ADVERTISEMENT

ಗಿರೀಶ ಕಾರ್ನಾಡರು ಕನ್ನಡಕ್ಕೆ ತಂದ ಎರಡು ಕವಿತೆಗಳು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2013, 19:59 IST
Last Updated 16 ಫೆಬ್ರುವರಿ 2013, 19:59 IST

Mary Oliver ಬರೆದ The Snowshoe Hare ಕವಿತೆಯ ಅನುವಾದ.

ಕಪ್ಪು ಹೆಡಕದ ಮೊಲ

ಈ ನರಿಯ
ಕಂದು ಓಟ
ಎಷ್ಟು ನಿಶ್ಶಬ್ದವೆಂದರೆ  
ಅದು ಕ್ಷಣಮಾತ್ರ ಕುಗ್ಗಿ
ಹೆಗಲು ಮುದುರಿ ನೆಲಕ್ಕೆ ಅವುಚಿ 
ತನ್ನ ಸುಂದರ ಕ್ರೂರ
ಹಲ್ಲುಗಳ ಬಾಗಿಲನ್ನು
ಜಡಿದು ಮುಚ್ಚಿಕೊಂಡರೆ 
ಬೆಣಚುಗಲ್ಲುಗಳ ಮೇಲೆ
ಜುಳುಜುಳು ಹರಿಯುವ 
ಹೊನಲಿನಾಚೆಗೆ ಬಯಲಲ್ಲಿ  
ಗಿಡಗಂಟಿಗಳ ಬಿಗಿಹೆಣಿಗೆಯಲ್ಲಿ   
ಒಂದು ಸದ್ದಿಲ್ಲ, ಸುದ್ದಿಯಿಲ್ಲ.


               ಮಾರನೆಯ ದಿನ ನಸುಕಿನಲ್ಲಿ
               ಬೇಸಗೆಗೆ ಮುರುಟಿದ ಹೂವುಗಳ
               ಮೊಂಡ ಕಡ್ಡಿಗಳ ತುದಿಗಳ ಸುತ್ತ 
               ಕಪ್ಪು ಹೆಡಕದ ಮೊಲ
               ಕಾಣೆಯಾದಲ್ಲಿ    
               ಅದರ ತುಪ್ಪುಳ ಗರಿಗರಿಯಾಗಿ
               ಬೂರಲರಳೆ ಗುಚ್ಛಗುಚ್ಛವಾಗಿ
               ಗಾಳಿನೂಲಾಗಿ ತೇಲಾಡುವದಷ್ಟೇ
               ಕಣ್ಣಿಗೆ ಬಿದ್ದೀತು ಹೊರತು
               ಬೆಣಚುಗಲ್ಲುಗಳ ಮೇಲೆ
               ಜುಳುಜುಳು ಹರಿಯುವ 
               ಹೊನಲಿನಾಚೆಗೆ ಬಯಲಲ್ಲಿ  
               ತಿಂಗಳೊಪ್ಪತ್ತಿನವರೆಗೆ 
               ಇನ್ನು ಒಂದು ಸದ್ದಿಲ್ಲ, ಸುದ್ದಿಯಿಲ್ಲ.

ವಿಶ್ವ ಸಾಹಿತ್ಯದಲ್ಲಿ ನವ್ಯ ಕ್ರಾಂತಿಯ ಕಾರಣಪುರುಷನೆಂದು ಮನ್ನಣೆ ಪಡೆದ
Ezra Pound (1885-1972) ಕವಿಯ A Girl ಕವಿತೆಯ ಅನುವಾದ.

ADVERTISEMENT

ಹುಡುಗಿ
ಗಿಡ ನನ್ನ ಕೈಗಳನ್ನು ಸೇರಿಕೊಂಡಿದೆ,
ರಸ ನನ್ನ ತೋಳುಗಳಲ್ಲಿ ಏರಿಕೊಂಡಿದೆ,
ಗಿಡ ನನ್ನ ಎದೆಯಲ್ಲಿ ಬೆಳೆದುಕೊಂಡಿದೆ...
ಕೆಳಮುಖವಾಗಿ,
ಟೊಂಗೆಗಳು ನನ್ನೊಳಗಿಂದ ಹರಡುತ್ತಿವೆ, ತೋಳಿನಂತೆ.

ಗಿಡ ನೀನು,
ಹಾವಸೆ ನೀನು,
ಗಾಳಿಯಲ್ಲಿ ಓಲಾಡುವ ಮಲ್ಲಿಗೆ ನೀನು.
ಇನ್ನೂ ಇಷ್ಟೆತ್ತರದ ಮಗು ನೀನು,
ಮತ್ತು ಜಗತ್ತಿನ ಕಣ್ಣಲ್ಲಿ ಇದೆಲ್ಲ ತಪ್ಪು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.