ADVERTISEMENT

ಕುಂಡೆ ಹಬ್ಬದ ಅಚ್ಚರಿ ಮುಖಗಳು

ಪಿಸುಗುಡುವ ಚಿತ್ರಪಟ * ಕ್ಲಾರೆ ಆರ್ನಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2016, 19:30 IST
Last Updated 24 ಸೆಪ್ಟೆಂಬರ್ 2016, 19:30 IST
‘‘ಮೊಬೈಲ್‌ ಎಂಬ ಸಣ್ಣ ಸಾಧನದಿಂದ ಫೋಟೊಗಳನ್ನು ಸೆರೆಹಿಡಿಯುವುದು ಈಗ ಸಾಮಾನ್ಯವಾಗಿದೆ. ಅಷ್ಟರಮಟ್ಟಿಗೆ ಫೋಟೊಗ್ರಫಿ ‘ಡೆಮೊಕ್ರೆಟಿಕ್‌’ ಆಗಿ ಬದಲಾಗಿದೆ...
‘‘ಮೊಬೈಲ್‌ ಎಂಬ ಸಣ್ಣ ಸಾಧನದಿಂದ ಫೋಟೊಗಳನ್ನು ಸೆರೆಹಿಡಿಯುವುದು ಈಗ ಸಾಮಾನ್ಯವಾಗಿದೆ. ಅಷ್ಟರಮಟ್ಟಿಗೆ ಫೋಟೊಗ್ರಫಿ ‘ಡೆಮೊಕ್ರೆಟಿಕ್‌’ ಆಗಿ ಬದಲಾಗಿದೆ...   

ನಾನು ಫೋಟೊಗ್ರಪಿಯನ್ನು ಆರಂಭಿಸಿದ್ದು 22ನೇ ವಯಸ್ಸಿನಲ್ಲಿ. ಸ್ವಯಂ ಕಲಿಕೆಯಿಂದಲೇ ಕ್ಯಾಮೆರಾ ಚಳಕವನ್ನು ರೂಢಿಸಿಕೊಂಡಿದ್ದು. ಕಳೆದ ಮೂವತ್ತು ವರ್ಷಗಳಿಂದ ಛಾಯಾಗ್ರಹಣದಲ್ಲಿ ತೊಡಗಿಕೊಂಡಿದ್ದೇನೆ. ನಾನು ಫೋಟೊಗ್ರಫಿ ಆರಂಭಿಸಿದ್ದು ‘ಫ್ಯಾಷನ್‌ ಫೋಟೊಗ್ರಫಿ’ ಮೂಲಕ. ನಂತರ ನನ್ನ ಆಸಕ್ತಿ ನಿಧಾನವಾಗಿ ‘ಆರ್ಕಿಟೆಕ್ಚರಲ್‌ ಫೋಟೊಗ್ರಫಿ’ಯತ್ತ ಕುದುರಿತು.

ಬೆಂಗಳೂರಿನಲ್ಲಿನ ಕಟ್ಟಡಗಳ ವಾಸ್ತುಶಿಲ್ಪ ಫೋಟೊ ತೆಗೆಯುತ್ತಿದ್ದೆ. ಬೆಳಕು ಒಂದು ಕಟ್ಟಡದ ವಿನ್ಯಾಸವನ್ನು ಹೇಗೆ ರೂಪಿಸುತ್ತದೆ ಎಂಬ ಸಂಗತಿಯ ಕುರಿತು ನನ್ನ ಕುತೂಹಲ ಇತ್ತು. ಅದನ್ನು ಅರಿಯುವ ಉದ್ದೇಶದಿಂದ ಇಡೀ ದಿನ ಒಂದೇ ಕಟ್ಟಡವನ್ನು ನೋಡುತ್ತಾ, ಅದು ತನ್ನ ಗುಟ್ಟನ್ನು ನನ್ನೆದುರು ತೆರೆದುಕೊಳ್ಳುವ ಮಾಂತ್ರಿಕ ಗಳಿಗೆಗೆ ಕಾಯುತ್ತಾ ಕಳೆದುಬಿಡುತ್ತಿದ್ದೆ.

ನಂತರ ನಾನು ಹಲವು ಎನ್‌ಜಿಓಗಳ ಜತೆ ಕೆಲಸ ಮಾಡಿದೆ. ಇದರಿಂದ ನನಗೆ ಭಾರತದ ಮೂಲೆ ಮೂಲೆಯ ಹಳ್ಳಿಗಳಿಗೆ ಹೋಗುವ ಅವಕಾಶ ಸಿಕ್ಕಿತು. ಇದು ನನಗೆ ಎಷ್ಟು ಸವಾಲಿನದಾಗಿತ್ತೋ ಅಷ್ಟೇ ಅದ್ಭುತವಾದ ಅನುಭವವನ್ನೂ ಕಟ್ಟಿಕೊಟ್ಟಿತು. ಅಂಥ ಸಮುದಾಯಗಳೊಂದಿಗಿನ ಆಪ್ತ ಒಡನಾಟ ಮತ್ತು ಅವರ ಬದುಕನ್ನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಪ್ರಕ್ರಿಯೆಯಲ್ಲಿ ಆ ಜನರು ಎದುರಿಸುವ ಸಂಕಷ್ಟಗಳನ್ನು ತುಂಬಾ ಹತ್ತಿರದಿಂದ ನೋಡಿ ಅರ್ಥೈಸಿಕೊಳ್ಳುವುದು ಸಾಧ್ಯವಾಯಿತು.

ಛಾಯಾಗ್ರಹಣ ಎನ್ನುವುದು ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೇ ಬದಲಾವಣೆಯಾಗುತ್ತಿರುವ ಮಾಧ್ಯಮ. ಬಹುತೇಕ ಎಲ್ಲ ಜನರೂ ಈಗ ತಮ್ಮ ಕಿಸೆಯಲ್ಲಿರುವ ಮೊಬೈಲ್‌ ಎಂಬ ಸಣ್ಣ ಸಾಧನದಿಂದ ಫೋಟೊಗಳನ್ನು ಸೆರೆಹಿಡಿಯುವುದು ಸಾಮಾನ್ಯವಾಗಿದೆ. ಅಷ್ಟರಮಟ್ಟಿಗೆ ಫೋಟೊಗ್ರಫಿ ‘ಡೆಮೊಕ್ರೆಟಿಕ್‌’ ಆಗಿ ಬದಲಾಗಿದೆ. ನಾನು ಛಾಯಾಗ್ರಹಣ ಆರಂಭಿಸಿದಾಗ ಈ ಪರಿಸ್ಥಿತಿ ಇರಲಿಲ್ಲ.

ಛಾಯಾಗ್ರಹಣದ ಪರಿಕರಗಳ ಬಳಕೆಯ ಮೇಲೆ ಹಿಡಿತ ಸಾಧಿಸುವುದು ಸುಲಭವಾಗಿರಲಿಲ್ಲ. ಈಗ ಛಾಯಾಗ್ರಹಣ ಪ್ರತಿಷ್ಠಿತ ಗ್ಯಾಲರಿಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಿವೆ. ವೈಯಕ್ತಿಕವಾಗಿ ನನಗೆ ಮನುಷ್ಯ ದೇಹ ಎನ್ನುವುದು ಅತೀ ಹೆಚ್ಚು ಕುತೂಹಲ ಹುಟ್ಟಿಸುವ ಸಂಗತಿ. ಪ್ರಸ್ತುತ ‘ಕುಂಡೆ ಹಬ್ಬ’ದ ಚಿತ್ರಗಳಲ್ಲಿಯೂ ಇದನ್ನು ಕಾಣಬಹುದು.

‘ಕುಂಡೆ ಹಬ್ಬ’ ನಡೆಯುವುದು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ. ಕಳೆದ ಮೂರು ವರ್ಷಗಳಿಂದ ನಾನು ಈ ಹಬ್ಬವನ್ನು ಚಿತ್ರೀಕರಿಸುತ್ತಿದ್ದೇನೆ. ಓರ್ವ ಛಾಯಾಗ್ರಾಹಕಿಯಾಗಿ ಕುಂಡೆ ಹಬ್ಬ ನನ್ನನ್ನು ವಿಶೇಷವಾಗಿ ಆಕರ್ಷಿಸಿದೆ.

ಮನುಷ್ಯನ ಸೃಜನಶೀಲ ಅಭಿವ್ಯಕ್ತಿಯ ವೈಯಕ್ತಿಕ ಮತ್ತು ಅನನ್ಯ ರೂಪಗಳನ್ನು ಸೆರೆಹಿಡಿಯಲು ಈ ಹಬ್ಬ ನನಗೆ ಅನುವು ಮಾಡಿಕೊಟ್ಟಿದೆ. ಈ ಹಬ್ಬವು ಕಟ್ಟಾ ಸಂಪ್ರದಾಯ–ಶಾಸ್ತ್ರ–ನಿಯಮಗಳಿಂದ ಮುಕ್ತವಾಗಿದೆ. ಮಾತು, ದಿರಿಸುಗಳಲ್ಲಿ ಈ ಹಬ್ಬದಲ್ಲಿ ಮುಕ್ತವಾದ ಸ್ವಾತಂತ್ರ್ಯವಿರುತ್ತದೆ. ಈ ಹಬ್ಬದಲ್ಲಿ ಭಾಗವಹಿಸುವವರು ಏನು ಬೇಕಾದರೂ ಆಗಬಹುದು. ಓರ್ವ ಪಾಶ್ಚಿಮಾತ್ಯ ಸೆಕ್ಸಿ ಮಹಿಳೆ, ದೇವರು, ಪ್ರಾಣಿ, ತನ್ನ ಕರುಳನ್ನು ತಾನೇ ಕಿತ್ತುಕೊಳ್ಳುವ ದೈತ್ಯ ರಾಕ್ಷಸ – ಹೀಗೆ ಏನನ್ನು ಕಲ್ಪಿಸಿಕೊಳ್ಳಬಲ್ಲೆವೋ ಅವು ಅಲ್ಲಿ ಸೃಷ್ಟಿಯಾಗುತ್ತವೆ.

ಪ್ರತಿವರ್ಷ ನಾನು ‘ಕುಂಡೆ’ ಹಬ್ಬಕ್ಕೆ ಹೋದಾಗಲೂ ಅಲ್ಲಿನ ಆಚರಣೆಗಳು ಭಿನ್ನವಾಗಿರುತ್ತವೆ. ಹಲಸಿನ ಹಣ್ಣಿನ ಮುಳ್ಳುಭಾಗ, ಕಾಜಾಣದ ಗೂಡುಗಳು, ಹಣ್ಣಿನಿಂದಲೇ ಮಾಡಿದ ಕನ್ನಡಕ, ಮರದ ಬಂದೂಕುಗಳು, ಬಾಟಲಿ ಮುಚ್ಚಳದ ಹಾರ, ವಾಹನಗಳಿಗೆ ಬಳಸುವ ತೈಲ ಎಲ್ಲವೂ ಅವರ ವೇಷಭೂಷಣಗಳಲ್ಲಿ ಪಾಲು ಪಡೆದಿರುತ್ತವೆ. ಮುರಿದ ಗೊಂಬೆಗಳು, ಕನ್ನಡಿಗಳು, ಕೈಚೀಲಗಳು, ಕೋಲುಗಳು, ಕೆಲವೊಮ್ಮೆ ಅನಾನಸ್ ಹಣ್ಣುಗಳನ್ನೂ ಹಿಡಿದುಕೊಂಡಿರುತ್ತಾರೆ.

ಮೇಲ್ನೋಟಕ್ಕೆ ಒಂದು ಹಬ್ಬದ ಆಚರಣೆಯಂತೆ ಕಂಡರೂ ಆ ನೆಪದಲ್ಲಿ ಅಲ್ಲಿನ ಜನರು ವರ್ಷಕ್ಕೊಮ್ಮೆ ತಮ್ಮ ಎಲ್ಲ ಹುಲುಜೀವನದ ವಾಸ್ತವದಿಂದ ಆಚೆ ಜಿಗಿದು, ಬೇರೆಯವರೇ ಆಗಿ ರೂಪಾಂತರಗೊಳ್ಳುತ್ತಾರೆ.

ಪ್ರತಿದಿನ ಕೂಲಿಕಾರರಾಗಿ ಕಾಫಿ ಎಸ್ಟೇಟ್‌ನಲ್ಲಿ ಮೈಮುರಿಯುವಷ್ಟುದುಡಿಯುವ ಆ ಜನರು ಚರ್ಮಕ್ಕೆ ಬಿಳಿ ಬಣ್ಣ ಬಳಿದುಕೊಂಡು, ಹೊಂಬಣ್ಣದ ವಿಗ್‌ಗಳು, ಮಿನಿ ಸ್ಕರ್ಟ್‌ಗಳನ್ನು ಧರಿಸಿದ ಅವರು, ತಮ್ಮ ದೈನಂದಿನ ಬಡತನದ ಜಂಜಡದಿಂದ ಪಾರಾಗಿ ಮತ್ತೊಂದು ಅವತಾರ ತಾಳಿ ಬಿಡುತ್ತಾರೆ.
ಈ ಹಬ್ಬದ ವೇಷ, ಹಾಡು, ನೃತ್ಯಗಳಲ್ಲಿ ಮೇಲ್ನೋಟಕ್ಕೆ ಕಾಣುವ ವಿನೋದದ ಪರದೆಯ ಅಡಿಗೆ ಅವರ ಹತಾಶೆ ಮತ್ತು ದುರಂತಗಳೂ ಅಡಗಿರುತ್ತವೆ. ಈ ಅಂಶಗಳನ್ನೂ ಸೆರೆಹಿಡಿಯಬೇಕು ಎಂಬುದು ನನ್ನ ಹಂಬಲ. 

ಕ್ಲಾರೆ ಆರ್ನಿ
ಇಂಗ್ಲೆಂಡ್‌ ಮೂಲದ ಕ್ಲಾರೆ ಆರ್ನಿ ತಮ್ಮ ಬದುಕಿನ ಬಹುಪಾಲನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ. ಪೆರು, ಆಪ್ಘಾನಿಸ್ತಾನ, ಮಯನ್ಮಾರ್‌ಗಳಲ್ಲಿಯೂ ಅವರು ಕ್ಯಾಮೆರಾ ಹಿಡಿದು ಸಾಕಷ್ಟು ಸುತ್ತಿದ್ದಾರೆ.

ಆರ್ಕಿಟೆಕ್ಚರ್‌, ಪ್ರವಾಸ ಛಾಯಾಗ್ರಹಣಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಕ್ಲಾರೆ ಅವರ ಚಿತ್ರಗಳು ಇಂಗ್ಲೆಂಡಿನ ಟ್ಯಾಟ್ಲರ್‌, ಇಟಲಿಯ ಅಬಿತಾರೆ, ದ ಹಾರ್ವರ್ಡ್‌ ಡಿಸೈನ್‌ ಮ್ಯಾಗಜಿನ್‌, ಭಾರತದ ಔಟ್‌ಲುಕ್‌, ಟ್ರಾವೆಲ್ಲರ್‌, ನಮಸ್ತೆ, ಹೌಸ್‌ಕಾಲ್ಸ್‌ ಸೇರಿದಂತೆ ಹಲವಾರು ರಾಷ್ಟ್ರೀಯ–ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ದಕ್ಷಿಣ ಭಾರತದ ಸಾಂಸ್ಕೃತಿಕ ಪರಂಪರೆಯ ದಾಖಲೀಕರಣದಲ್ಲಿ ತೊಡಗಿಕೊಂಡಿರುವ ಕ್ಲಾರೆ – ಹಂಪಿ, ಕರಾವಳಿ ಕರ್ನಾಟಕ, ಬನಾರಸ್‌ ಕುರಿತು ಚಿತ್ರಸರಣಿ ರೂಪಿಸಿದ್ದಾರೆ. ಸದ್ಯಕ್ಕೆ ಅವರ ಒಲವು ಜಾತ್ರೆಗಳು ಮತ್ತು ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳನ್ನು ಸೆರೆಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಸ್ತುತ ‘ಕುಂಡೆ ಹಬ್ಬ’ದ ಚಿತ್ರಗಳೂ ಈ ಸರಣಿಯ ಭಾಗವೇ ಆಗಿದೆ.

ಬೆಂಗಳೂರಿನ ಆರ್ಟ್‌ಹೌಸ್‌ ಗ್ಯಾಲರಿಯಲ್ಲಿ ‘ನೋಟದ ದಾರಿಗಳು’ ಎಂಬ ಹೆಸರಿನಲ್ಲಿ ಮೂವರು ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಕ್ಲಾರೆ ಆರ್ನಿ ಅವರ ಛಾಯಾಚಿತ್ರಗಳೂ ಅಲ್ಲಿ ಪ್ರದರ್ಶಿತವಾಗುತ್ತಿವೆ.

ADVERTISEMENT

ಕ್ಲಾರೆ ಆರ್ನಿ ಅವರ ಇನ್ನಷ್ಟು ಚಿತ್ರಗಳನ್ನು clarearni.com ಜಾಲತಾಣದಲ್ಲಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.