ADVERTISEMENT

ಕಳ್ಳರನ್ನು ಹುಡುಕಿದ ಗೊಂಬೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST
ಕಳ್ಳರನ್ನು ಹುಡುಕಿದ ಗೊಂಬೆ
ಕಳ್ಳರನ್ನು ಹುಡುಕಿದ ಗೊಂಬೆ   

ಪ್ರೇಮಾ ಶಿವಾನಂದ

ಒಂದು ಸುಂದರವಾದ ತೋಟ. ಆ ತೋಟದಲ್ಲೊಂದು ಮನೆ. ಆ ಮನೆಯಲ್ಲಿ ಅಜ್ಜ, ಅಜ್ಜಿ ಮತ್ತು ಮೊಮ್ಮಗಳು ವಾಸವಾಗಿದ್ದರು. ಮೊಮ್ಮಗಳ ಹೆಸರು ರಾಣಿ ಅಂತ. ಅಜ್ಜ, ಅಜ್ಜಿಗೆ ಮೊಮ್ಮಗಳನ್ನು ಕಂಡರೆ ಬಹಳ ಅಕ್ಕರೆ.

ಒಂದು ದಿನ ರಾಣಿಯ ಅಜ್ಜ ಸಂತೆಗೆ ಹೋಗಿದ್ದರು. ಬರುವಾಗ ರಾಣಿಗೆಂದು ಸುಂದರವಾದ ಒಂದು ಗೊಂಬೆ ತೆಗೆದುಕೊಂಡು ಬಂದರು. ರಾಣಿಗೆ ಗೊಂಬೆ ನೋಡಿ ಬಹಳ ಹರುಷವಾಯಿತು. ಅಂದಿನಿಂದ ಗೊಂಬೆ ಮತ್ತು ಅವಳಿಗೆ ಬಿಡಿಸಲಾಗದ ನಂಟು ಬೆಳೆಯಿ ತು.ದಿನವೂ ರಾಣಿ ಗೊಂಬೆಗೆ ಸ್ನಾನ ಮಾಡಿಸಿ, ಪೌಡರ್ ಹಚ್ಚಿ, ಕಣ್ಣಿಗೆ ಕಾಡಿಗೆ ತೀಡಿದ ನಂತರ ಹಣೆಗೆ ಒಂದು ಬೊಟ್ಟು ಹಚ್ಚುತ್ತಿದ್ದಳು. ಅಷ್ಟೇ ಸಾಲದು ಅಂತ ಅದಕ್ಕೊಂದು ದೃಷ್ಟಿ ಬೊಟ್ಟು ಕೂಡ ಇಡುತ್ತಿದ್ದಳು. ಹಾಗೆಯೇ ಗೊಂಬೆಗೆ ರಾಣಿ, ಬಣ್ಣಬಣ್ಣದ ಹೊಸ ಬಟ್ಟೆಗಳನ್ನು ತೊಡಿಸುತ್ತಿದ್ದಳು.

ADVERTISEMENT

ಒಂದು ದಿನ ರಾತ್ರಿ ರಾಣಿ ಮಲಗುವಾಗ ಗೊಂಬೆಯನ್ನು ನೋಡಿ ತನ್ನ ಮನಸ್ಸಿನಲ್ಲಿ, ‘ಈ ಗೊಂಬೆಗೆ ನನ್ನ ಹಾಗೆ ಮಾತಾಡಲು ಬರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’ ಎಂದುಕೊಂಡಳು.
ಮರುದಿನ ಬೆಳಿಗ್ಗೆ ಎಂದಿನಂತೆ ರಾಣಿ ನಿದ್ದೆಯಿಂದ ಎಚ್ಚರಗೊಂಡಳು. ಕಣ್ಣುಬಿಟ್ಟು ನೋಡಿದರೆ ತನ್ನ ಕಣ್ಣನ್ನು ತಾನೆ ನಂಬದಾದಳು! ಅವಳ ಮುದ್ದಿನ ಗೊಂಬೆ ಮನುಷ್ಯರಂತೆ ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತ, ನಗುತ್ತಾ ‘ಹಲೋ... ಗುಡ್ ಮಾರ್ನಿಂಗ್ ಅಕ್ಕಾ’ ಎಂದು ಹೇಳಿತು.

ಇದರಿಂದ ರಾಣಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ಅಂದಿನಿಂದ ರಾಣಿಗೆ ಆ ಗೊಂಬೆ ಬರಿಯ ಗೊಂಬೆಯಾಗಿರದೆ, ಬಹಳ ಅಚ್ಚುಮೆಚ್ಚಿನ ಗೆಳತಿಯಾಯಿತು. ಇಬ್ಬರೂ ಎಷ್ಟೋ ಹೊತ್ತಿನವರೆಗೂ ಮಾತನಾಡುತ್ತಿದ್ದರು. ಆದರೆ, ಈ ವಿಷಯ ರಾಣಿಯನ್ನು ಬಿಟ್ಟು ಮತ್ತಾರಿಗೂ ಗೊತ್ತಿರಲಿಲ್ಲ. ರಾಣಿಯನ್ನು ಬಿಟ್ಟು ಬೇರೆ ಯಾರಾದರೂ ಬಂದರೆ ಗೊಂಬೆಯು ಸಾಧಾರಣ ಗೊಂಬೆಯ ಹಾಗೆಯೇ ಇರುತ್ತಿತ್ತು.
ಹೀಗೆ ದಿನ ಕಳೆಯುತ್ತಿರಲು ಒಂದು ದಿನ ರಾಣಿ ಶಾಲೆಗೆ ಹೋಗಿದ್ದಳು. ಅಜ್ಜ- ಅಜ್ಜಿ ಸಂತೆಗೆ ಹೋಗಿದ್ದರು. ಆಗ ಮನೆಯಲ್ಲಿ ಗೊಂಬೆ ಮಾತ್ರ ಇತ್ತು. ಯಾರೂ ಇಲ್ಲದ ಆ ಸಮಯಕ್ಕೇ ಕಾಯುತ್ತಿದ್ದ ಕಳ್ಳರು ಅವತ್ತು ರಾಣಿಯ ಮನೆಗೆ ಬಂದರು. ಮನೆಯಲ್ಲಿದ್ದ ಒಡವೆ, ವಸ್ತ್ರ, ಕಾಳು-ಕಡಿ ಎಲ್ಲವನ್ನೂ ಲೂಟಿ ಮಾಡಿಕೊಂಡು ಹೋದರು.

ರಾಣಿ ಶಾಲೆಯಿಂದ ಸಾಯಂಕಾಲ ಮನೆಗೆ ಬಂದಳು.
ಅಜ್ಜ- ಅಜ್ಜಿ ಸಂತೆಯಿಂದ ಮರಳಿ ಬಂದಿದ್ದರು. ಆದರೆ, ಅವರಿಬ್ಬರೂ ತಲೆ ಮೇಲೆ ಕೈ ಹೊತ್ತುಕೊಂಡು ಸುಮ್ಮನೆ ಕುಳಿತಿದ್ದರು. ಮನೆಯಲ್ಲಿ ಏನೋ ಅನಾಹುತ ನಡೆದಿದೆ ಎಂದು ರಾಣಿಗೆ ಅನಿಸಿತು. ಅಜ್ಜಿಯನ್ನು ಏನಾಯಿತೆಂದು ಕೇಳಿದಳು. ಅವರು ಏನೂ ಮಾತನಾಡದೆ ಮೌನದಿಂದ ಇದ್ದರು. ಆಗ ರಾಣಿಯು ಮೆಲ್ಲನೆ ಗೊಂಬೆಯ ಹತ್ತಿರ ಬಂದಳು. ಏನಾಯಿತು ಎಂದು ವಿಚಾರಿಸಿದಳು. ಗೊಂಬೆಯು ಕಳ್ಳರು ಬಂದು ದೋಚಿಕೊಂಡು ಹೋದ ವಿಷಯವನ್ನೆಲ್ಲ ತಿಳಿಸಿತು. ನಂತರ ಕಳ್ಳರು ಎಲ್ಲಿ ವಾಸಿಸುತ್ತಿದ್ದಾರೆ ಎನ್ನುವ ವಿಷಯವೂ ತನಗೆ ಗೊತ್ತು ಎಂದು ಹೇಳಿತು.

ಆಗ ರಾಣಿಯು ಅಜ್ಜ- ಅಜ್ಜಿಯನ್ನು ಕುರಿತು, ‘ನೀವೇನೂ ಚಿಂತೆ ಮಾಡಬೇಡಿ, ಕಳ್ಳರು ಇರೋ ಜಾಗ ನನಗೆ ಗೊತ್ತು. ಊರಿನಲ್ಲಿ ಇರೋ ಕೆಲವು ಜನರನ್ನು ಕೂಡಿಕೊಂಡು ಎಲ್ಲರೂ ಹೋಗೋಣ ಬನ್ನಿ’ ಎಂದಳು. ಸರಿ ಎಂದು ಅಜ್ಜ- ಅಜ್ಜಿ, ಊರ ಜನ ಎಲ್ಲರೂ ಕೂಡಿಕೊಂಡು ರಾಣಿಯನ್ನು ಹಿಂಬಾಲಿಸಿದರು. ರಾಣಿಯು ತನ್ನ ಗೊಂಬೆಯನ್ನು ಕಂಕುಳಲ್ಲಿಟ್ಟುಕೊಂಡು ಅದು ತೋರಿಸಿದ ದಾರಿಯಲ್ಲಿ ನಡೆಯುತ್ತಿದ್ದಳು.
ಸ್ವಲ್ಪ ಸಮಯ ನಡೆದ ಬಳಿಕ ಅವಳಿಗೆ ನಿರ್ಜನ ಪ್ರದೇಶ ಕಾಣಿಸಿತು. ರಾಣಿಗೆ ಮುಂದೆ ಹೇಗೆ ಹೋಗುವುದು ಎಂದು ಗೊತ್ತಾಗದೆ ಸುಮ್ಮನೆ ನಿಂತಳು. ಅಲ್ಲಿ ಗಿಡ-ಗಂಟೆಗಳು ಬಹಳ ದಟ್ಟವಾಗಿದ್ದವು.
ಆಗ ಗೊಂಬೆ, ‘ಅಕ್ಕಾ ಆ ಗಿಡ-ಗಂಟೆಗಳ ಪೊದೆ ಇದೆಯಲ್ಲ, ಅದು ಪೊದೆ ಅಲ್ಲ. ಕಳ್ಳರು ಮಾಡಿಕೊಂಡಿರುವ ಬಾಗಿಲು. ಯಾರಿಗೂ ಗೊತ್ತಾಗಬಾರದು ಅಂತ ಅವರು ಹಾಗೆ ಮಾಡಿದ್ದಾರೆ. ಅದನ್ನು ನಿಧಾನವಾಗಿ ಪಕ್ಕಕ್ಕೆ ಸರಿಸಲು (ಜರುಗಿಸಲು) ಹೇಳು. ಅಲ್ಲಿ ಒಂದು ಸಣ್ಣ ಮಣ್ಣಿನ ಮನೆಯಿದೆ. ಅದರ ಒಳಗೆ ಕಳ್ಳರು ವಾಸ ಮಾಡ್ತಾರೆ’ ಅಂದಿತು.

ರಾಣಿಯು, ಗೊಂಬೆ ಹೇಳಿದ ಹಾಗೆ ಬಂದ ಜನರಿಗೆ ಪೊದೆಯಂತೆ ಕಾಣುವ ಬಾಗಿಲನ್ನು ಸರಿಸಲು ಹೇಳಿದಳು. ಬಾಗಿಲನ್ನು ಸರಿಸಿ ನೋಡಿದರೆ, ಗೊಂಬೆಯ ಮಾತು ನಿಜವಾಗಿತ್ತು. ಅಲ್ಲಿ ಇಬ್ಬರು ಕಳ್ಳರು ತಾವು ತಂದಿದ್ದ ಪದಾರ್ಥಗಳನ್ನು ವಿಂಗಡಿಸಿ ಇಡುತ್ತಿದ್ದರು. ಅದರಲ್ಲಿ ರಾಣಿಯ ಮನೆಯಿಂದ ತಂದಿದ್ದ ಚಕ್ಕುಲಿ ಡಬ್ಬವೂ ಇತ್ತು.

ಕಳ್ಳರನ್ನು ನೋಡಿದ್ದೆ ತಡ ಊರಿನ ಜನರೆಲ್ಲ ಸೇರಿ ಅವರನ್ನು ಚೆನ್ನಾಗಿ ಥಳಿಸಲು ಪ್ರಾರಂಭಿಸಿದರು. ಅಷ್ಟರಲ್ಲಿ ಅಡ್ಡ ಬಂದ ರಾಣಿಯ ಅಜ್ಜ ಜನರನ್ನು ತಡೆದರು. ಕಳ್ಳರ ಜೀವಕ್ಕೆ ಏನೂ ಅಪಾಯವಾಗದಂತೆ ನೋಡಿಕೊಂಡರು.

ಆಗ ಕಳ್ಳರು, ‘ದಯವಿಟ್ಟು ನಮ್ಮನ್ನು ಹೊಡಿಬೇಡಿ. ನಿಮ್ಮ ಒಡವೆ ಮತ್ತು ದುಡ್ಡನ್ನು ನಾವೇನೂ ಮಾಡಿಲ್ಲ’ ಎಂದು ಊರವರ ಒಡವೆಗಳು ಮತ್ತು ದುಡ್ಡನ್ನು ಹಿಂತಿರುಗಿಸಿದರು. ಕಳ್ಳರ ವರ್ತನೆಯಿಂದ ರಾಣಿಯ ಅಜ್ಜನಿಗೆ ಬಹಳ ಆಶ್ಚರ್ಯವಾಯಿತು. ಆಗ ಅವರು ಕಳ್ಳರನ್ನು ಕುರಿತು, ‘ನೀವು ದಷ್ಟ-ಪುಷ್ಟವಾಗಿದ್ದೀರಿ.

ಆದರೂ, ನೀವು ಕಳ್ಳರಾಗಿರುವುದು ಏಕೆ? ಕಳ್ಳರು ಅಂದ ಮೇಲೆ ಒಡವೆ ಮತ್ತು ಹಣವನ್ನು ಏಕೆ ಹಿಂದಿರುಗಿಸಿದಿರಿ? ಎಂದು ಕಳ್ಳರನ್ನು ಕೇಳಿದರು.

ಆಗ ಕಳ್ಳರು, ‘ನಮಗೆ ಕಳ್ಳತನ ಮಾಡುವ ಉದ್ದೇಶವಿಲ್ಲ. ಆದರೆ, ನಮಗೆ ಎಲ್ಲೂ ಕೆಲಸ ಸಿಗಲಿಲ್ಲ. ಅನಿವಾರ್ಯವಾಗಿ ನಾವು ಹೊಟ್ಟೆ ಪಾಡಿಗಾಗಿ ಕಳ್ಳತನ ಅವಲಂಬಿಸಿದೆವು. ಆದ್ದರಿಂದಲೆ ಊರವರ ಹಣವನ್ನು ಖರ್ಚು ಮಾಡಿಲ್ಲ. ಅವರ ಒಡವೆಗಳನ್ನು ಮಾರಿಲ್ಲ. ನಮಗೆ ತಿನ್ನಲು ಏನಾದರೂ ಸಿಕ್ಕರೆ ಸಾಕು’ ಎಂದು ತಿಳಿಸಿದರು.

ಆಗ ಅಜ್ಜ ಕಳ್ಳರಲ್ಲಿ ಧೈರ್ಯ ತುಂಬಿದರು. ಅವರಿಗೆ ತನ್ನ ತೋಟದಲ್ಲೇ ಕೆಲಸ ಕಲಿಸಿ ಕೊಡುವುದಾಗಿ ಹೇಳಿದರು. ತಮ್ಮ ಜೊತೆಯಲ್ಲಿಯೇ ಕರೆದುಕೊಂಡು ಬಂದರು.

ಅಂದಿನಿಂದ ಕಳ್ಳರು ಕಳ್ಳರಾಗಿ ಉಳಿಯಲಿಲ್ಲ. ಅವರು ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡರು. ವಯಸ್ಸಾದ ಹಿರಿಯರಿಗೆ ನೆರವಾದರು. ಒಬ್ಬಳೆ ಇದ್ದ ರಾಣಿಗೆ ಜೊತೆಯಾದರು. ಹೀಗೆ ಎಲ್ಲರೂ ಕೂಡಿ ಬಹಳ ವರುಷದವರೆಗೂ ಸಂತೋಷದಿಂದ ಸುಖವಾಗಿದ್ದರು. ಇದೆಲ್ಲವೂ ಆ ಜಾದೂ ಗೊಂಬೆಯಿಂದಲೇ ಆದದ್ದು ಎಂದು ರಾಣಿಗೆ ಮಾತ್ರ ಗೊತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.