ADVERTISEMENT

ಕಷ್ಟ ಕಾಲ

ಡಾ.ಪುರುಷೋತ್ತಮ ಬಿಳಿಮಲೆ
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST
ಚಿತ್ರ: ರಾಮಕೃಷ್ಣ ಸಿದ್ರಪಾಲ
ಚಿತ್ರ: ರಾಮಕೃಷ್ಣ ಸಿದ್ರಪಾಲ   

ಗೋವುಗಳ ಹಿಂದಿಂದ ಕೊಳನೂದುತ ಸಾಗುವ

ಗೋಪಾಲನಿಗೆ ಭಕ್ತರ ಕಾಟದ ನಡುವೆ
ಗೋವುಗಳ ಮುಂದಿಂದ ಹೋಗಲು ಅವಕಾಶವೇ ಸಿಗಲಿಲ್ಲ,
ಹೆಜ್ಜೆ ಮುಂದಿಟ್ಟರೆ ಸಾಕು
ಹಿಂದಕ್ಕೆಳೆದು ಕಾಲಿಗೆರಗುವ ಜನಗಳ ತಳ್ಳಿ
ಗೋಪಿಕೆಯರೊನೆ ಹರಟಲು ಬಿಡುವಾಗಲೂ ಇಲ್ಲ.
ಗೋವುಗಳೂ ಬೇಕು, ಗೋಪಿಕೆಯರೂ ಬೇಕು
ನಡುವೆ ಭಕ್ತರ ಬಿಡುವುದು ಹೇಗೆ?
ಗಲಿಬಿಲಿಗೊಂಡ ಕೃಷ್ಣ ತ್ರೇತಾಯುಗದತ್ತ ಮೆಲ್ಲನೆ ಜಾರಿಕೊಂಡ
ಶ್ರೀರಾಮನ ಕಂಡು ಕಷ್ಟ ಬಿನ್ನವಿಸಿಕೊಂಡ
‘ಮಂದಿರವಿಲ್ಲದ್ದರಿಂದ ನನಗೂ ಏಕಾಂತವಿಲ್ಲ
ಗೋವುಗಳಿಗೆ ಹಟ್ಟಿಯಿಲ್ಲ
ಸೀತೆಯ ಬಿಟ್ಟರೆ ಬೇರೆ ಧ್ಯಾನವೂ ಇಲ್ಲ
ಭಕ್ತರನು ಹಾಗೆಲ್ಲಾ ನಾನು ಬಿಟ್ಟುಕೊಳ್ಳುವುದಿಲ್ಲ’
ರಾಮನ ನುಡಿಕೇಳಿ ಮತ್ತಷ್ಟು ಕಂಗಾಲಾದ ಮುಕುಂದ ಹೇಳಿದ-
‘ನಡೆ ಹಾಗಾದರೆ ಮತ್ತೆ ಮಥುರಾಕ್ಕೆ ಹೋಗೋಣ,
ಹಾದಿಯಲಿ ಸಿಗುವ ಗೋವರ್ಧನ ಗಿರಿಯ ಬುಡದಲಿ ತಣ್ಣಗೆ ಕುಳಿತಿರಬಹುದು,
ಬೆಣ್ಣೆ ತಿನಬಹುದು,
ಕೊಳನೂದಿದರೆ ಗೋವುಗಳ ಹಿಂಡು,
ಗೋಪಿಕೆಯರ ದಂಡು.
ಆದರೇನು ಮಾಡೋಣ?
ಮತ್ತದೇ ಹಳೆಯ ಕತೆ!
ನಿಟ್ಟುಸಿರಿಟ್ಟ ರಾಮ ಹೇಳಿದ
‘ ಸರಿ ಹಾಗಾದರೆ, ಈ ಕಡೆ ನಡೆಯೋಣ,
ಗಂಗಾ ತಟದಲಿ ವಿಹರಿಸೋಣ.
ಗುಹ ಬಿಟ್ಟ ದೋಣಿಯ ಹುಡುಕಿ, ಮತ್ತೆ ಹುಟ್ಟು ಹಾಕೋಣ’
ದಣಿವರಿಯದ ದೇವರಿಬ್ಬರಿಗೂ ಈಗ ಹುಡುಕಾಟದ ಕೆಲಸ
ಗೋವು, ಗೋಪಿಕೆಯರು ಹಾಗೂ ಭಕ್ತರಿಗೆ ಕಷ್ಟ ಕಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT