆ ಆರಂಭವಾಗುವವರೆಗೆ ಅಲ್ಲಿಯೇ ಕಾದರು.

ADVERTISEMENT

ಆರಂಭವಾದ ಮೇಲೆ ಅಲ್ಲಿನ ಗುರುಗಳ ಪರವಾನಗಿ ಪಡೆದು ವರ್ಗವೊಂದರಲ್ಲಿ ಪಾಠ ಮಾಡಿದರು. ಆಗ ವರ್ಗದ ವಿದ್ಯಾರ್ಥಿಗಳೊಂದಿಗೆ ಒಡೆದ ಕಿಟಕಿಯ ಗಾಜಿನ ಬಗ್ಗೆ ಪ್ರಸ್ತಾಪಿಸಿದರು. ಇದರಿಂದಾಗಿ  ನಿಮಗೆಲ್ಲ ತೊಂದರೆ ಆಗುತ್ತದೆಯಲ್ಲವೇ ಎಂದು ಪ್ರಶ್ನಿಸಿದರು. ಹುಡುಗರೆಲ್ಲ ಒಂದೇ ಧ್ವನಿಯಿಂದ ‘ಹೌದು’ ಎಂದರು. ‘ಗಾಜನ್ನು ಪುನಃ ಹಾಕಿಸಲು ನೀವು ಮನಸ್ಸು ಮಾಡಿದರೆ ನಾನೂ ನನ್ನ ಕೈಲಾದ ಸಹಾಯ ಮಾಡುತ್ತೇನೆ’ ಎಂದರು ಪರಮಾನಂದ. ಹುಡುಗರೆಲ್ಲ ಒಪ್ಪಿಕೊಳ್ಳುತ್ತಾರೆ. ಪರಮಾನಂದ ತಮ್ಮ ಕಿಸೆಯಿಂದ ಅದಕ್ಕಾಗಿ 50 ರೂಪಾಯಿಗಳನ್ನು ಕೊಟ್ಟೇಬಿಟ್ಟರು. ಹುಡುಗರೂ, ತಮ್ಮ ಪಾಲಕರು ತಿಂಡಿ ತಿನ್ನಲು ಕೊಟ್ಟ ಪುಡಿಗಾಸನ್ನು ಕೊಡಲು ಮುಂದೆ ಬಂದರು. ಶಿಕ್ಷಕರೂ, ಮುಖ್ಯೋಪಾಧ್ಯಾಯರೂ ಹಣ ನೀಡಿದರು. ಅಂತೂ ಕಿಟಕಿಗಳಿಗೆ ಹೊಸ ಗಾಜು ಜೋಡಿಸುವ ಕಾರ್ಯ ಕೈಗೂಡುತ್ತದೆ.

ದೂರದ ಊರಿನ ಆ ಶಾಲೆಯ ಬಗೆಗೆ ಪರಮಾನಂದರಿಗೆ ಏನೋ ಒಂದು ಬಗೆಯ ಆಕರ್ಷಣೆ ಹುಟ್ಟುತ್ತದೆ. ವಾರಕ್ಕೊಮ್ಮೆಯಾದರೂ ಅವರು ಅಲ್ಲಿಗೆ ಹೋಗುತ್ತಾರೆ. ಪಾಠ ಮಾಡುತ್ತಾರೆ. ಅಲ್ಲಿನ ವಿದ್ಯಾರ್ಥಿಗಳೊಂದಿಗೆ, ಶಿಕ್ಷಕರೊಂದಿಗೆ ಬೆರೆತು ಸಮಯ ಕಳೆಯುತ್ತಾರೆ. ಆ ಶಾಲೆಯವರೂ ಪರಮಾನಂದರ ಬರುವಿಕೆಗಾಗಿ ಕಾತರದಿಂದ ಕಾಯುತ್ತಾರೆ. ಅವರು ಬಂದರೆ ಹುಡುಗರು ಗಾಳಿ ತುಂಬಿದ ಬಲೂನಾಗುತ್ತಾರೆ. ಶಿಕ್ಷಕರಿಗೂ ತಮ್ಮ ಮನೆಯ ಹಿರಿಯನೊಬ್ಬ ಮನೆಗೆ ಬಂದಂಥ ಭಾವ ಉಂಟಾಗುತ್ತದೆ. ಶಾಲೆಯ ತುಂಬ ಉತ್ಸಾಹ-ಪ್ರೀತಿ ತುಂಬಿ ಹರಿಯುತ್ತವೆ.

ಪರಮಾನಂದರನ್ನು ಪ್ರೀತಿಸುವ ಇಂಥ ಎಷ್ಟೋ ಶಾಲೆಗಳಿವೆ. ಅವು ಎಷ್ಟು ಎಂಬುದು ಲೆಕ್ಕಕ್ಕೇ ಸಿಗುವುದಿಲ್ಲ. ಅವುಗಳ ಸಂಖ್ಯೆ ಅಷ್ಟು ದೊಡ್ಡದಿದೆ. ನಿವೃತ್ತಿಯ ನಂತರ ಪರಮಾನಂದರ ತಿರುಗಾಟ, ಕಲಿಸುವಿಕೆ ಹೆಚ್ಚಾಗಿದೆ. ಜೊತೆಗೆ ಅವರ ಖುಷಿಯೂ ಕೂಡ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.