ADVERTISEMENT

ಕಲ್ಲ ಮೇಲೆ ಕಲ್ಲು; ಶಿಲ್ಪ ಮೂಡಿತಲ್ಲೂ!

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2017, 19:30 IST
Last Updated 1 ಏಪ್ರಿಲ್ 2017, 19:30 IST
ಕಲ್ಲ ಮೇಲೆ ಕಲ್ಲು;  ಶಿಲ್ಪ ಮೂಡಿತಲ್ಲೂ!
ಕಲ್ಲ ಮೇಲೆ ಕಲ್ಲು; ಶಿಲ್ಪ ಮೂಡಿತಲ್ಲೂ!   

ಕೆನಡಾದ ಕಲಾವಿದ ಮೈಕಲ್ ಗ್ರ್ಯಾಬ್ ಅವರಿಗೆ ಅಪರೂಪದ ಹವ್ಯಾಸವಿದೆ. ಕಲ್ಲುಗಳನ್ನು ಬೀಳದಂತೆ ಜೋಡಿಸುವುದು ಅವರಿಗೆ ಪ್ರಿಯವಾದ ಕೆಲಸ. ಸುಮ್ಮನೆ ಒಂದರ ಮೇಲೊಂದರಂತೆ ಕಲ್ಲುಗಳನ್ನು ಪೇರಿಸಿಡುವ ಕೆಲಸ ಇದಲ್ಲ; ಗುರುತ್ವಾಕರ್ಷಣೆಯನ್ನು ನೆಚ್ಚಿಕೊಂಡು ಅವರು ಕಲ್ಲುಗಳನ್ನು ಜೋಡಿಸುವ ಕ್ರಮದಲ್ಲಿಯೇ ಒಂದು ಶಿಲ್ಪಾಕೃತಿ ಮೂಡುತ್ತದೆ. ಇದನ್ನು ಅವರು ‘ಪ್ರಾಜೆಕ್ಟ್‌ ಗ್ರ್ಯಾವಿಟಿ ಗ್ಲೂ’ ಎಂದು ಕರೆದುಕೊಂಡಿದ್ದಾರೆ.

ಅಮೆರಿಕದ ಕೊಲರಾಡೊದವರಾದ ಗ್ರ್ಯಾಬ್ ವಿವಿಧ ಆಕಾರದ ಕಲ್ಲುಗಳನ್ನು ಒಂದರ ಮೇಲೊಂದರಂತೆ ಜೋಡಿಸುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ಅಗಲವಾದ ಕಲ್ಲು ಎಲ್ಲಕ್ಕಿಂತ ಮೇಲೆ ಇರುವುದೂ ಉಂಟು. ಸಣ್ಣ ಕಲ್ಲಿನ ಮೇಲೆ ದೊಡ್ಡ ಕಲ್ಲು ನಿಲ್ಲುವಂತೆ ಮಾಡುವುದು ಅತಿಸೂಕ್ಷ್ಮ ಕೆಲಸ. ಕಲ್ಲುಗಳ ತೂಕವನ್ನು ಅಂದಾಜು ಮಾಡಿ, ಆಮೇಲೆ ಅವುಗಳನ್ನು ಒಂದು ಕ್ರಮದಲ್ಲಿ ಗ್ರ್ಯಾಬ್‌ ಜೋಡಿಸುತ್ತಾರೆ.

ಈ ರೀತಿ ಕಲ್ಲುಗಳ ಜೋಡಿಸುವ ಕ್ರಿಯೆಯನ್ನು ಗ್ರ್ಯಾಬ್‌ ಧ್ಯಾನಕ್ಕೆ ಹೋಲಿಸುತ್ತಾರೆ. ಜೆನ್‌ ತರಹದ ತಾಳ್ಮೆ ಇದಕ್ಕೆ ಬೇಕೆನ್ನುವ ಅವರು, ಎಷ್ಟೋ ಸಲ ಉಸಿರು ಬಿಗಿಹಿಡಿದು ಕಲ್ಲುಗಳನ್ನು ಜೋಡಿಸುತ್ತಾರೆ. ಎಚ್ಚರಿಕೆಯಿಂದ ಸಮತೋಲನದಲ್ಲಿರುವಂತೆ ಅವುಗಳನ್ನು ಜೋಡಿಸುತ್ತಾರೆ.

ಗೋಂದು ಹಾಕಿ ಅಂಟಿಸಿಟ್ಟಂತೆ ಕಲ್ಲುಗಳ ಜೋಡಣೆ ಭಾಸವಾಗುತ್ತದೆ. ‘ಕಲ್ಲುಗಳನ್ನು ಹಿಡಿದಿಡುವ ಗೋಂದು ಗುರುತ್ವಾಕರ್ಷಣೆಯಷ್ಟೆ’ ಎಂದು ಗ್ರ್ಯಾಬ್‌ ಹೇಳುತ್ತಾರೆ.

2008ರಲ್ಲಿ ಗ್ರ್ಯಾಬ್‌ಗೆ ಕಲ್ಲುಗಳನ್ನು ಜೋಡಿಸುವ ಆಸಕ್ತಿ ಹುಟ್ಟಿತು. ಕಣಿವೆಗಳಲ್ಲಿ, ಕಾಡುಗಳ ಯಾವುದೋ ಸಂದಿನಲ್ಲಿ ಕಲ್ಲುಗಳನ್ನು ಕಂಡರೆ ಗ್ರ್ಯಾಬ್‌ ಅವುಗಳನ್ನು ಜೋಡಿಸುವುದರಲ್ಲಿ ಧ್ಯಾನಸ್ಥರಾಗಿಬಿಡುತ್ತಾರೆ. ಹಾಗೆ ಜೋಡಿಸಿದ ನಂತರ ಮೂಡುವ ಆಕೃತಿಗಳ ಛಾಯಾಚಿತ್ರ ತೆಗೆಯುತ್ತಾರೆ. ವಿಶ್ವದ ವಿವಿಧ ಭಾಗಗಳಲ್ಲಿ ಅವರು ಈ ರೀತಿ ಕಲ್ಲುಗಳನ್ನು ಜೋಡಿಸಿಟ್ಟು, ಹೊಸ ನೆನಪನ್ನು ತಮ್ಮ ಜ್ಞಾಪಕ ಚಿತ್ರಶಾಲೆಗೆ ಸೇರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.