ಗರಗಸದ ಸೀಳು ಹಲ್ಲು ಏಕಮುಖ ಹರಿತ
ಹಸಿ ಮರವನ್ನು ಗೆರೆಕೊರೆದಂತೆ ಆಳಕ್ಕೆ
ಹಸ್ತ ಹೊಕ್ಕಿಸಿ ಎರಡೂ ಬದಿ ಹಿಡಿವ ಹಿಡಿಕೆ
ಪುಡಿ ಪುಡಿ ಹುಡಿ ಉದುರಿ ಅತ್ತಿತ್ತ
ಹಸಿ ಮರದ ಪರಿಮಳ ಎಲ್ಲೆಡೆ
ಗರಿಮೆ ಹೊತ್ತ ಮರ ಬೇರಾಗುವ ಹಂತದಲ್ಲಿ
ತಣ್ಣಗೆ ಉರಿಯುತ್ತ ಒಂದರೊಳಗೆರಡಾಗಿ: ಎರಡಕ್ಕೆ ನಾಕಾಗಿ
ನಾಕಕ್ಕೆ ನಂಟಾಗಿ ಗಲ್ಲಿ ಗಲ್ಲಿಗಳಲ್ಲಿ ಸಿರಿಮುಡಿ ಕಳಚಿ
ಚೂರು ಛಿದ್ರವಾಗಿ ಹರಿದು ಹಂಚಿ ಹೋಗಿ
ಕುರ್ಚಿ ಮೇಜಿಗೊಂದಿಷ್ಟು ಸ್ಟೂಲು ಟೀಪಾಯಿಗೊಂದಿಷ್ಟು
ಕಪಾಟು ದಿವಾನ ಮಂಚಕ್ಕೊಂದಿಷ್ಟು
ಗರಿ ಮುರಿ ಮರ ಸೂರಾಡಿ ಹಸಿಗಾಯ
ಕರಗಸ ಸಂಸ್ಕೃತಿಯ ಹಸಿವನ್ನು ಇಂಗಿಸಲು
ಮರದೊಡಲ ಸೂರು ಬಗೆದು
ಕೊರೆಕೊರೆದು ಪದರುಗಳ ಬೇರ್ಪಡಿಸುವ ಮನ-ಮನೆ ಗರಡಿ
ಗರುಡನಾಕ್ರಮಣದ ಗಳಿಗೆಯಲೂ ಮರಕೊರಡಂತೆ ಗರತಿ
ಹೊಂದಿಕೋ ಸುಮ್ಮನಿರು ಇನ್ನಷ್ಟು ಮಿದುವಾಗು ಒಳಬಿಟ್ಟುಕೋ ಗರಗಸವ
ಗರಿಕೆ ಗರಿ ಮೊಳೆಯಲು ಬಿಡದ ಸ್ವಾರ್ಥಿ ಗರಗಸ ನಡಿಗೆ
ಕೊಯ್ವದು ಮುಮ್ಮುಖಕ್ಕೂ ಹಿಮ್ಮುಖಕ್ಕೂ ಅಡಿಗಡಿಗೆ
ಕೊಯ್ದೂ ಕೊಯ್ದೂ ಬೊಡ್ಡಾದ ಗರಗಸದ ನಾಲಿಗೆಗೆ
ಗರಕು ಕಂಡ ಗಟ್ಟಿ ಮರ ಈಗ ರಚ್ಚೆ ಬಿದ್ದಿದೆ ಜಿದ್ದಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.